ಶೃಂಗೇರಿಯಲ್ಲಿ ದಿನಾಂಕ ಜನವರಿ 4ರಂದು ಭಾನುವಾರ ನಡೆಯಲಿರುವ ಅಖಿಲ ಭಾರತ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಸ್ವಹಿತಾಸಕ್ತಿ ಗುಂಪು ಆಯೋಜಿಸುತ್ತಿದ್ದು, ಪರಿಷತ್ತಿನ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಸಮ್ಮೇಳನದ ಆಹ್ವಾನ ಪತ್ರಿಕೆಗಳು ಹಾಗೂ ಬ್ಯಾನರ್ಗಳಲ್ಲಿ, ಅವ್ಯವಹಾರಗಳ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅವರ ಹೆಸರು ಹಾಗೂ ಭಾವಚಿತ್ರವನ್ನು ಬಳಸಿ, ಅವರನ್ನು ಇನ್ನೂ “ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು” ಎಂದು ಪ್ರಚುರಪಡಿಸಲಾಗಿದೆ. ಇದು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ವಿರೋಧ ವ್ಯಕ್ತಪಡಿಸಿರುವ ಸಾಹಿತ್ಯಾಭಿಮಾನಿಗಳು ತಿಳಿಸಿದ್ದಾರೆ.
ಈ ಸಮ್ಮೇಳನವು ಸಮಗ್ರ ಸಾಹಿತ್ಯ ವಲಯವನ್ನು ಒಳಗೊಂಡಿಲ್ಲದೆ, ಕೆಲವೇ ಮಂದಿ ಸ್ವಾರ್ಥಪರ ವ್ಯಕ್ತಿಗಳ ವೈಯಕ್ತಿಕ ಲಾಭಕ್ಕಾಗಿ ಆಯೋಜಿಸಲಾಗುತ್ತಿದೆ ಎಂಬ ಆರೋಪವೂ ಮಾಡಲಾಗಿದೆ. ಇದೇ ಗುಂಪಿನವರು ಹಿಂದೆ ಶೃಂಗೇರಿಯಲ್ಲಿ ನಡೆದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿಪಡಿಸಿ, ಬಾಂಬ್ ಬೆದರಿಕೆ ಹಾಕುವ ಮೂಲಕ ಸಮ್ಮೇಳನವನ್ನು ಹಾಳುಗೆಡವಲು ಯತ್ನಿಸಿದ್ದರು ಎಂಬ ಆರೋಪವನ್ನು ವಿರೋಧಿಗಳು ನೆನಪಿಸಿದ್ದಾರೆ. ಆಗ ಹಿರಿಯ ಸಾಹಿತಿಗಳಾದ ಕಲ್ಕುಳಿ ವಿಠಲ ಹೆಗ್ಡೆಯವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಂದಿನ ಎರಡು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ದಿನ ರಾಜ್ಯದ ಅನೇಕ ಸಾಹಿತ್ಯಾಸಕ್ತರ ನೆರವಿನಿಂದ ಸಮ್ಮೇಳನ ಯಶಸ್ವಿಯಾಗಿ ನೆರವೇರಿದ ನಂತರ, ಎರಡನೆಯ ದಿನ ಇದೇ ಚುಟುಕು ಸಾಹಿತ್ಯ ಸಮ್ಮೇಳನದ ರೂವಾರಿಗಳು ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುವ ಬೆದರಿಕೆ ಹಾಕಿ ಸಾಹಿತ್ಯ ಕಾರ್ಯಕ್ರಮವನ್ನೇ ಅರ್ಧಕ್ಕೆ ನಿಲ್ಲಿಸಿದ್ದರು. ಇಂತಹ ಸಾಹಿತ್ಯ ವಿರೋಧಿಗಳ ಗುಂಪು ಈಗ ಎಲ್ಲಾ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಮತ್ತೊಮ್ಮೆ ಕಾನೂನು ಬಾಹಿರವಾಗಿ ತಮ್ಮ ನಡೆ ಇಟ್ಟಿದ್ದಾರೆ ಎಂದು ಸಾಹಿತ್ಯಾಸಕ್ತರ ವಲಯ ಗಂಭೀರವಾಗಿ ಆರೋಪಿಸಿದೆ.
ಅಷ್ಟೇ ಅಲ್ಲದೆ, ಹಲವಾರು ಸಾಹಿತ್ಯಾಭಿಮಾನಿಗಳ ಮೇಲೆ ಅಸಂಬದ್ಧ ಆರೋಪಗಳನ್ನು ಹೊರಿಸಿ ಪ್ರಕರಣಗಳನ್ನು ದಾಖಲಿಸುವ ಮೂಲಕ ಮಾನಸಿಕ ಒತ್ತಡ ಸೃಷ್ಟಿಸಲಾಗುತ್ತಿದೆ ಎಂದು ದೂರಲಾಗಿದೆ. ಇಂತಹ ನಡೆಗಳು ಸಾಹಿತ್ಯ ವಾತಾವರಣಕ್ಕೆ ಧಕ್ಕೆ ತರುತ್ತವೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಸಾಹಿತ್ಯ ಮೌಲ್ಯಗಳು ಮತ್ತು ಶಿಷ್ಟಾಚಾರಗಳನ್ನು ಮೀರಿ, ರಾಜಕೀಯ ಉದ್ದೇಶದಿಂದ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ವಿರೋಧ ವ್ಯಕ್ತಪಡಿಸಿದವರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಶ್ರೀ ಮಂದಾರ, ಜಗದೀಶ್ ಕಣದಮನೆ, ಭರತ್ ಗಿಣಿಕಲ್, ವೆಂಕಟೇಶ್ ಹಾಗಲಗಂಜಿ, ಚಂದ್ರಶೇಖರ್ ಹೆಗ್ಡೆ ಕಲ್ಕುಳಿ, ಸಂತೋಷ್ ಕಾಳ್ಯ, ರಾಜಕುಮಾರ್ ಹೆಗ್ಡೆ, ತ್ರಿಮೂರ್ತಿ ಹೊಸ್ತೋಟ, ಕಳಸಪ್ಪ ಕೆಲವಳ್ಳಿ, ನವಿನ್ ಕರುವಾನೆ ಮತ್ತು ಅಶೋಕ್ ಕುಂದೂರ್ ಸೇರಿದಂತೆ ಹಲವು ಸಾಹಿತ್ಯಾಭಿಮಾನಿಗಳು ಸಂಯುಕ್ತವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
