Home ಅಂಕಣ ಹಿಂದುತ್ವ ರಾಜಕಾರಣದ ಕಥೆ – 19 : ಸಾವರ್ಕರ್‌ ಪಶ್ಚಾತ್ತಾಪ

ಹಿಂದುತ್ವ ರಾಜಕಾರಣದ ಕಥೆ – 19 : ಸಾವರ್ಕರ್‌ ಪಶ್ಚಾತ್ತಾಪ

0

ಸಾವರ್ಕರ್‌ ತನ್ನ ಆರನೇ ಕ್ಷಮಾಪಣಾ ಪತ್ರವನ್ನು ಬರೆಯುವುದು ಭಾರತದ ಗವರ್ನರ್‌ ಜನರಲ್‌ ಆಗಿದ್ದ ರೂಫಸ್‌ ಡೇನಿಯಲ್‌ ಐಸಕ್ಸಿಗೆ. ೧೯೨೧ ಆಗಸ್ಟ್‌ ೧೯ರಂದು ಆ ಪತ್ರವನ್ನು ಸಮರ್ಪಿಸಿದ್ದರು. ನಿಯಮ ಪ್ರಕಾರ ಬಾಂಬೆ ಗವರ್ನರ್‌ ಮೂಲಕ. ಅದು ಇದಾಗಿತ್ತು.

́ರತ್ನಗಿರಿ ಜಿಲ್ಲಾ ಜೈಲಿನಲ್ಲಿ ಖೈದಿ ನಂಬರ್‌ ೫೫೮ ಆದ ವಿನಾಯಕ್‌ ದಾಮೋದರ್‌ ಸಾವರ್ಕರ್‌ ಎಂಬ ನಾನು ವಿನಯಪೂರ್ವಕ ವಿನಂತಿಸಿಕೊಳ್ಳುವುದೇನೆಂದರೆ:

೧. ೧೯೧೦ರಲ್ಲಿ ದೋಷಾರೋಪ ಹೊರಿಸಲ್ಪಟ್ಟು ೧೯೧೧ರಲ್ಲಿ ಅಂಡಮಾನಿಗೆ ಗಡೀಪಾರು ಮಾಡಲ್ಪಟ್ಟ ಈ ಅರ್ಜಿದಾರ ಈ ವರ್ಷ ಭಾರತದ ಜೈಲಿಗೆ ವರ್ಗವಾಗಿ ಬಂದಿರುತ್ತಾನೆ. ಹೀಗೆ ಒಟ್ಟು ಹನ್ನೊಂದು ವರ್ಷಗಳಿಂದ ಅರ್ಜಿದಾರನು ಜೈಲೊಳಗೆ ಕಳೆಯುತ್ತಿದ್ದಾನೆ. ಭಾರತದ ಜೈಲುಗಳಲ್ಲಿ ಆಗಿದ್ದರೆ ಎರಡು ಮೂರು ವರ್ಷಗಳ ಹಿಂದೆಯೇ ಈ ಅರ್ಜಿದಾರನಿಗೆ ಫಾರ್ಮ್ಯಾನ್‌ ಪದವಿಗೆ ಭಡ್ತಿ ಲಭಿಸಿರುತ್ತಿತ್ತು. ಆದ್ದರಿಂದ ಪ್ರಾಯೋಗಿಕವಾಗಿ ಹದಿನಾಲ್ಕು ವರ್ಷಗಳ ಕಾಲ ಜೈಲಿನಲ್ಲಿ ಕಳೆಯುತ್ತಿದ್ದೆನು. ಸಾಮಾನ್ಯವಾಗಿ ಒಬ್ಬ ಖೈದಿಗೆ ನಿಬಂಧನೆಗಳಿಗೆ ಒಳಪಟ್ಟುಕೊಂಡು ಬಿಡುಗಡೆ ಹೊಂದಬಹುದಾದ ಕಾಲ.

