Home ದೇಶ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಎನ್‌ಕೌಂಟರ್: ಅಗ್ರ ನಾಯಕ ಪ್ರಭಾಕರ್ ಸೇರಿದಂತೆ ಏಳು ನಕ್ಸಲರ ಹತ್ಯೆ

ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಎನ್‌ಕೌಂಟರ್: ಅಗ್ರ ನಾಯಕ ಪ್ರಭಾಕರ್ ಸೇರಿದಂತೆ ಏಳು ನಕ್ಸಲರ ಹತ್ಯೆ

0

ಗಡ್ಚಿರೋಲಿ: ಪೂರ್ವ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರೊಂದಿಗಿನ ಎನ್‌ಕೌಂಟರ್‌ನಲ್ಲಿ (ಗುಂಡಿನ ಚಕಮಕಿ) ಅಗ್ರ ನಾಯಕ ಪ್ರಭಾಕರ್ ಸೇರಿದಂತೆ ಏಳು ನಕ್ಸಲರು ಹತ್ಯೆಯಾಗಿದ್ದಾರೆ. ಇದೇ ವೇಳೆ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಈ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಯುತ್ತಿತ್ತು.

ತೆಲಂಗಾಣದ ಕಾಮರೆಡ್ಡಿ ಮೂಲದ ಪ್ರಭಾಕರ್ ಅಲಿಯಾಸ್ ಲೋಕೇಟಿ ಚಂದರ್ ರಾವ್, ಮಾವೋವಾದಿಗಳ ಗಡ್ಚಿರೋಲಿ ವಿಭಾಗೀಯ ಸಮಿತಿ, ಪಶ್ಚಿಮ ಉಪ-ವಲಯ ಬ್ಯೂರೋ ಮತ್ತು ‘ಕಂಪನಿ ನಂಬರ್ 10’ರ ಉಸ್ತುವಾರಿ ವಹಿಸಿದ್ದರು. ಇವರ ತಲೆಗೆ 25 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಛತ್ತೀಸ್‌ಗಢದಿಂದ ‘ಕಂಪನಿ ನಂಬರ್ 10’ರ ಉಳಿದ ಸದಸ್ಯರು ಮತ್ತು ಅಜ್ಞಾತ ನಕ್ಸಲರ ಚಲನವಲನದ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಫೆಬ್ರವರಿ 3ರ ರಾತ್ರಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಗಡ್ಚಿರೋಲಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಡ್ಚಿರೋಲಿ ಪೊಲೀಸರ ವಿಶೇಷ ನಕ್ಸಲ್ ನಿಗ್ರಹ ಪಡೆಯಾದ ಸಿ-60ಯ ಹದಿನಾಲ್ಕು ತಂಡಗಳು ನಾರಾಯಣಪುರ-ಗಡ್ಚಿರೋಲಿ ಗಡಿಯಲ್ಲಿರುವ ಫೋಡೆವಾಡಾ ಗ್ರಾಮದ ಬಳಿ ಕಾರ್ಯಾಚರಣೆ ನಡೆಸಿದವು.

ಗುರುವಾರ ರಾತ್ರಿ ಮೂವರು ನಕ್ಸಲರ ಮೃತದೇಹಗಳು ಪತ್ತೆಯಾಗಿದ್ದರೆ, ಶುಕ್ರವಾರ ಅದೇ ಪ್ರದೇಶದಲ್ಲಿ ಇನ್ನೂ ನಾಲ್ಕು ಮೃತದೇಹಗಳು ಪತ್ತೆಯಾಗಿವೆ.

ಒಟ್ಟಾರೆಯಾಗಿ ಏಳು ಮಾವೋವಾದಿಗಳ (ನಾಲ್ವರು ಪುರುಷರು ಮತ್ತು ಮೂವರು ಮಹಿಳೆಯರು) ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸ್ಥಳದಿಂದ ಮೂರು ಎಕೆ-47 ರೈಫಲ್‌ಗಳು, ಒಂದು ಎಸ್‌ಎಲ್‌ಆರ್ ಮತ್ತು ಒಂದು .303 ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಭಾಕರ್ ಹೊರತುಪಡಿಸಿ, ಹತ್ಯೆಯಾದ ಇತರ ಮಾವೋವಾದಿಗಳ ಗುರುತು ಇನ್ನೂ ಪತ್ತೆಯಾಗಬೇಕಿದೆ.

ಜಿಲ್ಲೆಯ ಅಹೇರಿ ತಾಲೂಕಿನ ಮಂದ್ರಾ ನಿವಾಸಿಯಾಗಿರುವ ಸಿ-60 ಜವಾನ್ ದೀಪಕ್ ಚಿನ್ನಾ ಮಡವಿ (38) ಅವರು ಗುರುವಾರ ಸಂಜೆ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಾವೋವಾದಿಗಳನ್ನು ಹತ್ಯೆಗೈದರು. ಆದರೆ ಇದೇ ವೇಳೆ ಗುಂಡೇಟಿನಿಂದ ಗಾಯಗೊಂಡ ಅವರನ್ನು ಭಾಮರಗಢ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಶನಿವಾರ ಅವರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮಡವಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಕಿಶ್ಟ್ಯಾಪಲ್ಲಿ ನಿವಾಸಿಯಾಗಿರುವ ಜೋಗಾ ಮಡವಿ ಎಂಬ ಮತ್ತೋರ್ವ ಜವಾನ್ ಕೂಡ ಗುರುವಾರ ರಾತ್ರಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಅವರನ್ನು ಗಡ್ಚಿರೋಲಿಗೆ ಏರ್‌ಲಿಫ್ಟ್ ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

You cannot copy content of this page

Exit mobile version