ಹುಬ್ಬಳ್ಳಿ – ಧಾರವಾಡ : ಸೆಪ್ಟಂಬರ್ 26 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹುಬ್ಬಳ್ಳಿ ಧಾರವಾಡ ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಈರೇಶ್ ಅಂಚಟಗೇರಿ ರವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ಈರೇಶ್ ಅಂಚಟಗೇರಿರವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟಂಬರ್ 20ಕ್ಕೆ ಹುಬ್ಬಳ್ಳಿ ಧಾರವಾಡ ನಗರಕ್ಕೆ ಭೇಟಿ ನೀಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಜಿಮ್‌ಖಾನಾ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದ್ದು ದ್ರೌಪದಿ ಮುರ್ಮು ಅವರು ನಮ್ಮ ಹುಬ್ಬಳ್ಳಿ ಧಾರವಾಡಕ್ಕೆ ಬರುಲಿರುವ ಮೂರನೇ ರಾಷ್ಟ್ರಪತಿಗಳಾಗಿದ್ದಾರೆ. ಈ ಹಿಂದೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಡಾ. ಎ. ಪಿಜೆ ಅಬ್ದುಲ್ ಕಲಾಂ ಭೇಟಿ ನೀಡಿದ್ದರುʼ ಎಂದು ಹೇಳಿದರು.
ʼರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಐದು ಸಾವಿರ ಜನರು ಮತ್ತು ಐನೂರು ಪೌರ ಕಾರ್ಮಿಕರಿಗೆ ಹಾಜರಾಗಲು ಅವಕಾಶ ಮಾಡಿಕೊಡಲಾಗಿದೆ. ಸಮಾರಂಭದಲ್ಲಿ ರಾಷ್ಟ್ರಪತಿಗಳಿಗೆ ನೆನಪಿನ ಕಾಣಿಕೆಯಾಗಿ ಸಿದ್ಧಾರೂಡರ 1.5ಕೆಜಿ ಬೆಳ್ಳಿಯ ಮೂರ್ತಿಯನ್ನು ನೀಡಲಿದ್ದು, ಧಾರವಾಡ ಮಹಾನಗರ ಪಾಲಿಕೆಯಿಂದ ಪೌರಸನ್ಮಾನವನ್ನು ಸಲ್ಲಿಸಿ ಅವರನ್ನು ಗೌರವಿಸಲಾಗುತ್ತಿದೆ. ಕಾರ್ಯಕ್ರಮ ಮುಗಿದ ನಂತರ ದ್ರೌಪದಿ ಮುರ್ಮು ಅವರು ಧಾರವಾಡದ ಐಐಟಿಗೆ ಭೇಟಿ ನೀಡಲಿದ್ದು ಸುಮಾರು 400 ವಿದ್ಯಾರ್ಥಿಗಳ ಜೊತೆಗೆ ಸಂವಹನ ನಡೆಸಲಿದ್ದಾರೆʼ ಎನ್ನುವ ಮಾಹಿತಿ ನೀಡಿದ್ದಾರೆ.