ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಹೂಳುವಿಕೆ ಪ್ರಕರಣವನ್ನು ತನಿಖೆ ಮಾಡುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯನ್ನು ತೀವ್ರಗೊಳಿಸಿದ್ದು, ಮಂಗಳವಾರ ಉಜಿರೆ ಸಮೀಪದ ಹೋರಾಟಗಾರ ಮಹೇಶ್ ಶೆಟ್ಟಿ ತಿಮ್ಮರೋಡಿ ಅವರ ಮನೆಗೆ ಭೇಟಿ ನೀಡಿದೆ.
ಎಸ್‌ಐಟಿ ಸಿಬ್ಬಂದಿ, ಎಫ್‌ಎಸ್‌ಎಲ್ ಸದಸ್ಯರು ಮತ್ತು ದೂರುದಾರ-ಸಾಕ್ಷಿಗಳನ್ನೊಳಗೊಂಡ ತಂಡವು ತಿಮ್ಮರೋಡಿ ಅವರ ಮನೆಗೆ ಭೇಟಿ ನೀಡಿತು. ದೂರುದಾರ-ಸಾಕ್ಷಿಯ ವಿಚಾರಣೆ ವೇಳೆ ದೊರೆತ ಮಾಹಿತಿಯ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ತಿಮ್ಮರೋಡಿ ಅವರ ಮನೆಯಲ್ಲಿ ಮಹಜರು ನಡೆಸಲಿದ್ದಾರೆ.
ಭದ್ರತೆಯನ್ನು ಹೆಚ್ಚಿಸಲಾಗಿದ್ದು, ತಿಮ್ಮರೋಡಿ ಅವರ ಮನೆಯ ಬಳಿ ಕೆಎಸ್‌ಆರ್‌ಪಿ ಸಿಬ್ಬಂದಿ ಸೇರಿದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ತಿಮರೋಡಿಯವರ ಬಳಿ ಇರುವ ಮೊಬೈಲ್ ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ಇದೆ ಎಂದು ಚಿನ್ನಯ್ಯ ಹೇಳಿದ್ದು ಈ ಸಂಬಂಧ ಮನೆಯಿಡೀ ಎಸ್ ಐಟಿ ತಂಡ ಶೋಧ ನಡೆಸುತ್ತಿದೆ. ಬೆಳ್ತಂಗಡಿ ನ್ಯಾಯಾಧೀಶರಿಂದ ಸರ್ಚ್ ವಾರೆಂಟ್ ಪಡೆದುಕೊಂಡಿರುವ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಜೊತೆಯಲ್ಲಿ ಕರೆದುಕೊಂಡು ಬೆಳ್ತಂಗಡಿಯ ಉಜಿರೆಯಲ್ಲಿರುವ ತಿಮರೋಡಿ ಮನೆಗೆ ತೆರಳಿದ್ದು, ಮಹಜರು ನಡೆಸುತ್ತಿದ್ದಾರೆ.