೨. A. ಅದಕ್ಕೂ ಮಿಗಿಲಾಗಿ, ರಾಜಪ್ರಮುಖ ವೈಸ್‌ ರಾಜಕುಮಾರರ ಈ ಬರಲಿರುವ ಸಂದರ್ಶನದ ಘೋಷಣೆಯಲ್ಲಿ ಅರ್ಜಿದಾರನ ಭೂತಕಾಲದ ಅಕ್ರಮ ಚಟುವಟಿಕೆಗಳನ್ನೆಲ್ಲ ಕ್ಷಮಿಸಿ, ಮಾನ್ಯ ವೈಸ್ರಾಯ್‌ ಮತ್ತು ಬಾಂಬೆ ಗವರ್ನರ್‌ ಎದುರು ಇಷ್ಟು ದಿನ ನಿರಾಕರಿಸಲ್ಪಟ್ಟಿದ್ದ ಕ್ಷಮಾಪಣೆಯನ್ನು ಅರ್ಜಿದಾರನಿಗೆ ದಯಪಾಲಿಸುವರೆಂಬ ನಿರೀಕ್ಷೆಯು ಅರ್ಜಿದಾರನೊಳಗೆ ಅಂಕುರಿಸಿದೆ.

B. ಇದಕ್ಕಾಗಿ ಯಾಚಿಸುವಾಗ ಅರ್ಜಿದಾರನು ಯಾವುದೇ ರೀತಿಯಲ್ಲೂ ರಾಜಕೀಯ ಘೋಷಣೆಯ ಹೊಸ ವ್ಯಾಖ್ಯಾನವನ್ನು ಬಯಸುತ್ತಿಲ್ಲ. ಯಾಕೆಂದರೆ, ಅರ್ಜಿದಾರನ ಪ್ರಕರಣಕ್ಕಿಂತಲೂ ಗಂಭೀರವಾದ ಪ್ರಕರಣಗಳ ಅಪರಾಧಿಗಳಿಗೆ ಈಗಾಗಲೇ ಬಿಡುಗಡೆ ನೀಡಲಾಗಿದೆ.

ಉದಾಹರಣೆಗೆ, ಕೊಲೆಗೆ ಆಹ್ವಾನ ನೀಡಿದ್ದೆನೆಂದು ತಪ್ಪೊಪ್ಪಿಗೆ ನೀಡಿದ ಬಾರಿನ್‌ ಘೋಷ್‌, ಯಾವುದಕ್ಕೆ ಬಳಸಲಾಗುತ್ತದೆ ಎಂಬುದು ಸ್ಪಷ್ಟವಾಗಿ ತಿಳಿದುಕೊಂಡೇ ಬಾಂಬ್‌ ತಯಾರಿಸಿದ ಹೇಮಚಂದ್ರದಾಸ್ (ರೌಲತ್ ರಿಪೋರ್ಟ್‌ ಪ್ರಕಾರ); ಸಾಂಕೇತಿಕವಾಗಿ ಪ್ರಭುತ್ವದ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸದೆ, ದರೋಡೆಗಳನ್ನು ನಡೆಸಿದ ಪಂಜಾಬ್‌ ಪ್ರಕರಣದ ಪ್ಯಾರಾಸಿಂಗ್‌ ಮತ್ತಿತರು. ಕ್ಷಮಾಪಣೆಯ ಹಿನ್ನೆಲೆಯಲ್ಲಿ ಇವರಿಗೆಲ್ಲ ಈಗಾಗಲೇ ಬಿಡುಗಡೆ ಲಭಿಸಿದೆ.

