ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಬಾರದಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ‘ದೇಶವಿರೋಧಿ’ ಎನಿಸಿಕೊಳ್ಳುವುದಿಲ್ಲ ಎಂದು ಮುಂಬೈ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸದಸ್ಯರೊಬ್ಬರ ವಿರುದ್ಧ ಹೊರಡಿಸಲಾಗಿದ್ದ ಗಡಿಪಾರು (Externment) ಆದೇಶವನ್ನು ರದ್ದುಗೊಳಿಸುವಾಗ ನ್ಯಾಯಾಲಯವು ಈ ಟಿಪ್ಪಣಿ ಮಾಡಿದ್ದು, ಭಿನ್ನ ಅಭಿಪ್ರಾಯಗಳನ್ನು ಹೊಂದುವ ಹಕ್ಕು ಪ್ರಜೆಗಳಿಗಿದೆ ಎಂದು ಹೇಳಿದೆ.
ಎಸ್‌ಡಿಪಿಐ ಪದಾಧಿಕಾರಿ ಫಿರೋಜ್ ಅಬ್ದುಲ್ ವಹಾಬ್ ಖಾನ್ ಅವರನ್ನು ಒಂದು ವರ್ಷದ ಅವಧಿಗೆ ಮುಂಬೈ ಪ್ರವೇಶಿಸದಂತೆ ನಿರ್ಬಂಧಿಸಿ ಹೊರಡಿಸಲಾಗಿದ್ದ ಗಡಿಪಾರು ಆದೇಶವನ್ನು ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ರದ್ದುಗೊಳಿಸಿದ್ದಾರೆ. ಇನ್ನೊಬ್ಬ ಎಸ್‌ಡಿಪಿಐ ಸದಸ್ಯ ಮೊಹಮ್ಮದ್ ರಫೀಕ್ ಗುಲಾಮ್ ರಸೂಲ್ ಅನ್ಸಾರಿ ಸಲ್ಲಿಸಿರುವ ಇದೇ ರೀತಿಯ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಇನ್ನೂ ನಡೆಸುತ್ತಿದೆ.
ಪಕ್ಷಪಾತದ ಕ್ರಮವನ್ನು ಪ್ರಶ್ನಿಸಿದ ನ್ಯಾಯಾಲಯ
ಮುಂಬೈ ಪೊಲೀಸರು ಡಿಸೆಂಬರ್ 2025 ರಲ್ಲಿ ಹೊರಡಿಸಿದ್ದ ಈ ಗಡಿಪಾರು ಆದೇಶಗಳು, 2024 ಮತ್ತು 2025 ರಲ್ಲಿ ದಾಖಲಾದ ಮೂರು ಎಫ್‌ಐಆರ್‌ಗಳನ್ನು ಆಧರಿಸಿದ್ದವು. ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧದ ಪ್ರತಿಭಟನೆಗಳು, ಚೆಂಬೂರ್-ಗೋವಂಡಿ ಪ್ರದೇಶದ ಸಿಮೆಂಟ್ ಗೋದಾಮುಗಳಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ ಮತ್ತು ಬಾಬರಿ ಮಸೀದಿ ಕೆಡವಿದ್ದಕ್ಕೆ ಸಂಬಂಧಿಸಿದ ಧರಣಿಗಳಿಗೆ ಈ ಪ್ರಕರಣಗಳು ಸಂಬಂಧಿಸಿದ್ದವು.
ವಿಚಾರಣೆಯ ಸಂದರ್ಭದಲ್ಲಿ, ಅದೇ ಪ್ರತಿಭಟನೆಯಲ್ಲಿ ಇತರ ರಾಜಕೀಯ ಪಕ್ಷಗಳ ಸದಸ್ಯರೂ ಭಾಗವಹಿಸಿದ್ದರೂ ಅರ್ಜಿದಾರರನ್ನು ಮಾತ್ರ ಏಕೆ ಗುರಿಯಾಗಿಸಲಾಗಿದೆ ಎಂದು ನ್ಯಾಯಮೂರ್ತಿ ಜಾಮ್ದಾರ್ ಪ್ರಶ್ನಿಸಿದರು.
“ಎಫ್‌ಐಆರ್ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ಧವೂ ಇದೆ, ಆದರೆ ಈ ಅರ್ಜಿದಾರರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಇಂತಹ ಪಕ್ಷಪಾತದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಅಥವಾ ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಬಣದ ರಾಜಕೀಯ ಕಾರ್ಯಕರ್ತರ ವಿರುದ್ಧ ನೀವು ಕ್ರಮ ಕೈಗೊಂಡಿದ್ದೀರಾ? ಅವರು ನಿರ್ದಿಷ್ಟ ಧರ್ಮಕ್ಕೆ ಸೇರಿದವರು ಎಂಬ ಒಂದೇ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆಯೇ?” ಎಂದು ನ್ಯಾಯಾಧೀಶರು ಮೌಖಿಕವಾಗಿ ಅಭಿಪ್ರಾಯಪಟ್ಟರು.
‘ಈ ಅಭಿಪ್ರಾಯ ಹೊಂದುವುದು ದೇಶವಿರೋಧಿಯಲ್ಲ’
ಬಾಬರಿ ಮಸೀದಿ ವಿಚಾರಕ್ಕೆ ಸಂಬಂಧಿಸಿದ ಎಫ್‌ಐಆರ್ ಅನ್ನು ಉಲ್ಲೇಖಿಸಿದ ನ್ಯಾಯಾಲಯ, ಮಸೀದಿಯನ್ನು ಕೆಡವಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುವುದು ದೇಶವಿರೋಧಿ ಚಟುವಟಿಕೆಯಾಗುವುದಿಲ್ಲ ಎಂದಿದೆ.
“ಅವರ ಪ್ರಕಾರ, ಬಾಬರಿ ಮಸೀದಿಯನ್ನು ಕೆಡವಬಾರದಿತ್ತು, ಅದು ಅವರ ದೃಷ್ಟಿಕೋನ. ಅದು ಹೇಗೆ ದೇಶವಿರೋಧಿಯಾಗುತ್ತದೆ? ಅದು ದೇಶವಿರೋಧಿಯಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಹಕ್ಕಿದೆ,” ಎಂದು ನ್ಯಾಯಮೂರ್ತಿ ಜಾಮ್ದಾರ್ ಉಲ್ಲೇಖಿಸಿದ್ದಾರೆ.
ಪ್ರತಿಭಟನೆಯ ಸಂದರ್ಭದಲ್ಲಿ ಕೂಗಲಾದ ಘೋಷಣೆಗಳು ಕೋಮು ಉದ್ವಿಗ್ನತೆಯನ್ನು ಉಂಟುಮಾಡಬಹುದು ಎಂಬ ತಮ್ಮ ವಾದವನ್ನು ಬೆಂಬಲಿಸಲು ರಾಜ್ಯ ಸರ್ಕಾರ ಯಾವುದೇ ಪುರಾವೆಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದೂ ನ್ಯಾಯಾಲಯ ಗಮನಿಸಿದೆ.
ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ
ಅರ್ಜಿದಾರರು ಪ್ರತಿಭಟನೆಗಳಲ್ಲಿ ಭಾಗವಹಿಸುವುದರಿಂದ ಸಾಮಾಜಿಕ ಸೌಹಾರ್ದತೆಗೆ ಧಕ್ಕೆಯುಂಟಾಗಬಹುದು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಮಹಾರಾಷ್ಟ್ರ ಸರ್ಕಾರ ವಾದಿಸಿತ್ತು.
ಆದಾಗ್ಯೂ, ಈ ವಾದವನ್ನು ತಳ್ಳಾಕಿದ ಹೈಕೋರ್ಟ್, ಕೇವಲ ಕಾಲ್ಪನಿಕ ಭಯದ ಆಧಾರದ ಮೇಲೆ ಮೂಲಭೂತ ಹಕ್ಕುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
“ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಯಾವುದೇ ಪರ್ಯಾಯ ವ್ಯಾಖ್ಯಾನಗಳಿಗೆ ಅವಕಾಶವಿಲ್ಲ. ಮೂಲಭೂತ ಹಕ್ಕುಗಳು ಇರುವುದೇ ಅದಕ್ಕೆ. ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಈ ರೀತಿ ಹಸ್ತಕ್ಷೇಪ ಮಾಡುವುದು ಹೇಗೆ?” ಎಂದು ನ್ಯಾಯಾಲಯ ಹೇಳಿದೆ.
