ಪಶ್ಚಿಮ ಘಟ್ಟ ಶ್ರೇಣಿಯ ಅರಣ್ಯಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಬೂದಿಯಾಗುತ್ತಿವೆ. ಆದರೆ ಇಡೀ ಸರಕಾರ ಚುನಾವಣಾ ಪ್ರಚಾರದಲ್ಲಿ ವ್ಯಸ್ತವಾಗಿದೆ. ಕಾಟಾಚಾರಕ್ಕಾದರೂ ಆಳುವವರಿಂದ ಈ ದುರಂತಗಳ ಬಗ್ಗೆ ಒಂದು ಮಾತು ಬಂದುದಿದೆಯೇ? – ಇಂದಿನ ಶ್ರೀನಿ ಕಾಲಂ ಓದಿ.
ಅದು ಸುಮಾರು ಮೂರು ದಶಕಗಳ ಹಿಂದಿನ ಕಡು ಬೇಸಗೆಯ ಒಂದು ದಿನ. ಮಂಗಳೂರಿನಿಂದ ಕುದುರೆಮುಖ ಶಿಖರಕ್ಕೆ ಚಾರಣ ಹೊರಟಿದ್ದ ನಾವು, ಸಂಸೆಯ ವರೆಗೆ ಬೈಕಿನಲ್ಲಿ ಹೋಗಿ, ಆನಂತರದ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸತೊಡಗಿದೆವು. ಏರು ಹಗಲಿನಿಂದ ನಡೆಯಲಾರಂಭಿಸಿ, ಏರುತ್ತ ಏರುತ್ತ, ಇಳಿಹಗಲಿನ ಹೊತ್ತು ಇನ್ನೇನು ಶಿಖರ ತಲಪಲಿದ್ದೆವು. ಕೊನೆಯ ನಡಿಗೆಯ ದಾರಿಯ ಅತ್ತ ಇತ್ತ ಸುತ್ತಲು ಒಣಗಿದ ಹುಲ್ಲಿನ ವಿಸ್ತಾರ ಪ್ರದೇಶ.
ಚಾರಣದ ಗೆಳೆಯ ಒಂದು ಪ್ರಶ್ನೆ ಕೇಳಿದ- ‘ನಾವಿರುವುದು ಈಗ ಕಡಿದಾದ ಬೆಟ್ಟದಲ್ಲಿ. ನಮ್ಮ ಸುತ್ತಲೂ ಈಗ ಇರುವುದು ನೀರಿನ ಪಸೆಯೂ ಇರದ ಒಣಗಿದ ರಾಶಿ ರಾಶಿ ಹುಲ್ಲು. ಒಂದು ವೇಳೆ ಇಲ್ಲಿ ಕಿಡಿಬಿದ್ದು ಹುಲ್ಲಿಗೆ ಬೆಂಕಿ ಹೊತ್ತಿಕೊಂಡರೆ ನಮ್ಮ ಸ್ಥಿತಿ ಏನಾಗಬಹುದು?’ ಯೋಚಿಸುತ್ತಿದ್ದಂತೆ ಮೈ ಬೆವತುಹೋಯಿತು. ಕಡಿದಾದ ಬೆಟ್ಟ, ಬಿಸಿಲಿಗೆ ಒಣಗಿಹೋದ ಹುಲ್ಲು, ಜೋರಾಗಿ ಬೀಸುತ್ತಿರುವ ಗಾಳಿ. ಒಂದು ಕಿಡಿ ಹಾರಿದರೆ ಅದು ಇಡೀ ಬೆಟ್ಟವನ್ನು ಆವರಿಸಲು ಕ್ಷಣಗಳು ಸಾಕು. ತಪ್ಪಿಸಿಕೊಳ್ಳಲು ನಮಗೆ ಯಾವ ದಾರಿಯೂ ಇಲ್ಲ. ನಾವು ನಿಂತಲ್ಲಿಯೇ ಬೆಂದು ಹೋಗುವುದರಲ್ಲಿ ಯಾವ ಅನುಮಾನವೂ ಇಲ್ಲ!
