ಹೊಸ ತಲೆಮಾರಿನ ಬರಹಗಾರರಲ್ಲಿ ಸಾರಾ ಅಬೂಬಕ್ಕರ್ ಅವರಂತಹ ವಿಚಾರಶೀಲ, ದಿಟ್ಟ ದನಿಯ ಲೇಖಕಿಯರ ಕೊರತೆ ಎದ್ದು ಕಾಣುತ್ತಿರುವ ಹೊತ್ತಿನಲ್ಲೇ ಸಾರಾ ಅವರ ನಿರ್ಗಮನವಾಗಿದೆ. ಅವರು ಬಿಟ್ಟು ಹೋದ ನಿರ್ವಾತವನ್ನು ತುಂಬುವವರು ಯಾರು ಎಂಬ ಪ್ರಶ್ನೆಯನ್ನು ಎತ್ತುತ್ತಲೇ ಸಾರಾ ಅವರ ಕೊನೆಯ ದಿನಗಳವರೆಗೂ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಲೇಖಕಿ ದೇವಿಕಾ ನಾಗೇಶ್ ಸಾರಾ ಅವರಿಗೆ ತಮ್ಮ ಕೊನೆಯ ಪ್ರಣಾಮವನ್ನು ಈ ಲೇಖನದ ಮೂಲಕ ಸಲ್ಲಿಸಿದ್ದಾರೆ.
“ನಾನು ಹುಟ್ಟಿ ಬೆಳೆದ ಸಮಾಜವನ್ನು ತಿದ್ದುವ ಸಲುವಾಗಿ ಈ ಸಮಾಜದ ಕೆಲವು ಕ್ರೂರ ಪದ್ಧತಿಗೆ ಬೆಳಕು ಚೆಲ್ಲಿದ್ದೇನೆ ಹೊರತು ಅದನ್ನು ಅವಮಾನಿಸುವುದು ನನ್ನ ಉದ್ದೇಶವಲ್ಲ. ಸಾಹಿತ್ಯ ಸಮಾಜದ ಪ್ರತಿಬಿಂಬ ಎಂಬ ನಂಬಿಕೆ ನನ್ನದು. ಕೊಳೆತ ಭಾಗವನ್ನು ಹಾಗೆಯೇ ಮುಚ್ಚಿಟ್ಟರೆ ಇನ್ನಷ್ಟು ಕೊಳೆತು ಹೋಗುತ್ತದೆ. ಆದ್ದರಿಂದ ಬೇರೆ ಕಡೆಗೆ ಬೆಳಕು ಚೆಲ್ಲುವ ಕೆಲಸ ನನ್ನದು” ಎಂದವರು ಡಾ. ಸಾರಾ ಅಬೂಬಕರ್. ಕೇರಳದ ಕಾಸರಗೋಡಿನ ಪುದಿಯಾಪುರ ತರವಾಡು ಮನೆಯ ಪಿ.ಅಹ್ಮದ್ ಹಾಗೂ ಜೈನಾಬಿ ದಂಪತಿಗಳ ಆರು ಗಂಡು ಮಕ್ಕಳ ನಡುವೆ ಮುದ್ದಿನ ಮಗಳಾಗಿ ಜನಿಸಿದವರು ಸಾರಾ. ಮನೆ ಮಾತು ಮಲೆಯಾಳಂ ಆಗಿದ್ದರೂ ಕನ್ನಡ ಶಾಲೆಯಲ್ಲಿ ಕಲಿತರು. ಮಗಳು ವಿದ್ಯಾವಂತೆಯಾಗಬೇಕೆಂದು ಬಯಸಿದ ಇವರ ತಂದೆ ಮಗಳನ್ನು ಕಾಸರಗೋಡಿನಲ್ಲಿ ಕನ್ನಡ ಶಾಲೆಗೆ ಸೇರಿಸಿದ್ದರು. ವಕೀಲರಾಗಿದ್ದ ತಂದೆಯವರ ಗರಡಿಯಲ್ಲಿ ಪಳಗಿದ್ದ ಸಾರಾ ಅವರನ್ನು ಕನ್ನಡದ ಪ್ರಬುದ್ಧ ಲೇಖಕಿಯಾಗಿ ರೂಪಿಸಿದ್ದು ಅವರು ಬಾಲ್ಯದಲ್ಲಿ ಒಡನಾಡಿದ್ದ ಪರಿಸರ ಮತ್ತು ಪಡೆದ ಸಂಸ್ಕಾರ.
