Monday, June 17, 2024

ಸತ್ಯ | ನ್ಯಾಯ |ಧರ್ಮ

“ಕಂಡಿದ್ದು, ಕೇಳಿದ್ದು, ದಕ್ಕಿದ್ದು”

ಪಹಾಡ್-ಗಂಜ್ ಎಂದರೆ ಇಂದಿಗೂ ದಿಲ್ಲಿಯ ಬಹುತೇಕರಿಗೆ ಇಕ್ಕಟ್ಟು ಗಲ್ಲಿಗಳು, ಹತ್ತಾರು ಲಾಡ್ಜುಗಳು, ಅಸ್ತವ್ಯಸ್ತ ಎನ್ನಿಸುವ ಪರಿಸರ, ಬಣ್ಣಗೆಟ್ಟ ಗೋಡೆಗಳು… ಇತ್ಯಾದಿಗಳು ಮಾತ್ರ ಕಣ್ಣಮುಂದೆ ಬಂದು ನಿಲ್ಲುತ್ತವೆ. ಮುಖ್ಯರಸ್ತೆಯಾದರೆ ಚಲೇಗಾ ಭಾಯಿ, ಗಲ್ಲಿಯಾದರೆ ಟಾಟಾ-ಬೈಬೈ ಎಂದು ಕ್ಯಾಬ್ ಚಾಲಕರೂ ಇಲ್ಲಿ ಹಿಂದೇಟು ಹಾಕುತ್ತಾರೆ. ಈ ಪೂರ್ವಾಗ್ರಹಗಳನ್ನು ತೊಡೆದುಹಾಕಬೇಕು ಅಂತಾದಲ್ಲಿ ನಿಧಾನವಾಗಿ ಇಲ್ಲಿಯ ನೀರಿನಲ್ಲೂ ಇಳಿಯಬೇಕು. ಕಂಡುಕೇಳದ ಕತೆಗಳಿಗೆ ಎಡತಾಕಬೇಕು – ಪ್ರಸಾದ್‌ ನಾಯ್ಕ್‌, ದೆಹಲಿ

ನಮಗೂ ಪೂರ್ವಾಗ್ರಹಗಳಿಗೂ ಹಳೆಯ ನಂಟು.

ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ನಮ್ಮೆಲ್ಲರಿಗೆ ಬಹುತೇಕ ಎಲ್ಲದರ ಬಗ್ಗೆ ತರಹೇವಾರಿ ಪೂರ್ವಾಗ್ರಹಗಳಿವೆ. ಸರಳವಾಗಿ ಹೇಳುವುದಾದರೆ ಒಂದು ಸಂಗತಿಯ ಬಗ್ಗೆ ಎಲ್ಲೋ ಯಾರಿಂದಲೋ ಕೇಳಿದ್ದೋ, ಓದಿದ್ದೋ ನಮ್ಮ ಸುಪ್ತಪ್ರಜ್ಞೆಯಲ್ಲಿ ಭದ್ರವಾಗಿ ನೆಲೆಯೂರಿ, ಆ ಸಂಗತಿಯ ಬಗ್ಗೆ ನಂತರ ದಕ್ಕುವ ಅನುಭವಗಳೆಲ್ಲಾ ನಮ್ಮ ಆರಂಭಿಕ ಕಲ್ಪನೆಗಳ ತೆಳು ವಿಸ್ತರಣೆಯಷ್ಟೇ ಎಂಬಂತೆ ಭಾಸವಾಗುವ ಭ್ರಮೆ. ಇನ್ನು ಪೂರ್ವಾಗ್ರಹಗಳು ಸುರಕ್ಷಿತ ಮಿತಿಗಳನ್ನು ಮೀರಿದಾಗ ತಮಗೂ, ತಮ್ಮ ಸುತ್ತಮುತ್ತಲಿನವರಿಗೂ ಕಿರಿಕಿರಿಯಾಗುವಷ್ಟು ದೊಡ್ಡ ಪೆಡಂಭೂತವಾಗಿ ಬೆಳೆದು ಕೆಲವೊಮ್ಮೆ ಮಹಾಸಮಸ್ಯೆಯಾಗುವುದೂ ಇದೆ. ಇಸ್ಲಾಮೋಫೋಬಿಯಾ ಇದಕ್ಕೊಂದು ಒಳ್ಳೆಯ ನಿದರ್ಶನ. ನನಗೆ ಪೂರ್ವಾಗ್ರಹಗಳೇ ಇಲ್ಲ ಎನ್ನುವವನು ಒಂದೋ ಲೌಕಿಕ ಜಂಜಾಟಗಳಿಂದ ಕಳಚಿಕೊಂಡ ಸಂತನಾಗಿರುತ್ತಾನೆ. ಅಥವಾ ಅಪ್ಪಟ ಸುಳ್ಳುಗಾರನಾಗಿರುತ್ತಾನೆ. ಅಷ್ಟೇ.

ಇದು ನನ್ನದೇ ಸ್ನೇಹಿತರ ವಲಯದಲ್ಲಿ ನಡೆದ ಒಂದು ಘಟನೆ. ಅಂದು ಪುಟ್ಟ ಕವಿಗೋಷ್ಠಿಯ ಹೆಸರಿನಲ್ಲಿ ಎಲ್ಲರೂ ಸೇರಿದ್ದರು. ನಿಗದಿತ ಸಮಯಕ್ಕೆ ಕವಿತಾವಾಚನ, ಚರ್ಚೆಗಳು ಆರಂಭವಾಗಿದ್ದವು. ಈ ಮಧ್ಯೆ ತಮ್ಮ ಸರದಿ ಬಂದಾಗ ಯುವ ಬರಹಗಾರ್ತಿಯೊಬ್ಬರು ಎದ್ದು ನಿಂತು ಶಹರದಲ್ಲಿ ಕಳೆದ ತಮ್ಮ ಬಾಲ್ಯದ ಬಗ್ಗೆ ಕೆಲ ಸಾಲುಗಳನ್ನು ವಾಚಿಸಿದರು. ಅದೇನಾಯಿತೋ ಗೊತ್ತಿಲ್ಲ. ಈ ಯುವ ಲೇಖಕಿಯ ಮಾತುಗಳು ಮುಗಿದ ನಂತರ ಅಲ್ಲೇ ಉಪಸ್ಥಿತರಿದ್ದ ಹಿರಿಯ ಕವಯತ್ರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಶಹರದಲ್ಲಿ ಹುಟ್ಟಿ ಬೆಳೆದ ಮಕ್ಕಳು ಏನು ತಾನೇ ಬರೆಯಬಲ್ಲರು, ಅವರ ಬಾಲ್ಯಗಳು ಬಾಲ್ಯವೇ ಅಲ್ಲ ಎಂಬರ್ಥದಲ್ಲಿ ಕಹಿಯಾಗಿ ಏನೋ ಹೇಳಿದರಂತೆ. ಇದಾದ ನಂತರ ಹರಟೆಯಲ್ಲಿ ಕಳೆಯಬೇಕಾಗಿದ್ದ ಚಂದದ ಸಂಜೆಯೊಂದು ಕೆಲಹೊತ್ತು ಮಾತಿನ ಚಕಮಕಿಯಲ್ಲಿ ವ್ಯರ್ಥವಾಯಿತು ಎಂಬುದು ತಿಳಿದುಬಂದಿತ್ತು.

ನನ್ನ ಸಣ್ಣಕತೆಗಳನ್ನೋದಿಯೂ ಹಲವು ಮಂದಿ ಈ ಬಗ್ಗೆ ವಿಚಾರಿಸಿದ್ದುಂಟು. ಮಹಾನಗರಗಳ ಜೀವನಶೈಲಿ, ಅಲ್ಲಿನ ವಿಚಿತ್ರ ಘಟನೆಗಳು, ವಿಕ್ಷಿಪ್ತ ವಲಯಗಳು, ನಿಗೂಢ ಲೋಕ… ಹೀಗೆ ನನ್ನ ಬಹಳಷ್ಟು ಕತೆಗಳು ಈ ಲೋಕದ ಸುತ್ತಲೇ ಹೆಚ್ಚು ಗಿರಕಿ ಹೊಡೆಯುವುದರಿಂದ ಈ ಬಗೆಗಿನ ಹೆಚ್ಚಿನ ಪ್ರಶ್ನೆಗಳನ್ನು ನಾನು ಆಸಕ್ತ ಓದುಗರಿಂದ ಮತ್ತು ಕುತೂಹಲಿಗಳಿಂದ ಕೇಳಿದ್ದೇನೆ. ಸಾಮಾನ್ಯವಾಗಿ ನನ್ನ ಕತೆಗಳು ಮತ್ತು ಲೇಖನಗಳಲ್ಲಿ ಅಷ್ಟಾಗಿ ರೊಮ್ಯಾಂಟಿಕ್ ರೂಪದಲ್ಲಿ ಕಾಣಸಿಗದ ಬಾಲ್ಯದ ಬಗ್ಗೆಯೂ ಪ್ರಶ್ನೆಗಳು ಕೇಳಿಬರುತ್ತವೆ. ಅತ್ತ ಹಳ್ಳಿಯೂ ಅಲ್ಲದ, ಇತ್ತ ನಗರವೂ ಅಲ್ಲದ ಪುಟ್ಟ ಪಟ್ಟಣವೊಂದರಲ್ಲಿ ಬೆಳೆದವನು ನಾನು. ಹೀಗಾಗಿ ನನ್ನದು “ಸೆಮಿ ಅರ್ಬನ್ ಸಾಹಿತ್ಯ” ಎಂದು ನಾನು ನಗೆಯಾಡುವುದೂ ಇದೆ.

ಮತ್ತೆ ಪೂರ್ವಾಗ್ರಹಗಳ ಅಖಾಡಕ್ಕೆ ಮರಳಿ ಬರೋಣ. ಮಹಾನಗರಗಳ ಬಗೆಗಿರುವ ಜನಪ್ರಿಯ ಮತ್ತು ಕ್ಲೀಷೆಯೆಂಬಷ್ಟು ಸವಕಲಾಗಿರುವ ಪೂರ್ವಾಗ್ರಹವೆಂದರೆ ಇಲ್ಲಿರುವ ಬಹುತೇಕ ಯುವಜನತೆಗೆ ಪಬ್ಬು-ಕ್ಲಬ್ಬುಗಳೇ ಎರಡನೆಯ ಮನೆ ಎಂಬುದು. ಇತ್ತೀಚೆಗೆ ನಾರಾಯಣ ಮೂರ್ತಿಯವರು ಉದ್ಯೋಗಿಗಳು ವಾರಕ್ಕೆ ಎಪ್ಪತ್ತು ತಾಸುಗಳ ಕಾಲ ಕೆಲಸ ಮಾಡಬೇಕು ಅಂತೆಲ್ಲ ಹೇಳಿ ವಿವಾದದ ಧೂಳೆಬ್ಬಿಸಿದಾಗ, ಈ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಫೇಸ್-ಬುಕ್ ನಲ್ಲಿ ಪ್ರತಿಕ್ರಿಯೆಯನ್ನು ಬರೆದಿದ್ದ ವ್ಯಕ್ತಿಯೊಬ್ಬರು “ಈ ಮೆಟ್ರೋ ಸಿಟಿಗಳಲ್ಲಿರುವ ಯುವಕ-ಯುವತಿಯರಿಗೆ ಮೈಬಗ್ಗಿಸಿ ದುಡಿಯಿರಿ ಎಂದರೆ ಮೈಯೆಲ್ಲಾ ಮುಳ್ಳಾಗುತ್ತದೆ. ಆದರೆ ವೀಕೆಂಡಿನಲ್ಲಿ ಪಬ್ಬುಗಳಿಗೆ ಹೋಗಿ ಪಾರ್ಟಿ ಮಾಡುವುದನ್ನು ನಿಲ್ಲಿಸಿ ಎಂದರೆ ಇದೇ ಮಂದಿ ಮುಖ ಸಿಂಡರಿಸುತ್ತಾರೆ”, ಎಂದು ಅಸಮಾಧಾನವನ್ನು ತೋಡಿಕೊಂಡಿದ್ದರು. ನಮ್ಮ ಮಹಾನಗರಗಳು ಕುಡುಕರ ಗಡಂಗುಗಳಾಗುತ್ತಿವೆ ಎಂಬುದು ಅವರ ಪ್ರಾಮಾಣಿಕ ಕಾಳಜಿ. ಇದು ಒಂದು ಮಟ್ಟಿಗೆ ಸತ್ಯವೂ ಹೌದು ಅನ್ನೋಣ. ಹಾಗಂತ ಈ ಸ್ಥಿತಿಗೆ ಯಾರು ಕಾರಣ? ಹೆಚ್ಚು ದುಡಿದು, ಹೆಚ್ಚು ಗಳಿಸಿ, ವಿಪರೀತ ಸುಸ್ತಾದವರು ಸಂಜೆ ಪೆಗ್ಗು ಇಳಿಸಿ ಕುಣಿಯುವುದೋ? ಅಥವಾ ಮಹಾನಗರಗಳಲ್ಲಿ ಕೈತುಂಬಾ ದುಡಿಯುವ ಮಂದಿ “ಮೈಬಗ್ಗಿಸಿ ದುಡಿಯುವ” ವರ್ಗದಡಿ ಬರುವುದಿಲ್ಲವೋ? ಗೊತ್ತಾಗಲಿಲ್ಲ!

ಹೀಗೆ ಬರೆದವರು ಎತ್ತಿದ್ದ ಮತ್ತೊಂದು ದೊಡ್ಡ ಪ್ರಶ್ನೆಯೆಂದರೆ ಸೈನಿಕರು ಗಡಿಯಾರ ನೋಡಿ ಕೆಲಸ ಮಾಡುವುದಿಲ್ಲ ಎಂದಾದಾಗ, ರೈತನೊಬ್ಬ ಮೈಬಗ್ಗಿಸಿ ದುಡಿದರೂ ಈ ಬಗ್ಗೆ ದೂರುವುದಿಲ್ಲ ಎಂದಾದಾಗ, ಮಹಾನಗರಗಳಲ್ಲಿ ಫ್ಯಾನ್ಸಿ ಆಫೀಸುಗಳಲ್ಲಿ ಕೂರುವ, ಎ.ಸಿ ಹವೆಯನ್ನು ಹೀರುವ, ವಾರಾಂತ್ಯಗಳಲ್ಲಿ ಬಿಯರ್ ಅಭಿಷೇಕಗಳನ್ನು ತಮಗೆ ತಾವೇ ಮಾಡಿಸಿಕೊಳ್ಳುವ ನಿಮ್ಮಂತಹ ಕೋಣಗಳಿಗೇನು ಧಾಡಿ ಅನ್ನುವುದು. ಬಹುಷಃ ಅವರಿಗೆ ಗೊತ್ತಿಲ್ಲದ ಸಂಗತಿಯೇನೆಂದರೆ ಇದೇ ಎ.ಸಿ ರೂಮುಗಳಲ್ಲಿ ಕೂತು ಕೀಬೋರ್ಡ್ ಕುಟ್ಟುವ ಉದ್ಯೋಗಿಯೊಬ್ಬ, ಇವತ್ತಲ್ಲಾ ನಾಳೆ ಹಳ್ಳಿಗೆ ಮರಳಿ, ಅರ್ಧ ಎಕರೆ ಜಮೀನು ಖರೀದಿಸಿ, ಏನೋ ಬೆಳೆದು, ಎರಡ್ಹೊತ್ತಿನ ಗಂಜಿ ಉಂಡು ಸುಖವಾಗಿರುತ್ತೇನೆ ಎಂದು ಕನಸು ಕಾಣುತ್ತಿರುತ್ತಾನೆ. ಇತ್ತ ಹಳ್ಳಿಯ ಹುಡುಗನೊಬ್ಬ ದೂರದಲ್ಲಿರುವ ಗಾಜಿನ ಕಟ್ಟಡದೊಳಗಿನ ಎ.ಸಿ. ರೂಮಿನಲ್ಲಿ ಒಂದ್ಹತ್ತು ಸಾವಿರದ ನೌಕರಿ ಸಿಕ್ಕರೂ ಬದುಕು ಪಾವನವಾದೀತು ಎಂದು ಹಂಬಲಿಸುತ್ತಿರುತ್ತಾನೆ. ಈರ್ವರಿಗೂ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ! ಒಟ್ಟಿನಲ್ಲಿ ಮಹಾನಗರಗಳಲ್ಲಿ ದುಡಿದು ಕೈತುಂಬಾ ಗಳಿಸುವ ಸಾವಿರಾರು ಮಂದಿ ಉದ್ಯೋಗಿಗಳು ಪರಿಶ್ರಮಿಗಳೇ ಅಲ್ಲ ಅನ್ನುವುದು ಇಲ್ಲಿರುವ ಒಟ್ಟಾರೆ ಪೂರ್ವಾಗ್ರಹ.

ಇದು ನಿಜವೇ ಎಂಬುದನ್ನು ತಿಳಿದುಕೊಳ್ಳಲು ಇವರ ಬದುಕುಗಳಲ್ಲೊಮ್ಮೆ ಇಣುಕಿ ನೋಡಬೇಕು. ಕೆಲ ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಾಧ್ಯಮವೊಂದರಲ್ಲಿ “ಅರ್ಬನ್ ಪೂರ್” ಎಂಬ ಸಂಗತಿಯ ಬಗ್ಗೆ ಪ್ರಕಟವಾದ ಲೇಖನವೊಂದು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು. “ಅರ್ಬನ್ ಪೂರ್” ಎಂದರೆ “ನಗರದ ಬಡವ” ಎಂದರ್ಥ. ಮಹಾನಗರಗಳಲ್ಲಿರುವ ಯುವಕ-ಯುವತಿಯರು ತಿಂಗಳಿಗೆ ನಲವತ್ತು-ಐವತ್ತು ಸಾವಿರದಷ್ಟು ದುಡಿದರೂ ಅವರ ಕೈ ಖಾಲಿಯಾಗಿರುತ್ತದೆ ಎನ್ನುತ್ತದೆ ಈ ಲೇಖನ. ಇದಕ್ಕೆ ಮಹಾನಗರಗಳ ದುಬಾರಿ ಜೀವನಶೈಲಿಯೊಂದೇ ಕಾರಣವಲ್ಲ. ಬದಲಾಗಿ ಬ್ರ್ಯಾಂಡೆಡ್ ಉಡುಪುಗಳ ಖಯಾಲಿ, ಪಬ್ಬು-ಕ್ಲಬ್ಬುಗಳ ಶೋಕಿ, ಐಷಾರಾಮಿ ವಸ್ತುಗಳ (ವಾಹನ, ಎಲೆಕ್ಟ್ರಾನಿಕ್ ವಸ್ತುಗಳು) ಮೋಹ, ಅನಗತ್ಯ ಶಾಪಿಂಗ್ ಹುಚ್ಚು… ಇತ್ಯಾದಿ ಕಾರಣಗಳನ್ನೂ ಪಟ್ಟಿ ಮಾಡಲಾಗಿದೆ. ತಕ್ಕಮಟ್ಟಿಗಿದ್ದ ಮನೆಯನ್ನು ಬಿಕರಿಗಿಟ್ಟು ಶೋಕಿಯ ಕಾರನ್ನು ಕೊಂಡು, ಕೊನೆಗೆ ಕಾರನ್ನೇ ಮನೆ ಮಾಡಿಕೊಂಡವರ ಕತೆಗಳಿವು.

2010 ರ ಸುಮಾರಿನಲ್ಲಿ ಸುಭಾಷ್ ಕಪೂರ್ “ಫಸ್ ಗಯಾ ರೇ ಒಬಾಮಾ” ಅನ್ನುವ ವಿಡಂಬನಾತ್ಮಕ ಚಿತ್ರವೊಂದನ್ನು ನಿರ್ದೇಶಿಸಿ ತೆರೆಯ ಮೇಲೆ ತಂದಿದ್ದರು. ಈ ಹಿಂದಿ ಚಿತ್ರದ ನಾಯಕ ಓರ್ವ ಅನಿವಾಸಿ ಭಾರತೀಯ. ಹೆಸರಿಗೆ ಉದ್ಯಮಿ. ಕೆಲದಿನಗಳ ಕಾಲ ತನ್ನ ಕರ್ಮಭೂಮಿಯಾದ ಅಮೆರಿಕಾದಿಂದ ಮರಳಿ, ಜನ್ಮಭೂಮಿ ಭಾರತದಲ್ಲಿರುವ ತನ್ನ ಕುಟುಂಬದ ಮನೆಗೆ ಬಂದಿರುವವನು. ಇತ್ತ ಅನಿವಾಸಿ ಭಾರತೀಯನೆಂದರೆ ಸಹಜವಾಗಿ ಶ್ರೀಮಂತನಾಗಿರುತ್ತಾನೆ ಎಂದು ಲೆಕ್ಕ ಹಾಕುವ ಕೆಲ ಧೂರ್ತರು ದುಡ್ಡಿನಾಸೆಗೆ ಬಿದ್ದು ಅವನನ್ನು ಅಪಹರಿಸುತ್ತಾರೆ. ಕಿಡ್ನಾಪ್ ಆಗಿರುವ ಈತನ ಬಿಡುಗಡೆಗಾಗಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆಯಿಟ್ಟು ಅದರಲ್ಲಿ ಯಶಸ್ವಿಯಾದರೆ ಬದುಕನ್ನು ಆರಾಮಾಗಿ ಕಳೆಯಬಹುದು ಎಂಬುದು ಅವರ ಲೆಕ್ಕಾಚಾರ.

ಆದರೆ ನೈಜಸ್ಥಿತಿ ಬೇರೆಯೇ ಆಗಿರುತ್ತದೆ. ಅಮೆರಿಕದಲ್ಲುಂಟಾದ ಆರ್ಥಿಕ ಹಿಂಜರಿತದಿಂದಾಗಿ ನಮ್ಮ ಎನ್.ಆರ್.ಐ ಉದ್ಯಮಿ ಆಗಲೇ ದೊಡ್ಡ ಹೊಡೆತವನ್ನು ತಿಂದಿರುತ್ತಾನೆ.  ದಿವಾಳಿಯಾಗುವಷ್ಟರ ಮಟ್ಟಿಗೆ ಕಾಸು ಸೋರಿಹೋಗಿರುತ್ತದೆ. ಎಲ್ಲಿಂದಾದರೂ ನಾಲ್ಕು ಕಾಸು ಒಟ್ಟುಗೂಡಿಸಿ ಹಳ್ಳಿಯಲ್ಲಿ ತಣ್ಣಗೆ ಬದುಕಿದರೆ ಸಾಕಪ್ಪ ಎಂಬ ರಹಸ್ಯ ಯೋಜನೆ ಅವನದ್ದಾಗಿರುತ್ತದೆ. ಆದರೆ ಎನ್.ಆರ್.ಐ ಲೇಬಲ್ಲಿನ ಹಿಂದಿರುವ ಇಷ್ಟೆಲ್ಲಾ ಕರಾಳ ಕತೆಗಳು ಉಳಿದವರಿಗೆ ಹೇಗೆ ಗೊತ್ತಾಗಬೇಕು? ಮುಂದೆ ಅವನನ್ನು ಅಪಹರಿಸಿದ ಧೂರ್ತರಿಗೆ ಈ ಸತ್ಯಸಂಗತಿಗಳೆಲ್ಲ ತಿಳಿದಾಗ ಕಿಡ್ನಾಪಿಂಗ್ ಯೋಜನೆಯು ಹೇಗೆಲ್ಲಾ ದಿಕ್ಕು ತಪ್ಪುತ್ತದೆ ಎಂಬುದನ್ನು ತಮಾಷೆಯಾಗಿಯೂ, ಅರ್ಥಪೂರ್ಣವಾಗಿಯೂ ತೋರಿಸುವ ಚಿತ್ರವಿದು.    

ಮಹಾನಗರಗಳ ಮತ್ತು ಇಲ್ಲಿರುವ ಮಂದಿಯ ಬಗೆಗಿರುವ ಹಲವು ಪೂರ್ವಾಗ್ರಹಗಳಲ್ಲಿ ಇದೊಂದು ಕಿರುನೋಟ ಮಾತ್ರ. ಹಾಗಂತ ಇಲ್ಲಿರುವವರಿಗೆ ಯಾವುದೇ ಪೂರ್ವಾಗ್ರಹಗಳಿರುವುದಿಲ್ಲವೋ? ಹಾಗೇನಿಲ್ಲ. ಉದಾಹರಣೆಗೆ ಇಲ್ಲಿರುವ ವಿದೇಶೀಯರ ಬಗ್ಗೆ ಇವರೊಂದಿಗೆ ಹಣಕಾಸಿನ ವ್ಯವಹಾರ ಮಾಡುವ ಎಲ್ಲರಿಗೂ ಒಂದು ಕಣ್ಣಿರುತ್ತದೆ. ಅದು ತೀರಾ ಆಟೋಚಾಲಕರಿಂದ ಹಿಡಿದು, ಹವಾಲಾ ದಂಧೆ ಮಾಡುವ ತಿಮಿಂಗಿಲಗಳವರೆಗೂ ಸತ್ಯ. ಎಲ್ಲರಿಗೂ ಈ ಬಿಳಿಯರ ಜೇಬಿನಲ್ಲಿರುವ ಗರಿಗರಿ ಡಾಲರ್ ನೋಟುಗಳ ಮೇಲೊಂದು ಕಣ್ಣು.

ದುರಾದೃಷ್ಟವಶಾತ್ ಹಲವು ಮುಗ್ಧ ವಿದೇಶಿ ಪ್ರವಾಸಿಗರು ಈ ಜಾಲಕ್ಕೆ ಸುಲಭವಾಗಿ ಬಲಿಯಾಗುತ್ತಾರೆ ಕೂಡ. ದೆಹಲಿ, ಮುಂಬೈ ಸೇರಿದಂತೆ ಹಲವು ಶಹರಗಳಲ್ಲಿ ಅಲೆದಾಡುತ್ತಿದ್ದ ಕುಖ್ಯಾತ ಅಪರಾಧಿ, ಬಿಕಿನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್ ಇಂತಹ ಪ್ರವಾಸಿಗಳನ್ನೇ ವಂಚಿಸುತ್ತಿದ್ದ. ಇವನು ರೂಪದಲ್ಲಿ ಸುರಸುಂದರಾಂಗ. ಮಾತು ಶುರುಮಾಡಿದನೆಂದರೆ ಸಮ್ಮೋಹನಾ ಮಾಯ್ಕಾರ. ಚಾರ್ಲ್ಸ್ ಹಲವು ಭಾಷೆಗಳನ್ನು ಅರಳು ಹುರಿದಂತೆ ನಿರರ್ಗಳವಾಗಿ ಮಾತಾಡುತ್ತಿದ್ದ. ಕದ್ದಿರುವ ಪಾಸ್ಪೋರ್ಟುಗಳನ್ನು ಮನಬಂದಂತೆ ಬಳಸುತ್ತಾ, ತಾನು ಅವರೇ ಎಂದು ಪೋಸು ಕೊಡುತ್ತಾ ಊಸರವಳ್ಳಿಯಂತೆ ಬಣ್ಣ ಬದಲಿಸುತ್ತಿದ್ದ. ಅದ್ಯಾವ ಸಂಕೋಲೆಗಳನ್ನು ಹಾಕಿದರೂ ಹೌದಿನಿ ಜಾದೂಗಾರನಂತೆ ಹೇಗೋ ನುಸುಳಿ ಪಾರಾಗುತ್ತಿದ್ದ. ಇವೆಲ್ಲ ಕುಖ್ಯಾತ ಹಿನ್ನೆಲೆಯಿಂದಾಗಿ ಜಗತ್ತು ಅವನನ್ನು “ವಿಷಸರ್ಪ” ಎಂದು ಕರೆಯಿತು. ಈ ಪಯಣದಲ್ಲಿ ಅವನು ಕೋಟಿಗಟ್ಟಲೆ ಗಳಿಸಿದ್ದೂ ಇದೆ, ಏಕಾಏಕಿ ಕೈ ಬರಿದಾಗಿದ್ದೂ ಆಗಿದೆ. ಅಂತೂ ಈ ರೋಚಕತೆಯ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ದರೋಡೆಗಳಾದವು. ಹಲವು ಬರ್ಬರ ಕೊಲೆಗಳೂ ಆದವು. ಎಲ್ಲವೂ ವಿದೇಶಿಗರ ಕೈಯಲ್ಲಿದ್ದ ಡಾಲರುಗಳು ಮತ್ತು ಪಾಸ್-ಪೋರ್ಟುಗಳಿಗಾಗಿ. 

ದಿಲ್ಲಿಯ ಪಹಾಡ್-ಗಂಜ್ ನ ಒಂದು ನೋಟ

“ಈ ದಿಲ್ಲಿಯಂಥಾ ದಿಲ್ಲಿಯಲ್ಲಿ ನೀನು ಎಲ್ಲೂ ಇರಬಹುದು. ಆದರೆ ಪಹಾಡ್-ಗಂಜ್ ಬಗ್ಗೆ ಅದೇನು ವಿಶೇಷ ಮೋಹ?”, ಎಂದು ಓರ್ವ ಅಮೆರಿಕನ್ ಯುವಕನ ಬಳಿ ಒಮ್ಮೆ ಕೇಳಿದ್ದೆ. ಅವನ ಹೆಸರು ಪೀಟರ್. ಜೀವನೋಪಾಯಕ್ಕಾಗಿ ಹಲವು ಕ್ಷೇತ್ರಗಳಲ್ಲಿ ಕೈಯಾಡಿಸಿದ್ದಾನೆ. ಹೇಳಿಕೊಳ್ಳಲು ಪಾರ್ಟ್ ಟೈಮ್ ವಿದ್ಯಾರ್ಥಿ ಮತ್ತು ಪ್ರವಾಸಿ. ವರ್ಷಕ್ಕೊಂದಿಷ್ಟು ಕಾಸು ಉಳಿಸಿ ಪ್ರವಾಸ ಮಾಡುವುದು ಆತನ ಖಯಾಲಿಯಂತೆ. “ನಾನು ಪ್ರತೀಬಾರಿ ದಿಲ್ಲಿಗೆ ಬಂದಾಗಲೂ ಇಲ್ಲೇ ಉಳಿದುಕೊಳ್ಳುವುದು. ಬನಾರಸ್ಸಿಗೋ, ಕೋಲ್ಕತ್ತಾಗೋ ಹೋಗೋಣ ಅಂದರೆ ಹತ್ತಿರದಲ್ಲೇ ರೈಲ್ವೆ ಸ್ಟೇಷನ್ ಇದೆ. ಇಲ್ಲಿ ಲಾಡ್ಜುಗಳು ಅಗ್ಗ. ಬಿಯರಿಗೂ ಬರಗಾಲವಿಲ್ಲ. ಇನ್ನು ನಿನ್ನಂಥವರು ಮಾತಾಡಲು ಸಿಕ್ಕರೆ ಹರಟೆಯೂ ಆಯಿತು. ಬದುಕಿಗೆ ಇನ್ನೇನು ಬೇಕು ಹೇಳು?”, ಎಂದು ಪ್ರಶ್ನೆಯ ರೂಪದಲ್ಲೇ ಪೀಟರ್ ಉತ್ತರಿಸುತ್ತಿದ್ದರೆ ನಾನು ಸುಮ್ಮನೆ ನಕ್ಕಿದ್ದೆ.

ಆದರೆ ದಿಲ್ಲಿಯಲ್ಲೇ ಇರುವ ಬಹಳಷ್ಟು ಮಂದಿಗೆ ಪಹಾಡ್-ಗಂಜ್ ಎಂದರೆ ಹತ್ತರಲ್ಲೊಂದು ಪ್ರದೇಶವಷ್ಟೇ. ಪಹಾಡ್-ಗಂಜ್ ಎಂದರೆ ಇಂದಿಗೂ ದಿಲ್ಲಿಯ ಬಹುತೇಕರಿಗೆ ಇಕ್ಕಟ್ಟು ಗಲ್ಲಿಗಳು, ಹತ್ತಾರು ಲಾಡ್ಜುಗಳು, ಅಸ್ತವ್ಯಸ್ತ ಎನ್ನಿಸುವ ಪರಿಸರ, ಬಣ್ಣಗೆಟ್ಟ ಗೋಡೆಗಳು… ಇತ್ಯಾದಿಗಳು ಮಾತ್ರ ಕಣ್ಣಮುಂದೆ ಬಂದು ನಿಲ್ಲುತ್ತವೆ. ಮುಖ್ಯರಸ್ತೆಯಾದರೆ ಚಲೇಗಾ ಭಾಯಿ, ಗಲ್ಲಿಯಾದರೆ ಟಾಟಾ-ಬೈಬೈ ಎಂದು ಕ್ಯಾಬ್ ಚಾಲಕರೂ ಇಲ್ಲಿ ಹಿಂದೇಟು ಹಾಕುತ್ತಾರೆ. ಈ ಪೂರ್ವಾಗ್ರಹಗಳನ್ನು ತೊಡೆದುಹಾಕಬೇಕು ಅಂತಾದಲ್ಲಿ ನಿಧಾನವಾಗಿ ಇಲ್ಲಿಯ ನೀರಿನಲ್ಲೂ ಇಳಿಯಬೇಕು. ಕಂಡುಕೇಳದ ಕತೆಗಳಿಗೆ ಎಡತಾಕಬೇಕು.

ಹೀಗೆ ಮಹಾನಗರವೊಂದನ್ನು ಇಷ್ಟೇ ಅಂದುಕೊಂಡಾಗಲೆಲ್ಲಾ ಮತ್ಯಾವುದೋ ಹೊಸ ಅವತಾರವೊಂದು ಥಟ್ಟನೆ ಕಣ್ಣಮುಂದೆ ಬಂದು ನಿಲ್ಲುತ್ತದೆ. ವಿಶ್ವರೂಪದ ಅಣುಭಾಗವೊಂದರ ದರ್ಶನ ಮಾತ್ರವು ನಮ್ಮೊಳಗಿರುವ ದೀರ್ಘಕಾಲದ ಪೂರ್ವಾಗ್ರಹವೊಂದನ್ನು ನುಚ್ಚುನೂರು ಮಾಡಿಬಿಡುತ್ತದೆ. ಇಂಥದ್ದೊಂದು ಅಗಾಧತೆ ಮತ್ತು ಚಂಚಲತೆಯೇ ನಗರಗಳನ್ನು ಮುಗಿಯದ ಕುತೂಹಲಗಳ ಆಗರವನ್ನಾಗಿಸುತ್ತಿದೆಯೇ? ಇರಬಹುದೇನೋ! ‌

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

ಹಿಂದಿನ ಅಂಕಣಗಳನ್ನೂ ಓದಿ-

ಮಹಾನಗರವೊಂದರ ಜೀವನ ಕಥನ https://peepalmedia.com/a-life-story-of-a-metropolis/

ಬದುಕಿನ ಕೊಲಾಜ್ ಚಿತ್ರಪಟಗಳು” https://peepalmedia.com/collage-pictures-of-life/

“ನೆಟ್ವರ್ಕಿಂಗ್ ಎಂಬ ನವೀನ ತಲಾಶೆ” https://peepalmedia.com/the-innovative-quest-of-networking/

ಮಹಾನಗರ Vs. ಮಹತ್ವಾಕಾಂಕ್ಷೆ”https://peepalmedia.com/metropolis-city-vs-ambition/

“ಒಂದು ಮಿನಿಮಳೆಯ ಕಥೆ”https://peepalmedia.com/the-story-of-a-mini-rain/

“ಕೂತು ಕೂತು ಕೆಟ್ಟವರು”https://peepalmedia.com/kootu-kootu-kettavaru/

“ಬೆಡ್ರೂಮಿನಿಂದ ಬೋರ್ಡ್ ರೂಮಿನವರೆಗೆ”https://peepalmedia.com/from-bedroom-to-boardroom/

Related Articles

ಇತ್ತೀಚಿನ ಸುದ್ದಿಗಳು