Home ಬ್ರೇಕಿಂಗ್ ಸುದ್ದಿ ಧರ್ಮಸ್ಥಳದ ಅಸಹಜ ಸಾವುಗಳ ತನಿಖೆ ವಿಸ್ತರಿಸಬೇಕು, ಡಾ. ನಾಗಲಕ್ಷ್ಮಿ ಚೌಧರಿ ಸ್ಪಷ್ಟನೆ

ಧರ್ಮಸ್ಥಳದ ಅಸಹಜ ಸಾವುಗಳ ತನಿಖೆ ವಿಸ್ತರಿಸಬೇಕು, ಡಾ. ನಾಗಲಕ್ಷ್ಮಿ ಚೌಧರಿ ಸ್ಪಷ್ಟನೆ

ಹಾಸನ : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಹಾಸನಕ್ಕೆ ಭೇಟಿ ನೀಡಿ ಮಹಿಳೆಯರ ವಿವಿಧ ಅಹವಾಲುಗಳನ್ನು ಸ್ವೀಕರಿಸಿದರು. ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ನಡೆದ ಮಹಿಳಾ ಸ್ಪಂದನ ಮತ್ತು ಪ್ರಗತಿ ಪರಿಶೀಲನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾದ ಧರ್ಮಸ್ಥಳದ ಅಸಹಜ ಸಾವು ಪ್ರಕರಣಗಳ ಕುರಿತು ತೀವ್ರ ಪ್ರತಿಕ್ರಿಯೆ ನೀಡಿದರು. ನಾನು ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ. ಧರ್ಮಸ್ಥಳದಲ್ಲಿ ನಡೆದಿರುವ ನೂರಾರು ಅಸಹಜ ಸಾವು ಪ್ರಕರಣಗಳ ಬಗ್ಗೆ ತನಿಖೆ ಮುಂದುವರಿಯುತ್ತಿದೆ. ಆದರೆ, ತನಿಖೆ ಕೇವಲ ಬುರುಡೆ ಚಿನ್ನಯ್ಯ ಎಂಬ ವ್ಯಕ್ತಿಯ ಪ್ರಕರಣಕ್ಕೆ ಮಾತ್ರ ಸೀಮಿತವಾಗಬಾರದು. ಅಲ್ಲಿ ಕಾಣೆಯಾದ ಮಹಿಳೆಯರು, ಹೆಣ್ಣು ಮಕ್ಕಳು ಎಲ್ಲಿ ಹೋದರು, ಅವರ ಕೊಲೆಯಾದರೆ ಅದಕ್ಕೆ ಹೊಣೆ ಯಾರು ಎಂಬುದರ ಬಗ್ಗೆ ಕೂಡ ತನಿಖೆ ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ಹಾಗೂ ಎಸ್‌ಐಟಿ‌ಗೆ ನಾನು ಪತ್ರ ಬರೆದಿದ್ದೇನೆ ಎಂದು ಅವರು ತಿಳಿಸಿದರು. ನಾವು ಬರೆದ ಪತ್ರದಲ್ಲಿ ಕಾಣೆಯಾದ ಮಹಿಳೆಯರ ವಿಚಾರವನ್ನೂ ಸ್ಪಷ್ಟವಾಗಿ ಉಲ್ಲೇಖಿಸಿದ್ದೇವೆ. ಎಸ್‌ಐಟಿ ತನಿಖೆಗೆ ಸರ್ಕಾರ ಅಗತ್ಯ ಶಕ್ತಿ ನೀಡಬೇಕು. ತನಿಖೆಯ ವರದಿಯನ್ನು ಮಹಿಳಾ ಆಯೋಗಕ್ಕೂ ಸಲ್ಲಿಸಬೇಕು. ತನಿಖೆಯ ವ್ಯಾಪ್ತಿ ಸೀಮಿತವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮಹಿಳೆಯರ ಜೊತೆಗಿನ ವೀಡಿಯೋ ಹಂಚಿಕೆ ಪ್ರಕರಣದ ಕುರಿತು ಮಾತನಾಡಿದ ಅವರು, “ಈ ಪ್ರಕರಣ ಅತ್ಯಂತ ಸಂವೇದನಾಶೀಲವಾಗಿದೆ. ನಾನು ಇದಕ್ಕೂ ಸಂಬಂಧಿಸಿದಂತೆ ಈಗಾಗಲೇ ಪತ್ರ ಬರೆದಿದ್ದೇನೆ. ವೀಡಿಯೋ ಹಂಚಿದವರ ಮೇಲೂ ಸಮಾನ ಕ್ರಮ ಕೈಗೊಳ್ಳಬೇಕು. ಕೃತ್ಯ ಮಾಡಿದವರು ಹಾಗೂ ವೀಡಿಯೋ ಹಂಚಿದವರು ಇಬ್ಬರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಸ್ಪಷ್ಟವಾಗಿ ನನ್ನ ಪತ್ರದಲ್ಲಿ ಉಲ್ಲೇಖಿಸಿದ್ದೇನೆ. ತನಿಖೆ ಹಂತದಲ್ಲಿದೆ, ನಾವು ಇದರ ಮೇಲೆ ನಿರಂತರ ಫಾಲೋಅಪ್ ಮಾಡುತ್ತೇವೆ ಎಂದರು.