ಆ ಕಾಲದ ಮಹಿಳೆಯರಲ್ಲಿ ಅಪರೂಪವಾಗಿದ್ದ ಸ್ಪಷ್ಟ ಸಮುದಾಯ ಪ್ರಜ್ಞೆ, ರಾಜಕೀಯ ಪ್ರಜ್ಞೆ ಇದ್ದ ಸಾರಾ ದಿನಪತ್ರಿಕೆಯ ಓದನ್ನು ಎಂದೂ ತಪ್ಪಿಸಿ ಕೊಂಡವರಲ್ಲ. ಅಪ್ಪನ ಪುಸ್ತಕ ಪ್ರೀತಿ ಇವರನ್ನು ಅರಿವಿನ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡಿದ್ದರೆ, ಆಟದ ಮೇಲಿನ ಇವರ ವಿಶೇಷ ಪ್ರೀತಿ ಹೆಣ್ಣೆಂಬ ಕಾರಣಕ್ಕೆ ತನ್ನ ಚಟುವಟಿಕೆಗೆ ನಿರ್ಬಂಧ ಹೇರುತ್ತಿದ್ದ ಅಮ್ಮನ ಎದುರು ಬಂಡೇಳುವಂತೆ ಮಾಡುತ್ತಿತ್ತು.
ನಲುವತ್ತರ ಆಸು ಪಾಸಿನಲ್ಲಿ ಬರೆಯಲು ಪ್ರಾರಂಭಿಸಿದ ಸಾರಾ ಕವನಗಳನ್ನು ಬರೆದದ್ದು ಕಡಿಮೆ. ‘ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು ‘ಲಂಕೇಶ್ ಪತ್ರಿಕೆಯಲ್ಲಿ ಬೆಳಕು ಕಂಡ ಇವರ ಆತ್ಮಕಥನದ ತುಣುಕು. ‘ಚಂದ್ರಗಿರಿಯ ತೀರದಲ್ಲಿʼ ಕಾದಂಬರಿ ಇವರಿಗೆ ಸಾಕಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟ ಕೃತಿ. ಅಲ್ಲಿಯವರೆಗೆ ಅಂಧಕಾರದಲ್ಲಿದ್ದ ಮುಸ್ಲಿಂ ಮಹಿಳಾ ಜಗತ್ತಿನ ಸಂಘರ್ಷಗಳಿಗೆ ಮುಖಾಮುಖಿಯಾದ ಈ ಕೃತಿಯಿಂದ ಮುಸ್ಲಿಂ ಸಮುದಾಯದ ಒಳಗೆ ಸಾರಾ ಅವರು ಬಹುದೊಡ್ಡ ಸಂಘರ್ಷವನ್ನು ಎದುರಿಸ ಬೇಕಾಯಿತು. ಆದರೆ ಇದರಿಂದ ಎದೆಗುಂದದ ಸಾರ ಲೇಖನಿಯನ್ನೇ ತನ್ನ ಅಸ್ತ್ರವಾಗಿಸಿಕೊಂಡರು. ತಾನು ಬರೆದೇ ಬದುಕುತ್ತೇನೆ ಎಂದು ನಿರ್ಧರಿಸಿದರು. ಇದಕ್ಕೆ ಒತ್ತಾಸೆಯಾಗಿ ನಿಂತವರು ಅವರ ತಂದೆ ಎಂದು ಅವರು ತಮ್ಮ ಜೀವನದ ಕೊನೆಯವರೆಗೂ ಸ್ಮರಿಸಿಕೊಳ್ಳುತ್ತಿದ್ದರು.
