Wednesday, October 30, 2024

ಸತ್ಯ | ನ್ಯಾಯ |ಧರ್ಮ

ಕೆನಡಾದ ಖಲಿಸ್ತಾನಿಗಳ ಮೇಲಿನ ದಾಳಿಯ ಹಿಂದೆ ಶಾ ಕೈವಾಡ: ಕೆನಡಾ ಉಪ ವಿದೇಶಾಂಗ ಸಚಿವ ಮಾರಿಸನ್

ಬೆಂಗಳೂರು: ಭಾರತದ ಗೃಹ ಸಚಿವ ಅಮಿತ್‌ ಶಾ ಕೆನಡಾದ ಪ್ರಜೆಗಳನ್ನು ಕೊಲ್ಲಲು ಸಂಚಿನಲ್ಲಿ ಭಾಗಿಯಾಗಿದ್ದರೆ,” ಎಂಬ ಕೆನಡಾದ ಉಪ ವಿದೇಶಾಂಗ ವ್ಯವಹಾರಗಳ ಸಚಿವ ಡೇವಿಡ್ ಮಾರಿಸನ್ ಅಕ್ಟೋಬರ್ 29, ಮಂಗಳವಾರ ಅಮೇರಿಕಾದ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಗೆ ನೀಡಿದ ಹೇಳಿಕೆ ಭಾರತ ಮತ್ತು ಕೆನಡಾದ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹದಗೆಡುವ ಸಾಧ್ಯತೆಗಳನ್ನು ದೃಢಪಡಿಸಿದೆ. 

ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಕೆನಡಾದ ಸಂಸದೀಯ ಸಮಿತಿಯ ವಿಚಾರಣೆಯಲ್ಲಿ ಅವರು ಈ ವಿಚಾರ ಬಹಿರಂಗಪಡಿಸಿದ್ದಾರೆ.

ವಾಷಿಂಗ್ಟನ್ ಪೋಸ್ಟ್ ಅಕ್ಟೋಬರ್ 14 ರಂದು ಹೆಸರಿಸದ ಕೆನಡಾದ ಅಧಿಕಾರಿಗಳನ್ನು ಉಲ್ಲೇಖಿಸಿ, ಆ ದಿನ ದೇಶದಿಂದ ಹೊರಹೋಗಲು ಆದೇಶಿಸಲಾದ “ಭಾರತೀಯ ರಾಜತಾಂತ್ರಿಕರ ನಡುವಿನ ಸಂಭಾಷಣೆಗಳು ಮತ್ತು ಟೆಕ್ಸ್ಟ್‌ಗಳು” ಶಾ ಮತ್ತು ರಾ (RAW) ಹಿರಿಯ ಅಧಿಕಾರಿಯ “ಉಲ್ಲೇಖಗಳನ್ನು ಒಳಗೊಂಡಿವೆ” ಮತ್ತು ಇವರು ಕೆನಡಾದಲ್ಲಿ “ಸಿಖ್ ಪ್ರತ್ಯೇಕತಾವಾದಿಗಳ ಮೇಲೆ ಗುಪ್ತಚರ-ಸಂಗ್ರಹ ಕಾರ್ಯಾಚರಣೆಗಳು ಮತ್ತು ದಾಳಿಗಳನ್ನು” ನಡೆಸಿದ್ದಾರೆ ಎಂದು ಅವರು ಭಾರತ ಸರ್ಕಾರಕ್ಕೆ ತಿಳಿಸಿದ್ದರು ಎಂದು ವರದಿ ಮಾಡಿದೆ.

ಭಾರತದಿಂದ ಭಯೋತ್ಪಾದಕ ಎಂದು ನಿಷೇಧಿಸಲಾದ ಖಲಿಸ್ತಾನ್ ಪರ ಹೋರಾಡುತ್ತಿರುವ ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ಒಂದು ವರ್ಷದ ನಂತರ ಅಮೇರಿಕಾದ ಪತ್ರಿಕೆಯಲ್ಲಿನ ಲೇಖನವು ರಾಜತಾಂತ್ರಿಕ ವಿವಾದಕ್ಕೆ ತುಪ್ಪ ಸುರಿದಿದೆ.

ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಸೇರಿದಂತೆ ಭಾರತದ ಆರು ರಾಜತಾಂತ್ರಿಕರು ಕ್ರಿಮಿನಲ್ ತನಿಖೆಯಲ್ಲಿ “ಹಿತಾಸಕ್ತಿಯ ವ್ಯಕ್ತಿಗಳು” ಎಂದು ಕೆನಡಾ ತಿಳಿಸಿದೆ ಎಂದು ಅಕ್ಟೋಬರ್ 14 ರಂದು ಭಾರತ ಘೋಷಿಸಿತ್ತು.

ಕೆನಡಾದ ಆರು ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿ personae non gratae ಎಂದು  ಘೋಷಿಸಲು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೆನಡಾದ ಉಸ್ತುವಾರಿಗಳನ್ನು ಕರೆಸಿಕೊಂಡಿತ್ತು.

ಅದೇ ಸಮಯದಲ್ಲಿ, ಒಟ್ಟಾವಾದಲ್ಲಿರುವ ಆರು ಭಾರತೀಯ ರಾಜತಾಂತ್ರಿಕರಿಗೆ ಉಚ್ಚಾಟನೆಯ ನೋಟಿಸ್ ನೀಡಲಾಗಿದೆ ಎಂದು ಕೆನಡಾ ಹೇಳಿದೆ.

ಆ ದಿನ, ನಿಜ್ಜರ್ ಹತ್ಯೆ ತನಿಖೆ ನಡೆಸುತ್ತಿರುವ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ( RCMP ) ಪತ್ರಿಕಾಗೋಷ್ಠಿಯನ್ನು ನಡೆಸಿ, ಭಾರತೀಯ ರಾಜತಾಂತ್ರಿಕರು ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ನ ಸದಸ್ಯರನ್ನು ಭಾರತೀಯ ಮೂಲದ ಕೆನಡಾದ ಪ್ರಜೆಗಳನ್ನು ಬೆದರಿಸಲು ಬಳಸಿದ್ದಾರೆ ಎಂಬುದಕ್ಕೆ ಪುರಾವೆಗಳು ತಮ್ಮಲ್ಲಿವೆ ಎಂದು ಹೇಳಿದ್ದರು.

ಕೆನಡಾದ ಹಿರಿಯ ಭದ್ರತಾ ಮತ್ತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಡುವೆ ಅಕ್ಟೋಬರ್ 12 ರಂದು ಸಿಂಗಾಪುರದಲ್ಲಿ ನಡೆದ ಸಭೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ವಾಷಿಂಗ್ಟನ್ ಪೋಸ್ಟ್ ಲೇಖನದ ಮುಂಚಿನ ಆವೃತ್ತಿಯಲ್ಲಿ ಶಾ ಅವರ ಹೆಸರು ಇರಲಿಲ್ಲ ಮತ್ತು ಅದು “ಭಾರತದ ಹಿರಿಯ ಅಧಿಕಾರಿ” ಭಾಗಿಯಾಗಿರುವುದನ್ನು ಮಾತ್ರ ಉಲ್ಲೇಖಿಸಿದೆ. ಲೇಖನ ಪ್ರಕಟವಾಗಿ ಕೆಲ ಗಂಟೆಗಳ ನಂತರ ಲೇಖನವನ್ನು ತಿದ್ದುಪಡಿ ಮಾಡಿ ಕೇಂದ್ರ ಗೃಹ ಸಚಿವರನ್ನೇ ಆ ಅಧಿಕಾರಿ ಎಂದು ಉಲ್ಲೇಖಿಸಿದೆ.

ಕೆನಡಾ ಪ್ರಧಾನ ಮಂತ್ರಿಯ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರರಾದ ನಥಾಲಿ ಡ್ರೊಯಿನ್ ಅವರು ಸಂಸದೀಯ ಸಮಿತಿಗೆ ನೀಡಿದ ತನ್ನ ಆರಂಭಿಕ ಹೇಳಿಕೆಯಲ್ಲಿ ಪ್ರಕರಣದ “ಹಿನ್ನೆಲೆ” ಕುರಿತು ವಾಷಿಂಗ್ಟನ್ ಪೋಸ್ಟ್‌ನೊಂದಿಗೆ ಮಾತನಾಡುವುದು ಭಾರತ ಸರ್ಕಾರ ಹರಡುತ್ತಿರುವ “ತಪ್ಪು ಮಾಹಿತಿ” ಯನ್ನು ಎದುರಿಸುವ ಮಾಧ್ಯಮ ಕಾರ್ಯತಂತ್ರದ ಭಾಗವಾಗಿದೆ ಎಂದು ವಿವರಿಸಿದರು.

