ಮುಂಬೈ: ಸನಾತನ ಧರ್ಮ ಭಾರತವನ್ನು ನಾశ ಮಾಡಿದೆ ಮತ್ತು ಅದರ ಸಿದ್ಧಾಂತ ‘ವಿಕೃತ’ವಾದದ್ದು ಎಂದು ಎನ್‌ಸಿಪಿ (ಶರದ್ ಪವಾರ್ ಬಣ) ಶಾಸಕ ಜಿತೇಂದ್ರ ಅವ್ಹಾಡ್ ಹೇಳಿದ್ದಾರೆ. ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಏಳು ಆರೋಪಿಗಳನ್ನು ಎನ್‌ಐಎ ವಿಶೇಷ ನ್ಯಾಯಾಲಯ ನಿರ್ದೋಷಿ ಎಂದು ಬಿಡುಗಡೆ ಮಾಡಿದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾಗ ಅವರು ಈ ಹೇಳಿಕೆ ನೀಡಿದರು.
ಥಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿತೇಂದ್ರ, “ಸನಾತನ ಧರ್ಮ ಭಾರತವನ್ನು ನಾಶ ಮಾಡಿದೆ. ಸನಾತನ ಧರ್ಮವೆಂಬ ಧರ್ಮವೇ ಇರಲಿಲ್ಲ. ನಾವು ಹಿಂದೂ ಧರ್ಮವನ್ನು ಅನುಸರಿಸುತ್ತೇವೆ. ಇದೇ ಸನಾತನ ಧರ್ಮ ನಮ್ಮ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವನ್ನು ತಿರಸ್ಕರಿಸಿತು. ಇದೇ ಸನಾತನ ಧರ್ಮ ಛತ್ರಪತಿ ಶಂಭಾಜಿ ಮಹಾರಾಜರನ್ನು ಅವಮಾನಿಸಿತು. ಈ ಸನಾತನ ಧರ್ಮದ ಅನುಯಾಯಿಗಳು ಜ್ಯೋತಿರಾವ್ ಫೂಲೆಯವರನ್ನು ಕೊಲ್ಲಲು ಪ್ರಯತ್ನಿಸಿದರು” ಎಂದು ಹೇಳಿದರು.
“ಸನಾತನ ಧರ್ಮವನ್ನು ಅನುಸರಿಸುವವರು ಸಾವಿತ್ರಿಬಾಯಿ ಫೂಲೆಯವರ ಮೇಲೆ ಗೋಮಯ ಮತ್ತು ಮಲಿನ ವಸ್ತುಗಳನ್ನು ಎಸೆದರು. ಇದೇ ಸನಾತನ ಧರ್ಮ ಶಾಹು ಮಹಾರಾಜರನ್ನು ಕೊಲ್ಲಲು ಸಂಚು ರೂಪಿಸಿತು. ಇದು ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ನೀರು ಕುಡಿಯಲು ಅಥವಾ ಶಾಲೆಗೆ ಹೋಗಲು ಸಹ ಅವಕಾಶ ನೀಡಲಿಲ್ಲ. ಕೊನೆಗೆ ಬಾಬಾಸಾಹೇಬ್ ಅಂಬೇಡ್ಕರ್ ಸನಾತನ ಧರ್ಮದ ವಿರುದ್ಧ ಎದ್ದು ನಿಂತು, ಮನುಸ್ಮೃತಿಯನ್ನು ಸುಟ್ಟು, ಅದರ ದಬ್ಬಾಳಿಕೆಯ ಸಂಪ್ರದಾಯಗಳನ್ನು ತಿರಸ್ಕರಿಸಿದರು.
ಮನುಸ್ಮೃತಿಯನ್ನು ರಚಿಸಿದವನು ಸ್ವತಃ ಇದೇ ಸನಾತನ ಸಂಪ್ರದಾಯದಿಂದ ಬಂದವನು. ಸನಾತನ ಧರ್ಮ ಮತ್ತು ಅದರ ಸಿದ್ಧಾಂತ ವಿಕೃತವಾಗಿದೆ ಎಂದು ಸಾರ್ವಜನಿಕವಾಗಿ ಹೇಳಲು ಯಾರೂ ಹೆದರಬಾರದು” ಎಂದೂ ಶಾಸಕರು ಹೇಳಿದರು.