ಕೋಮು ಮೂಲಭೂತವಾದಿಗಳ ಬಗ್ಗೆ ಕೆಂಡವಾಗುತ್ತಿದ್ದ ಸಾರಾ ಧರ್ಮ ಏನಿದ್ದರೂ ಮನೆಯೊಳಗೆ ಆಚರಣೆಗೆ, ಜಾತ್ಯತೀತ ಬಹುತ್ವ ಭಾರತದ ಪ್ರಜೆಗಳಾದ ನಾವು ಈ ನೆಲದ ಸಾಮರಸ್ಯವನ್ನು ಕಾಪಾಡ ಬೇಕಾದುದು ಮೊದಲ ಕರ್ತವ್ಯ ಎಂದು ಭಾವಿಸಿದ್ದರು, ಮಾತ್ರವಲ್ಲ ಅದರಂತೆ ಬದುಕಿದರು ಕೂಡ.
ಅಪ್ಪಟ ಗೃಹಿಣಿಯಾಗಿ ಮನೆಯೊಳಗೆ ಹಬ್ಬ ಹರಿದಿನಗಳನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದ ಇವರು ಸಮುದಾಯದೊಳಗಿನ ಅಂಧ ಶ್ರದ್ಧೆಯನ್ನು, ಮಹಿಳೆಯರನ್ನು ಹತ್ತಿಕ್ಕುವ ಪುರುಷ ಶಾಹಿ ಮನೋಭಾವವನ್ನು ಪ್ರಶ್ನಿಸಿದರು. ಇವರ ಅಂತರಂಗದ ಗೆಳತಿ ಲೇಖಕಿ ಬಿ.ಎಂ.ರೋಹಿಣಿ ಅವರು ಹೇಳುವಂತೆ “ಸಾಮಾಜಿಕ ಬದ್ಧತೆಯಿಂದ ಬರೆದವರು ಸಾರಾ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಹೊಸ ಅಲೆಯನ್ನು ಸೃಷ್ಟಿಸಿದ, ಮಹಿಳಾ ಸಮುದಾಯದಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡಿದ, ಕನ್ನಡಿಗರಲ್ಲಿ ಸಾಮಾಜಿಕ ಜಾಗೃತಿಯನ್ನು ಮೂಡಿಸಿದ ಇವರ ಸಾಧನೆಗೆ ಸರಿಗಟ್ಟುವವರಿಲ್ಲ “. ಧರ್ಮ, ಜಾತಿ, ಸಂಸ್ಕೃತಿ, ಸಂಪ್ರದಾಯ, ಶೀಲ ಇತ್ಯಾದಿಗಳು ಯಾವ ಧರ್ಮದಲ್ಲಿಯೇ ಆಗಲಿ ಮಹಿಳೆಯರನ್ನು ಬಾಧಿಸಿದಂತೆ ಇತರರನ್ನು ಬಾಧಿಸುವುದಿಲ್ಲ. ಆಕೆ ಪ್ರಜ್ಞಾವಂತಳಾದರೆ ಛಲದಿಂದ ಬದುಕು ಮುನ್ನಡೆಸಲು ಸಾಧ್ಯವಾಗುತ್ತದೆ. ಬದುಕಿನ ಒಂದಷ್ಟು ಸಮಸ್ಯೆಗಳಿಗೆ ಉತ್ತರ ಹುಡುಕಿ ಅದನ್ನು ಸಹ್ಯವಾಗುವಂತೆ ಮಾಡಿ ತಾನು ಮುನ್ನಡೆದು ಕುಟುಂಬವನ್ನು ಮುನ್ನಡೆಸಬಲ್ಲಳು. ಎಲ್ಲಾ ಧರ್ಮಕ್ಕಿಂತಲೂ ಮನುಷ್ಯ ಧರ್ಮ ಮುಖ್ಯ ಎಂದು ನಂಬಿದವರು ಸಾರಾ. ನಿಜ ಧರ್ಮದ ಶೋಧಕಿ ಎಂದು ಸಾರಾ ಅವರನ್ನು ಖ್ಯಾತ ಲೇಖಕಿ ವೈದೇಹಿಯವರು ಸರಿಯಾಗಿಯೇ ಗುರುತಿಸಿದ್ದಾರೆ.
ಇಂದು ವರ್ಗ, ಲಿಂಗ, ಜಾತಿ, ಮತ, ಧರ್ಮಗಳ ನಡುವಿನ ಕಂದಕ ಹೆಚ್ಚುತ್ತಿರುವ ಸನ್ನಿವೇಶ ಸೃಷ್ಟಿಯಾಗಿದೆ.
