ಹಾಸನ : ಬೂವನಹಳ್ಳಿ ಬಳಿ ನಿರ್ಮಾಣ ಹಂತದಲ್ಲಿರುವ ಹಾಸನ ವಿಮಾನ ನಿಲ್ದಾಣದ ಸುತ್ತಲಿನ ರೈತರು ತಮ್ಮ ಜಮೀನುಗಳಿಗೆ ಹೋಗಿ ಬರಲು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ತಡೆಗೋಡೆಯನ್ನು ಒಡೆದು ಸುಗಮ ದಾರಿ ಮಾಡಿಕೊಡಲು ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಐಡಿಬಿ) ಅಧಿಕಾರಿಗಳಿಗೆ ಖಡಕ್ ಆದೇಶಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದ ಆವರಣದಿಂದ ಹೊರಗೆ ನಿರ್ದಿಷ್ಟ ಬಫರ್ ವಲಯ ಮತ್ತು ಸರ್ವಿಸ್ ರಸ್ತೆ ಇರಬೇಕು. ಆದರೆ ಹಾಸನ ವಿಮಾನ ನಿಲ್ದಾಣದ ನಿರ್ಮಾಣದಲ್ಲಿ ಈ ನಿಯಮ ಪಾಲನೆಯಾಗದೆ ರೈತರಿಗೆ ತೊಂದರೆ ಉಂಟಾಗಿದೆ ಎಂದರು.
ರೈತರಿಗೆ ಬದಲಿ ದಾರಿ ಸಿಗುವವರೆಗೆ ಕಾಂಪೌಂಡ್ ಗೋಡೆ ತೆಗೆಯುವ ಕ್ರಮ ಕೈಗೊಳ್ಳಬೇಕು. ಮುಂದಿನ ಸೋಮವಾರದೊಳಗೆ ಈ ಬಗ್ಗೆ ಸ್ಪಷ್ಟ ವರದಿ ನೀಡಬೇಕು ಎಂದು ಉಪವಿಭಾಗಾಧಿಕಾರಿ ಜಗದೀಶ್ ಅವರಿಗೆ ಸೂಚಿಸಿದರು. ಸಭೆಯಲ್ಲಿ ಕೆಐಡಿಬಿ ಅಧಿಕಾರಿಗಳು 1966ರಿಂದ ನಡೆದ ಭೂಸ್ವಾಧೀನದ ಪ್ರಕ್ರಿಯೆಯ ವಿವರ ನೀಡಿದರು. ಒಟ್ಟು 12 ಕಿಲೋಮೀಟರ್ ಉದ್ದದ ಗೋಡೆ ನಿರ್ಮಾಣಕ್ಕೆ ಯೋಜನೆ ಇದ್ದರೂ, ಸ್ವಾಧೀನದ ಗೊಂದಲಗಳಿಂದ ಕೇವಲ 6 ಕಿಮೀ ಭಾಗ ಮಾತ್ರ ನಿರ್ಮಾಣವಾಗಿದೆ ಎಂದು ಗುತ್ತಿಗೆದಾರರು ತಿಳಿಸಿದರು.ಬೂವನಹಳ್ಳಿ, ದ್ಯಾವಲಾಪುರ, ಮೈಲನಹಳ್ಳಿ, ತೆಂಡಿಹಳ್ಳಿ ಹಾಗೂ ಲಕ್ಷ್ಮಿ ಸಾಗರದ ರೈತರು ತಮ್ಮ ಭೂಮಿಯ ಹಕ್ಕು, ಪರಿಹಾರ, ಹಾಗೂ ದಾರಿ ಮುಚ್ಚಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಕೆಲ ಭೂಮಿಗಳು ತಪ್ಪಾಗಿ ಸರ್ಕಾರಿ ಭೂಮಿಯಾಗಿ ದಾಖಲಾಗಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿ. ಮಂಜುನಾಥ್, ತಹಶೀಲ್ದಾರ್ ಗೀತಾ, ರೈತರು ಹಾಗೂ ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ ಉಪಸ್ಥಿತರಿದ್ದರು.