ಒಂದು ಕ್ಷಣ ದಕ್ಷಿಣದ ತಮಿಳುನಾಡಿನಿಂದ ಉತ್ತರದ ಗುಜರಾತ್ ವರೆಗೆ ವ್ಯಾಪಿಸಿರುವ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಈಗ ನಡೆಯುತ್ತಿರುವ ಕಾಡ್ಗಿಚ್ಚಿನ ವಿದ್ಯಮಾನವನ್ನು ನೆನಪಿಸಿಕೊಳ್ಳಿ. ಉರಿಯುತ್ತಿರುವ ಸಾವಿರಾರು ಎಕರೆ ಅರಣ್ಯ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಹಸಿರು ವೃಕ್ಷಗಳು, ಪ್ರಾಣಿ ಸಂಕುಲಗಳ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಿ. ತಪ್ಪಿಸಿಕೊಳ್ಳುವ ಅವಕಾಶವೇ ಇಲ್ಲದೆ ಅವು ಬೆಂದು ಕರಕಲಾಗುವ ದೃಶ್ಯವನ್ನು ಮನಸಿಗೆ ತಂದುಕೊಂಡಾಗ ಒಂದು ಕ್ಷಣ ಮನಸು ಆರ್ದ್ರವಾಗುವುದಿಲ್ಲವೇ? ಹೀಗೆ ಬೆಂದು ಹೋಗುವ ಜೀವಿ ಮತ್ತು ವೃಕ್ಷ ತಳಿಗಳಲ್ಲಿ ಅಳಿವಿನಂಚಿನಲ್ಲಿರುವವೂ ಇರುತ್ತವೆ. ಒಮ್ಮೆ ಇಲ್ಲವಾದರೆ ಭೂಮಿಯ ಮೇಲೆ ಅವನ್ನು ಪುನರ್ ಸೃಷ್ಟಿಮಾಡಲಾಗದು.
ಈ ಬಾರಿ ಹಿಂದೆಂದೂ ಕಂಡಿರದ ರೀತಿಯಲ್ಲಿ ವಾತಾವಣ ಬಿಸಿಯೇರಿದೆ. ‘ಎಂಥ ಬಿಸಿಲು, ಸೆಕೆ ಮಾರಾಯ್ರೆ…’ ಎಂದು ಎಲ್ಲರ ಬಾಯಲ್ಲಿಯೂ ತೀವ್ರ ಬಿಸಿಲಿನ ಮಾತು, ಬಿಸಿ ಗಾಳಿಯ ಮಾತು. ಉತ್ತರ ಭಾರತ ಬಿಸಿಲ ಬೆಂಕಿಯಲ್ಲಿ ತತ್ತರಿಸುತ್ತಿದೆ. ದಕ್ಷಿಣ ಭಾರತದ್ದೂ ಅದೇ ಕತೆ. ನಿನ್ನೆಯಷ್ಟೇ ಮಹಾರಾಷ್ಟ್ರದ ರಾಜಕಾರಣಿ ಆದಿತ್ಯ ಠಾಕ್ರೆ, ಕಡಲಕರೆಯಲ್ಲಿರುವ ಕಾರಣ ತಾಪಮಾನ ಯಾವತ್ತೂ ಒಂದು ಮಿತಿಯನ್ನು ದಾಟದ ಮುಂಬಯಿಯಲ್ಲಿಯೂ ಮಾರ್ಚ್ ತಿಂಗಳಲ್ಲಿ ತಾಪಮಾನ 39. 4 ಡಿಗ್ರಿ ಸೆಲ್ಶಿಯಸ್ ತಲಪಿದ್ದು, ಮುಂಬಯಿಯ ಇತಿಹಾಸದಲ್ಲಿ ಇದೊಂದು ಹೊಸ ದಾಖಲೆ ಎಂದಿದ್ದರು!