30-6-1936ರಲ್ಲಿ ಹುಟ್ಟಿ 10-01-2023 ಅಂದರೆ ನಿನ್ನೆ ಮಣ್ಣಿಗೆ ಸಂದ ಸಾರ ಅವರದ್ದು ಒಂದು ರೀತಿಯಲ್ಲಿ ಸಮೃದ್ಧ ಜೀವನ. ಸರಕಾರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ಎಂ. ಅಬೂಬಕರ್ ರನ್ನು 1953ರಲ್ಲಿ ವಿವಾಹವಾಗಿ ಸಾರಾ ಮಂಗಳೂರಿಗೆ ಬಂದರು. ಆಗ ಗಂಡನ ಮನೆಯಲ್ಲಿ ಅವರೊಬ್ಬರೇ ಕಲಿತ ಹೆಣ್ಣುಮಗಳು. ಪುರುಷರ ಸಾಮ್ರಾಜ್ಯದಲ್ಲಿ ಇರುತ್ತಿದ್ದ ದಿನಪತ್ರಿಕೆಯನ್ನು ಓದಲು ಅವರು ಬಿಡುವಿನ ವೇಳೆಗಾಗಿ ಕಾಯುತ್ತಿದ್ದ ಪರಿಸ್ಥಿತಿ ಅಲ್ಲಿತ್ತು. ವಾಚನಾಲಯದಿಂದ ಪತ್ನಿಗಾಗಿ ಪುಸ್ತಕಗಳನ್ನು ಓದಲು ತರುತ್ತಿದ್ದ ಸಹೃದಯಿ ಪತಿ ಅವರಿಗಿದ್ದದ್ದರಿಂದ ಅಲ್ಲಿ ದಿನ ಹೇಗೋ ಕಳೆಯುತ್ತಿತ್ತು. ನಿರಂತರ ಪುಸ್ತಕ ಸಂಗಾತಿಯಾಗಿದ್ದ ಸಾರಾ ಅವರೊಳಗೆ ತಾವು ಬರೆಯ ಬೇಕೆನ್ನುವ ತುಡಿತ ತೀವ್ರವಾಗಿತ್ತು. ಇದಕ್ಕೆ ಚಾಲನೆ ದೊರೆತದ್ದು ಲಂಕೇಶ್ ಪತ್ರಿಕೆಯಿಂದ. ಇದನ್ನು ಅವರು ಯಾವತ್ತೂ ನೆನಪಿಸಿಕೊಳ್ಳುತ್ತಿದ್ದರು.
ಪುರುಷೋತ್ತಮ ಬಿಳಿಮಲೆಯವರು ಹೇಳುವಂತೆ ‘ಸಾರಾ ಅವರಂತಹವರು ನಮ್ಮ ನಡುವೆ ಇರುವುದರಿಂದಲೇ ನಮಗೆ ಮಾನವೀಯತೆಯ ಬಗ್ಗೆ ನಂಬಿಕೆ ಉಳಿದಿದೆ. ಹೋರಾಟಗಳ ಬಗ್ಗೆ ಗೌರವ ಬರುತ್ತಿದೆ’. ಕರಾವಳಿಯ ಈ ಭಾಗದ ಸಾಕ್ಷಿಪ್ರಜ್ಞೆ ಎನ್ನುವಂತೆ ಬದುಕಿದ್ದ ಸಾರಾ ಅವರನ್ನು ಕಳೆದೊಂದು ವರ್ಷದಿಂದ ಮರೆವು ಆವರಿಸಿಕೊಂಡಿದ್ದರೂ, ಇದರ ಮೊದಲು ಒಮ್ಮೆ ಲೇಖನಿ ಹಿಡಿದ ನಂತರ ಕಳೆದ 45 ವರ್ಷಗಳಿಂದ ವರ್ತಮಾನದ ಆಗುಹೋಗುಗಳಿಗೆ ಸದಾ ಸ್ಪಂದಿಸುತ್ತ ಬರೆದವರು. ಸಮಾಜದಲ್ಲಿ ಅನ್ಯಾಯಗಳಾದಾಗ ಅದರ ವಿರುದ್ಧ ಧ್ವನಿ ಎತ್ತಿದರು, ಮಾತ್ರವಲ್ಲ ಜನಸಾಮಾನ್ಯರ ನಡುವೆ ನಿಂತು ಮಾತನಾಡಿದರು. ಯಾವುದೇ ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಸಾಥ್ ನೀಡುತ್ತಿದ್ದ ಸಾರಾ ಇನ್ನಿಲ್ಲವೆನ್ನುವುದು ನಾವು ಅರಗಿಸಿಕೊಳ್ಳಬೇಕಾದ ಸತ್ಯ.
