ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 83.57ಕ್ಕೆ ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಎರಡು ದಿನಗಳ ಫೆಡ್ ಸಭೆಯು ಮಂಗಳವಾರ ಪ್ರಾರಂಭವಾಗಿದ್ದು ಅದರ ಫಲಿತಾಂಶ ಇಂದು ಸಂಜೆ 7ಕ್ಕೆ ಪ್ರಕಟಗೊಳ್ಳಲಿದ್ದು, ರೂಪಾಯಿ ಮೌಲ್ಯ ಚೇತರಿಸಿಕೊಳ್ಳಬಹುದು
ಸೋಮವಾರದ 83.51ಕ್ಕೆ ರೂಪಾಯಿ ಮೌಲ್ಯ ಕುಸಿದಿತ್ತು. ಬುಧವಾರ ಮತ್ತೆ ಕುಸಿತ ಕಂಡಿದ್ದು, ರೂಪಾಯಿಯು 83.57ರ ಹೊಸ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಭಾರತೀಯ ರೂಪಾಯಿ ಈ ಹಿಂದೆ ಏಪ್ರಿಲ್ 18ರಂದು 83.54ರ ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿತ್ತು.ಈ ಕುರಿತು ಮಾತನಾಡಿದ ಸೆಕ್ಯುರಿಟೀಸ್ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ, ನಾಳೆ ಬಿಡುಗಡೆಯಾಗಲಿರವ US CPI ಡೇಟಾಕ್ಕೆ ಕಾಯಲಾಗುತ್ತಿದೆ. ಈ ಡೇಟಾಗಳು ಮಾರುಕಟ್ಟೆ ಚಲನೆಗಳಿಗೆ ನಿರ್ಣಾಯಕವಾಗಿದೆ. ಮುಂಬರುವ US ಫೆಡ್ ನೀತಿ ಮತ್ತು ಹೇಳಿಕೆಯು ಮಹತ್ವದ್ದಾಗಿದೆ. ಏಕೆಂದರೆ ಅವುಗಳು ಭವಿಷ್ಯದ ಆರ್ಥಿಕ ಪರಿಸ್ಥಿತಿಗಳ ಕುರಿತು ಮಾರ್ಗದರ್ಶನವನ್ನು ನೀಡುತ್ತವೆ. ಇವುಗಳು ಡಾಲರ್ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ ಮತ್ತು ಅದರ ಪರಿಣಾಮವಾಗಿ ರೂಪಾಯಿಯ ಕಾರ್ಯಕ್ಷಮತೆಯ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಿದ್ದಾರೆ.
ಬಲವಾದ US ಡಾಲರ್ ಮತ್ತು ಹೆಚ್ಚಿದ ಕಚ್ಚಾ ತೈಲ ಬೆಲೆಗಳಿಂದಾಗಿ ರೂಪಾಯಿಯು ಸ್ವಲ್ಪ ಋಣಾತ್ಮಕ ವ್ಯಾಪಾರ ಮಾಡುವ ನಿರೀಕ್ಷೆಯಿದೆ. ಆದರೆ, ಸಕಾರಾತ್ಮಕ ಜಾಗತಿಕ ಮಾರುಕಟ್ಟೆಗಳು ಮತ್ತು ಹೊಸ ವಿದೇಶಿ ಒಳಹರಿವು ಸಣ್ಣ ಮಟ್ಟದಲ್ಲಿ ರೂಪಾಯಿಯ ಚೇತರಿಕೆಗೆ ಬೆಂಬಲವನ್ನು ನೀಡಬಹುದು ಎಂದು ಸಂಶೋಧನಾ ವಿಶ್ಲೇಷಕ ಅನುಜ್ ಚೌಧರಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.