ಹಾಸನ : ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಿದ್ಯಾರ್ಥಿಗೆ ದಂಡ ವಿಧಿಸದೇ, ಬದಲಿಗೆ ಜವಾಬ್ದಾರಿಯುತ ನಾಗರಿಕನಾಗಿ ಸುರಕ್ಷತೆಯ ಮಹತ್ವವನ್ನು ಬೋಧಿಸಿದ ಹಾಸನ ಸಂಚಾರಿ ವೃತ್ತ ನಿರೀಕ್ಷಕರಾದ ದಯಾನಂದ್ ಅವರ ನಡೆ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.
ರಾತ್ರಿ ಎ.ವಿ.ಕೆ ಕಾಲೇಜ್ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದಯಾನಂದ್ ಹಾಗೂ ಅವರ ತಂಡ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಿದ್ಯಾರ್ಥಿಯೊಬ್ಬರನ್ನು ತಡೆದರು. ನಿಮ್ಮ ಸುರಕ್ಷತೆ ಹಾಗೂ ನಿಮ್ಮನ್ನು ನಂಬಿರುವ ಕುಟುಂಬಕ್ಕಾಗಿ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ವಿದ್ಯಾರ್ಥಿಗೆ ಮನದಟ್ಟು ಮಾಡಿದರು. ಅವರು ದಂಡ ವಿಧಿಸದೇ, “ಹೊಸ ಹೆಲ್ಮೆಟ್ ಖರೀದಿಸಿ ಬನ್ನಿ, ನಂತರ ನಿಮ್ಮ ವಾಹನವನ್ನು ಬಿಡುತ್ತೇನೆ,” ಎಂದು ತಿಳಿಸಿದರು. ವಿದ್ಯಾರ್ಥಿ ಕೂಡಲೇ ಹೊಸ ಹೆಲ್ಮೆಟ್ ಖರೀದಿಸಿ ಬಂದು ತಪ್ಪಿಗೆ ಕ್ಷಮೆಯಾಚಿಸಿದರು. ಬಳಿಕ ಪೊಲೀಸರಿಂದ ವಾಹನ ಬಿಡುಗಡೆ ಮಾಡಿಸಲಾಯಿತು.
ಹಣಕ್ಕಾಗಿ ವಾಹನ ತಡೆದು ದಂಡ ವಿಧಿಸುತ್ತಾರೆ ಎನ್ನುವ ಆರೋಪಗಳ ನಡುವೆಯೇ ದಯಾನಂದ್ ಅವರ ಈ ಮಾನವೀಯ ನಡೆ ಪೊಲೀಸ್ ಇಲಾಖೆಗೆ ಗೌರವ ತಂದಿದೆ. ಹಾಸನ ಜಿಲ್ಲಾ ಕಿಚ್ಚ ಸುದೀಪ್ ಅಭಿಮಾನಿಗಳ ಬಳಗದಿಂದ ಅವರು ಶ್ಲಾಘನೆಗೆ ಪಾತ್ರರಾಗಿದ್ದಾರೆ