ವ್ಯಾಪಕ ನಾಶ
ಈ ಗರಿಷ್ಠ ತಾಪಮಾನವೂ ಒಂದು ಪೂರಕ ಕಾರಣವೋ ಏನೋ, ಪಡುವಣ ಘಟ್ಟ ಶ್ರೇಣಿಯ ಗೋವಾ, ಮಹಾರಾಷ್ಟ್ರ, ಕರ್ನಾಟಕ, ಕೇರಳದ ಅನೇಕ ದಟ್ಟಾರಣ್ಯಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಆರಿಸಲು ಸಂಬಂಧಿತ ಇಲಾಖೆಗಳು ಅವಿಶ್ರಾಂತವಾಗಿ ಹೆಣಗುತ್ತಿವೆ. ಗೋವಾದಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ಗಳನ್ನು ಬಳಸಿ ಬೆಂಕಿ ಆರಿಸಲು ಯತ್ನಿಸುತ್ತಿದ್ದಾರೆ. ಕೇರಳದಲ್ಲಿ ಮಾರ್ಚ್ 10 ರ ವರೆಗೆ 194 ಕಾಡ್ಗಿಚ್ಚಿನ ಪ್ರಕರಣ ವರದಿಯಾಗಿದ್ದು, 500 ಹೆಕ್ಟೇರ್ ಅರಣ್ಯಭೂಮಿ ಬೆಂಕಿಗೆ ಆಹುತಿಯಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಬೆಂಕಿಯಿಂದ 250 ಎಕರೆ ಅರಣ್ಯ ನಾಶವಾಗಿದೆ ಎಂದು ಅರಣ್ಯ ಇಲಾಖೆಯೇ ಹೇಳುತ್ತಿದೆ. ಬೆಂಕಿ ಆರಿಸಹೋಗಿ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಕಳೆದ ಫೆಬ್ರವರಿ 16 ರಂದು ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದ ಕಾಡ್ಗಿಚ್ಚು ಆರಿಸಲು ಹೋಗಿ ಬೆಂಕಿಗೆ ಸಿಲುಕಿ ಬೆಂದು ಹೋಗಿದ್ದ ಫಾರೆಸ್ಟ್ ಗಾರ್ಡ್ ಸುಂದರೇಶ್ ಅಸು ನೀಗಿದ ಘಟನೆಯೂ ನಡೆದಿದೆ.
ಈ ಬಾರಿ ಕರ್ನಾಟಕದಲ್ಲಿ ವ್ಯಾಪಕವಾಗಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ, ಸವಣಾಲು, ಶಿರ್ಲಾಲು, ಶಿಶಿಲ ರಕ್ಷಿತಾರಣ್ಯ, ಚಾರ್ಮಾಡಿ, ಚಾರ್ಮಾಡಿ – ಕನಪಾಡಿ ರಕ್ಷಿತಾರಣ್ಯ, ಸಕಲೇಶಪುರ ತಾಲೂಕಿನ ಕೆಂಚನಕುಮಾರಿ ಮೀಸಲು ಅರಣ್ಯ, ಹೊಂಗದಹಳ್ಳಿ ಮತ್ತು ಶಿರಾಡಿ ಘಾಟ್ ನಡುವಿನ ಆಲುವಳ್ಳಿ ಕಡಗರವಳ್ಳಿಯ ವಿವಿಧೆಡೆ, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಬಳಿಯ ಸಿಡಿಲು ಮಲ್ಲಿಕಾರ್ಜುನ ಬೆಟ್ಟ, ಬೆಳ್ತಂಗಡಿಯ ಶಿಶಿಲ, ಶಿಬಾಜೆ, ಅರಶಿನಮಕ್ಕಿ, ದಿಡುಪೆ, ನೆರಿಯಾ, ಸಿರಿಬಾಗಿಲು, ಕೊಣಾಜೆಗಳ ರಕ್ಷಿತಾರಣ್ಯ ಹೀಗೆ ಎಲ್ಲೆಲ್ಲೂ ಬೆಂಕಿ.