ಕೋಮು ಮೂಲಭೂತವಾದಿಗಳು ನಮ್ಮನ್ನಾಳುತ್ತಿರುವ ಈ ಹೊತ್ತು ಸಾರಾ ಅಂತಹವರು ನಮ್ಮ ನಡುವೆ ನೂರು ಸಾವಿರ ಮಂದಿ ಇರಬೇಕಾಗಿತ್ತು. ದುರಂತವೆಂದರೆ ಅಂತಹ ಸಂವೇದನಾಶೀಲರನ್ನು ಹುಡುಕಿ ತೆಗೆಯಲಾಗದಷ್ಟು ಆ ಸಂಖ್ಯೆ ಕಡಿಮೆ ಇದೆ.
ಇದ್ದರೂ ಅವರ ಧ್ವನಿ ಕೇಳಿಸುವುದೇ ಇಲ್ಲವೆನ್ನುವಷ್ಟು ಕ್ಷೀಣವಾಗಿದೆ. ಇದು ನಮ್ಮ ವರ್ತಮಾನದ ದುರಂತ! ಅವರು ಉಳಿಸಿ ಹೋದ ನಿರ್ವಾತವನ್ನು ತುಂಬಿಸುವುದು ಹೇಗೆ ಎನ್ನುವ ಪ್ರಶ್ನೆ ನಮ್ಮ ಮುಂದೆ ಹಾಗೆಯೇ ಉಳಿದಿದೆ.
ತಮ್ಮ ಸ್ತ್ರೀ ಪರ ಸಂವೇದನೆಗಳ ಮೂಲಕ ಜನ ಮಾನಸದಲ್ಲಿ ಅಚ್ಚಳಿಯದ ನೆನಪುಗಳನ್ನು ಉಳಿಸಿ ಹೋದ ಲೇಖಕಿ ಸಾರಾ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ನಂತರ ನಾಲ್ಕು ವರ್ಷ ಈ ಸಂಘದ ಅಧ್ಯಕ್ಷರೂ ಆಗಿದ್ದು ಸಂಘಕ್ಕೊಂದು ಸ್ವಂತ ನೆಲೆಯಾಗುವಲ್ಲಿ ಶ್ರಮಿಸಿದ ಹಲವು ಸಮಕಾಲೀನ ಲೇಖಕಿಯರಲ್ಲಿ ಒಬ್ಬರಾದರು.
ಮುಸ್ಲಿಂ ಸಮುದಾಯದ ಒಳಗೆ ಇದ್ದ ತಲಾಖ್ ಮತ್ತು ಬಹುಪತ್ನಿತ್ವ ಸಾರಾ ಅವರನ್ನು ಸದಾ ಕಾಡಿದ ವಿಷಯ ಗಳು. ಚಂದ್ರಗಿರಿಯ ತೀರದಲ್ಲಿ ಕಾದಂಬರಿಯ ಕಥಾ ನಾಯಕಿ ನಾದಿರ, ವಜ್ರಗಳು ಕಾದಂಬರಿಯ ನಾಯಕಿ ನಫಿಸಾ ಓದುಗರನ್ನು ಸದಾ ಕಾಡುವ ಪಾತ್ರಗಳು. ತಮ್ಮ ಬಹುತೇಕ ಕೃತಿಗಳಲ್ಲಿ ಇವರು ಈ ಬಗ್ಗೆ ಚರ್ಚಿಸಿದರು. ಧರ್ಮದ ಹೆಸರಿನಲ್ಲಿ ನಡೆಯುವ ಅನ್ಯಾಯಗಳನ್ನು ದೌರ್ಜನ್ಯವನ್ನು ಖಂಡಿಸಿದರು. ಸಾರಾ ಅವರದ್ದು ಸಮೃದ್ಧವಾದ ಬಾಲ್ಯ. ಅವರೇ ಹೇಳುವಂತೆ ಅವರ ಕಥೆಯಲ್ಲಿ ಬರುವ ಪಾತ್ರಗಳು ಅವರು ಬಾಲ್ಯದಲ್ಲಿ ಒಡನಾಡುತಿದ್ದ ವ್ಯಕ್ತಿ, ಸಂಬಂಧಗಳು ಆಳು ಕಾಳುಗಳು. ಅಲ್ಲಿರುತ್ತಿದ್ದ ಹೆಣ್ಣು ಮಕ್ಕಳ ದಯನೀಯ ಬದುಕಿಗೆ ಅಮ್ಮನ ಜೊತೆ ಇವರೂ ಕಣ್ಣೀರು ಮಿಡಿಯುತ್ತಿದ್ದರು. ಧರ್ಮ ಕಾರಣಗಳ ಸಂಬಂಧ ತಿಳಿಯದೆ ಒದ್ದಾಡುತ್ತಿದ್ದರು. ತಾನು ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿದ ನಂತರ ತಮ್ಮ ಕಥೆ ಕಾದಂಬರಿ ಗಳ ಮೂಲಕ ಅವುಗಳನ್ನು ದಾಖಲಿಸಿದರು.
