ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರ ಯಾವುದೇ ತಪ್ಪು ಮಾಡಿಲ್ಲ, ವಿಪಕ್ಷಗಳು ಚರ್ಚೆಗೆ ಅವಕಾಶ ನೀಡಲಿ – ಸಚಿವ ಸಂತೋಷ್ ಲಾಡ್

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರ ಯಾವುದೇ ಪಾತ್ರವಿಲ್ಲ ಮತ್ತು ಅವರು ಸಂಪೂರ್ಣ ನಿರಪರಾಧಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಪಾದಿಸಿದ್ದಾರೆ. ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯವಾಗಿ ಸದನದಲ್ಲಿ ವಾಸ್ತವಾಂಶಗಳನ್ನು ಮಂಡಿಸಲು ಪ್ರತಿಪಕ್ಷಗಳು ಸರ್ಕಾರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಪ್ರಕರಣದ ಕುರಿತು ವಿವರ ನೀಡಿದ ಸಚಿವರು, “ನಾಗೇಂದ್ರ ಅವರು ನಮ್ಮ ಪಕ್ಷದವರು ಅಥವಾ ನನ್ನ ಸ್ನೇಹಿತ ಎಂಬ ಕಾರಣಕ್ಕೆ ನಾನು ಈ ಮಾತು ಹೇಳುತ್ತಿಲ್ಲ. ಕಳೆದ 18 ತಿಂಗಳ ತನಿಖಾ ವರದಿಗಳು, ಇಡಿ, ಎಸ್‌ಐಟಿ ಹಾಗೂ ಸಿಬಿಐ ನಡೆಸಿರುವ ಸಂಪೂರ್ಣ ತನಿಖೆಯನ್ನು ಗಮನಿಸಿದರೆ ಅವರು ನಿರಪರಾಧಿ ಎಂಬುದು ಸ್ಪಷ್ಟವಾಗುತ್ತದೆ. ಆರೋಪಗಳು ಕೇಳಿಬಂದ ತಕ್ಷಣವೇ ಅವರು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ಮೂರು ತಿಂಗಳ ಕಾಲ ಬಂಧನದಲ್ಲಿದ್ದು ನಂತರ ಜಾಮೀನು ಪಡೆದಿದ್ದಾರೆ,” ಎಂದರು.

ಹಣ ವರ್ಗಾವಣೆಯ ಹಾದಿಯನ್ನು ವಿವರಿಸಿದ ಲಾಡ್, “ನಿಗಮದ ಮಂಡಳಿಯ ಯಾವುದೇ ನಿರ್ಣಯವಿಲ್ಲದೆ, ಕೇವಲ ಅಧಿಕಾರಿಗಳು ಮತ್ತು ಬ್ಯಾಂಕ್ ಮ್ಯಾನೇಜರ್ ಶಾಮೀಲಾಗಿ ಸುಮೋಟೋ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿದ್ದ 20 ಖಾತೆಗಳಿಂದ ಹಣವನ್ನು ಕರ್ನಾಟಕದ ವ್ಯಾಪ್ತಿಗೆ ಬಾರದ 18 ಖಾತೆಗಳಿಗೆ ವರ್ಗಾಯಿಸಲಾಗಿದೆ. ನಂತರ ಅದು 630ಕ್ಕೂ ಹೆಚ್ಚು ಖಾತೆಗಳಿಗೆ ಹರಿದುಹೋಗಿದೆ. ಈ ಯಾವುದೇ ಪ್ರಕ್ರಿಯೆಯಲ್ಲೂ ನಾಗೇಂದ್ರ ಅವರ ಪಾತ್ರವಾಗಲಿ ಅಥವಾ ಮಂಡಳಿಯ ಪಾಲ್ಗೊಳ್ಳುವಿಕೆಯಾಗಲಿ ಇಲ್ಲ,” ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವರು, “ನರೇಂದ್ರ ಮೋದಿ ಅವರ ಸಂಪುಟದ ಒಟ್ಟು 75 ಸಚಿವರ ಪೈಕಿ ಶೇಕಡಾ 39ರಷ್ಟು ಸಚಿವರ ಮೇಲೆ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಮತ್ತು ಕೆಲವರ ಮೇಲೆ ಅತ್ಯಾಚಾರದಂತಹ ಆರೋಪಗಳೂ ಇವೆ. ಇದರ ಬಗ್ಗೆ ಪ್ರತಿಪಕ್ಷಗಳು ಚರ್ಚಿಸುತ್ತವೆಯೇ? ಸದನದಲ್ಲಿ ನಮಗೆ ಮಾತನಾಡಲು ಅವಕಾಶ ಕೊಟ್ಟರೆ ನಾಗೇಂದ್ರ ಅವರು ಹೇಗೆ ನಿರಪರಾಧಿ ಎಂಬುದನ್ನು ನಾವು ಸಾಕ್ಷಿ ಸಮೇತ ರಾಜ್ಯದ ಜನತೆಯ ಮುಂದೆ ಸಾಬೀತುಪಡಿಸುತ್ತೇವೆ,” ಎಂದು ಸವಾಲು ಹಾಕಿದರು.

Related Articles

ಇತ್ತೀಚಿನ ಸುದ್ದಿಗಳು