ಕಾರಣ ಏನು?
ಹೀಗೆ ಕಾಡ್ಗಿಚ್ಚು ಈ ಬಾರಿ ಈ ಪ್ರಮಾಣದಲ್ಲಿ ಕಾಣಿಸಿಕೊಳ್ಳಲು ಕಾರಣವಾದರೂ ಏನು? ಕಳೆದ ಬಾರಿ ವಿಪರೀತ ಮಳೆ ಬಂದುದರಿಂದ ಬೆಂಕಿ ಹರಡಲು ಸೂಕ್ತವಾದ ಹುಲ್ಲು ಮತ್ತು ಗಿಡಗಳು ವ್ಯಾಪಕವಾಗಿ ಬೆಳೆದಿವೆ. ಈ ಬಾರಿ ಕಾಡ್ಗಿಚ್ಚು ಇಷ್ಟೊಂದು ವ್ಯಾಪಕವಾಗಲು ಇದೂ ಒಂದು ಮುಖ್ಯ ಕಾರಣ ಎಂದು ಕರ್ನಾಟಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ಆದರೆ ಪರಿಸರವಾದಿಗಳ ಪ್ರಕಾರ ಪಶ್ಚಿಮ ಘಟ್ಟಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಗಳು ಕಾಡ್ಗಿಚ್ಚಿಗೆ ತುಪ್ಪ ಸುರಿಯುವಂತೆ ಕೆಲಸ ಮಾಡುತ್ತಿವೆ. ದೈತ್ಯ ಗಾತ್ರದ ಯಂತ್ರಗಳ ಬಳಕೆ, ಗುಡ್ಡಗಳ ಅಗೆತ ಹೀಗೆ ಬಹುವಿಧ ನಿರ್ಮಾಣ ಯೋಜನೆಗಳಿಂದ ಮಣ್ಣು ದುರ್ಬಲ ಗೊಂಡು ಭೂಕುಸಿತ ಸಂಭವಿಸಿದೆ. ಮಣ್ಣಿನ ಇಂತಹ ಸವಕಳಿಯಿಂದಾಗಿ ಘಟ್ಟದ ಇಳಿಜಾರುಗಳ ನೀರು ಹಿಡಿದಿಡುವ ಸಾಮರ್ಥ್ಯ ಇಲ್ಲವಾಗಿ, ಮಳೆಗಾಲದಲ್ಲಿ ಹಠಾತ್ ನೆರೆ (ಫ್ಲಾಶ‍್ ಫ್ಲಡ್) ಉಂಟಾದರೆ ಬೇಸಗೆಯಲ್ಲಿ ಬರ ಉಂಟಾಗುತ್ತಿದೆ. ಇವೆಲ್ಲದರ ಕಾರಣ ಶೋಲಾ ಅರಣ್ಯಗಳೂ ಒಣಗಿಹೋಗಿರುವುದರಿಂದ ಒಂದು ಹುಲ್ಲುಗಾವಲಿನಿಂದ ಇನ್ನೊಂದು ಹುಲ್ಲುಗಾವಲಿಗೆ ಕ್ಷಿಪ್ರವಾಗಿ ಮತ್ತು ಸುಲಭದಲ್ಲಿ ಬೆಂಕಿ ದಾಟಿ ಹೋಗುತ್ತದೆ.
ಹೀಗೆ ಆಗಾಗ ಕಾಣಿಸಿಕೊಳ್ಳುವ ಬೆಂಕಿಯಿಂದ ಬೇರುಗಳೂ ಸೇರಿದಂತೆ ಸಂಪೂರ್ಣ ಹುಲ್ಲು ನಾಶವಾಗುತ್ತದೆ. ಅಲ್ಲಿ ಮತ್ತೆ ಹುಲ್ಲು ಹುಟ್ಟುವುದಿಲ್ಲ. ಬೆಟ್ಟದಲ್ಲಿ ನೀರನ್ನು ಹಿಡಿದಿಡುವಲ್ಲಿ, ನೀರನ್ನು ಇಂಗಿಸುವಲ್ಲಿ ಈ ಹುಲ್ಲುಗಳ ಪಾತ್ರ ದೊಡ್ಡದು. ಕಾಡ್ಗಿಚ್ಚಿನಿಂದ ಪರಿಸರ ಮತ್ತು ಜೀವಿಪರಿಸರ (ಇಕಾಲಜಿ) ಮಾತ್ರ ಹಾನಿಯಾಗುವುದಲ್ಲ. ಪಶ್ಚಿಮ ಘಟ್ಟದ ನದಿ ವ್ಯವಸ್ಥೆಗೂ ಗಂಭೀರ ಹಾನಿಯಾಗುತ್ತದೆ. ಹೀಗೆ ಒಟ್ಟಾರೆಯಾಗಿ ಜೀವಜಗತ್ತಿನ ಮೇಲೆ ಕಾಡ್ಗಿಚ್ಚಿನ ಪರಿಣಾಮ ಭೀಕರವಾದುದು.
ನಿಯಂತ್ರಣ ಹೇಗೆ?
ಕಾಡಿಗೆ ಬೆಂಕಿ ಬೀಳದಂತೆ ನೋಡಿಕೊಳ್ಳುವುದು ಮತ್ತು ಕಾಣಿಸಿಕೊಂಡ ಬೆಂಕಿಯನ್ನು ಹತೋಟಿಗೆ ತರುವುದು ಹೇಗೆ? ಈ ಕೆಲಸಕ್ಕೆ ಅರಣ್ಯ ಇಲಾಖೆಯೇನೋ ಇದೆ. ಆದರೆ ಅದೊಂದರಿಂದಲೇ ಈ ಕೆಲಸ ಸಾಧ್ಯವಾಗದು ಎನ್ನವುದು ವಾಸ್ತವ. ವಿಸ್ತಾರವಾದ ಅರಣ್ಯಪ್ರದೇಶದ ಮೇಲೆ ನಿರಂತರ ಕಣ್ಣಿಡುವುದು ಅದಕ್ಕೆ ಅಸಾಧ್ಯ. ಇಂತಹ ಹೊತ್ತಿನಲ್ಲಿ ಮುಖ್ಯವಾಗುವುದು ಅರಣ್ಯದಂಚಿನ ಜನರ ಸಹಕಾರ. ಅರಣ್ಯ ಇಲಾಖೆಯು ಈ ಜನರನ್ನು ತಮ್ಮ ಶತ್ರು ಎಂಬಂತೆ ಭಾವಿಸಿ ದರ್ಪದಿಂದ ನಡೆದುಕೊಳ್ಳದೆ ಅವರೊಂದಿಗೆ ಸ್ನೇಹಸಂಬಂಧ, ಒಡನಾಟ ಇರಿಸಿಕೊಂಡು ಅರಣ್ಯ ರಕ್ಷಣೆಯಲ್ಲಿ ಅವರ ಸಹಾಯ ಪಡೆಯಬೇಕು. ಇತ್ತೀಚೆಗೆ ಉತ್ತರಕನ್ನಡದ ಎಲ್ಲಾಪುರ ಬಳಿಯ ಏಳು ಕಿಲೋಮೀಟರ್ ವ್ಯಾಪ್ತಿಯ ಘಟ್ಟ ಪ್ರದೇಶದಲ್ಲಿ ಕಾಣಿಸಿಕೊಂಡ ಭಾರೀ ಕಾಡ್ಗಿಚ್ಚನ್ನು ಆರಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದು ಅಲ್ಲಿನ ಸ್ಥಳೀಯರು.
ಕಾಡಿಗೆ ಇದ್ದಕ್ಕಿದ್ದಂತೆ ಬೆಂಕಿ ಬೀಳುತ್ತದೆಯೇ? ನಾವು ಹಿಂದೆ ಚಾರಣ ಹೋಗಿ ರಾತ್ರಿ ಕಾಡಿನಲ್ಲಿ ಉಳಿಯುವ ಪ್ರಸಂಗ ಬಂದಾಗ, ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಮತ್ತು ಥರಗುಟ್ಟಿಸುವ ಚಳಿಯಿಂದ ಪಾರಾಗಲು ಸುರಕ್ಷಿತವಾದ ಬಂಡೆಗಲ್ಲಿನಂತಹ ಜಾಗದಲ್ಲಿ ಬೆಂಕಿ ಉರಿಸಿ ರಾತ್ರಿ ಕಳೆಯುತ್ತಿದ್ದೆವು. ನಮ್ಮ ಚಾರಣಿಗರದ್ದು ಎಂತಹ ಒಂದು ಶಿಸ್ತಿನ ತಂಡವೆಂದರೆ, ಮಾರನೆ ದಿನ ಬೆಳಗಿನ ಹೊತ್ತು, ನೀರು ಚಿಮುಕಿಸಿ ಆ ಬೆಂಕಿಯನ್ನು ಸಂಪೂರ್ಣ ಆರಿಸಿ, ಒಂದೇ ಒಂದು ಕಿಡಿಯೂ ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡ ಬಳಿಕವೇ ಅಲ್ಲಿಂದ ಹೊರಡುತ್ತಿದ್ದೆವು. ಯಾಕೆಂದರೆ ಇಂತಹ ಬೆಂಕಿಯು ಕಾಡ್ಗಿಚ್ಚಾಗಿ ಪರಿಣಮಿಸುವ ಸಾಧ್ಯತೆ ತುಂಬಾ ಹೆಚ್ಚು.
ಮಾನವರೇ ಕಾರಣ
ತಜ್ಞರು ಹೇಳುವ ಪ್ರಕಾರ ಕಾಡ್ಗಿಚ್ಚಿಗೆ 99% ಕಾರಣ ಮಾನವರು. ಅವರು ಬೆಂಕಿ ತಗುಲಿಸದೆ ಅಥವಾ ಬೆಂಕಿ ಬೀಳುವಂತಹ ಚಟುವಟಿಕೆ ಮಾಡದೆ ಕಾಡಿನಲ್ಲಿ ಬೆಂಕಿ ಕಾಣಿಸಿಕೊಳ್ಳದು. ವಿಜ್ಞಾನ ಹೇಳುವ ಪ್ರಕಾರವೂ ಒಂದೆಡೆ ಬೆಂಕಿ ಕಾಣಿಸಿಕೊಳ್ಳಬೇಕಾದರೆ ಅಲ್ಲಿ ಗಾಳಿ (ಆಕ್ಸಿಜನ್) ಇರಬೇಕು, ದಹನಶೀಲ ವಸ್ತು ಇರಬೇಕು ಮತ್ತು ಬೆಂಕಿಯ ಮೂಲ (ಕಿಡಿ) ಇರಬೇಕು. ಈ ತ್ರಿಕೋನ ಪೂರ್ಣಗೊಂಡಾಗಲೇ ಬೆಂಕಿ ಕಾಣಿಸಿಕೊಳ್ಳುವುದು. ಇಲ್ಲಿ ಕಾಡಿನ ಬೆಂಕಿಯ ಕಿಡಿಗೆ ಕಾರಣ ಮಾನವ.
