Home ಆರೋಗ್ಯ ಸಕ್ಕರೆ ಮಾರುಕಟ್ಟೆಯ ಭಯಾನಕ ಮುಖ

ಸಕ್ಕರೆ ಮಾರುಕಟ್ಟೆಯ ಭಯಾನಕ ಮುಖ

0

ದಂತಕ್ಷಯಕ್ಕೆ ಮುಖ್ಯ ಕಾರಣವಾಗಿರುವ ಸಕ್ಕರೆಯ ಸಂಬಂಧದ ಬಗ್ಗೆ ಸಂಶೋಧನೆಗಳು ನಡೆಯದ ಹಾಗೆ ಗಮನವನ್ನು ಬೇರೆಡೆ ಸೆಳೆಯಲು ಸಕ್ಕರೆ ಉದ್ಯಮಗಳು ವಿಶ್ವವಿದ್ಯಾನಿಲಯಗಳ ಸಂಶೋಧಕರನ್ನು ಸಂಪರ್ಕಿಸಿದವು. ದಂತ ಕ್ಷಯವನ್ನು ತಡೆಗಟ್ಟುವ ಲಸಿಕೆ ಮತ್ತು ಹಲ್ಲಿನ ಮೇಲೆ ಶೇಖರಣೆಗೊಳ್ಳುವ ಸೂಕ್ಷ್ಮಾಣುಜೀವಿ ಪದರವನ್ನು ನಾಶಮಾಡುವ ಎನ್ಜೈಮ್‍ಗಳ ಶೋಧನೆಗೆ ಹಚ್ಚಿದವು… ಸಕ್ಕರೆ ಉದ್ಯಮಗಳ ಲಾಬಿಯ ಕುರಿತು ಬರೆದಿದ್ದಾರೆ ದಂತ ವೈದ್ಯರಾದ ಡಾ ಸುಶಿ ಕಾಡನಕುಪ್ಪೆಯವರು.

ಶಾಲಾ ಮಕ್ಕಳ ಬಾಯಿ ಆರೋಗ್ಯ ತಪಾಸಣೆಯಲ್ಲಿ ನಮ್ಮ ವೈದ್ಯಕೀಯ ತಂಡ ನಿರತವಾಗಿತ್ತು. ಪ್ರಾಥಮಿಕ ಶಾಲೆಯ ಮಕ್ಕಳ ಹಲ್ಲಿನ ಆರೋಗ್ಯವನ್ನು ದಾಖಲಿಸುತ್ತಿದ್ದ ನಮಗೆ ಕಂಡುಬರುವ ಅತ್ಯಂತ ವಿಷಾದದ ಸಂಗತಿಯೆಂದರೆ ಬಹುಪಾಲು ಮಕ್ಕಳ ಹಲ್ಲುಗಳು ದಂತಕ್ಷಯದಿಂದ ಸಂಪೂರ್ಣ ನಾಶವಾಗಿರುತ್ತವೆ. ಕಳೆದ ಇಪ್ಪತ್ತು ವರ್ಷಗಳ ಕಾಲಮಾನದಲ್ಲಿ ನಾನು ಗಮನಿಸಿದಂತೆ ಅತಿ ಸಣ್ಣ ವಯಸ್ಸಿನಲ್ಲಿ ದಂತಕ್ಷಯದಿಂದ ಹಲ್ಲುಗಳು ನಾಶವಾಗುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ. ಈ ಪ್ರಮಾಣ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಹೆಚ್ಚಾಗಿದೆ. ಶಾಶ್ವತ ಹಲ್ಲುಗಳು ಹುಟ್ಟುವುದು ಸುಮಾರು 6 ವರ್ಷಗಳ ಸುಮಾರಿಗೆ. ಹುಟ್ಟಿದ ಎರಡೇ ವರ್ಷಗಳಲ್ಲಿ ಈ ಶಾಶ್ವತ ಹಲ್ಲು ಹುಳುಕಿನಿಂದ ಸಂಪೂರ್ಣ ನಾಶವಾಗಿರುವುದನ್ನು ನಾವು ನಮ್ಮ ದಂತ ತಪಾಸಣೆ ಶಿಬಿರಗಳಲ್ಲಿ ಗಮನಿಸಿದ್ದೇವೆ. ಈ ಹಲ್ಲುಗಳು ಒಬ್ಬ ವ್ಯಕ್ತಿಯ ಜೀವನದ ಪೂರ್ಣಾವಧಿಯವರೆಗೆ ಇರಬೇಕು. ಅದಕ್ಕಾಗಿಯೇ ಈ ಹಲ್ಲುಗಳನ್ನು ‘ಶಾಶ್ವತ ಹಲ್ಲುಗಳು’ ಎಂದು ನಮೂದಿಸಿರುವುದು. ಆದರೆ ಚಿಕ್ಕ ವಯಸ್ಸಿನ ಮಕ್ಕಳು ಏಳೆಂಟು ವರ್ಷಗಳಲ್ಲೇ ತಮ್ಮ ಶಾಶ್ವತ ದವಡೆ ಹಲ್ಲುಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಆಹಾರವನ್ನು ಸಮರ್ಥವಾಗಿ ಜಗಿದು ನುಂಗಲು ಆರೋಗ್ಯಕರ ಹಲ್ಲು ಮತ್ತು ಸದೃಢವಾದ ವಸಡುಗಳು ಅತ್ಯಗತ್ಯ. ಬಾಯಿಯಿಂದ ಪ್ರಾರಂಭವಾಗುವ ನಮ್ಮ ಪಚನ ಕ್ರಿಯೆ ಜಟರ ಮತ್ತು ಕರುಳಿನಲ್ಲಿ ನಡೆಯುವ ಪಚನ ಕ್ರಿಯೆಗೆ ಅನುಕೂಲಕರವಾಗಿರುತ್ತದೆ. ಇದರಿಂದ ನಮ್ಮ ಆಹಾರದಲ್ಲಿನ ಪೌಷ್ಟಿಕಾಂಶಗಳು ಸಂಪೂರ್ಣವಾಗಿ ದೇಹಕ್ಕೆ ಸೇರಲು ಅನುವಾಗುತ್ತದೆ. ಆಯಸ್ಸಿನ ಮೊದಲನೆ ದಶಕದಲ್ಲಿಯೇ ಶಾಶ್ವತ ಹಲ್ಲುಗಳ ಹುಳುಕಿನಿಂದಾಗಿ ಮಕ್ಕಳ ಆಹಾರದ ಪಚನಕ್ರಿಯೆ ಸಂಪೂರ್ಣವಾಗಿ ಫಲಕಾರಿಯಾಗದೆ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ಹಲ್ಲಿನ ಹುಳುಕು ಮತ್ತು ವಸಡಿನ ರೋಗವೆರಡಕ್ಕೂ ಮೂಲ ಕಾರಣ ನಾವು ಸೇವಿಸುವ ಆಹಾರದಲ್ಲಿನ ಅತಿಯಾದ ಸಕ್ಕರೆ ಅಂಶ. ನಮ್ಮ ಆಹಾರದಲ್ಲಿ ಕನಿಷ್ಟ ಶೇಕಡ 25ಕ್ಕಿಂತಾ ಹೆಚ್ಚು ಪ್ರಮಾಣದ ಸಕ್ಕರೆಯನ್ನು ನಾವು ದಿನವೂ ಸೇವಿಸುತ್ತಿದ್ದೇವೆ. ಮೆದುವಾದ, ನಾಲಿಗೆಗೆ ಹೆಚ್ಚು ಪ್ರಿಯವಾದ ಆಕರ್ಷಕ ತಿನಿಸುಗಳನ್ನು ನಾವು ಹೆಚ್ಚು ಇಷ್ಟ ಪಡುತ್ತೇವೆ. ನಾವು ಮನೆಯಲ್ಲಿ ಅಡುಗೆ ತಯಾರಿಸಿ ತಿನ್ನುವ ಆಹಾರದಲ್ಲಿಯೂ ಹೆಚ್ಚಿನ ಅಂಶ ಕಾರ್ಬೋಹೈಡ್ರೇಟ್ ನಿಂದ ಕೂಡಿರುತ್ತದೆ. ಸಕ್ಕರೆ ಇರುವ ಆಹಾರ ಪದಾರ್ಥಗಳು ಮೆದುವಾಗಿಯೂ ಹಲ್ಲಿಗೆ ಅಂಟುವ ರೀತಿಯೂ ಇರುತ್ತವೆ. ಇದರ ಸೇವನೆಯಿಂದ ಬಾಯಿಯಲ್ಲಿನ ಆಮ್ಲ-ಪ್ರತ್ಯಾಮ್ಲಗಳ ಸಮತೋನಲ ತಪ್ಪುತ್ತದೆ. ಇದರಿಂದ ಹೆಚ್ಚು ಆಮ್ಲಗಳ ಉತ್ಪನ್ನವಾಗಿ ಬಾಯಿಯ ಪಿಎಚ್ ತಗ್ಗುತ್ತದೆ. ಇದರಿಂದ ಹಲ್ಲುಗಳು ಕರಗುತ್ತವೆ. ಹಲ್ಲುಗಳಲ್ಲಿ ಗುಳಿ ಬೀಳಲು ಕಾರಣವಾಗುವ ಈ ಪ್ರಕ್ರಿಯೆಯು ಹಲ್ಲಿನ ನರಕೋಶಗಳನ್ನು ನಾಶಮಾಡುವುದರಿಂದ ರೋಗಿಯು ಹಲ್ಲುನೋವಿನಿಂದ ಬಳಲಬೇಕಾಗುತ್ತದೆ. ಹಲ್ಲು ಒಮ್ಮೆ ಹುಳುಕು ಹಲ್ಲಿನ ರೋಗಕ್ಕೆ ತುತ್ತಾದರೆ ಮತ್ತೆ ಆ ಹಲ್ಲು ಮರುಜೀವ ಪಡೆಯುವುದಿಲ್ಲ. ಹಾಗಾಗಿ ಹುಳುಕು ಹಲ್ಲನ್ನು ಮೊದಲಿನ ಆರೋಗ್ಯಕ್ಕೆ ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ. ಯಾವುದೇ ಹುಳುಕು ಹಲ್ಲಿನ ಚಿಕಿತ್ಸೆ ಕೇವಲ ಹುಳುಕನ್ನು ತೆಗೆಯುವುದು ಮತ್ತು ಗುಳಿ ಬಿದ್ದ ಜಾಗವನ್ನು ತುಂಬುವುದೇ ಆಗಿದೆ.

ಚಿಕ್ಕ ವಯಸ್ಸಿನ ಮಕ್ಕಳು ಹುಳುಕು ಹಲ್ಲಿನ ಚಿಕಿತ್ಸೆ ಪಡೆಯಲಾಗದೆ ಹಲ್ಲನ್ನು ಕಳೆದುಕೊಂಡಾಗ ದವಡೆಯ ಆ ಭಾಗದ ಜಗಿಯುವಿಕೆಯನ್ನೇ ಕಳೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಹುಳುಕು ಹಲ್ಲಿನಿಂದ ಅನುಭವಿಸುವ ನೋವು, ಜ್ವರ ಮತ್ತು ಉರಿಊತದಿಂದ ಮಕ್ಕಳು ಶಾಲೆಗೆ ಗೈರುಹಾಜರಾಗುವುದರಿಂದ ಸರಾಸರಿ 51 ಮಿಲಿಯನ್ ಗಂಟೆಗಳಷ್ಟು ಶಾಲಾ ಕಲಿಕೆಯ ಅವಧಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಪಂಚದ ಸುಮಾರು 514 ಮಿಲಿಯನ್ ಮಕ್ಕಳು ತಮ್ಮ ಹಾಲು ಹಲ್ಲುಗಳ ಹುಳುಕಿನಿಂದ ಬಳಲುತ್ತಿದ್ದಾರೆ. ಹಾಗೆಯೇ 2 ಬಿಲಿಯನ್ ವಯಸ್ಕರು ಹುಳುಕು ಹಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರಪಂಚದ ಜನಸಂಖ್ಯೆಯು 8 ಬಿಲಿಯನ್ ಮುಟ್ಟಿರುವ ಈ ಹೊತ್ತಿನಲ್ಲಿ 2 ಬಿಲಿಯನ್ ಜನರು ಹುಳುಕುಹಲ್ಲಿನಿಂದ ಬಳಲುತ್ತಿರುವುದು ಈ ಸಮಸ್ಯೆಯ ಸಾರ್ವಕಾಲಿಕತೆಯನ್ನು ನಿರೂಪಿಸುತ್ತದೆ.

ಈ ಹಲ್ಲಿನ ಸಮಸ್ಯೆಗೆ ಬಹು ಮುಖ್ಯ ಕಾರಣ ಸಕ್ಕರೆ ಸೇವನೆ. 2003ನೇ ಇಸವಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತನ್ನ ಶಿಫಾರಸ್ಸಿನಲ್ಲಿ ಈ ಅಂಶವನ್ನು ಬೆಳಕಿಗೆ ತರಲು ಪ್ರಯತ್ನಿಸಿತ್ತು. ಆದರೆ ಸಕ್ಕರೆ ಉದ್ಯಮಗಳ ಸಂಘವು ವಿಶ್ವ ಆರೋಗ್ಯ ಸಂಸ್ಥೆಯ ಮೇಲೆ ರಾಜಕೀಯ ಒತ್ತಡವನ್ನು ಹೇರಿತ್ತು. ಅಮೆರಿಕಾದ ಸಕ್ಕರೆ ಉದ್ಯಮಗಳು ಸರ್ಕಾರದ ಮೂಲಕ ವಿಶ್ವ ಸಂಸ್ಥೆಯ ಧನಸಹಾಯವನ್ನು ನಿಲ್ಲಿಸುವ ಬೆದರಿಕೆ ಹಾಕಿ ಯಶಸ್ವಿ ಆಗಿದ್ದವು. ಇದಾದ ಸುಮಾರು ಹತ್ತು ವರ್ಷಗಳು ಕಳೆದ ಆನಂತರ ವಿಶ್ವ ಆರೋಗ್ಯ ಸಂಸ್ಥೆ ಮತ್ತೆ ಸಕ್ಕರೆಯ ಮೇಲಿನ ಶಿಫಾರಸ್ಸುಗಳನ್ನು ಮುನ್ನೆಲೆಗೆ  ತಂದದ್ದು 2014ರಲ್ಲಿ. 1990ರಲ್ಲಿಯೇ ಹಲವಾರು ವೈಜ್ಞಾನಿಕ ಸಂಶೋಧನೆಗಳು ಆರೋಗ್ಯದ ಮೇಲೆ ಸಕ್ಕರೆಯ ಅಡ್ಡ ಪರಿಣಾಮಗಳನ್ನು ಬೆಳಕಿಗೆ ತಂದಿದ್ದವು. ಅದರಲ್ಲಿ ಮುಖ್ಯವಾಗಿ ದಂತಕ್ಷಯ, ಹೃದಯ ಸಂಬಂಧಿ ಕಾಯಿಲೆ ಮತ್ತು  ಮಧುಮೇಹವಾಗಿದ್ದವು. 2003ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯನ್ನು ಬಗ್ಗು ಬಡೆದ ಸಕ್ಕರೆ ಉದ್ಯಮಗಳ ಸಂಘಟನೆ 2014ರಲ್ಲಿ ಶಿಫಾರಸ್ಸುಗಳನ್ನು ಪ್ರಕಟಿಸದಿರುವಂತೆ ಬೆದರಿಕೆಯನ್ನು ಮುಂದುವರೆಸಿತ್ತು. ಆದರೆ 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಲ್ಲಾ ವೈಜ್ಞಾನಿಕ ಸಂಶೋಧನೆಗಳ ಆಧಾರದ ಮೇಲೆ ಶೇಕಡ 10 ಕ್ಕಿಂತ ಹೆಚ್ಚು ಸಕ್ಕರೆಯ ಅಂಶ ಆಹಾರ ಪದಾರ್ಥಗಳಲ್ಲಿ ಇರಕೂಡದೆಂದು ಶಿಫಾರಸ್ಸು ಕೊಟ್ಟಿತು. ಮುಂದುವರೆದ ದೇಶಗಳಲ್ಲಿ ದಂತಕ್ಷಯ ತಡೆಗೆ ದಕ್ಷ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಆಹಾರ ಪದಾರ್ಥಗಳ ಸಕ್ಕರೆ ಗರಿಷ್ಟ ಶೇಕಡ 10 ಮತ್ತು ಹಿಂದುಳಿದ ಮುಂದುವರೆಯುತ್ತಿರುವ ದೇಶಗಳಲ್ಲಿ ಗರಿಷ್ಟ ಶೇಕಡ 5 ಮಾತ್ರ ಇರಬೇಕೆಂದು ಶಿಫಾರಸು ಕೊಟ್ಟಿತು.

ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಅತಿ ಹೆಚ್ಚು ಸಕ್ಕರೆಯನ್ನು ಸೇರಿಸುವುದರ ಹಿಂದೆ ಸಕ್ಕರೆ ಉದ್ಯಮಗಳ ಲಾಭಕರ ಬಂಡವಾಳಶಾಹಿ ಚಿಂತನೆಯಿದೆ. ಸಕ್ಕರೆಯ ಪ್ರಮಾಣ ಹೆಚ್ಚಿದ್ದಷ್ಟು ಜನರಿಗೆ ರುಚಿಯಾದ ಆಕರ್ಷಕ ತಿನಿಸುಗಳನ್ನು ಮಾರಬಹುದು. ನಾವು ದಿನವೂ ಟಿವಿಯಲ್ಲಿ ನೋಡುವ ಜಾಹೀರಾತುಗಳಲ್ಲಿ ಸಂಸ್ಕರಿಸಿದ ಆಹಾರ ಪದಾರ್ಥ, ಸಿಹಿ ತಿನಿಸುಗಳಾದ ಚಾಕೋಲೇಟ್, ಕ್ಯಾಂಡಿ, ಜ್ಯೂಸ್, ಬಿಸ್ಕತ್ತು ಮುಂತಾದ ಸಕ್ಕರೆಯುಕ್ತ ಪದಾರ್ಥಗಳ ಜಾಹಿರಾತಿಗಾಗಿಯೇ ಉದ್ಯಮಗಳು ಸುಮಾರು 1.06 ಮಿಲಿಯನ್ ಡಾಲರುಗಳಿಗಿಂತ ಹೆಚ್ಚು ಹಣವನ್ನು ಪ್ರತಿವರ್ಷ ವ್ಯಯಿಸುತ್ತಿವೆ. ಆಕರ್ಷಕ ಪ್ಯಾಕೇಜುಗಳಲ್ಲಿ ದೊರೆಯುವ ಈ ರುಚಿಕರ ತಿನಿಸುಗಳು ಆರೋಗ್ಯಕ್ಕೆ ಹಾನಿಕಾರಕ ಅಷ್ಟೇ ಅಲ್ಲದೆ ಪೌಷ್ಟಿಕಾಂಶಗಳುಳ್ಳ ಆರೋಗ್ಯಕರ ಸಹಜ ಆಹಾರ ಪದಾರ್ಥಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಹಾಗೆ ಮಾರುಕಟ್ಟೆಯಲ್ಲಿ ಬಿಕರಿಗೊಳ್ಳುತ್ತವೆ. ಈ ಮಾರುಕಟ್ಟೆಯಿಂದ ಅತಿ ಹೆಚ್ಚು ಲಾಭ ಪಡೆಯುವ ಈ ಉದ್ಯಮಗಳು 2019ರಲ್ಲಿ ಸರಾಸರಿ 210 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದ್ದವು. ಇವು 2027ರಷ್ಟರಲ್ಲಿ 270 ಬಿಲಿಯನ್ ಬೆಲೆಬಾಳುತ್ತವೆಯೆಂದು ಸಮೀಕ್ಷೆಗಳು ಅಂದಾಜು ಮಾಡಿವೆ. ಇದರ 35.2% ಪಾಲು ಚಾಕೋಲೇಟ್ ಮಾರುಕಟ್ಟೆಯ ಪಾಲಾಗಿದೆ. ಹಾಗೆಯೇ 16ರಿಂದ 60ವರ್ಷಗಳೊಳಗಿನ ಜನರು ಈ ಮಾರುಕಟ್ಟೆಯ ಶೇಕಡ 58ರಷ್ಟು ಗ್ರಾಹಕರಾಗಿದ್ದಾರೆ. ಇಷ್ಟು ವ್ಯಾಪಕವಾದ ವಹಿವಾಟಿನಿಂದ ಲಾಭ ಮಾಡಿಕೊಂಡಿರುವ ಸಕ್ಕರೆ ಉದ್ಯಮಗಳು ಜನಾರೋಗ್ಯಕ್ಕೆ ಕಂಟಕವಾಗಿವೆ.

