ಮಂಡ್ಯ ಲೋಕಸಭಾ ಕ್ಷೇತ್ರ ಮತ್ತೊಮ್ಮೆ ಸುದ್ದಿಯಲ್ಲಿದೆ. ಮೈತ್ರಿ ಅಭ್ಯರ್ಥಿಯಾದ ಹೆಚ್.ಡಿ.ಕುಮಾರಸ್ವಾಮಿ ಕಾರಣಕ್ಕೆ ಒಂದು ಸುದ್ದಿಯಾದರೆ, ಹಾಲಿ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ನಂತರವೂ ಕುಮಾರಸ್ವಾಮಿ ಪರ ಇಂದಿಗೂ ಪ್ರಚಾರದ ಕಣಕ್ಕೆ ಇಳಿದಿಲ್ಲ ಎಂಬುದು ಮತ್ತೊಂದು ವಿಶೇಷ. 2024 ರ ಮಂಡ್ಯ ಚುನಾವಣಾ ಅಖಾಡದಿಂದ ಸುಮಲತಾ ಅಂತರ ಕಾಯ್ದುಕೊಳ್ಳುವ ಮೂಲಕ ತನ್ನ ಮತ್ತು ಅಂಬರೀಶ್ ಅಭಿಮಾನಿಗಳಿಗೆ ಕೊಡುತ್ತಿರುವ ಪರೋಕ್ಷ ಸಂದೇಶವೇನಿರಬಹುದು.?
ಇದಕ್ಕೆ ಉತ್ತರವಂತೂ ಸ್ಪಷ್ಟ. ಕುಮಾರಸ್ವಾಮಿ ಮೇಲಿನ ತನ್ನ ಹಳೆಯ ಜಿದ್ದನ್ನು ಸುಮಲತಾ ಪರೋಕ್ಷವಾಗಿ ಮುಂದುವರೆಸಿಕೊಂಡು ಬಂದಿರುವುದು ಇಲ್ಲಿ ಸ್ಪಷ್ಟವಾಗಿ ಘೋಚರವಾಗುತ್ತಿದೆ. ಹಾಲಿ ಸಂಸದೆಯಾಗಿ ಈಗ ಬಿಜೆಪಿ ಸೇರ್ಪಡೆ ನಂತರ ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವಿನ ಹಾದಿ ಸುಗಮ ಎಂದೇ ಜೆಡಿಎಸ್ ನಾಯಕರು ಊಹಿಸಿದ್ದರು. ಆದರೆ ಸುಮಲತಾ ಪಕ್ಷದ ಬೇರೆಲ್ಲಾ ಕಾರ್ಯಕ್ರಮಗಳಿಗೂ ಹಾಜರಾಗಿ, ಕುಮಾರಸ್ವಾಮಿ ಪರ ಪ್ರಚಾರಕ್ಕೆ ಈ ವರೆಗೂ ಇಳಿಯದಿರುವುದು ಮಾತ್ರ ಸಧ್ಯಕ್ಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಧ್ಯ ಸಿಕ್ಕಿರುವ ಪ್ರಾಥಮಿಕ ಮಾಹಿತಿಯಂತೆ ಸುಮಲತಾ ಅಂಬರೀಶ್ ಅವರು ಮೈತ್ರಿ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಪರವಾಗಿ ಪ್ರಚಾರಕ್ಕೆ ಇಳಿಯುವುದು ಬಹುತೇಕ ಅನುಮಾನ ಎನ್ನಲಾಗಿದೆ. ಬಿಜೆಪಿ ಆಂತರಿಕ ವಲಯದಲ್ಲಿ ಈ ಬಗ್ಗೆ ಸುಮಲತಾ ಸ್ಪಷ್ಟಪಡಿಸಿದ್ದು, ಪಕ್ಷ ಸೇರ್ಪಡೆಯಷ್ಟೇ ತಾನು ಬಿಜೆಪಿ ಪರವಾಗಿ ತಗೆದುಕೊಳ್ಳುವ ನಿರ್ಧಾರವಾಗಿದ್ದು, ಕುಮಾರಸ್ವಾಮಿ ಪರ ಪ್ರಚಾರದಿಂದ ದೂರ ಉಳಿಯುವ ಬಗ್ಗೆಯೂ ಪಕ್ಷದಲ್ಲಿ ಚರ್ಚಿಸಿಯೇ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ಬಿಜೆಪಿಗೆ ಹೆಚ್.ಡಿ.ಕುಮಾರಸ್ವಾಮಿ ಗೆಲುವಿಗಿಂತ ಹಾಲಿ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಅತಿ ಮುಖ್ಯವಾಗಿತ್ತು. ಅಕಸ್ಮಾತ್ ಕುಮಾರಸ್ವಾಮಿ ಸಂಸತ್ತಿಗೆ ಹೋದರೆ ಕುಮಾರಸ್ವಾಮಿ ವರ್ಚಸ್ಸು ಹೆಚ್ಚುವುದೇ ವಿನಃ, ಅದರಿಂದ ಬಿಜೆಪಿಗೆ ಆಗುವ ಲಾಭವೇನು ಎನ್ನುವ ಜಾಣತನದ ಪ್ರಶ್ನೆಯನ್ನೇ ಸುಮಲತಾ ಬಿಜೆಪಿ ಮುಂದೆ ಇಟ್ಟಿದ್ದಾರೆ.