ಗಡಿಪಾರು ಎಂಬುದು ವ್ಯಕ್ತಿಯ ಮುಕ್ತವಾಗಿ ಸಂಚರಿಸುವ ಮೂಲಭೂತ ಹಕ್ಕನ್ನು ನಿರ್ಬಂಧಿಸುವ ವಿಶೇಷ ಕ್ರಮವಾಗಿದೆ, ಆದ್ದರಿಂದ ಇದು ಕಾನೂನು ನಿಯಮಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರಬೇಕು ಎಂದು ನ್ಯಾಯಮೂರ್ತಿ ಜಾಮ್ದಾರ್ ಪುನರುಚ್ಚರಿಸಿದರು.
ಹೊಸ ಆರೋಪಗಳನ್ನು ತಿರಸ್ಕರಿಸಿದ ನ್ಯಾಯಾಲಯ
ವಿಚಾರಣೆಯ ವೇಳೆ, ಅರ್ಜಿದಾರರಿಗೆ ನಿಷೇಧಿತ ಪೋಪುಲರ್ ಫ್ರಂಟ್ ಆಫ್ ಇಂಡಿಯಾ (PFI) ಜೊತೆ ಸಂಪರ್ಕವಿದೆ ಎಂಬ ಆರೋಪವನ್ನು ಪ್ರಾಸಿಕ್ಯೂಷನ್ ಪ್ರಸ್ತಾಪಿಸಿತು. ಈ ಆರೋಪವು ಮೂಲ ಶೋ-ಕಾಸ್ ನೋಟಿಸ್‌ನ ಭಾಗವಾಗಿರಲಿಲ್ಲ, ಹೀಗಾಗಿ ಇದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಆ ವಾದವನ್ನು ಸ್ವೀಕರಿಸಲು ನಿರಾಕರಿಸಿತು.
ಇನ್ನೂ ತನಿಖೆಯ ಹಂತದಲ್ಲಿರುವ ಪ್ರಕರಣಗಳು ತಮ್ಮಷ್ಟಕ್ಕೆ ತಾವೇ ಗಡಿಪಾರು ನಡಾವಳಿಗಳಿಗೆ ಆಧಾರವಾಗಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಒಂದು ಗಡಿಪಾರು ಆದೇಶ ರದ್ದು, ಎರಡನೇ ಪ್ರಕರಣ ಬಾಕಿ
ದಾಖಲೆಗಳನ್ನು ಪರಿಶೀಲಿಸಿದ ನಂತರ, ಫಿರೋಜ್ ಅಬ್ದುಲ್ ವಹಾಬ್ ಖಾನ್ ವಿರುದ್ಧದ ಗಡಿಪಾರು ಆದೇಶವು ಕಾನೂನುಬದ್ಧವಾಗಿ ಅಸಿಂಧು ಎಂದು ತೀರ್ಮಾನಿಸಿದ ಹೈಕೋರ್ಟ್ ಅದನ್ನು ರದ್ದುಗೊಳಿಸಿತು.
ಮೊಹಮ್ಮದ್ ರಫೀಕ್ ಗುಲಾಮ್ ರಸೂಲ್ ಅನ್ಸಾರಿ ಸಲ್ಲಿಸಿರುವ ಅರ್ಜಿ ಬಾಕಿ ಉಳಿದಿದೆ. ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯಡಿ ಮತ್ತೊಂದು ಪ್ರಕರಣ ಬಾಕಿ ಇದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಈ ಕುರಿತು ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಆಗಸ್ಟ್ 6 ಕ್ಕೆ ನಿಗದಿಪಡಿಸಿದೆ.
