ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಸ್ವಾಭಾವಿಕ ಸಾವಿನವರೆಗೆ ಅಂದರೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸುವ ಅಧಿಕಾರ ಸೆಷನ್ಸ್ ನ್ಯಾಯಾಲಯಗಳಿಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಂತಹ ಶಿಕ್ಷೆ ವಿಧಿಸುವ ಅಧಿಕಾರ ಕೇವಲ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗೆ ಮಾತ್ರ ಇದೆ ಎಂದು ಸ್ಪಷ್ಟಪಡಿಸಿದೆ.
2025ರ ಡಿಸೆಂಬರ್‌ನಲ್ಲಿ ಸುಪ್ರೀಂಕೋರ್ಟ್ ನೀಡಿದ ‘ಕಿರಣ್ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ’ ಪ್ರಕರಣದ ತೀರ್ಪನ್ನು ಆಧಾರವಾಗಿಟ್ಟುಕೊಂಡು, ಸಿಆರ್‌ಪಿಸಿ ಸೆಕ್ಷನ್ 428ರ ಪ್ರಕಾರ ಯಾವುದೇ ವಿನಾಯಿತಿ ಇಲ್ಲದೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸುವ ಅಧಿಕಾರವನ್ನು ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ನೀಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಮಗುವಿನ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ರುದ್ರೇಶ್‌ಗೆ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಜೀವನಪರ್ಯಂತ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಮತ್ತು ಟಿ. ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
86 ಪುಟಗಳ ತೀರ್ಪಿನಲ್ಲಿ ಎಲ್ಲ ಅಂಶಗಳನ್ನು ಪರಿಶೀಲಿಸಿರುವ ಹೈಕೋರ್ಟ್, ಅಧೀನ ನ್ಯಾಯಾಲಯಕ್ಕೆ ಯಾವುದೇ ವಿನಾಯಿತಿ ಇಲ್ಲದೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸುವ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅದರಂತೆ, 2017ರ ನವೆಂಬರ್ 27ರಂದು ಸೆಷನ್ಸ್ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಮಾರ್ಪಾಡು ಮಾಡಿ ಕೇವಲ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ತೀರ್ಪಿನ ಪರಿಣಾಮವಾಗಿ, ಇನ್ನು ಮುಂದೆ ಪ್ರಕರಣ ಎಷ್ಟೇ ಗಂಭೀರವಾಗಿದ್ದರೂ ಸೆಷನ್ಸ್ ಕೋರ್ಟ್‌ಗಳು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಮಾತ್ರ ವಿಧಿಸಬಹುದೇ ಹೊರತು ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
ಶಿರಸಿ ಸಮೀಪದ ಅಲವಳ್ಳಿಯ ನಿವಾಸಿಯಾದ ಮಹಿಳೆ 2017ರ ಏಪ್ರಿಲ್‌ನಲ್ಲಿ ತನ್ನ ಮೂರೂವರೆ ವರ್ಷದ ಪುತ್ರ ಸೃಜಯನೊಂದಿಗೆ ಮೂಲೆಗದ್ದೆ ಮಠಕ್ಕೆ ಭೇಟಿ ನೀಡಿದ್ದರು. ಮಠದಲ್ಲೇ ಕೆಲಸ ಮಾಡುತ್ತಿದ್ದ ಆರೋಪಿ ರುದ್ರೇಶ್, ರಾತ್ರಿ ಸಾಂಬಾರ್‌ನಲ್ಲಿ ನಿದ್ರೆ ಮಾತ್ರೆ ಸೇರಿಸಿ ಮಗುವನ್ನು ಅಪಹರಿಸಿ ಕೊಳದಲ್ಲಿ ಮುಳುಗಿಸಿ ಕೊಂದಿದ್ದಾನೆ ಎಂಬ ಆರೋಪ ಸಾಬೀತಾಗಿತ್ತು. ಒಡವೆ ಕಳ್ಳತನದ ವಿಚಾರವಾಗಿ ಮಹಿಳೆ ಬುದ್ಧಿವಾದ ಹೇಳಿದ್ದರಿಂದ ದ್ವೇಷದಿಂದ ಈ ಕೃತ್ಯ ಎಸಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
