ದೆಹಲಿ: ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿಗೆ ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ (ಎಸ್ಇಸಿ) ಕಳುಹಿಸಿರುವ ಸಮನ್ಸ್ ಜಾರಿಗೊಳಿಸುವಂತೆ ಕೇಂದ್ರ ಕಾನೂನು ಸಚಿವಾಲಯ ಅಹಮದಾಬಾದ್ ಸೆಷನ್ಸ್ ನ್ಯಾಯಾಲಯವನ್ನು ಕೋರಿದೆ.
ಹೇಗ್ ಕನ್ವೆನ್ಷನ್ ಅಡಿಯಲ್ಲಿ ಸಹಾಯಕ್ಕಾಗಿ SEC ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಕಾನೂನು ಇಲಾಖೆ ಈ ಕ್ರಮ ಕೈಗೊಂಡಿದೆ. ಹೇಗ್ ಕನ್ವೆನ್ಷನ್ ಪ್ರಕಾರ, ಸದಸ್ಯ ರಾಷ್ಟ್ರಗಳು ಶಂಕಿತರಿಗೆ ಕಾನೂನು ದಾಖಲೆಗಳನ್ನು ನೀಡುವಲ್ಲಿ ಪರಸ್ಪರ ಸಹಕರಿಸಬೇಕಾಗುತ್ತದೆ. ಅಧಿಕೃತ ದಾಖಲೆಗಳ ಪ್ರಕಾರ, ಕಾನೂನು ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆ (DLA) ಕಳೆದ ತಿಂಗಳು 25ರಂದು SEC ಯ ವಿನಂತಿಯನ್ನು ಅಹಮದಾಬಾದ್ ನ್ಯಾಯಾಲಯಕ್ಕೆ ಕಳುಹಿಸಿದೆ. ಅದಾನಿಯ ಅಹಮದಾಬಾದ್ ವಿಳಾಸಕ್ಕೆ ಸಮನ್ಸ್ ಜಾರಿ ಮಾಡಬೇಕೆಂದು ಅದು ವಿನಂತಿಸಿದೆ.
ಇಂಧನ ಯೋಜನೆಗಳ ಗುತ್ತಿಗೆ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಭಾರಿ ಲಂಚ ನೀಡಿದ ಆರೋಪದ ಮೇಲೆ ಅದಾನಿ ಗ್ರೀನ್ ಲಿಮಿಟೆಡ್‌ನ ಕಾರ್ಯನಿರ್ವಾಹಕರಾದ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧ ಎಸ್‌ಇಸಿ ಪ್ರಕರಣ ದಾಖಲಿಸಿದೆ ಎಂದು ತಿಳಿದುಬಂದಿದೆ. ಲಂಚ ಪ್ರಕರಣವು ಅದಾನಿ ಗ್ರೂಪ್ ಒಳಗೆ ಕೋಲಾಹಲ ಸೃಷ್ಟಿಸಿದೆ.