ಮಂಡ್ಯದಲ್ಲಿ ಅಂಬರೀಶ್ ಅಭಿಮಾನಿಗಳ ದೊಡ್ಡ ಪಡೆಯೇ ಸುಮಲತಾ ಹಿಂದೆ ಈಗಲೂ ನಿಂತಿದೆ. ಅದು ಸುಮಲತಾ ಆಜ್ಞೆ ಇಲ್ಲದೇ ಅತ್ತಿತ್ತ ಅಲುಗುವುದಿಲ್ಲ. ಕುಮಾರಸ್ವಾಮಿಗೆ ಈ ಪಡೆಯ ಒಂದು ಆಶೀರ್ವಾದ ಸಿಕ್ಕರೆ ಸಾಕು ತನ್ನ ಗೆಲುವು ನಿಶ್ಚಿತ ಎಂದೇ ಭಾವಿಸಿದ್ದಾರೆ. ಆದರೆ ಸುಮಲತಾ ಈವರೆಗೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಮಂಡ್ಯದಲ್ಲಿ ತನ್ನ ಸ್ಪರ್ಧೆ ಇಲ್ಲ ಎಂದಷ್ಟೇ ಸುಮಲತಾ ಸ್ಪಷ್ಟಪಡಿಸಿದ್ದು ಬಿಟ್ಟರೆ, ಎಲ್ಲೂ ಸಹ ಪ್ರಚಾರಕ್ಕೆ ಬರುವ ಬಗ್ಗೆ ಸುಮಲತಾ ಬಾಯಿ ಬಿಟ್ಟಿಲ್ಲ.
ಅಷ್ಟೆ ಅಲ್ಲದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಮೇಲೆ ಜೆಡಿಎಸ್ ನಾಯಕರ ತೀರಾ ಕೆಳಮಟ್ಟದ ವಾಗ್ದಾಳಿ, ತುಚ್ಛ ಪದಗಳ ನಿಂದನೆ ಸುಮಲತಾ ಅಂಬರೀಶ್ ಇನ್ನೂ ಮರೆತಿಲ್ಲ ಎಂಬುದನ್ನು ಈ ಚುನಾವಣೆಯಲ್ಲಿ ಪರೋಕ್ಷವಾಗಿ ಅವಥು ಹೇಳಿದಂತಿದೆ. ಮೇಲಾಗಿ ಪಕ್ಷಗಳ ಜೊತೆಗೆ ಮೈತ್ರಿ ವಿಚಾರದಲ್ಲಿ ಕುಮಾರಸ್ವಾಮಿಯವರ ದ್ವಂದ್ವ ನಿಲುವು, ಅಧಿಕಾರಕ್ಕಾಗಿ ರಾತ್ರಿ ಬೆಳಗಾಗುವುದರಲ್ಲಿ ನಿಲುವು ಬದಲಿಸುವುದರಿಂದ ಕುಮಾರಸ್ವಾಮಿ ಈಗಲೂ ಬಿಜೆಪಿ ಜೊತೆಗೆ ಕೊನೆಯ ವರೆಗೂ ನಿಲ್ಲುತ್ತಾರೆ ಎಂಬ ಬಗ್ಗೆ ಸ್ವತಃ ಬಿಜೆಪಿ ನಾಯಕರಿಗೇ ಇರುವ ದೊಡ್ಡ ಅನುಮಾನ.
ಕೈ ಅಭ್ಯರ್ಥಿ ಡಿಕೆ ಸುರೇಶ್ ಮತ್ತು ಸ್ಟಾರ್ ಚಂದ್ರು ಪರ ದರ್ಶನ್ ಪ್ರಚಾರ
ಎಲ್ಲಕ್ಕಿಂತ ಈ ಸುದ್ದಿಗಳಿಗೆ ಇರುವ ದೊಡ್ಡ ಪುರಾವೆ ಎಂದರೆ ಅದು ಕುಮಾರಸ್ವಾಮಿ ಎದುರಾಳಿ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಚಿತ್ರನಟ ದರ್ಶನ್ ಎರಡು ದಿನಗಳ ಹಿಂದೆ ಭರ್ಜರಿ ಪ್ರಚಾರ ನಡೆಸಿ, ಚಂದ್ರು ಪರವಾಗಿ ಮತಯಾಚನೆ ನಡೆಸಿದ್ದಾರೆ. ಸುಮಲತಾ ಕುಟುಂಬಕ್ಕೆ ಅತ್ಯಾಪ್ತನಾಗಿರುವ ದರ್ಶನ್ ರಾಜಕೀಯವಾಗಿ ಸುಮಲತಾ ಆಜ್ಞೆ ಇಲ್ಲದೇ ಒಂದು ಹೆಜ್ಜೆ ಮುಂದಿಡುವವರಲ್ಲ. ಅಷ್ಟೆ ಅಲ್ಲದೆ, ‘ಸುಮ ಅಮ್ಮ ಹಾಳು ಬಾವಿಗೆ ಬೀಳು ಅಂದರೂ ಬೀಳುತ್ತೇನೆ’ ಎಂಬ ಹೇಳಿಕೆ ಹಿಂದೆಯೂ ರಾಜಕೀಯದ ನಂಟು ಇದೆ ಎಂಬುದು ಜೆಡಿಎಸ್ ನಾಯಕರಿಗೆ ತಡವಾಗಿ ಅರ್ಥವಾಗುತ್ತಿದೆ.

ದರ್ಶನ್ ಪ್ರಚಾರದ ಹಿಂದೆ ಸುಮಲತಾ ಕೈ ಇರುವುದು ಈ ಮೂಲಕ ಸ್ಪಷ್ಟ. ಇನ್ನೂ ಆಳದಲ್ಲಿ ಹೋಗಿ ನೋಡಿದರೆ ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವೂ ಸಹ ಬಿಜೆಪಿಗೆ ಬೇಕಾಗಿಲ್ಲ. ಮಂಡ್ಯದಲ್ಲಿ ಕುಮಾರಸ್ವಾಮಿ ಗೆದ್ದರೆ ಅದು ಜೆಡಿಎಸ್ ಗೆ ಲಾಭವೇ ಹೊರತು ಬಿಜೆಪಿಗಲ್ಲ. ಮುಂದೊಂದು ದಿನ ಹಳೆ ಮೈಸೂರು ಭಾಗದಲ್ಲಿ ತಮ್ಮ ಅಸ್ತಿತ್ವ ಕಾಣಲು ಹೆಣಗಾಡುತ್ತಿರುವ ಬಿಜೆಪಿಗೆ ಕುಮಾರಸ್ವಾಮಿ ಗೆಲುವಿಗಿಂತ ಮುಖ್ಯವಾಗಿರುವುದು ಸುಮಲತಾ ವರ್ಚಸ್ಸಿನಿಂದ ಬಿಜೆಪಿಗೆ ಇರುವ ಲಾಭ ಏನು ಎಂಬ ಲೆಕ್ಕಾಚಾರ ಕೂಡಾ ಮುಖ್ಯವಾಗಿ ಬಿಜೆಪಿ ನಾಯಕರು ಯೋಚಿಸಿದ್ದಾರೆ. ಇದೂ ಸಹ ದರ್ಶನ್, ಸುಮಲತಾ ನಿರ್ದೇಶನದಂತೆ ನೇರವಾಗಿ ಸ್ಟಾರ್ ಚಂದ್ರು ಪರವಾಗಿ ಪ್ರಚಾರಕ್ಕಿಳಿಯಲು ಪ್ರಮುಖ ಕಾರಣ.
ಇನ್ನೊಂದು ಕಡೆಯಿಂದ ಮಂಡ್ಯ ಕ್ಷೇತ್ರದ ಪಕ್ಕದಲ್ಲೇ ಬರುವ ಬೆಂಗಳೂರು ಗ್ರಾಮಾಂತರ ಕೂಡಾ ಇದೇ ಮಾದರಿಯ ರಾಜಕಾರಣಕ್ಕೆ ಸುಮಲತಾ ಕೈ ಇಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ, ಕೈ ಅಭ್ಯರ್ಥಿ ಡಿಕೆ ಸುರೇಶ್ ಪರವಾಗಿ ಶನಿವಾರ ದರ್ಶನ್ ಇಳಿಯುವುದರ ಹಿಂದೆಯೂ ಸುಮಲತಾ ಕೆಲಸ ಮುಂದಾಗಿದೆ. ದೇವೇಗೌಡರ ಅಳಿಯ ಸಿಎನ್ ಮಂಜುನಾಥ್ ಇಲ್ಲಿ ಬಿಜೆಪಿ ಅಭ್ಯರ್ಥಿ. ಹೀಗಿರುವಾಗ ಇಲ್ಲಿಂದ ಸಿಎನ್ ಮಂಜುನಾಥ್ ಬಿಜೆಪಿಯಿಂದ ಗೆದ್ದದ್ದೇ ಆದರೆ ಮತ್ತದೇ ದೇವೇಗೌಡರ ಕುಟುಂಬದ ಮೇಲುಗೈ ಆಗಬಹುದು. ಹೀಗಾಗಿಯೇ ನಟ ದರ್ಶನ್ ಅವರನ್ನು ಈ ಕ್ಷೇತ್ರಕ್ಕೂ ಮತಯಾಚನೆಗೆ ಸುಮಲತಾ ಬಿಟ್ಟಿರಬಹುದು ಎನ್ನಲಾಗಿದೆ.
ಮಂಡ್ಯದಲ್ಲಿ ಕುಮಾರಸ್ವಾಮಿ ಪರವಾಗಿ ಬೆರಳೆಣಿಕೆಯಷ್ಟು ಬಿಜೆಪಿ ನಾಯಕರು ಪ್ರಚಾರಕ್ಕೆ ಇಳಿದರೆ, ಸ್ಥಳೀಯವಾಗಿ ಯಾವ ಬಿಜೆಪಿಗರೂ ಕುಮಾರಸ್ವಾಮಿ ಪರ ಬೀದಿಗಿಳಿದಿಲ್ಲ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ‘ಸ್ಥಳೀಯ ಅಭ್ಯರ್ಥಿ’ ಎಂಬ ಅಸ್ತ್ರ ಉಪಯೋಗಿಸುತ್ತಿದ್ದಾರೆ. ಇನ್ನು ಸ್ಟಾರ್ ಚಂದ್ರು ಅವರನ್ನು ಶತಾಯಗತಾಯ ಗೆಲ್ಲಿಸಿಯೇ ತೀರುತ್ತೇನೆ ಎಂಬ ಮಟ್ಟಿಗೆ ಚಲುವರಾಯಸ್ವಾಮಿ ಬಂದಂತಿದೆ. ಈಗಾಗಲೇ ಒಂದು ಬಿಜೆಪಿ ಮತ್ತು ಒಂದು ಜೆಡಿಎಸ್ ಹೊರತುಪಡಿಸಿ ಇಡೀ ಜಿಲ್ಲೆ ಕಾಂಗ್ರೆಸ್ ಮಯ ಆಗಿರುವುದು ಹಾಗೂ ಹಾಲಿ ಸಂಸದೆ ಸುಮಲತಾ ಈವರೆಗೆ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಇಳಿಯದಿರುವುದು ಕುಮಾರಸ್ವಾಮಿ ಗೆಲುವು ಅಷ್ಟು ಸುಲಭ ಇಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದೆ.