ಹಾಸನ : ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ದೇಶದ ಸ್ವಾತಂತ್ರ್ಯ ಚಳುವಳಿಯ ಆಶಯಗಳ ಈಡೇರಿಕೆಗಾಗಿ ವಿದ್ಯಾರ್ಥಿಗಳ ಮಧ್ಯೆ ಅಧ್ಯಯನ ಮತ್ತು ಹೋರಾಟ ಘೋಷಣೆಯಡಿ ಸರ್ವರಿಗೂ ಸಮಾನ ಶಿಕ್ಷಣ ಹಾಗೂ ಉದ್ಯೋಗ ಮೂಲಭೂತ ಹಕ್ಕಾಗಲು, ದೇಶದ ಐಕ್ಯತೆ, ಸಮಗ್ರತೆ ಹಾಗೂ ಸೌಹಾರ್ದತೆಗಾಗಿ ವಿದ್ಯಾರ್ಥಿಗಳನ್ನು ಶ್ರಮಿಸಲು ಪ್ರೇರೆಪಿಸುತ್ತಿರುವ ರಾಷ್ಟ್ರದ ಅತಿದೊಡ್ಡ ದೇಶಪ್ರೇಮಿ ವಿದ್ಯಾರ್ಥಿ ಸಂಘಟನೆಯಾಗಿದ್ದು, ಶಿಕ್ಷಣ ಕ್ಷೇತ್ರದ ವ್ಯಾಪಾರೀಕರಣ, ಕೇಂದ್ರೀಕರಣ, ಕೇಸರಿಕರಣ, ಭ್ರಷ್ಟಾಚಾರ ಮತ್ತು ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ವಿರುದ್ಧ ನಿರಂತರವಾಗಿ ಹೋರಾಟ ಕಾರ್ಯಕ್ರಮಗಳನ್ನು ಮತ್ತು ಬಲಿಷ್ಠ ಚಳುವಳಿಯನ್ನು ಎಸ್.ಎಫ್.ಐ ಮುನ್ನಡೆಸುತ್ತಿದದ್ದು, ಸಾರ್ವಜನಿಕ ಶಿಕ್ಷಣದ ಉಳಿವಿಗಾಗಿ, ಸರ್ಕಾರಿ ಹಾಸ್ಟೆಲ್ ಗಳ ಬಲವರ್ಧನೆಗಾಗಿ ಒತ್ತಾಯಿಸಿ, ರಾಜ್ಯಾದ್ಯಾಂತ
SFI ಶೈಕ್ಷಣಿಕ ಜಾಥಾ ನಡೆಯುತ್ತಿದೆ. ಇದರ ಭಾಗವಾಗಿ ಹಾಸನ ನಗರಕ್ಕೆ ಜಾಥಾವು ಆಗಮಿಸಿ ಹಾಸನ ಜಿಲ್ಲಾ ಸಮಿತಿಯು ಸ್ವಾಗತಿಸಿ, ಬರಮಾಡಿಕೊಳ್ಳಲಾಯಿತು. ನಂತರ ನಗರದ ವಿಭಜಿತ ಪ್ರಧಾನ ಕಾಲೇಜಿನ ಕ್ಯಾಂಪಸ್ ನಲ್ಲಿ ಬಹಿರಂಗ ಸಭೆ ನಡೆಸಲಾಯುತು.

ಜಾಥಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ SFI ರಾಜ್ಯದ್ಯಕ್ಷರಾದ ಶಿವಪ್ಪ ರಾಜ್ಯದಲ್ಲಿ 2010 ರಲ್ಲಿ 72,875 ಶಾಲೆಗಳು ಮತ್ತು 2,45,337 ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದರು. 2021 -22 ವೇಳೆಗೆ ರಾಜ್ಯದಲ್ಲಿ 47,386 ಶಾಲೆಗಳು ಮತ್ತು 1,45,326 ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಅಂದರೆ ಕಳೆದ 11 ವರ್ಷದಲ್ಲಿ ರಾಜ್ಯದಲ್ಲಿ 25,489 ಶಾಲೆಗಳು ಮುಚ್ಚಲಾಗಿದೆ. ಮತ್ತು 1,00,011 ಶಿಕ್ಷಕ ಹುದ್ದೆಗಳು ಕುಂಟಿತಗೊಂಡಿವೆ. ಸರ್ಕಾರ ಸರ್ಕಾರಿ ಶಾಲೆಗಳಿಗೆ ಸರಿಯಾದ ಮೂಲಭೂತ ಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ವಿಫಲವಾದ ಕಾರಣದಿಂದ ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಪ್ರಮಾಣ ಕಡಿಮೆಯಾಗುತ್ತದೆ. 2022-23 ರಲ್ಲಿ 45.46 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. 2023-24 ರಲ್ಲಿ 42.94 ಲಕ್ಷ ಹಾಗೂ 2024-25 ರಲ್ಲಿ 40.74 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದಾರೆ. ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಶಾಲೆಗೆ ಸೇರುವವರ ಪ್ರಮಾಣ ಕಡಿಮೆಯಾಗುತ್ತಿದೆ. 5,77,00 ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ವರದಿ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಯಾಕೆ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಅಧ್ಯಯನ ಮಾಡದೇ ದಾಖಲಾತಿ ನೆಪ ಹೇಳಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ನಾವು ಕಾಣುತ್ತಿದ್ದೇವೆ. ಹಾಗೆ ರಾಜ್ಯದಲ್ಲಿ ಕಾಲೇಜು ಶುಲ್ಕಗಳು ವಿಪರೀತ ಹೆಚ್ಚಳವಾಗಿದೆ. ಶಾಲೆ, ಕಾಲೇಜುಗಳ ಶುಲ್ಕ ಸಾವಿರರಿಂದ ಲಕ್ಷಕ್ಕೆ ಬಂದು ನಿಂತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಕೋಟಿ ತಲುಪಿದರು ಆಶ್ಚರ್ಯಪಡುವಂತಿಲ್ಲ ಈಗಾಗಲೇ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕೋರ್ಸ್ ಕಾಲೇಜು ಶುಲ್ಕ ಕೋಟಿ ತಲುಪಿದೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ರಮೇಶ್ ಮತ್ತು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಎಂಜಿ ಮಾತನಾಡಿದರು.
ಆರಂಭದಲ್ಲಿ ಜಿಲ್ಲಾ ಮುಖಂಡ ವಿವೆಕ್ ಜಾಥಾ ಕಾರ್ಯಕ್ರಮವನ್ನು ಸ್ವಾಗತಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಎಫ್ಐ ರಾಜ್ಯ ಮುಖಂಡರಾದ ಅರ್ಪಿತಾ ಹಾಸನದ ಮುಖಂಡರಾದ ವಿದ್ಯಾ, ಪ್ರೇಮ್ ದೇಶ್ ಸೇರಿದಂತೆ ವಿದ್ಯಾರ್ಥಿಗಳು, ಸಾಹಿತಿಗಳು, ಚಿಂತಕರು ಹಾಗೂ ಶಿಕ್ಷಣ ಪ್ರೇಮಿಗಳು ಭಾಗವಹಿಸಿದ್ದರು.