ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ನಟ ಹರೀಶ್ ರಾಯ್ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಕಿದ್ವಾಯಿ ಹಾಸ್ಪಿಟಲ್‌ನಲ್ಲಿ ಥೈರಾಯಡ್ ಕ್ಯಾನ್ಸರ್ ಕಾಯಿಲೆಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸಾಮಾಜಿಕ ಜಾಲತಾಣದಲ್ಲಿ ಸಹಾಯಕ್ಕಾಗಿ ಅಂಗಲಾಚಿದ್ದ ನಟನಿಗೆ ಹಲವು ನಟ ನಟಿಯರು, ನಿರ್ಮಾಪಕರ ಕಡೆಯಿಂದ ಕೊಂಚ ಮಟ್ಟಿಗಿನ ಸಹಾಯ ದೊರಕಿತ್ತು. ಆದರೆ ಇದೀಗ ಬಂದ ಮಾಹಿತಿಯಂತೆ ಯಾವ ಚಿಕಿತ್ಸೆಯೂ ಫಲಕಾರಿಯಾಗದೆ ಹರೀಶ್ ರಾಯ್ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿರುವ ಇವರು ಕನ್ನಡ ಮಾತ್ರವಲ್ಲದೆ, ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಸಾಕಷ್ಟು ಚಿತ್ರಗಳಲ್ಲಿ ಖಳನಟನಾಗಿ, ಪೋಷಕ ನಟನಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ನಟನೆಯ ಓಂ ಸಿನೆಮಾ ಮತ್ತು ಕೊನೆಯ ದಿನಗಳಲ್ಲಿ ನಟಿಸಿದ ಕೆಜಿಎಫ್ ಸಿನಿಮಾ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಸಿನಿಮಾಗಳಾಗಿವೆ.
ಬೆಂಗಳೂರು ಅಂಡರ್ ವರ್ಲ್ಡ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೆ, ನಲ್ಲ, ಜಾಫರ್ ಅಲಿಯಾಸ್ ಮುರ್ಗಿ ಜಾಫರ್, ಜೋಡಿ ಹಕ್ಕಿ, ತಾಯವ್ವ ಸೇರಿದಂತೆ ನೂರಾರು ಸಿನೆಮಾಗಳಲ್ಲಿ ನಟಿಸಿದ್ದಾರೆ.