ಈ ಘಟನೆಯಿಂದ ಅನೇಕ ಮಹಿಳೆಯರ ಮಾನಹಾನಿಯಾಗಿದೆ. ಕೆಲವರು ಊರು ಬಿಟ್ಟು ಹೋಗಿದ್ದಾರೆ, ಹಲವರು ಕೆಲಸ ಬಿಟ್ಟಿದ್ದಾರೆ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಹಿತವಚನ ನೀಡಿದರು.ಹಾಸನದಲ್ಲಿ ಮಹಿಳೆಯರಿಂದ ಬಂದ ಅಹವಾಲುಗಳ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು, “ಮಹಿಳೆಯರ ಹಕ್ಕು ಮತ್ತು ಗೌರವವನ್ನು ಕಾಪಾಡುವುದು ಆಯೋಗದ ಪ್ರಾಥಮಿಕ ಕರ್ತವ್ಯ. ನಾವು ಎಲ್ಲ ಮಟ್ಟಗಳಲ್ಲೂ ನ್ಯಾಯ ಒದಗಿಸಲು ಬದ್ಧರಾಗಿದ್ದೇವೆ,” ಎಂದು ಸ್ಪಷ್ಟಪಡಿಸಿದರು.ಮಹಿಳೆಯರ ಸುರಕ್ಷತೆಗಾಗಿ ಆಂತರಿಕ ದೂರು ಸಮಿತಿ ರಚನೆಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನ ಹೊಂದಿದ್ದುಹಾಸನ ಜಿಲ್ಲೆಯಲ್ಲಿ 1.315 ಸಮಿತಿ ರಚನೆಯಾಗಿದ್ದು 2009 ಸಮಿತಿ ರಚನೆ ಬಾಕಿ ಉಳಿದಿದೆ ಎಂದು ರಾಜ್ಯ ಮಹಿಳಾ ಆಯೋಗದ ಡಾ. ನಾಗಲಕ್ಷ್ಮಿ ಚೌದರಿ ತಿಳಿಸಿದರು. ರಾಜ್ಯದಲ್ಲಿ 78 ಸಾವಿರ ಆಂತರಿಕ ದೂರು ಸಮಿತಿ ರಚನೆಯಾಗಿದ್ದು ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕಿದೆ ಎಂದು ತಿಳಿಸಿದರು.

ಕಳೆದ ಮೂರು ದಿನಗಳಿಂದ ತನ್ನ ಹಾಸನ ಜಿಲ್ಲಾ ಪ್ರವಾಸದಲ್ಲಿ ಹಲವು ಸಮಸ್ಯೆಗಳು ತನ್ನ ಗಮನಕ್ಕೆ ಬಂದಿದೆ, ವಿದ್ಯಾರ್ಥಿನಿ ನಿಲಯಗಳು ಆಸ್ಪತ್ರೆ ಕೆಲವು ಬಡಾವಣೆಗಳು ಸೇರಿದಂತೆ ಹಲವು ಕಡೆ ತಾನು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮಹಿಳೆಯರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ತನ್ನ ಗಮನಕ್ಕೆ ತಂದಿದ್ದಾರೆ ಅಯಾ ಇಲಾಖೆಗಳಿಗೆ ಸಂಬಂಧಪಟ್ಟ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರವಾಗಿ ಅವುಗಳನ್ನು ಬಗೆಹರಿಸಿ ಅದರ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ನೀಡಬೇಕೆಂದು ಸೂಚನೆ ನೀಡಲಾಗಿದೆ ಎಂದರು. 