C. ತಮ್ಮ ಮುಂದೆ ಈ ಅರ್ಜಿದಾರನು ನೀಡುವ ವಾಗ್ದಾನವೇನೆಂದರೆ, ಕಾನೂನು ವೀರೋಧಿ ಕೃತ್ಯಗಳನ್ನು ಎಸಗುತ್ತಿದ್ದ ಕಾಲದ ವ್ಯಕ್ತಿಯಲ್ಲ ಈಗ ಈ ಅರ್ಜಿದಾರನು. ಆ ಕಾಲದಲ್ಲಿ ಆತ ಒಬ್ಬ ಪುಟ್ಟ ಬಾಲಕನಾಗಿದ್ದ. ಅಂದಿನಿಂದ ಆತ ಪ್ರಾಯದಲ್ಲಿ ಮಾತ್ರ ಬೆಳೆಯಲಿಲ್ಲ, ಅನುಭವದಲ್ಲೂ ಬೆಳೆದ. ಅಷ್ಟೇ ಅಲ್ಲ, ಇನ್ನು ಮುಂದೆ ಯಾವ ಕಾರಣಕ್ಕೂ ರಾಜಕೀಯ ಮೋಹಗಳ ಮರುಳಿಗೆ ಬಿದ್ದು, ಈಗಾಗಲೇ ಲಭಿಸಬೇಕಿದ್ದ ಉಜ್ವಲವಾದ ಪದವಿಯನ್ನು ನಷ್ಟಗೊಳಿಸಿಕೊಳ್ಳುವುದಿಲ್ಲ ಎಂದು ಅರ್ಜಿದಾರನು ಪಶ್ಚಾತ್ತಾಪ ಪಡುತ್ತಿದ್ದಾನೆ. ಗೌರವಾನ್ವಿತ ಮಿಸ್ಟರ್‌ ಮೊಂಟಾಗು ಭಾರತ ಸಂದರ್ಶನ ನಡೆಸಿದ ಅಂದಿನಿಂದ ಅರ್ಜಿದಾರನಿಗೆ ಸುಧಾರಣೆಗಳು ಮತ್ತು ಭರವಸೆಗಳಲ್ಲಿರುವ ನಂಬಿಕೆಯನ್ನು ಸರಕಾರಕ್ಕೆ ಈ ಹಿಂದಿನ ನಿವೇದನೆಗಳ ಮೂಲಕ ಮತ್ತೆ ಮತ್ತೆ ಸ್ಪಷ್ಟವಾಗಿ ತಿಳಿಸುತ್ತಾ ಬಂದಿರುತ್ತಾನೆ. ಪರಸ್ಪರ ಸಂಬಂಧ ಹೊಂದಿರುವ ಏಷ್ಯನ್‌ ಭಯೋತ್ಪಾದಕರು ಭಾರತದ ಮೇಲೆ, ವಿಶೇಷವಾಗಿ ಮುಹಮ್ಮದೀಯೇತರ ಭಾರತದ ಮೇಲೆ, ಪರಂಪರಾಗತವಾಗಿ ಹಿಡಿದ ಶಾಪದಂತಿರುವವರು, ಗಡಿಗಳಲ್ಲಿ ಈಗ ನಿಯೋಜನೆಗೊಳ್ಳುತ್ತಿರುವ ವಾರ್ತೆ, ಬ್ರಿಟಿಷ್‌ ಸಾಮ್ರಾಜ್ಯದೊಂದಿಗೆ ಅತ್ಯಂತ ಹತ್ತಿರದ ಮತ್ತು ವಿನೀತವಾದ ಸಹಕಾರವೊಂದು ಎರಡೂ ಕಡೆಗಳಿಗೆ ಉತ್ತಮವೂ ಅತ್ಯಂತ ಅಪೇಕ್ಷಿತವೂ ಆಗಿರುತ್ತದೆ ಎಂಬ ನಂಬಿಕೆಗೆ ಈ ಅರ್ಜಿದಾರನನ್ನು ದೂಡಿದೆ. ಅದು ದೀರ್ಘಕಾಲೀನ ಮತ್ತು ನೆಲೆ ನಿಲ್ಲುವಂತಹದ್ದಾಗಿರಬೇಕೆಂಬುದೇ ಈಗ ಈ ಅರ್ಜಿದಾರನ ಪ್ರಾರ್ಥನೆ.

