ಶಿವಮೊಗ್ಗ : ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತವಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರದ (Sagar) ಕೆಎಸ್ಆರ್‌ಟಿಸಿ ಡಿಪೋದ (KSRTC Depot) ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇವರು ಸಾಗರ ಬಸ್ ಡಿಪೋದಲ್ಲಿ ರಾತ್ರಿ ಡ್ಯೂಟಿಯಲ್ಲಿದ್ದರು.ಮೃತರನ್ನು ಸಾಗರದ ನಿವಾಸಿ ಸಂದೀಪ್ (41) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಪಾಳಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸಂದೀಪ್ರನ್ನು ಸಹೋದ್ಯೋಗಿಗಳು ಬಸ್ಸಿನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅಷ್ಟರಲ್ಲೇ ಸಂದೀಪ್ ಸಾವನ್ನಪ್ಪಿದ್ದಾರೆ.ಈ ವೇಳೆ ಸಿಬ್ಬಂದಿ ಚಂದ್ರು ಮಾತನಾಡಿ, ನಾನು ಬಸ್ನಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ರಾತ್ರಿ ನಾನು ಬಸ್‌ನ್ನು ಡಿಪೋಗೆ ಬಿಡಲು ಬಂದಾಗ ಗೇಟ್ ಬಳಿ ಹಾರ್ನ್ ಮಾಡಿದ್ರು ಸಹ ಸಂದೀಪ್ ಅವರು ಹೊರಗೆ ಬರಲಿಲ್ಲ.
ಇವರು ಬಂದು ಬಸ್ ಚೆಕ್ ಮಾಡಿದ ಮೇಲೆಯೇ ಬಸ್ ಒಳಗೆ ಬಿಡಬೇಕಿತ್ತು. ಬಹಳ ಹೊತ್ತು ಇವರು ಬಾರದ ಕಾರಣಕ್ಕೆ ಇವರ ರೂಮ್‌ನಲ್ಲಿ ಹೋಗಿ ನೋಡಿದಾಗ ಇವರು ಕುಸಿದು ಬಿದ್ದಿದ್ದರು.ತಕ್ಷಣ ನಮ್ಮದೇ ಬಸ್ನಲ್ಲಿ ಸಂದೀಪ್ ಅವರನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದೆವು. ಅಷ್ಟೊತ್ತಿಗಾಗಲೇ ಸಂದೀಪ್ ತೀರಿ ಹೋಗಿದ್ದಾರೆ ಎಂದು ವೈದ್ಯರು ತಿಳಿಸಿದರು ಎಂದು ಮಾಹಿತಿ ನೀಡಿದ್ದಾರೆ.
ಶಾಸಕರಿಂದ ಸಂತಾಪ
ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಕೆಎಸ್ಆರ್‌ಟಿಸಿ ಸಿಬ್ಬಂದಿ ಸಂದೀಪ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