ಪಾಕಶಾಸ್ತ್ರ ವೂ ಬದುಕಿನ ಒಂದು ಭಾಗ. ಬಿಡುವಿರದ ಬರೆವಣಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ವ್ಯಸ್ತರಾಗಿದ್ದರೂ ಅಡುಗೆ ಮನೆಯ ವ್ಯಾಮೋಹ ಅವರನ್ನು ಬಿಟ್ಟಿರಲಿಲ್ಲ. ಕೇರಳದ ಸ್ವಾದಿಷ್ಟ ತಿನಿಸುಗಳ ಅವರ ಕೈ ಅಡುಗೆಗೆ ಸಿಕ್ಕಿದ ಪ್ರಶಂಸೆ ಅವರಿಂದ ʼಅಡುಗೆ ವೈವಿಧ್ಯಗಳುʼ ಎಂಬ ಅಡುಗೆ ಪುಸ್ತಕವನ್ನು ಬರೆಸಿತು. ಕುಟುಂಬದಲ್ಲಿ ಮೂಲೆ ಗುಂಪಾಗಿರುವ ಮಹಿಳೆಯರನ್ನು ಸಮಾಜದಲ್ಲಿ ಮುನ್ನೆಲೆಗೆ ತರಬೇಕು, ಗೌರವದಿಂದ ಕಾಣಬೇಕೆಂಬ ಕಾಳಜಿ ಇವರದಾಗಿತ್ತು. ಇವುಗಳನ್ನೇ ಪ್ರಮುಖವಾಗಿಸಿಕೊಂಡು ಲೇಖನ ಗುಚ್ಛಗಳನ್ನು ಬರೆದರು. ಅವಕಾಶ ಸಿಕ್ಕಲ್ಲೆಲ್ಲ ಮಾತಾಡಿದರು. ತಮ್ಮ ಚಿಂತನೆಗಳಿಂದ ಸ್ತ್ರೀವಾದಿಯಾಗಿ ಗುರುತಿಸಿಕೊಂಡರು.
ಚಪ್ಪಲಿಗಳು, ಧರ್ಮ ಬಲೆ ಬೀಸಿದಾಗ, ನಿಯಮ ನಿಯಮಗಳ ನಡುವೆ ಇವರು ಬರೆದ ಕನ್ನಡದ ಪ್ರಮುಖ ಕಥೆಗಳು. ಹತ್ತು ಕಾದಂಬರಿ, ಐದು ಕಥಾ ಸಂಕಲನ, ಎಂಟು ಮಲೆಯಾಳ ಲೇಖಕರ ಕೃತಿಗಳ ಅನುವಾದ, ಒಂದು ಪ್ರವಾಸ ಕಥನ, ಐದು ನಾಟಕ, ನಾಲ್ಕು ಪ್ರಬಂಧಗಳ ಸಂಕಲನ ಬರೆದ ಸಾರಾ ಅವರ ಆತ್ಮಕಥನ ‘ಹೊತ್ತು ಕಂತುವ ಮುನ್ನʼ. ಸಾರಾ ಅವರ ಬಹುತೇಕ ಕೃತಿಗಳಿಗೆ ವಿವಿಧ ಪ್ರಶಸ್ತಿ ಪುರಸ್ಕಾರಗಳು ಲಭ್ಯವಾಗಿವೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಬಿರುದು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ, ಕರ್ನಾಟಕ ಸರಕಾರದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಸಾರಾ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ 1995ರಲ್ಲಿ ಅಲಂಕರಿಸಿದ್ದರು.
‘ಚಂದ್ರಗಿರಿ ‘ಸಾರಾ ಅವರ ಅಭಿನಂದನ ಗ್ರಂಥ. ತಾನು ಮುಸ್ಲಿಂ ಲೇಖಕಿ ಎನ್ನುವ ವರ್ಗೀಕರಣವನ್ನು ಒಪ್ಪದ ಅವರು ತಾನು ಕನ್ನಡ ಲೇಖಕಿ ಎನ್ನುವ ಮೂಲಕ ಮಹಿಳಾ ಸಂವೇದನೆಗೆ ಜಾತಿ, ಮತ, ಧರ್ಮ, ವರ್ಗಗಳ ಹಂಗಿಲ್ಲ ಎನ್ನುವುದನ್ನು ಎತ್ತಿ ತೋರಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನವೇ ನಮಗೆ ನೀಡಿರುವುದರಿಂದ ನಾವು ನಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಭಯಪಡಬೇಕಾಗಿಲ್ಲ. ಆದರೆ ಅದು ಸಹಜೀವಿಯ ಹಕ್ಕುಗಳನ್ನು ಕಸಿದು ಕೊಳ್ಳುವಂತಿರಬಾರದು ಎಂದು ನಂಬಿದ್ದರು ಸಾರಾ.
ಕವಯತ್ರಿ ಸವಿತಾ ನಾಗಭೂಷಣ್ ಹೇಳುವಂತೆ ” ಸಾರಾ ಎಂಬುದು ಬರಿ ಒಂದು ಹೆಸರಲ್ಲ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ವಿದ್ಯಮಾನ. ಮಹಿಳಾ ಅಸ್ಮಿತೆಯ ಸಂಕೇತ. ನಿರ್ಭೀತ ವ್ಯಕ್ತಿತ್ವ. ಕಾಳಜಿ, ಕಾರುಣ್ಯದ ಸಂಗಮ “
ಸಾರಾ ಅವರ ಒಡನಾಟದಲ್ಲಿ ಪುಷ್ಟಿ ಗೊಂಡವರು ನಾವು. ಮಹಿಳಾ ಸಬಲೀಕರಣವೆಂದರೆ ನಮ್ಮೊಳಗೆ ನಾವು ಕಂಡುಕೊಳ್ಳುವ ಅನುಭಾವ ಪರಂಪರೆ. ಇಲ್ಲಿ ಇಂದು ಅವರು, ನಾಳೆ ನಾವು. ನಮ್ಮ ಸರದಿ ಬಂದ ತಕ್ಷಣ ಹೊರಟು ಬಿಡಬೇಕು. ‘ಹೆದರದಿರು ಮನವೇ ಬೆದರದಿರು ತನುವೇ ನಿಜವರಿತು ನಿಶ್ಚಿಂತವಾಗಿರು’ ಎಂದ ಅಕ್ಕನನ್ನು ನೆನೆದು ಕನ್ನಡ ಸಾಹಿತ್ಯ ವನ್ನು ತನ್ನ ಸಂವೇದನೆಗಳ ಮೂಲಕ ಸಂಪನ್ನಗೊಳಿಸಿದ ಈ ಹಿರಿಯಕ್ಕನಿಗೆ ಎದೆ ತುಂಬಿ ಹೇಳುವ ಕೊನೆಯ ಪ್ರಣಾಮವಿದು.
ದೇವಿಕಾ ನಾಗೇಶ್
ಕವಯಿತ್ರಿ, ಸಾಮಾಜಿಕ ಹೋರಾಟಗಾರ್ತಿ