Home ರಾಜ್ಯ ಕಲ್ಬುರ್ಗಿ ಪ್ರತ್ಯೇಕ ಸಚಿವಾಲಯ-ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ | ಬೆಳೆಹಾನಿ- ಜಂಟಿಸಮೀಕ್ಷೆಗೆ ಸೂಚನೆ-ವರದಿ ನಂತರ ಪರಿಹಾರ...

ಪ್ರತ್ಯೇಕ ಸಚಿವಾಲಯ-ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ | ಬೆಳೆಹಾನಿ- ಜಂಟಿಸಮೀಕ್ಷೆಗೆ ಸೂಚನೆ-ವರದಿ ನಂತರ ಪರಿಹಾರ ವಿತರಣೆ-ಮುಖ್ಯಮಂತ್ರಿ ಸಿದ್ದರಾಮಯ್ಯ

0

ಕಲಬುರಗಿ,ಸೆಪ್ಟೆಂಬರ್ 17: ರಾಜ್ಯದಲ್ಲಿ ಬೆಳೆಹಾನಿಯಾಗಿರುವುದಕ್ಕೆ ಪರಿಹಾರ ನೀಡಲು ಅನುಕೂಲವಾಗುವಂತೆ ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದ್ದು, ವರದಿ ಬಂದ ನಂತರ ಬೆಳೆಪರಿಹಾರವನ್ನು ರೈತರಿಗೆ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಇನ್ನೊಂದು ವಾರದಲ್ಲಿ ಸಮೀಕ್ಷಾ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದ್ದು, ನಂತರ ಬೆಳೆಹಾನಿ ಪರಿಹಾರ ವಿತರಿಸಲಾಗುವುದು. ರಾಜ್ಯದಲ್ಲಿ ಒಟ್ಟಾರೆ ಈ ಬಾರಿ ಅದೃಷ್ಟವಶಾತ್ ವಾಡಿಕೆಗಿಂತ ಶೇ.4 ರಷ್ಟು ಮಳೆ ಜಾಸ್ತಿಯಾಗಿದೆ. ಬೀದರ್, ಕಲ್ಬುರ್ಗಿ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಬೆಳೆ ಹಾನಿ ಹೆಚ್ಚು ಸಂಭವಿಸಿದ್ದು, ಬೆಳೆ ಪರಿಹಾರ ವಿತರಿಸಲಾಗುವುದು. 2024-25 ನೇ ಸಾಲಿನಲ್ಲಿ 656 ಕೋಟಿ ರೂ. ಬೆಳೆವಿಮೆ ಪಾವತಿಯಾಗಿದೆ. ಬೆಳೆವಿಮೆ ಮಾಡಿಕೊಳ್ಳದ ರೈತರಿಗೆ ಪರಿಹಾರ ನೀಡುವ ಬಗ್ಗೆ ಪರಿಶೀಲಿಸಿ ತೀರ್ಮಾನಿಸಲಾಗುವುದು ಹಾಗೂ ರೈತರ ಬೇಡಿಕೆಯಂತೆ ಸಾಲಮನ್ನಾ ಮಾಡುವ ಬಗ್ಗೆ ಪರೀಶೀಲಿಸಲಾಗುವುದು ಎಂದರು.

ಬ್ಯಾಂಕ್ ದರೋಡೆ-ಮುಂಜಾಗ್ರತಾ ಕ್ರಮಕ್ಕಾಗಿ ಪೊಲೀಸರಿಗೆ ಸೂಚನೆ
ವಿಜಯಪುರದಲ್ಲಿ ಎಸ್.ಬಿ.ಐ ಬ್ಯಾಂಕ್ ದರೋಡೆಯಾಗಿರುವ ಬಗ್ಗೆ ಹಾಗೂ ಬ್ಯಾಂಕ್ ನ ಸುರಕ್ಷತೆ ಬಗ್ಗೆ ಪ್ರತಿಕ್ರಿಯೆ ನೀಡಿ, ಘಟನೆಗೆ ಬಳಸಿದ ಕಾರು ಪತ್ತೆಯಾಗಿದ್ದು, ಕಳ್ಳತನದಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಪತ್ತೆಹಚ್ಚುವಂತೆ ಜಿಲ್ಲಾ ಎಸ್ ಪಿ ಗೆ ಸೂಚಿಸಲಾಗಿದೆ ಹಾಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಜಾಗೃತರಾಗಿರುವಂತೆ ತಿಳಿಸಲು ಸೂಚಿಸಲಾಗಿದೆ. ಬ್ಯಾಂಕಿಗೆ ಸುರಕ್ಷತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು ಆಯಾ ಬ್ಯಾಂಕಿನ ಜವಾಬ್ದಾರಿಯಾಗಿರುತ್ತದೆ. ಪೊಲೀಸರು ಬ್ಯಾಂಕಿಗೆ ಸುರಕ್ಷತೆ ನೀಡುತ್ತಾರೆ. ಇಂತಹ ಪ್ರಕರಣಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.

