Friday, April 26, 2024

ಸತ್ಯ | ನ್ಯಾಯ |ಧರ್ಮ

ಧಾರವಾಡ ಲೋಕಸಭಾ ಕ್ಷೇತ್ರ: ಪ್ರಹ್ಲಾದ್ ಜೋಶಿ ಬದಲಾವಣೆಗೆ ಮಠಾಧೀಶರ ಒತ್ತಾಯ

ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಬಿಜೆಪಿಯಿಂದ
ಬದಲಿ ಅಭ್ಯರ್ಥಿಯನ್ನು ಘೋಷಿಸಬೇಕು. ಮಾರ್ಚ್ 31ರ ಒಳಗೆ ಪಕ್ಷವು ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ ಏ. 2ರಂದು ಅಂತಿಮ ನಿರ್ಧಾರ ಮಾಡಲು ನಿರ್ಧರಿಸಲಾಗಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಮೂರುಸಾವಿರ ಮಠದಲ್ಲಿ ಇಂದು ನಡೆದ ಮಠಾಧೀಶರ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ದಿನ ನೂರಾರು ಮಠಾಧೀಶರು ಸಭೆಯಲ್ಲಿ ಪಾಲ್ಗೊಂಡಿದ್ದು, ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಧಾರವಾಡ ಲೋಕಸಭೆ ಟಿಕೆಟ್ ಬೇರೆಯವರಿಗೆ ನೀಡಬೇಕು. ಈ ಕುರಿತು ನಾವು ಹೈಕಮಾಂಡ್‌ಗೆ ತಿಳಿಸುತ್ತೇವೆ ಎಂದು ದಿಂಗಾಲೇಶ್ವರ ಹೇಳಿದರು.

ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಲಿಂಗಾಯತರಿದ್ದು ಜೋಷಿ ಕಳೆದ ಮೂರು ವರ್ಷಗಳಿಂದ ಲಿಂಗಾಯತರಿಗೆ ನೋವಾಗುವಂತೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ನಮಗೆ ಬಹಳ ನೋವಾಗಿದ್ದು ಅವರನ್ನು ಬದಲಾಯಿಸುವಂತೆ ನಾವು ಪಕ್ಷವನ್ನು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಅವರು ಅಖಾಡಕ್ಕಿಳಿಯಲು ಸಿದ್ಧರಿದ್ದು, ಬೇಕಾದರೆ ಲೋಕಸಭೆ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಲೂ ಸಿದ್ಧ ಎಂದರು. ಸಭೆಯಲ್ಲಿ ಸಮಾಜದ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.

ಬಿಜೆಪಿಯಲ್ಲಿ ಮೊದಲಿನಿಂದಲೂ ಬ್ರಾಹ್ಮಣ-ಲಿಂಗಾಯತ ತಿಕ್ಕಾಟ ನಡೆಯುತ್ತಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣ ಗುಂಪಿನ ಕೈ ಮೇಲಾಗಿ ಯಡಿಯೂರಪ್ಪ ಮುಂತಾದ ಲಿಂಗಾಯತ ನಾಯಕರನ್ನು ಮೂಲೆ ಗುಂಪು ಮಾಡಲಾಗಿತ್ತು. ಮತ್ತು ಈ ಮೂಲಕ ಆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತ್ತು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ವರ್ಗದ ಕೈ ಪಕ್ಷದಲ್ಲಿ ಬಲಗೊಂಡಂತೆ ಕಾಣುತ್ತಿದ್ದು ಯಡಿಯೂರುಪ್ಪ ಮತ್ತು ಸಂಗಡಿಗರು ಮಾಡು ಇಲ್ಲವೇ ಮಡಿ ಎನ್ನುವಂತೆ ಚುನಾವಣೆಗೆ ಓಡಾಡುತ್ತಾ ಹೋರಾಡುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು