Home ಬೆಂಗಳೂರು ಬಿಡದಿ ಟೌನ್‌ಶಿಪ್ ಯೋಜನೆ | ಫಲವತ್ತಾದ ಕೃಷಿ ಭೂಮಿ ವಶಕ್ಕೆ ರೈತರ ತೀವ್ರ ಆಕ್ಷೇಪ: ಒಕ್ಕಲೆಬ್ಬಿಸಿದರೆ...

ಬಿಡದಿ ಟೌನ್‌ಶಿಪ್ ಯೋಜನೆ | ಫಲವತ್ತಾದ ಕೃಷಿ ಭೂಮಿ ವಶಕ್ಕೆ ರೈತರ ತೀವ್ರ ಆಕ್ಷೇಪ: ಒಕ್ಕಲೆಬ್ಬಿಸಿದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ

0

ಬೆಂಗಳೂರು, ಮೇ 18: ಫಲವತ್ತಾದ ಕೃಷಿ ಭೂಮಿಯನ್ನು ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್ ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ. ಇಂತಹ ಪರಿಸರ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು ರಾಜ್ಯ ಸರಕಾರ ವಾಪಸ್ ಪಡೆಯಬೇಕು ಮತ್ತು ಯೋಜನೆಗಾಗಿ ಸುಮಾರು 9,640 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹಿಸಿದೆ.

ಸೋಮವಾರ ನಗರದ ಗಾಂಧಿ ಭವನದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಪದಾಧಿಕಾರಿಗಳಾದ ಬಡಗಲಪುರ ನಾಗೇಂದ್ರ, ಸಿದ್ದನಗೌಡ ಪಾಟೀಲ, ನೂರ್ ಶ್ರೀಧರ್, ಟಿ.ಯಶವಂತ, ಪಿ.ಪಿ.ಅಪ್ಪಣ್ಣ, ಪ್ರಕಾಶ್ ಸೇರಿದಂತೆ ರೈತರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ರಾಮನಗರ ಜಿಲ್ಲೆ ಬಿಡದಿ ಹೋಬಳಿ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 25 ಗ್ರಾಮಗಳ ಸುಮಾರು 9,640 ಎಕರೆ ಕೃಷಿ ಭೂಮಿಯು ನೀರಾವರಿ ಹೊಂದಿರುವ ತೆಂಗು, ಅಡಿಕೆ, ಬಾಳೆ, ಮಾವು ಸೇರಿದಂತೆ ವಿವಿಧ ರೀತಿಯ ತೋಟಗಾರಿಕೆ ಬೆಳೆಗಳನ್ನು, ಬೆಳೆಯುತ್ತಿರುವ ಸಮೃದ್ಧ ಹಸಿರು ಪ್ರದೇಶವಾಗಿದೆ ಎಂದರು.


ಈ ಪ್ರದೇಶವು ಜಿಬಿಎ ಗಡಿಗೆ ಹೊಂದಿಕೊAಡAತೆ ಇದ್ದು ಬೆಂಗಳೂರು ಮಹಾನಗರಕ್ಕೆ ಹಾಲು, ಹಣ್ಣು, ತರಕಾರಿ ಮುಂತಾದ ದಿನನಿತ್ಯದ ಅಗತ್ಯಗಳನ್ನು ಪೂರೈಸುವ ಅಮೂಲ್ಯ ಆಹಾರದ ಕಣಜವಾಗಿದೆ. ಇಲ್ಲಿನ ಎಲ್ಲ ಕೃಷಿ ಕುಟುಂಬಗಳು ತಮ್ಮ ಸಣ್ಣ ಹಿಡುವಳಿಯಲ್ಲೇ ಮಿಶ್ರ ಬೆಳೆ ಪದ್ದತಿಯನ್ನು ಅಳವಡಿಸಿಕೊಂಡು ಅಡಿಕೆ ತಟ್ಟೆ ತಯಾರಿಕೆ ಮುಂತಾದ ಕೃಷಿ ಆಧಾರಿತ ಸಣ್ಣ ಉದ್ದಿಮೆಗಳನ್ನು ಕಟ್ಟಿಕೊಂಡು ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡಿದ್ದಾರೆ. ಇಂತಹ ಸುಸ್ಥಿರ ಬದುಕಿನ ಮೇಲೆ ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಹೋರಾಟಗಾರರು ತಿಳಿಸಿದರು.


ಜಿಬಿಎ ಅನುಷ್ಠಾನಗೊಳಿಸುತ್ತಿರುವ ಬಿಡದಿ ಸಮಗ್ರ ಉಪ ನಗರ ಯೋಜನೆಗಾಗಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಕಲಂ 17(1)ರ ಅಡಿಯಲ್ಲಿ 2025ರ ಮಾ.13 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ತಕ್ಷಣವೇ ಸುಮಾರು 3,500ಕ್ಕೂ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರು ಈ ಭೂ ಸ್ವಾಧೀನಕ್ಕೆ ಒಪ್ಪಿಗೆ ಇಲ್ಲ ಎಂದು ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಇದುವರೆಗೂ ಈ ಯಾವ ರೈತರ ಆಕ್ಷೇಪಣೆಗಳನ್ನು ಸರಕಾರ ಆಲಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


ಒಂದೂವರೆ ವರ್ಷದಿಂದ ವಿವಿಧ ಮಾದರಿಯಲ್ಲಿ ತಮ್ಮ ಬಲವಾದ ವಿರೋಧವನ್ನು ಇಲ್ಲಿನ ರೈತರು ದಾಖಲಿಸಿದ್ದು, 428ಕ್ಕೂ ಹೆಚ್ಚು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಾ ಬಂದಿದ್ದರೂ ಭಾಧಿತ ರೈತರ ಜೊತೆ ಯಾವುದೇ ಸಮಾಲೋಚನೆ ನಡೆಸದೇ ಸಂಪುಟ ಅನುಮೋದನೆ ನೀಡಿರುವುದು ರೈತರ ಪ್ರಜಾಪ್ರಭುತ್ವ ಹಕ್ಕುಗಳ ನಗ್ನ ಉಲ್ಲಂಘನೆ ಹಾಗೂ ಸರ್ವಾಧಿಕಾರಿ ಕ್ರಮ. ಕೂಡಲೇ ಸಿದ್ದರಾಮಯ್ಯ ಸರಕಾರ ಈ ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

You cannot copy content of this page

Exit mobile version