ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಹೂಳುವಿಕೆ ಪ್ರಕರಣದ ತನಿಖೆ ಮುಂದುವರಿದಿದ್ದರೂ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟೇಶನ್ ಸೊಸೈಟಿ ಆಫ್ ಅಮೆರಿಕ ವರ್ಲ್ಡ್ ಕಾಂಗ್ರೆಸ್ 2025’ರಲ್ಲಿ ಭಾಗವಹಿಸಲು ಅಮೆರಿಕಕ್ಕೆ ಪ್ರಯಾಣಿಸಿದ್ದಾರೆ.
ಪ್ರಸ್ತುತ ಪೊಲೀಸ್ ಉಪ ಮಹಾನಿರೀಕ್ಷಕ (ನೇಮಕಾತಿ) ಹುದ್ದೆಯಲ್ಲಿರುವ ಎಂ.ಎನ್. ಅನುಚೇತ್ ಅವರನ್ನು, ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಣಬ್ ಮೊಹಂತಿ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಮೇಲ್ವಿಚಾರಣೆಗೆ ನೇಮಿಸಲಾಗಿದೆ. ಅನುಚೇತ್ ಈ ಹಿಂದೆ ಬೆಂಗಳೂರಿನ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ (ಡಿಪಿಎಆರ್)ಯ ಆಗಸ್ಟ್ 1ರ ಪತ್ರದ ಪ್ರಕಾರ, ಆಗಸ್ಟ್ 19ರಿಂದ 31ರವರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಚೇತ್ ಅವರಿಗೆ ರಜೆ ಮಂಜೂರು ಮಾಡಲಾಗಿದೆ. ಇದು ಜುಲೈ 16ರಂದು ಅವರು ನೀಡಿದ್ದ ರಜಾ ಅರ್ಜಿ ಮನವಿಗೆ ಪ್ರತಿಯಾಗಿ ನೀಡಿದ ಅನುಮತಿ.
ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ ಅಕ್ರಮ ಹೆಣ ಹೂಳುವಿಕೆ ಆರೋಪಗಳ ಬಗ್ಗೆ ತನಿಖೆ ನಡೆಸಲು ಜುಲೈ 19ರಂದು ಎಸ್‌ಐಟಿ ರಚನೆಯಾಗುವ ಮುನ್ನವೇ ಅನುಚೇತ್ ಅನುಮತಿ ಕೋರಿದ್ದರು ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ. ಆರೋಪ ಮಾಡಿದ್ದ ದೂರುದಾರ-ಸಾಕ್ಷಿಯನ್ನು ಸುಳ್ಳು ಸಾಕ್ಷ್ಯ ನೀಡಿದ ಆರೋಪದ ಮೇಲೆ ಎಸ್‌ಐಟಿ ಬಂಧಿಸಿದೆ ಮತ್ತು ಸದ್ಯ ಎಸ್‌ಐಟಿ ವಶದಲ್ಲಿದ್ದಾರೆ.