ಸಕ್ಕರೆ ಉದ್ಯಮಗಳು ಅಮೆರಿಕಾದ ವಿಶ್ವವಿದ್ಯಾನಿಲಯದ ಸಂಶೋಧನೆಗಳ ದಿಕ್ಕು ತಪ್ಪಿಸಿ ಯಶಸ್ಸನ್ನು ಕಂಡಿವೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಆಹಾರದಲ್ಲಿನ ಕೊಬ್ಬಿನಂಶ ಕಾರಣವೆಂದು ಪ್ರತಿಪಾದಿಸುವ ಸಂಶೋಧನೆಗಳಿಗೆ ಧನಸಹಾಯ ಮತ್ತು ಇದನ್ನು ಪ್ರಚುರಪಡಿಸಲು ತಮ್ಮ ಹಣ ಮತ್ತು ಸಮಯವನ್ನು ಖರ್ಚು ಮಾಡಿವೆ. ಸಕ್ಕರೆ ಉದ್ಯಮಗಳ ಈ ಶ್ರಮ ವ್ಯರ್ಥವಾಗಲಿಲ್ಲ. ಹಲವು ದಶಕಗಳಿಂದಲೂ ವೈದ್ಯಕೀಯ ಶಿಫಾರಸ್ಸುಗಳಲ್ಲಿ ಇದನ್ನೇ ಬಳಸಲಾಗುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಕೊಬ್ಬಿನಾಂಶ ಕಾರಣವೆಂದು ಪ್ರಚುರ ಪಡಿಸಲಾಗಿದೆ. ಮಧುಮೇಹ ಮತ್ತು ಬೊಜ್ಜನ್ನು ತಡೆಗಟ್ಟುವ ವೈದ್ಯಕೀಯ ಸಲಹೆಗಳಲ್ಲಿ ಸಕ್ಕರೆಯ ಬಳಕೆಯ ಬಗ್ಗೆ ಹೆಚ್ಚು ಗಮನವನ್ನು ಇಂದಿಗೂ ಆರೋಗ್ಯಸೇವೆಯ ವೃತ್ತಿಪರರು ಜನರಿಗೆ ಮತ್ತು ತಮ್ಮ ರೋಗಿಗಳಿಗೆ ತಿಳಿಸುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ವೈದ್ಯಕೀಯ ನಿಯತಕಾಲಿಕೆಗಳು ಪ್ರಕಟಿಸುವ ಬಹುಪಾಲು ಅಧ್ಯಯನಗಳು ಕೊಬ್ಬು, ಉಪ್ಪು ಮತ್ತು ಆರೋಗ್ಯದ ಸಂಬಂಧಗಳನ್ನು ವಿಶ್ಲೇಷಿಸಲು ಧನಸಹಾಯ ಪಡೆದ ಸಂಶೋಧನೆಗಳಾಗಿದ್ದವು.