ಪ್ರವಾಹಕ್ಕೆ ಪರಿಹಾರ
ಕಳೆದ ವರ್ಷ ರಾಜ್ಯದಲ್ಲಿ ಪ್ರವಾಹಪರಿಸ್ಥಿತಿಯ ಬಗ್ಗೆ ಕೇಂದ್ರಕ್ಕೆ ತಡವಾಗಿ ವರದಿ ನೀಡಲಾಗಿದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಪ್ರವಾಹಪರಿಸ್ಥಿತಿಯ ವರದಿಯನ್ನು ಕೇಂದ್ರಕ್ಕೆ ಸಕಾಲದಲ್ಲಿಯೇ ನೀಡಲಾಗಿತ್ತು. ಆದರೆ ಕೇಂದ್ರಸರ್ಕಾರವೇ ಈ ಬಗ್ಗೆ ನಿಧಾನ ನಿಲುವು ತಾಳಿದ್ದರಿಂದ, ರಾಜ್ಯ ಸರ್ಕಾರ, ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿ, ಪರಿಹಾರವನ್ನು ಪಡೆದ ಬಗ್ಗೆ ಮುಖ್ಯಮಂತ್ರಿಗಳು ವಿವರಿಸಿದರು.

ಬಿಪಿಎಲ್ ಕಾರ್ಡ್-ಅನರ್ಹರನ್ನು ತೆಗೆದು ಅರ್ಹರನ್ನು ಸೇರಿಸಲು ಸೂಚನೆ
ಅನರ್ಹರ ಬಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಪಿಎಲ್ ಕಾರ್ಡ್ ಇರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಅನರ್ಹರನ್ನು ಬಿಪಿಎಲ್ ಕಾರ್ಡ್ ನ ಸೌಲಭ್ಯದಿಂದ ತೆಗೆದುಹಾಕುವಂತೆ ಹಾಗೂ ಅರ್ಹರಿಗೆ ಈ ಸೌಲಭ್ಯವನ್ನು ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.

ರಾಜ್ಯದ ಮನವಿಗೆ ಕೇಂದ್ರ ಸ್ಪಂದಿಸುತ್ತಿಲ್ಲ
ರಾಜ್ಯಕ್ಕೆ ನೀಡಲಾಗುವ ಎನ್ ಡಿಆರ್ ಎಪ್ ಪರಿಹಾರವನ್ನು ಹೆಚ್ಚಿಸುವಂತೆ ಕೇಂದ್ರಸರ್ಕಾರವನ್ನು ಹಲವುಬಾರಿ ಕೋರಲಾಗಿದೆ. ಈ ಬಗ್ಗೆ ಕೇಂದ್ರ ವಿತ್ತಸಚಿವರನ್ನು ಹಾಗೂ ಕೇಂದ್ರ ಗೃಹಸಚಿವರನ್ನು ಖುದ್ದು ಭೇಟಿ ಮಾಡಲಾಗಿದ್ದರೂ, ಇದುವರೆಗೂ ಸರ್ಕಾರದ ಮನವಿಗೆ ಕೇಂದ್ರ ಸ್ಪಂದಿಸುತ್ತಿಲ್ಲ ಎಂದರು.

ಸಿಐಡಿ ತನಿಖೆ ನಡೆಸಲು ಸೂಚನೆ
ಅನ್ನಭಾಗ್ಯದ ಅಕ್ಕಿ ಹೊರದೇಶಕ್ಕೆ ರಫ್ತಾಗುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಈ ಬಗ್ಗೆ ಸಿಐಡಿ ತನಿಖೆ ನಡೆಸಲಾಗುತ್ತಿದ್ದು, ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದರು.

ಜಾತಿಸಮೀಕ್ಷೆ-ಬಿಜೆಪಿ ರಾಜಕಾರಣ ಮಾಡುತ್ತಿದೆ
ಜಾತಿಸಮೀಕ್ಷೆ ನಮೂನೆಯಲ್ಲಿ ‘ನಾಸ್ತಿಕ’ ಕಾಲಂವನ್ನು ಸೇರಿಸಿರುವ ಬಗ್ಗೆ ಬಿಜೆಪಿಯವರು ಆಕ್ಷೇಪವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಯಿಸಿ, ಈ ವಿಷಯದಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು 78 ವರ್ಷಗಳಾಗಿದ್ದು, ರಾಜ್ಯದ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿಯ ಬಗ್ಗೆ ಸರ್ಕಾರ ತಿಳಿಯಬೇಕಾಗಿದೆ. ಸಮೀಕ್ಷೆ ವರದಿ ಬಂದ ನಂತರ, ಅದರಂತೆ ಸರ್ಕಾರದ ಯೋಜನೆಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುತ್ತದೆಂಬ ಉದ್ದೇಶ ಸರ್ಕಾರದ್ದಾಗಿದೆ ಎಂದರು.

ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಜಾತಿಸಮೀಕ್ಷೆ
ಜಾತಿಸಮೀಕ್ಷೆಯಲ್ಲಿ ಹಿಂದೂ ಜಾತಿಗಳಲ್ಲಿ ಕ್ರಿಶ್ಚಿಯನ್ ನ್ನು ಸೇರಿಸಿರುವುದನ್ನು ವಿರೋಧಿಸಿ ಮಾನ್ಯ ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕ್ರಿಶ್ಚಿಯನ್ನರು ಹಾಗೂ ಮುಸಲ್ಮಾನರನ್ನು ಸೇರಿಸಿದಂತೆ ಅಲ್ಪಸಂಖ್ಯಾತರು ಭಾರತದ ಪ್ರಜೆಗಳೇ. ಸಮೀಕ್ಷೆಗೆ 1.75 ಲಕ್ಷ ಶಿಕ್ಷಕರನ್ನು ನಿಯೋಜಿಸಿದ್ದು, ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಅವರು ರಾಜ್ಯದ ಪ್ರತಿ ಮನೆಗೂ ತೆರಳಿ ಮಾಹಿತಿಗಳನ್ನು ಕಲೆಹಾಕಲಿದ್ದಾರೆ. ಸಮೀಕ್ಷಾ ಕಾರ್ಯಕ್ಕೆ ಕಳೆದ ಬಾರಿಗಿಂತ 40 ಸಾವಿರ ಶಿಕ್ಷಕರನ್ನು ಹೆಚ್ಚಾಗಿ ನಿಯೋಜಿಸಲಾಗಿದೆ ಎಂದರು.

ಅಂತಿಮ ನಿರ್ಧಾರ ಕೇಂದ್ರಸರ್ಕಾರದ್ದು
ಕುರುಬ ಸಮುದಾಯವನ್ನು ಎಸ್ ಟಿ ಗೆ ಸೇರಿಸಲು ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾವುದೇ ಸಮುದಾಯವನ್ನು ಎಸ್ ಟಿ ಗೆ ಸೇರಿಸುವ ಅಂತಿಮ ತೀರ್ಮಾನ ಕೇಂದ್ರ ಸರ್ಕಾರಕ್ಕೆ ಸೇರಿದ್ದು, ಈ ಬಗ್ಗೆ ರಾಜ್ಯಸರ್ಕಾರ ಕೇವಲ ಶಿಫಾರಸ್ಸು ಮಾಡಬಹುದಾಗಿರುತ್ತದೆ. ಈ ಬಗ್ಗೆ ಯಾರೂ ಸಹ ವಿರೋಧ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದರು.

ಕಲ್ಯಾಣಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ
ಪ್ರತ್ಯೇಕ ಸಚಿವಾಲಯ ಸೃಜಿಸುವ ಮಹತ್ವದ ತೀರ್ಮಾನವನ್ನು ಸರ್ಕಾರ ಕೈಗೊಂಡಿದ್ದು, ಅಧಿಕಾರಿಗಳನ್ನು ಸಧ್ಯದಲ್ಲಿಯೇ ನೇಮಿಸಲಾಗುವುದು. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹೊಸ ವೇಗ ದೊರೆಯಲಿದೆ ಎಂದರು.

You cannot copy content of this page

Exit mobile version