D. ಆದರೆ, ಬೇರೆ ಯಾರಾದರು, ಬೇರೆ ಏನಾದರು ಪ್ರೇರಣೆಯನ್ನು ಅರ್ಜಿದಾರನ ಮೇಲೆ ಆರೋಪಿಸುವುದೇ ಆಗಿದ್ದರೆ, ಅಂತಹ ರಹಸ್ಯ ವರದಿಗಳನ್ನು ಅರ್ಜಿದಾರನ ಈ ಮೇಲಿನ ಮನಃಪೂರ್ವಕವೂ ಪರಿಪೂರ್ಣವೂ ಆದ ನಂಬಿಕಾರ್ಹ ತಪ್ಪೊಪ್ಪಿಗೆಯೊಂದಿಗೆ ತುಲನೆ ಮಾಡಿ ನಿರಾಕರಿಸಬೇಕೆಂದು ಭಿನ್ನವಿಸಿಕೊಳ್ಳುತ್ತಿದ್ದೇನೆ. ಅರ್ಜಿದಾರನು ತನ್ನ ಪಾಲನ್ನು ವಹಿಸದ ಯಾವ ನಂಬಿಕೆಯನ್ನೂ ಸ್ವಯಂ ಹೊತ್ತು ನಡೆಯುವುದಿಲ್ಲ ಎಂದು ಅರ್ಜಿದಾರನ ಭೂತಕಾಲ ಸ್ಪಷ್ಟಪಡಿಸುತ್ತಿದೆ. ಸರಕಾರವನ್ನು ಸಂಪ್ರೀತಿಗೊಳಿಸಲು ಅತ್ಯಂತ ಕೀಳುಮಟ್ಟದ ದಾಸ್ಯ ಮನೋಭಾವವನ್ನೂ ಅತಿಯಾದ ಆತಂಕವನ್ನೂ ತೋರ್ಪಡಿಸುವವರು ಅವರ ಭೂತಕಾಲದ ಕೆಟ್ಟ ನಡತೆಯನ್ನು ಮರೆಮಾಚಲು ತಲೆಬುಡವಿಲ್ಲದ ಮಾತುಗಳನ್ನು ಮತ್ತು ಚಟುವಟಿಕೆಗಳನ್ನು ಅರ್ಜಿದಾರನ ಮೇಲೆ ಆರೋಪಿಸಿ ಹರಕೆಯ ಕುರಿಯಾಗಿಸಲು ಯಾವಾಗಲೂ ಪ್ರಯತ್ನಿಸುತ್ತಿರುತ್ತಾರೆ.

E. ಅದೇ ಹೊತ್ತು ಸರಕಾರದ ಕಡೆಯಿಂದ ಏನಾದರೂ ಸಂಶಯಗಳು ಉಳಿದಿದ್ದರೆ, ಅದನ್ನು ಇಲ್ಲವಾಗಿಸಲು, ಅರ್ಜಿದಾರನು ಯಾವ ರೀತಿಯಲ್ಲೂ ರಾಜಕೀಯ ಚಟುವಟಿಕೆಯಲ್ಲಿ ಪಾಲುಗೊಳ್ಳುವುದಿಲ್ಲವೆಂಬ ಪ್ರತಿಜ್ಞೆಯನ್ನು ಉತ್ತಮ ನಂಬಿಕೆಯೊಂದಿಗೆ ಸ್ವೀಕರಿಸುತ್ತಿದ್ದೇನೆ. ಅರ್ಜಿದಾರನ ಕುಸಿಯುತ್ತಿರುವ ಆರೋಗ್ಯ ಮತ್ತು ದೀರ್ಘಕಾಲದ ಸಹನೆಯು, ಯಾವ ಹಂತದಲ್ಲೂ (ರಾಜಕಾರಣದಿಂದ) ವಿರಮಿಸಿ, ಖಾಸಗೀ ಬದುಕನ್ನು ನಡೆಸಲು ಬೇಕಾದ ಕಠಿಣ ನಿಲುವಿಗೆ ಅರ್ಜಿದಾರನನ್ನು ತಲುಪಿಸಿದೆ. ಆದ್ದರಿಂದ ಇದನ್ನು ಅಥವಾ ಸರಕಾರ ಸೂಚಿಸುವ ಬೇರೆ ಯಾವುದೇ ನಿಶ್ಚಿತವೂ ಸಕಾರಣವೂ ಆದ ನಿಬಂಧನೆಗಳಿಗಳನ್ನು ಸ್ವೀಕರಿಸಿ ಮನಃಪೂರ್ವಕವಾಗಿ ಕಾರ್ಯಗತಗೊಳಿಸಲು ಅರ್ಜಿದಾರನು ಸಮ್ಮತಿ ಸೂಚಿಸುತ್ತಿದ್ದಾನೆ.

F. ಅರ್ಜಿದಾರನಿಗಿಂತ ಮೊದಲು ಮತ್ತು ನಂತರ ದೇಶದ್ರೋಹ ಎಸಗಿದ ಸಾವಿರಾರು ಖೈದಿಗಳಲ್ಲಿ ಯಾರು ಕೂಡ ಅರ್ಜಿದಾರ ಮತ್ತು ಸಹೋದರ ಕಳೆದಷ್ಟು ಕಾಲವನ್ನು ಜೈಲಿನಲ್ಲಿ ಕಳೆದಿಲ್ಲ (ಅವರ ಜೊತೆ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟವರೆಲ್ಲ ಬಿಡುಗಡೆಗೊಂಡರು). ಆದ್ದರಿಂದಲೇ ಗೌರವಾನ್ವಿತ ರಾಜಕುಮಾರರ ಸಂದರ್ಶನ ಅವರ ದುರಿತಗಳಿಗೆ ಅಂತ್ಯ ಹಾಡುತ್ತದೆಂದು ಅರ್ಜಿದಾರ ಮತ್ತು ಆತನ ಸಹೋದರ ಜಿ.ಡಿ. ಸಾವರ್ಕರ್‌ (ಆತನ ವಿಷಯದಲ್ಲಿ ಇನ್ನಷ್ಟು ನ್ಯಾಯಯುತ ಸಂಗತಿಗಳಿವೆ) ಬಿಡುಗಡೆಗೊಳ್ಳುತ್ತಾರೆಂದು ಆತ್ಮವಿಶ್ವಾಸ ಮೂಡುತ್ತಿದೆ.

೩. ಆದರೆ, ಅರ್ಜಿದಾರನ ದೌರ್ಭಾಗ್ಯಕ್ಕೆ ಕ್ಷಮಾಪಣೆಯ ದನಿಯನ್ನು ಪುನಃ ತುಳಿಯುವುದೇ ಆದರೆ, ಒಂದು ಬದಲಿ ಸೌಕರ್ಯ ಎಂಬ ನೆಲೆಯಲ್ಲಿ ಅಂಡಮಾನಿಂದ ಹಠಾತ್ತನೆ ನಡೆದ ಈ ವರ್ಗಾವಣೆಯು ಸೃಷ್ಠಿಸಿದ ತೊಂದರೆಗಳಿಗೆ ಪರಿಹಾರ ಒದಗಿಸಬೇಕಾಗಿದೆ. ಭಾರತದ ಜೈಲುಗಳಲ್ಲಿ ಆಗಿರುತ್ತಿದ್ದರೆ ಈ ಹನ್ನೊಂದು ವರ್ಷಗಳ ಅವಧಿಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಕಡಿತ ಅರ್ಜಿದಾರನಿಗೆ ದೊರೆಯುತ್ತಿತ್ತು. ಅಂಡಮಾನಿನಲ್ಲಿ ಆಗಿರುತ್ತಿದ್ದರೆ, ಅಲ್ಲಿನ ನಿಯಮಗಳ ಪ್ರಕಾರ ಈ ಹೊತ್ತಿಗೆ ರಜಾ ಅಥವಾ ಕುಟುಂಬವನ್ನು ಕರೆಸಿಕೊಳ್ಳುವ ಅನುಮತಿ ದೊರೆಯುತ್ತಿತ್ತು. ಈಗ ಎರಡು ವ್ಯವಸ್ಥೆಗಳ ಅನುಕೂಲತೆಗಳೂ ಅರ್ಜಿದಾರನಿಗೆ ಅನ್ಯವಾಗಿಬಿಟ್ಟಿವೆ. ಆದ್ದರಿಂದ ಅರ್ಜಿದಾರ ನಿವೇದಿಸಿಕೊಳ್ಳುವುದೇನೆಂದರೆ:

A. ಎರಡರಿಂದ ಮೂರು ವರ್ಷಗಳ ಶಿಕ್ಷಾ ಕಡಿತವನ್ನು ಅರ್ಜಿದಾರನಿಗೆ ನೀಡಬೇಕು.

B. ಅರ್ಜಿದಾರನಿಗೆ ರಜಾ ನೀಡಿ ತನ್ನ ಕುಟುಂಬವನ್ನು ಜೊತೆ ಸೇರಿಸಿ ಅಂಡಮಾನಿಗೆ ಮರಳಿ ಕಳಿಸಬೇಕು. ಅತ್ಯಂತ ಭೀಕರ ಖೈದಿಗಳಿಗೂ ಕೂಡ ಒಂಭತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ವರ್ಷ ಉತ್ತಮ ನಡವಳಿಕೆ ಹೊಂದಿದ್ದರೆ ರಜಾ ಪದ್ದತಿಯಂತೆ ಅಲ್ಲಿ ಖಾಸಗಿ ಬದುಕನ್ನು ನಡೆಸಬಹುದು. ಹನ್ನೊಂದು ವರ್ಷಗಳ ಕಾಲ ಜೈಲಲ್ಲಿ ಕಳೆದ, ಅದರಲ್ಲಿ ಏಳು ವರ್ಷಗಳ ಕಾಲ ಉತ್ತಮ ನಡವಳಿಕೆ ಹೊಂದಿದ್ದ ಅರ್ಜಿದಾರನು ಕನಿಷ್ಠ ಅದನ್ನಾದರೂ ಆಗ್ರಹಿಸುತ್ತಿದ್ದಾನೆ. ಇದಕ್ಕಾದರೂ ಅನುಮತಿ ದೊರೆಯುವುದೇ ಆಗಿದ್ದರೆ, ದೌರ್ಭಾಗ್ಯವೊಂದೇ ಬಂಡವಾಳವಾಗಿ ಹೊಂದಿರುವ, ಕುಸಿಯುತ್ತಿರುವ ಒಬ್ಬ ಮನುಷ್ಯನಾದ ಅರ್ಜಿದಾರನು ಅದರ ಸುರಕ್ಷತೆಗೆ ಮಾತ್ರ ಹೆದರಿಕೊಂಡು, ಲೋಕದಿಂದಲೇ ಮರೆಯಲ್ಪಟ್ಟು, ಲೋಕವನ್ನು ಮರೆತು, ನಿವೃತ್ತಿ ಹೊಂದಿದ ಖಾಸಗಿ ಬದುಕನ್ನು ನಡೆಸಿಕೊಂಡು, ಮಧುರವಾದ ಕೌಟುಂಬಿಕ ಬದುಕಿನ ಅನುಗ್ರಹಗಳ ನಡುವೆ ಸಂತೋಷದಿಂದ ಬಾಳುತ್ತಾನೆ.

೪. ಸಂಕ್ಷಿಪ್ತವಾಗಿ ಅರ್ಜಿದಾರನು ವಿನಯಪೂರ್ವಕ ಖಚಿತವಾಗಿ ಹೇಳಿಕೊಳ್ಳಲು ಯಾಚಿಸುತ್ತಿರುವುದೇನೆಂದರೆ, ಭಾರತದಲ್ಲಿ ಈಗ ನಡೆಯುತ್ತಿರುವ ಕ್ಷೋಭೆಗಳು ಅರ್ಜಿದಾರನಿಗೆ ಒಲವಿರುವ ಸಂಗತಿಯೆಂಬ ಪೂರ್ವಾಗ್ರಹವನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳಬಾರದು. ಇದನ್ನು ಇಲ್ಲಿ ಹೇಳಿಕೊಳ್ಳುವುದು ಮಾತ್ರವಲ್ಲ, ಪತ್ರಿಕೆಗಳ ಮೂಲಕ ಘೋಷಿಸಿಕೊಳ್ಳಲೂ ಅರ್ಜಿದಾರನು ತಯಾರಿರುತ್ತಾನೆ. ದಶಲಕ್ಷದಷ್ಟು ಜನರ ಮೇಲೆ ಯಾವ ನಿಯಂತ್ರಣವನ್ನೂ ಹೊಂದಿರದ ಅರ್ಜಿದಾರ ಮತ್ತು ಸಹೋದರನನ್ನು ಆಡಳಿತಾತ್ಮಕ ಕಾರಣಗಳಿಗಾಗಿ ಈಗಲೂ ಶಿಕ್ಷಿಸುತ್ತಿರುವುದು ಬೇರೆ ಯಾರೋ ಮಾಡಿದ ತಪ್ಪಿಗೆ ಇವರನ್ನು ಶಿಕ್ಷಿಸುವುದಕ್ಕೆ ಸಮನಾಗಿರುತ್ತದೆ. ಅರ್ಜಿದಾರನ ವ್ಯಾಪ್ತಿ ಮೀರಿ ನಿಲ್ಲುವ, ಪರಿಶೋಧನೆಗೂ ದಾರಿಯಿಲ್ಲದ ಸಂಗತಿಗಳು ಮಾತ್ರ ಅವು.

೫. ಅರ್ಜಿದಾರ ಮತ್ತು ಸಹೋದರನ ತಕ್ಷಣದ ಬಿಡುಗಡೆಗೆ ಗೌರವಾನ್ವಿತ ಗವರ್ನರ್‌ ಜನರಲ್‌ ಮತ್ತು ಬಾಂಬೆ ಗವರ್ನರ್‌ ಅವರುಗಳನ್ನು ಪ್ರೇರೇಪಿಸುವುದರಲ್ಲಿ ಈ ನಿವೇದನೆ ಸೋಲುವುದಿಲ್ಲ ಎಂಬುದರಲ್ಲಿ ಅರ್ಜಿದಾರನಿಗೆ ಸಂಪೂರ್ಣ ನಂಬಿಕೆಯಿದೆ. ಆ ಕಾರುಣ್ಯಕ್ಕಾಗಿ ಅವರ ದೀರ್ಘಾಯುಸ್ಸು ಮತ್ತು ಉನ್ನತಿಗಾಗಿ ಪ್ರಾರ್ಥಿಸುತ್ತೇನೆ.ʼ

೧೯೨೨ ಜಲೈ ೪ರಂದು ಸಬರಮತಿ ಜೈಲಿನಿಂದ ಗಣೇಶ್‌ ದಾಮೋದರ್‌ ಸಾವರ್ಕರ್‌ ಕೂಡ ಸುಮಾರಾಗಿ ಇದೇ ರೀತಿಯ ನಿವೇದನೆಯನ್ನು ಬಾಂಬೆ ಗವರ್ನರಿಗೆ ಸಮರ್ಪಿಸಿದ್ದ.

೧೯೨೧ ನವೆಂಬರ್‌ ೨೩ರಂದು ಬಾಂಬೆ ಸರಕಾರ ವಿನಾಯಕರ ಪತ್ರವನ್ನು ಪರಿಗಣಿಸುವುದಾಗಿ ಉತ್ತರ ನೀಡಿತು. ೧೯೨೨ ಸೆಪ್ಟಂಬರಿನಲ್ಲಿ ಬಾಬಾರವ್‌ಗೆ ಬಿಡುಗಡೆ ಭಾಗ್ಯ ದೊರೆಯಿತು.

ಅಂಡಮಾನ್‌ ಜೈಲುವಾಸದ ನಡುವೆ ಸಾವರ್ಕರ್‌ ಮತ್ತು ಆ ಮೂಲಕ ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮಿಗೆ ಉಂಟಾದ ಬದಲಾವಣೆಗಳನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು. ೧೮೧೮ರಲ್ಲಿ ಪೇಶ್ವಾಸಾಮ್ರಾಜ್ಯ ಪತನಗೊಂಡ ನಂತರ ಸಾಮಾಜಿಕ ರಾಜಕೀಯ ಮೇಲುಗೈಯನ್ನು ಮರಳಿ ಪಡೆಯಲು ಆಗ್ರಹಿಸುತ್ತಿದ್ದ ಚಿತ್ಪಾವನ ಭಾವನಾತ್ಮಕತೆಯ ಬ್ರಿಟಿಷ್‌ ವಿರೋಧಿತನವೇ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ಕೇಂದ್ರಬಿಂದುವಾಗಿತ್ತು. ಅದನ್ನು ಬದಿಗಿಡಲಾಯಿತು. ಸಾಮಾನ್ಯವಾಗಿ ಮುಸ್ಲಿಂ ವಿರೋಧಿತನವೇ ಮುಖ್ಯವಾಗಿದ್ದರೂ ಬ್ರಿಟಿಷ್‌ ವಿರೋಧದ ಉಚ್ಛ್ರಾಯ ಹಂತದಲ್ಲಿ ಪ್ರಧಾನ ಶತ್ರುವನ್ನು ಮುಂದಿಟ್ಟುಕೊಂಡು ರಾಜಿ ಮಾಡಿಕೊಳ್ಳಬಹುದು ಎಂಬ ನೆಲೆಯಲ್ಲಿ ಉಂಟಾಗಿದ್ದ ಮುಸ್ಲಿಮರ ಬಗೆಗಿನ ಮೃದು ಧೋರಣೆಯನ್ನೂ ಬದಿಗಿಡಲಾಯಿತು. ಬದಲಿಗೆ, ಬ್ರಿಟಿಷರಿಗೆ ಅತ್ಯಂತ ಅನುಕೂಲಕರವಾದ ರಾಜಕೀಯ ವಾತಾವರಣವನ್ನು ಸೃಷ್ಟಿಸಲು, ಒಡೆದು ಆಳುವ ಅವರ ಅಜೆಂಡಾವನ್ನು ಕಾರ್ಯಗತಗೊಳಿಸಲು ಕಠೋರ ಮುಸ್ಲಿಂ ವಿರೋಧಿತನವನ್ನು ಘೋಷಿಸಲಾಯಿತು. ಹೀಗೆ, ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡದ ನಂತರ ಉಂಟಾಗಿದ್ದ ಅಸಹಕಾರ ಚಳುವಳಿಯ ಬ್ರಿಟಿಷ್‌ ವಿರೋಧಿ ಹಿಂದೂ-ಮುಸ್ಲಿಂ ಹೋರಾಟ ಮೈತ್ರಿಯಲ್ಲಿ ಬಿರುಕು ಮೂಡಿಸುವುದು, ಗಾಂಧಿಯ ಆಗಮನದಿಂದ ರಾಷ್ಟ್ರೀಯ ಆಂದೋಲನದಿಂದ ಹೊರಗುಳಿಯಬೇಕಾಗಿ ಬಂದ ತಿಲಕೈಟ್‌ಗಳು ಮತ್ತು ಇತರ ನವ-ಸಂಪ್ರದಾಯವಾದಿ ಬ್ರಾಹ್ಮಣರಿಗೆ ಹೊಸ ಚೈತನ್ಯ ತುಂಬುವುದು, ಅಹಿಂಸೆಯಂತಹ ಪರಸ್ಪರ ಗೌರವಾದರಗಳಿಂದ ಕೂಡಿದ ಆಧುನಿಕ ರಾಜಕೀಯ ಚಿಂತನೆಗಳನ್ನು ಉರುಳಿಸಿ ಬ್ರಾಹ್ಮಣಿಸಮ್ಮಿಗೆ ಅನುಕೂಲಕರವಾದ ಒಂದು ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುವುದು ಮೊದಲಾದವು ಮುಖ್ಯ ಅಜೆಂಡಾಗಳಾದವು.

ಹೀಗೆ ೧೯೨೩ರಲ್ಲಿ ಆ ಪುಸ್ತಕ ಹುಟ್ಟಿಕೊಂಡಿತು; ಹಿಂದುತ್ವ ಎಂಬ ಹೆಸರಿನೊಂದಿಗೆ.

You cannot copy content of this page

Exit mobile version