Tuesday, September 24, 2024

ಸತ್ಯ | ನ್ಯಾಯ |ಧರ್ಮ

ʼಕೇಜ್ರಿವಾಲ್‌ ಕುರ್ಚಿಯ ಮೇಲೆ ಅವರ ಚಪ್ಪಲಿಯನ್ನು ಇಡಿ!ʼ: ಮುಖ್ಯಮಂತ್ರಿ ಅತಿಶಿ ನಡೆಗೆ ಪ್ರಶಾಂತ್‌ ಭೂಷಣ್‌ ವ್ಯಂಗ್ಯ

ದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಹೊಸ ಮುಖ್ಯಮಂತ್ರಿ ಅತಿಶಿಯವರು ಹಿಂದಿನ ಮುಖ್ಯಮಂತ್ರಿ ಕೇಜ್ರಿವಾಲ್‌ ಕುಳಿತುಕೊಳ್ಳುತ್ತಿದ್ದ ಕುರ್ಚಿಯಲ್ಲಿ ಕೂರದೆ, ಅದನ್ನು ಅವರ ಗೌರವಾರ್ಥವಾಗಿ ಖಾಲಿ ಬಿಟ್ಟು ಇನ್ನೊಂದು ಕುರ್ಚಿಯಲ್ಲಿ ಕುಳಿತಿದ್ದರು. ಈ ನಡೆಯನ್ನು ಅವರು ತನ್ನ ನಾಯಕನಿಗೆ ತೋರಿಸುತ್ತಿರುವ ಗೌರವ ಎನ್ನುಂತೆ ಹೇಳಿದ್ದರು. ಈ ಕುರ್ಚಿಯ ಮೇಲೆ ಇನ್ನು ಆರು ತಿಂಗಳಿನಲ್ಲಿ ಕೇಜ್ರಿವಾಲ್‌ ಬಂದು ಮತ್ತೆ ಕೂರುತ್ತಾರೆ ಎಂದು ಸಹ ಹೇಳಿದ್ದರು.

ಅತಿಶಿಯವರ ಈ ನಡೆ ಆ ಪಕ್ಷದವರಿಗೆ ಮೆಚ್ಚುಗೆ ಎನ್ನಿಸಿದರೂ, ಹೊರಗಿನವರಿಗೆ ಅದೊಂದು ಪ್ರಹಸನದಂತೆ ಕಂಡಿದೆ. ಈ ಬಗ್ಗೆ ಹಲವರು ಪ್ರತಿಕ್ರಿಯಿಸಿ, ಆಮ್‌ ಆದ್ಮಿ ಪಕ್ಷ ನಾಟಕ ಮಾಡುವುದರಲ್ಲಿ ಬಿಜೆಪಿಗಿಂತಲೂ ಒಂದು ಹೆಜ್ಜೆ ಮುಂದೆ ಇದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.

ವಿಷಯದ ಕುರಿತಾಗಿ ಈ ಮೊದಲು ಆಮ್‌ ಆದ್ಮಿ ಹಾಗೂ ಇಂಡಿಯಾ ಅಗೆನೆಸ್ಟ್‌ ಕರಪ್ಷನ್‌ ತಂಡಗಳ ಭಾಗವಾಗಿದ್ದ ಪ್ರಶಾಂತ್‌ ಭೂಷಣ ಅವರು ಪ್ರತಿಕ್ರಿಯಿಸಿದ್ದಾರೆ. “ಇಡೀ ದೃಶ್ಯವು ರಾಮಾಯಣದ ಭರತನ ಪಟ್ಟಾಭಿಷೇಕದ ಹಾಗಿದ್ದ ಕಾರಣ ಆ ಖಾಲಿ ಕುರ್ಚಿಯ ಮೇಲೆ ಚಪ್ಪಲಿಯನ್ನೂ ಇಟ್ಟುಬಿಡಿ, ಆ ಚಪ್ಪಲಿಗಳೇ ಅಧಿಕಾರ ನಡೆಸಲಿ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. “ಅವರು ಕುರ್ಚಿಯ ಮೇಲೆ ಕೇಜ್ರಿವಾಲ್ ಚಪ್ಪಲಿಗಳನ್ನಿಟ್ಟು‌, ಅವುಗಳೇ ಇನ್ನು ಮಂದೆ ಅಧಿಕಾರ ನಡೆಸಲಿವೆ ಎಂದರೂ ಎನ್ನಬಹುದು” ಎಂದು ಪ್ರಶಾಂತ್‌ ಭೂಷಣ್‌ ಹೇಳಿದ್ದಾರೆ

ಅತಿಶಿ ಅಧಿಕಾರ ಸ್ವೀಕರಿಸುವ ದಿನ ರಾಮಾಯಣದ ಉದಾಹರಣೆಯನ್ನು ಉಲ್ಲೇಖಿಸಿ, “14 ವರ್ಷಗಳ ಕಾಲ ಶ್ರೀರಾಮ ವನವಾಸಕ್ಕೆ ತೆರಳಿದಾಗ ಆತನ ಸಹೋದರ ಭರತ ಎದುರಿಸಿದ ಸ್ಥಿತಿಯೇ ನನ್ನದಾಗಿದೆ. ಭಗವಾನ್‌ ಶ್ರೀರಾಮನ ಮರದ ಚಪ್ಪಲಿಗಳನ್ನು ಸಿಂಹಾಸನದ ಮೇಲಿರಿಸಿ, 14 ವರ್ಷಗಳ ಕಾಲ ಅಯೋಧ್ಯೆಯಲ್ಲಿ ಭರತ ಆಡಳಿತ ನಡೆಸಿದಂತೆ ಮುಂದಿನ ನಾಲ್ಕು ತಿಂಗಳ ಕಾಲ ದೆಹಲಿ ಸರ್ಕಾರದ ಆಡಳಿತ ನಡೆಸಲಿದ್ದೇನೆ”‘ ಎಂದು ಹೇಳಿದ್ದರು.

ಇನ್ನು ಅತಿಶಿಯವರ ನಡೆಗೆ ಪ್ರತಿಕ್ರಿಯಿಸಿರುವ ಬಹುಭಾಷಾ ನಟ ಪ್ರಕಾಶ್‌ ರೈ “ಬಿಜೆಪಿ ಹಾಗೂ ಆಪ್‌ ಬೇರೆ ಬೇರೆ ಬಾಟಲಿಗಳಲ್ಲಿರುವ ಒಂದೇ ರೀತಿಯ ವೈನ್”‌ ಎಂದು ಕರೆದಿದ್ದಾರೆ.

ಮುಂದಿನ ಆರು ತಿಂಗಳಿನಲ್ಲಿ ದೆಹಲಿ ವಿಧಾನಸಭೆಯು ಚುನಾವಣೆಗೆ ಹೋಗಲಿದ್ದು, ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ “ಜನರು ನನ್ನನ್ನು ಮತ್ತೆ ಆರಿಸಿದರೆ ಮಾತ್ರ ಆ ಕುರ್ಚಿಯ ಮೇಲೆ ಕೂರುತ್ತೇನೆ” ಎಂದಿದ್ದರು. ಅವರ ಈ ನಡೆ ಬಿಜೆಪಿಯ ಇತ್ತೀಚಿನ ರಾಜಕೀಯ ನಡೆಗಳಿಗೆ ಚೆಕ್‌ ಮೇಟ್‌ ರೀತಿಯಲ್ಲಿ ಇತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page