ದಂತಕ್ಷಯಕ್ಕೆ ಮುಖ್ಯ ಕಾರಣ ಆಹಾರದ ಸಕ್ಕರೆ ಪ್ರಮಾಣ ಎಂಬುದನ್ನು ಹಲವಾರು ವೈಜ್ಞಾನಿಕ ಸಂಶೋಧನೆಗಳು ಬಯಲು ಮಾಡಿದ್ದವು. ಆದರೆ ಸಕ್ಕರೆಯ ಸಂಬಂಧದ ಬಗ್ಗೆ ಸಂಶೋಧನೆಗಳು ನಡೆಯದ ಹಾಗೆ ಗಮನವನ್ನು ಬೇರೆಡೆ ಸೆಳೆಯಲು ಸಕ್ಕರೆ ಉದ್ಯಮಗಳು ವಿಶ್ವವಿದ್ಯಾನಿಲಯಗಳ ಸಂಶೋಧಕರನ್ನು ದಂತ ಕ್ಷಯವನ್ನು ತಡೆಗಟ್ಟುವ ಲಸಿಕೆ ಮತ್ತು ಹಲ್ಲಿನ ಮೇಲೆ ಶೇಖರಣೆಗೊಳ್ಳುವ ಸೂಕ್ಷ್ಮಾಣುಜೀವಿ ಪದರವನ್ನು ನಾಶಮಾಡುವ ಎನ್ಜೈಮ್‍ಗಳ ಶೋಧನೆಗೆ ಹಚ್ಚಿತು. ಈ ಉದ್ಯಮಗಳು ಜನರಿಗೆ ರವಾನಿಸಿದ ಸಂದೇಶ ಹೀಗಿತ್ತು: ‘ನೀವು ಎಷ್ಟು ಬೇಕಾದರೂ ಸಕ್ಕರೆಯುಕ್ತ ರುಚಿಕರ ತಿನಿಸುಗಳನ್ನು ಸೇವಿಸಿ ಆನಂದಿಸಿರಿ. ಹಲ್ಲು ಹುಳುಕಾಗುವುದು ಎಂದು ಹೆದರದಿರಿ. ನಾವು ನಿಮಗೆ ಹುಳುಕು ಹಲ್ಲು ಆಗದಂತೆ ತಡೆಯುವ ಲಸಿಕೆ ಮತ್ತು ಎನ್ಜೈಮ್‍ಗಳನ್ನು ತಯಾರಿಸಿಕೊಡುತ್ತೇವೆ’. ಇದರಿಂದ ನಿಜವಾದ ಕಾರಣ ಮತ್ತು ಪರಿಣಾಮಗಳ ಅಧ್ಯಯನಗಳು ಹೊರ ಹಾಕಿದ ಸತ್ಯ ಕಾಣಿಸದೇ ಹೋಯಿತು. ಆದರೆ ಈ ಸಕ್ಕರೆ ಉದ್ಯಮಗಳು ಧನ ಸಹಾಯ ಮಾಡಿ ನಡೆಸಿದ ಯಾವುದೇ ಪ್ರಯೋಗಗಳು ಯಶಸ್ವಿಯಾಗಲಿಲ್ಲ. ಇಂದಿಗೂ ಹುಳುಕು ಹಲ್ಲು ತಡೆಯುವ ಯಾವುದೇ ಲಸಿಕೆ ಅಥವಾ ಎನ್ಜೈಮ್‍ಗಳು ಲಭ್ಯವಿಲ್ಲ. ಆದರೆ ಇಷ್ಟು ವರ್ಷಗಳ ಕಾಲ ಜನರ ಆರೋಗ್ಯದ ವಿಷಯದಲ್ಲಿ ಆಟವಾಡಿದ ಈ ಸಕ್ಕರೆ ಉದ್ಯಮಗಳ ಲಾಬಿಯ ವಿರುದ್ಧ ಯಾವುದೇ ದೇಶದ ಸರ್ಕಾರ ಗುರುತರ ಹೆಜ್ಜೆಗಳನ್ನಿಟ್ಟಿಲ್ಲ.

1960 ಮತ್ತು 70ರ ದಶಕಗಳಲ್ಲೆ ಸಕ್ಕರೆ ಉದ್ಯಮಗಳು ಅಮೆರಿಕಾ ದೇಶದ ಸರ್ಕಾರಿ ಧನಸಹಾಯದಿಂದ ನಡೆಯುವ ಸಂಶೋಧನೆಗಳ ಮೇಲೆ ತಮ್ಮ ಪ್ರಭಾವ ಬೀರಿದ್ದವು. ವಿಶ್ವ ಆರೋಗ್ಯ ಸಂಸ್ಥೆಯನ್ನೂ ನಿಯಂತ್ರಿಸುವ ಮಟ್ಟಕ್ಕೆ ಸಕ್ಕರೆ ಉದ್ಯಮಗಳು ಕಾರ್ಯನಿರ್ವಹಿಸಿದವು. ಈ ಸನ್ನಿವೇಶದ ಮೇಲೆ ಬೆಳಕು ಚೆಲ್ಲಲು 2007ರಲ್ಲಿ ಕ್ಯಾಲಿಫೋರ್ನಿಯಾ-ಸ್ಯಾನ್ ಫ್ರ್ಯಾನ್ಸಿಸ್ಕೊ ವಿಶ್ವವಿದ್ಯಾನಿಲಯದ ಬಾಯಿಯ ಆರೋಗ್ಯ ಮತ್ತು ಸಾರ್ವಜನಿಕ ಆರೋಗ್ಯ ತಜ್ಞೆಯಾದ ಡಾ. ಕ್ರಿಸ್ಟಿನ್ ಕೆರೆನ್ ಕಾರ್ಯಪ್ರವೃತ್ತರಾಗಿ ಸುಮಾರು 1,550 ರಷ್ಟು ದಾಖಲೆಗಳನ್ನು ಹೆಕ್ಕಿ ತೆಗೆದರು. ಅವರ ಈ ಸಂಶೋಧನೆಯಿಂದ ಬೆಳಕಿಗೆ ಬಂದ ಸತ್ಯ ಸಕ್ಕರೆ ಮಾರುಕಟ್ಟೆಯ ಕರಾಳ ಮುಖವನ್ನು ಬಯಲಿಗೆಳೆಯಿತು. ತಂಬಾಕು ಉದ್ದಿಮೆಗಳು ನಡೆಸುವ ಲಾಬಿಯಷ್ಟೇ ಪ್ರಖರವಾಗಿ ಸಕ್ಕರೆ ಉದ್ಯಮಗಳ ಲಾಬಿಯಿದೆ ಎಂಬುದು ಸಾಬೀತಾಯಿತು. ತಂಬಾಕು ಆರೋಗ್ಯಕ್ಕೆ ಹಾನಿಕಾರಕ ಎಂಬ ತಿಳಿವಳಿಕೆಯಾದರೂ ಇದೆ. ಆದರೆ ಸಕ್ಕರೆಯೂ ತಂಬಾಕಿನಷ್ಟೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಅರಿವು ಜನರಿಗಿಲ್ಲದಿರುವುದು ಸಕ್ಕರೆ ಮಾರುಕಟ್ಟೆಗೆ ವರವಾಗಿದೆ. ನಿರಂತರ ಏಳು ವರ್ಷಗಳ ತನಿಖೆಯಿಂದ ಈ ಎಲ್ಲಾ ದಾಖಲಾತಿಗಳ ಸತ್ಯಾಸತ್ಯತೆಗಳ ವಿಶ್ಲೇಷಣೆಯನ್ನು 2015ರಲ್ಲಿ ಡಾ. ಕ್ರಿಸ್ಟಿನ್ ಅವರ ತಂಡ ಪ್ಲಾಸ್ ಮೆಡಿಸಿನ್ ನಿಯತಕಾಲಿಕೆಯಲ್ಲಿ ಪ್ರಕಟಮಾಡಿತು. ಇದಾದ ನಂತರ ವಿಶ್ವ ಆರೋಗ್ಯ ಸಂಸ್ಥೆ ತನ್ನ ಶಿಫಾರಸ್ಸುಗಳನ್ನು ಬದಲಿಸಿಕೊಂಡಿತು. ಈಗ 2019ರಲ್ಲಿ ಪರಿಷ್ಕೃತವಾದ ಶಿಫಾರಸ್ಸುಗಳಲ್ಲಿ ಕೂಡ ಆಹಾರ ತಿನಿಸುಗಳಲ್ಲಿ ಸಕ್ಕರೆಯನ್ನು ಗರಿಷ್ಟ ಶೇಕಡ 10ರಷ್ಟು ಮಾತ್ರ ಬಳಸಬೇಕು ಎಂದು ಪ್ರತಿಪಾದಿಸಿದೆ. ಈ ಪ್ರಮಾಣವನ್ನು ಶೇಕಡ 5ರಷ್ಟು ಇಳಿಸಬೇಕು ಎಂದು ಕೂಡ ಸಲಹೆ ನೀಡಿದೆ. ಇದು ಕೇವಲ ಬಾಯಿಯ ಆರೋಗ್ಯವನ್ನಷ್ಟೇ ಅಲ್ಲದೆ ಸಂಪೂರ್ಣ ದೇಹದ ಆರೋಗ್ಯದ ದೃಷ್ಟಿಯಿಂದ ಮಹತ್ವದ ಮಾರ್ಗದರ್ಶಕ ನಿಲುವಾಗಿದೆ. ಆದರೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಈ ಶಿಫಾರಸ್ಸನ್ನು ಜಾರಿಗೊಳಿಸದಿರುವುದು ವಿಪರ್ಯಾಸ. ಇದಕ್ಕೆ ಕಾರಣ ಸರ್ಕಾರಗಳಿಗೆ ಲಾಭದಾಯಕ ಸಕ್ಕರೆ ಮಾರುಕಟ್ಟೆ ಮುಖ್ಯವೇ ಹೊರತು ಜನರ ಆರೋಗ್ಯವಲ್ಲ.

ಡಾ. ಸುಶಿ ಕಾಡನಕುಪ್ಪೆ ಎಮ್.ಡಿ.ಎಸ್., ಪಿಎಚ್ಡಿ

ಬೆಂಗಳೂರಿನ ವಿ.ಎಸ್. ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಾರ್ವಜನಿಕ ಆರೋಗ್ಯ ದಂತ ವೈದ್ಯಕೀಯ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದಾರೆ.

ಫೋನ್: 9535205012

You cannot copy content of this page

Exit mobile version