ಬೆಂಗಳೂರು : ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದ್ದು, ವಿಬಿ ರಾಮ್ ಜಿ ರದ್ದುಪಡಿಸಿ ನರೇಗಾ ಪುನರ್ಸ್ಥಾಪನೆಯಾಗುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ‘ಮನರೇಗಾ ಬಚಾವ್ ಸಂಗ್ರಾಮ್” ಅಂಗವಾಗಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಹಾಗೂ ರಾಜ್ ಭವನ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇತ್ತೀಚೆಗೆ ಬಿಜೆಪಿಯವರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆ (MGNREGA) ಕಾಯ್ದೆಯನ್ನು ರದ್ದು ಮಾಡಿ, ದುರುದ್ದೇಶದಿಂದ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಹೊಸ ಕಾಯ್ದೆಗೆ ವಿಕಸಿತ ಭಾರತ- ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಶನ್ (ಗ್ರಾಮೀಣ) ಎಂಬ ಹೆಸರಿಟ್ಟಿದ್ದಾರೆ ಎಂದು ಕುಟುಕಿದರು.
‘ಬಡವರ ಬಗ್ಗೆ ಕಾಂಗ್ರೆಸ್ ಪಕ್ಷ ಮಾತ್ರವೇ ಚಿಂತಿಸುತ್ತದೆ’
2005 ರಲ್ಲಿ ಮನಮೋಹನ್ ಸಿಂಗ್ ಪ್ರದಾನಿಯಾಗಿದ್ದ ಸಂದರ್ಭದಲ್ಲಿ ನರೇಗಾ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಅಂತೆಯೇ ಆಹಾರ ಹಕ್ಕು, ಕೆಲಸದ ಹಕ್ಕು, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಅರಣ್ಯ ಕಾಯ್ದೆ ಗಳನ್ನು ಕಾಂಗ್ರೆಸ್ನ ಸರ್ಕಾರದ ಅವಧಿಯಲ್ಲಿಯೇ ಜಾರಿಗೆ ಬಂದ ಜನಪರ ಕಾಯ್ದೆಗಳಾಗಿದ್ದುವು. ಕಾಂಗ್ರೆಸ್ ಸರ್ಕಾರ ಎಂದಿಗೂ ಮಹಿಳೆಯರಿಗೆ, ದಲಿತರಿಗೆ ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಸಣ್ಣ ರೈತರು ಬಗ್ಗೆ ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಚಿಂತನೆ ಮಾಡುತ್ತದೆ ಎಂದರು.
‘ಮನರೇಗಾ ದಿಂದ 100 ದಿನಗಳ ಕೆಲಸದ ಭರವಸೆಯಿತ್ತು’
ಎಲ್ಲ ಗ್ರಾಮಪಂಚಾಯತಿಗಳಲ್ಲಿ ಬಡ ಕೂಲಿ ಕಾರ್ಮಿಕರಿಗೆ ಕೆಲಸ ಸಿಗುವ ಅವಕಾಶವಿಲ್ಲ. ನರೇಗಾ ಯೋಜನೆಯಿಂದ, ಹಿಂದೆ ಕೂಲಿಗಾರರಿಗೆ 100 ದಿನಗಳ ಕೆಲಸ ಖಾತ್ರಿಯಾಗಿ ಸಿಗುತ್ತಿತ್ತು. ಬಡವರ ಕೆಲಸದ ಹಕ್ಕು ಸಂವಿಧಾನಬದ್ಧವಾದದ್ದು, ಆದರೆ ವಿಬಿ ರಾಮ್ ಜಿ ಯ ಜಾರಿಯಿಂದ ಈ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಈ ಹಿಂದೆ ನರೇಗಾ ಅಡಿಯಲ್ಲಿ ವೆಚ್ಚಮಾಡಲಾಗುವ ಅನುದಾನವನ್ನು ಕೇಂದ್ರ ಸರ್ಕಾರವೇ ನೀಡುತ್ತಿತ್ತು. ಈಗ ಈ ಅನುದಾನವನ್ನು ನಿಲ್ಲಿಸಲಾಗಿದ್ದು, ಕೇಂದ್ರದ ಈ ಹೊಸ ಕಾಯ್ದೆಯಂತೆ ಶೇ. 40 ರಷ್ಟು ರಾಜ್ಯ ಸರ್ಕಾರಗಳು ಕೊಟ್ಟು, ಕೇಂದ್ರ ಶೇ. 60 ರಷ್ಟು ಮಾತ್ರ ಪಾವತಿಸುತ್ತವೆ ಎಂದರು.
‘ಕೇಂದ್ರ ಸರ್ಕಾರದ ಜನವಿರೋಧಿ ನೀತಿ’
ಕೇಂದ್ರದ ಇಂತಹ ಜನವಿರೋಧಿ ನೀತಿಯಿಂದ ಹಲವು ರಾಜ್ಯಗಳು ಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ನಮ್ಮ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ, ಕೇಂದ್ರದ ನೀತಿಯ್ನು ಪ್ರತಿಭಟಿಸುತ್ತಿದೆ. ಈ ಕಾಯ್ದೆಯನ್ನು ರದ್ದುಪಡಿಸಿ, ಪುನ: ನರೇಗಾ ವನ್ನು ಪುನರ್ ಸ್ಥಾಪಿಸುವವರೆಗೂ ಇಡೀ ದೇಶದ ಜನರು ಈ ಹೋರಾಟ ಮುಂದುವರೆಸಬೇಕಿದೆ. ಈ ಬಾರಿ ರೈತರು, ಕಾರ್ಮಿಕರು, ಮಹಿಳೆಯರು ಈ ಹೋರಾಟದಲ್ಲಿ ಕೈಜೋಡಿಸಲಿದ್ದಾರೆ ಎಂದರು.
‘ವಿಬಿ ಜಿ ರಾಮ್ ಜಿ – ಆರ್ ಎಸ್ ಎಸ್ ಹುನ್ನಾರ’
ವಿಬಿ ಜಿ ರಾಮ್ ಜಿ ಎಂದ ಕಾಯ್ದೆ ಬಡವರ ಹಕ್ಕನ್ನು ರಕ್ಷಿಸುವುದಿಲ್ಲ. ಈ ಹುನ್ನಾರದ ಹಿಂದೆ ಆರ್ ಎಸ್ ಎಸ್ ಇದೆ. ಬಡವರು ಬಲಯುತರಾಗದೇ, ಸೇವಕರಾಗಿಯೇ ಇರಬೇಕೆಂಬ ಕುತಂತ್ರ ಅವರದ್ದಾಗಿದೆ. ಸಮಾಜದಲ್ಲಿ ಅಸಮಾನತೆಯನ್ನು ಶಾಶ್ವತವಾಗಿಸುವುದೇ ಅರ್ ಎಸ್ ಎಸ್ ಹುನ್ನಾರ ಎಂದರು.