ಈಗ ರಕ್ಷಿತಾರಣ್ಯದ ಒಳಗೂ ಕಾಲುದಾರಿಗಳು, ರಸ್ತೆಗಳು ಇದ್ದು ಕಡುಬೇಸಗೆಯ ದಿನಗಳಲ್ಲಿ ಅಲ್ಲಿ ಸಂಚರಿಸುವ ಮನುಷ್ಯರು ಒಂದು ತುಂಡು ಬೀಡಿ ಸೇದಿ ಎಸೆದರೂ ಸಾಕು, ಗಾಳಿ ಬೀಸುತ್ತಿದ್ದಂತೆ ಅದು ಬೆಂಕಿಯಾಗಿ ವ್ಯಾಪಿಸತೊಡಗುತ್ತದೆ. ಬಳಿಕ ಅದನ್ನು ನಿಯಂತ್ರಿಸುವುದು ಸುಲಭವಲ್ಲ. ಬೇಜವಾಬ್ದಾರ ಚಾರಣಿಗರಿಂದಲೂ ಕಾಡಿಗೆ ಬೆಂಕಿಯ ಕಿಡಿ ಹಾರಬಹುದು. ಇನ್ನು ಅರಣ್ಯ ಇಲಾಖೆಯವರ ದರ್ಪದಿಂದ ನೊಂದ ಸ್ಥಳೀಯರು ಇಲಾಖೆಗೆ ಪಾಠ ಕಲಿಸಬೇಕೆಂದು ಬೆಂಕಿ ಹಾಕುವುದೂ ಇದೆಯಂತೆ.
ಒಟ್ಟಿನಲ್ಲಿ ಮಾನವ ಹಸ್ತಕ್ಷೇಪ ಇಲ್ಲದೆ ಕಾಡಿಗೆ ಬೆಂಕಿ ಬೀಳುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಎನ್ನುತ್ತಾರೆ ತಿಳಿದವರು. ಇದೇ ಹೊತ್ತಿನಲ್ಲಿ ಅರಣ್ಯಗಳ ಬಗ್ಗೆ ನಮ್ಮ ಚುನಾಯಿತ ಸರಕಾರಗಳ ಕಾಳಜಿಯಾದರೂ ಹೇಗಿದೆ? ಪಶ್ಚಿಮ ಘಟ್ಟ ಶ್ರೇಣಿಯ ಬಹುಭಾಗ ಇರುವುದು ಕರ್ನಾಟಕದಲ್ಲಿ. ಇಲ್ಲಿನ ಅರಣ್ಯಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಬೂದಿಯಾಗುತ್ತಿವೆ. ಈ ಬಗ್ಗೆ ನಿತ್ಯವೂ ಮಾಧ್ಯಮಗಳಲ್ಲಿ ಬೆಚ್ಚಿಬೀಳಿಸುವ ವರದಿಗಳು ಬರುತ್ತಿವೆ. ಆದರೆ ಇಡೀ ಸರಕಾರ ಚುನಾವಣಾ ಪ್ರಚಾರದಲ್ಲಿ ವ್ಯಸ್ತವಾಗಿದೆ. ಕಾಟಾಚಾರಕ್ಕಾದರೂ ಆಳುವವರಿಂದ ಈ ದುರಂತಗಳ ಬಗ್ಗೆ ಒಂದು ಮಾತು ಬಂದುದಿದೆಯೇ? ಬೆಂಕಿ ಆರಿಸುವ ಇಡೀ ಹೊಣೆಯನ್ನು ಇಲಾಖೆಯ ಹೆಗಲಿಗೆ ಹೊರಿಸಿ ಅವರು ಹಾಯಾದಂತಿದೆ. ಇಂತಹ ಹೊತ್ತಿನಲ್ಲಿ ಅರಣ್ಯದ ಸುತ್ತ ಇರುವ ಜನರೇ ಅದನ್ನು ಉಳಿಸುವ ಕೆಲಸ ಮಾಡಬೇಕಷ್ಟೇ. ಯಾಕೆಂದರೆ, ಸರಕಾರವನ್ನು ಅದರ ಇಲಾಖೆಯನ್ನು ನಂಬಿ ಕುಳಿತರೆ ಅಲ್ಲಿ ಅಂತಿಮವಾಗಿ ಏನೂ ಉಳಿಯದು. ಸರಕಾರಕ್ಕೆ ಅರಣ್ಯ ಬೇಕಾಗದು. ಆದರೆ ಜನರಿಗೆ ಅದು ಅನಿವಾರ್ಯ. ಜನರ ಬದುಕಿನ ಮೂಲಾಧಾರವೇ ಅದು.
ಶ್ರೀನಿವಾಸ ಕಾರ್ಕಳ
ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು.