Home ಬೆಂಗಳೂರು ಕಿದ್ವಾಯಿ ಆಸ್ಪತ್ರೆ ರಾಷ್ಟ್ರಮಟ್ಟದಲ್ಲಿ 5ನೇ ಸ್ಥಾನ: ಕರ್ನಾಟಕಕ್ಕೆ ಮತ್ತೊಂದು ಗೌರವ

ಕಿದ್ವಾಯಿ ಆಸ್ಪತ್ರೆ ರಾಷ್ಟ್ರಮಟ್ಟದಲ್ಲಿ 5ನೇ ಸ್ಥಾನ: ಕರ್ನಾಟಕಕ್ಕೆ ಮತ್ತೊಂದು ಗೌರವ

0

ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಯಲ್ಲಿ ದೇಶಾದ್ಯಂತ ತನ್ನದೇ ಆದ ವಿಶ್ವಾಸಾರ್ಹತೆ ಗಳಿಸಿರುವ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ (Kidwai Memorial Institute of Oncology) ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಪ್ರತಿಷ್ಠಿತ ದಿ ವೀಕ್ (The Week) ನಿಯತಕಾಲಿಕ ನಡೆಸಿದ 2025ರ ಸಮೀಕ್ಷೆಯಲ್ಲಿ ಕಿದ್ವಾಯಿ ಆಸ್ಪತ್ರೆ, ಭಾರತದ ಶ್ರೇಷ್ಠ ಆಂಕೊಲಜಿ ಆಸ್ಪತ್ರೆಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ.

ಈ ಸಾಧನೆಯೊಂದಿಗೆ ಕಿದ್ವಾಯಿ ಸಂಸ್ಥೆ ಕರ್ನಾಟಕಕ್ಕೆ ರಾಷ್ಟ್ರಮಟ್ಟದಲ್ಲಿ ಮತ್ತೊಂದು ಹೆಮ್ಮೆ ತಂದಿದೆ.

ಮೂರು ವಿಭಾಗಗಳಲ್ಲಿ ಗಮನಾರ್ಹ ಸಾಧನೆ
ದಿ ವೀಕ್ ಹಾಗೂ ಹಂಸ ರಿಸರ್ಚ್ (Hansa Research) ಜಂಟಿಯಾಗಿ ನಡೆಸಿದ ಮೌಲ್ಯಮಾಪನದಲ್ಲಿ ಕಿದ್ವಾಯಿ ಸಂಸ್ಥೆ ಮೂರು ಪ್ರಮುಖ ವಿಭಾಗಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ.
* ಭಾರತದ ಅತ್ಯುತ್ತಮ ಆಂಕೊಲಜಿ ಆಸ್ಪತ್ರೆಗಳ ಪೈಕಿ – 5ನೇ ಸ್ಥಾನ
* ಸರ್ಕಾರಿ ಆಸ್ಪತ್ರೆಗಳ ವಿಭಾಗದಲ್ಲಿ – 3ನೇ ಸ್ಥಾನ
* ಕರ್ನಾಟಕ ರಾಜ್ಯ ಮಟ್ಟದಲ್ಲಿ – 1ನೇ ಸ್ಥಾನ
ಈ ಸಮೀಕ್ಷೆಯಲ್ಲಿ ದೇಶದಾದ್ಯಂತ 788 ವೈದ್ಯರು ಮತ್ತು 1,609 ಆರೋಗ್ಯ ತಜ್ಞರು ಪಾಲ್ಗೊಂಡು ಆಸ್ಪತ್ರೆಗಳ ಸೇವಾ ಗುಣಮಟ್ಟ, ವೈದ್ಯಕೀಯ ಮೂಲಸೌಕರ್ಯ ಮತ್ತು ಚಿಕಿತ್ಸಾ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಿದ್ದಾರೆ.

ಸರ್ಕಾರದ ಬೆಂಬಲ ಮತ್ತು ನಾಯಕತ್ವ
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರ ಮಾರ್ಗದರ್ಶನ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ (DME)ಯ ಸಹಕಾರದಿಂದ ಸಂಸ್ಥೆಯು ಈ ಮಟ್ಟದ ಸಾಧನೆ ಸಾಧಿಸಲು ಸಾಧ್ಯವಾಗಿದೆ ಎಂದು ಕಿದ್ವಾಯಿ ಪ್ರಕಟಣೆ ತಿಳಿಸಿದೆ. ಸಂಶೋಧನೆ, ಶಿಕ್ಷಣ ಮತ್ತು ನಿರಂತರ ಸೇವೆಯಲ್ಲಿ ಸಂಸ್ಥೆಯ ಬದ್ಧತೆಯೇ ಈ ಗೌರವಕ್ಕೆ ಕಾರಣವಾಗಿದೆ.

ಸಮಗ್ರ ಕ್ಯಾನ್ಸರ್ ಚಿಕಿತ್ಸೆಯ ಕೇಂದ್ರ
1973ರಲ್ಲಿ ಸ್ಥಾಪನೆಯಾದ ಕಿದ್ವಾಯಿ ಸಂಸ್ಥೆ, ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದ್ದು, ಭಾರತ ಸರ್ಕಾರದಿಂದ ‘ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ’ದ ಮಾನ್ಯತೆ ಪಡೆದಿದೆ. ವೈದ್ಯಕೀಯ, ಶಸ್ತ್ರಚಿಕಿತ್ಸಾ ಮತ್ತು ವಿಕಿರಣ ಆಂಕೊಲಜಿ ಸೇರಿದಂತೆ ಸಮಗ್ರ ಕ್ಯಾನ್ಸರ್ ಸೇವೆಗಳು ಒಂದೇ ಸೂರಿನಡಿ ಲಭ್ಯವಿದ್ದು, ಕರ್ನಾಟಕದ ಜೊತೆಗೆ ನೆರೆಯ ರಾಜ್ಯಗಳ ಸಾವಿರಾರು ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಒದಗಿಸುತ್ತಿದೆ.

You cannot copy content of this page

Exit mobile version