ಶಿವಮೊಗ್ಗ : ಶಿವಮೊಗ್ಗ (shivamogga) ಜಿಲ್ಲೆಯ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾದ ಮಾತ್ರೆ ಸೇವನೆಯ ಬಳಿಕ 59 ವಿದ್ಯಾರ್ಥಿಗಳು ಏಕಾಏಕಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಈ ಘಟನೆ ಶಾಲೆ ಹಾಗೂ ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅನಿಮಿಯಾ (ರಕ್ತಹೀನತೆ) ತಡೆಗಟ್ಟುವ ಉದ್ದೇಶದಿಂದ ಸರ್ಕಾರದ ಆರೋಗ್ಯ ಇಲಾಖೆ ವಾರಕ್ಕೆ ಒಮ್ಮೆ ಖನಿಜಾಂಶಗಳಿರುವ ಮಾತ್ರೆಗಳನ್ನು ಶಾಲಾ ಮಕ್ಕಳಿಗೆ ವಿತರಿಸುತ್ತದೆ. ಅದೇ ಕ್ರಮದಂತೆ, ಇಂದು ಮಧ್ಯಾಹ್ನ ಅರಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾತ್ರೆ ನೀಡಲಾಗಿತ್ತು. ಈ ಶಾಲೆಯಲ್ಲಿ ಒಟ್ಟು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮಾತ್ರೆ ಸೇವನೆಯ ಕೆಲವೇ ಸಮಯದಲ್ಲಿ ಸುಮಾರು 59 ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು, ವಾಂತಿ ಭಾವನೆ ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿದೆ. ವಿದ್ಯಾರ್ಥಿಗಳ ಅಸ್ವಸ್ಥತೆಯನ್ನು ಗಮನಿಸಿದ ಶಿಕ್ಷಕರು ತಕ್ಷಣವೇ ಶಾಲಾ ಆಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಅಸ್ವಸ್ಥ ವಿದ್ಯಾರ್ಥಿಗಳನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವೈದ್ಯರು ವಿದ್ಯಾರ್ಥಿಗಳಿಗೆ ಅಗತ್ಯ ಚಿಕಿತ್ಸೆಯನ್ನು ನೀಡಿದ್ದು, ಅವರ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ (ಟಿಹೆಚ್‌ಓ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ನಾಗೇಂದ್ರಪ್ಪ, ಘಟನೆ ಕುರಿತು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾವುದೇ ವಿದ್ಯಾರ್ಥಿಗಳಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದು, ಉಳಿದವರು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಮಾತ್ರೆಗಳ ಗುಣಮಟ್ಟ, ಸಂಗ್ರಹಣೆ ಹಾಗೂ ವಿತರಣೆ ಪ್ರಕ್ರಿಯೆ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು, ಘಟನೆಯ ನಿಖರ ಕಾರಣ ಪತ್ತೆಹಚ್ಚಲು ಆರೋಗ್ಯ ಇಲಾಖೆ ತನಿಖೆ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಪೋಷಕರು ಆಸ್ಪತ್ರೆಗೆ ಧಾವಿಸಿ ಮಕ್ಕಳ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ. ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.