ಮಹಿಳಾ ಸ್ಪಂದನ ಕಾರ್ಯಕ್ರಮದಲ್ಲಿ ಹಲವಾರು ದೂರುಗಳು ಬಂದಿದ್ದು ವಿವಾಹ ವಿಚ್ಛೇದನ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ದೂರುಗಳೇ ಹೆಚ್ಚಾಗಿ ಬಂದಿದೆ ಅವರು ನೀಡಿದ ದೂರುಗಳಿಗೆ ಅನುಗುಣವಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿದ್ದೇವೆ ಎಂದರು.  ಪೊಲೀಸ್ ಠಾಣೆಗಳಲ್ಲಿ ಮಹಿಳೆಯರಿಗೆ ಗೌರವ ಕೊಡುವ ಕೆಲಸಗಳಾಗಬೇಕು ಜೊತೆಗೆ ಅವರು ನೀಡಿದ ದೂರುಗಳ ಆಧಾರದಲ್ಲಿ ಪ್ರಕರಣ ದಾಖಲು ಮಾಡಲು ವಿಳಂಬ ಮಾಡಬಾರದು. ಆತ್ಮದಲ್ಲಿ ಈ ವರ್ಷ 279 ಮಹಿಳೆಯರು ಕಾಣೆಯಾಗಿದ್ದು ಇದರಲ್ಲಿ 236 ಮಂದಿಯನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಿದೆ ಹಿನ್ನುಳಿದ 43 ಜನರನ್ನು ಪತ್ತೆ ಹಚ್ಚಿ ವರದಿ ನೀಡಲು ತಿಳಿಸಿದ್ದೇನೆ, 368 ಬೀಟ್ಗಳನ್ನು ಮಾಡಿ ಒಂದುವರೆ ಸಾವಿರ ವಾಟ್ಸಾಪ್ ಗ್ರೂಪ್ಗಳನ್ನು ಮಾಡಿ ಆ ಮೂಲಕ ಮಹಿಳೆಯರ ಸಮಸ್ಯೆಗಳನ್ನು ಆಲಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ವಿವರಿಸಿದರು. 

ಜಿಲ್ಲಾಧಿಕಾರಿ ಕಚೇರಿ ಜಿಲ್ಲಾ ಪಂಚಾಯತ್ ಕಟ್ಟಡಗಳಲ್ಲಿ ದೂರು ಪೆಟ್ಟಿಗೆ ಇರಿಸಿ ಮಹಿಳೆಯರು ಮುಕ್ತವಾಗಿ ದೂರು ನೀಡಲು ಅವಕಾಶ ನೀಡಬೇಕು ಅಲ್ಲದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ನಡೆಯುವ ಜನಸ್ಪಂದನ ಕಾರ್ಯಕ್ರಮದಲ್ಲಿ ತಮ್ಮ ಯಾವುದೇ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶವಿದೆ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಒಟ್ಟಿನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹಾಗೂ ಅವರ ಮೇಲೆ ನಡೆಯುವ ದೌರ್ಜನ್ಯಗಳ ನಿಯಂತ್ರಣಕ್ಕಾಗಿ ಮಹಿಳಾ ಆಯೋಗ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಮಹಿಳೆಯರ ರಕ್ಷಣೆಗೆ ಹಾಗೂ ಅವರ ಹಿತಾಸಕ್ತಿಗೆ ಬದ್ಧವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಮಹಿಳಾ ಆಯೋಗದ ಸದಸ್ಯರು ಹಾಗೂ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.

You cannot copy content of this page

Exit mobile version