ಕನ್ಸರ್ವೇಟಿವ್ ಪಕ್ಷದ ಸಂಸದ ರಾಕೆಲ್ ಡ್ಯಾಂಚೋ ವಾಷಿಂಗ್ಟನ್ ಪೋಸ್ಟ್‌ನೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವ ಕೆನಡಾದ ನಿರ್ಧಾರವನ್ನು ಪ್ರಶ್ನೆ ಮಾಡಿದ್ದರು .

“ಉದಾಹರಣೆಗೆ, ಭಾರತೀಯ ಗೃಹ ವ್ಯವಹಾರಗಳ ಸಚಿವರು ಮತ್ತು ಕೆನಡಾದಲ್ಲಿ ನಡೆದ ಈ ಅಪರಾಧಗಳಲ್ಲಿ ಅವರು ಭಾಗಿಯಾಗಿದ್ದಾರೆಂದು ಹೇಳಲಾಗುವ ಮಾಹಿತಿಯನ್ನು ಕೆನಡಾದಲ್ಲಿ ಬಿಡುಗಡೆ ಮಾಡಲಾಗಿಲ್ಲ, ಅದು ವಾಷಿಂಗ್ಟನ್ ಪೋಸ್ಟ್‌ನಲ್ಲಿ ಮಾತ್ರ ಬಿಡುಗಡೆಯಾಗಿದ್ದು ಯಾಕೆ …?” ಎಂದು ಅವರು ಪ್ರಶ್ನೆ ಮಾಡಿದ್ದರು.

ಇದಕ್ಕೆ ತಾವೇ ಈ ಮಾಹಿತಿಯನ್ನು ಪತ್ರಿಕೆಗೆ ನೀಡಿಲ್ಲ ಎಂದು  ಡ್ರೊಯಿನ್ ಪ್ರತಿಕ್ರಿಯಿಸಿದ್ದಾರೆ. “ಆದ್ದರಿಂದ ಇದು ನಾವು ಪತ್ರಕರ್ತರಿಗೆ ನೀಡಿದ ಮಾಹಿತಿಯಲ್ಲ” ಎಂದು ಅವರು ಸಮರ್ಥನೆ ನೀಡಿದ್ದಾರೆ.

ಅದೇ ಪ್ರಶ್ನೆಯನ್ನು ಕೆನಡಾದ ಉಪ ವಿದೇಶಾಂಗ ಸಚಿವ ಮಾರಿಸನ್ ಅವರನ್ನು ಡಾಂಚೋ ಕೇಳಿದಾಗ, ಅವರು “ಪತ್ರಕರ್ತ ನನ್ನನ್ನು ಕರೆದು ಅದು ಅದೇ ವ್ಯಕ್ತಿಯೇ ಎಂದು ಕೇಳಿದ. ನಾನು ಅದೇ ವ್ಯಕ್ತಿ ಖಚಿತಪಡಿಸಿದೆ,” ಎಂದು ಅವರು ಹೇಳಿದರು.

ಇಬ್ಬರು ಕೆನಡಾದ ಹಿರಿಯ ಅಧಿಕಾರಿಗಳು ವಿಚಾರಣೆಯಲ್ಲಿ ಆರ್‌ಸಿಎಂಪಿ ಕಮಿಷನರ್ ಸೇರಿದಂತೆ ಇತರ ಅಧಿಕಾರಿಗಳು ಸೇರಿಕೊಂಡು “ಭಾರತ ಸರ್ಕಾರದ ಏಜೆಂಟ್‌ಗಳಿಂದ ಕೆನಡಾದಲ್ಲಿ ಚುನಾವಣಾ ಹಸ್ತಕ್ಷೇಪ ಮತ್ತು ಕ್ರಿಮಿನಲ್ ಚಟುವಟಿಕೆಗಳಿಗೆ,” ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು.

ಸಿಖ್ ಸಮುದಾಯದ “ಮತ ಬ್ಯಾಂಕ್‌ಗಳನ್ನು” ಭದ್ರಪಡಿಸುವ ಟ್ರುಡೊ ಅವರ ವೈಯಕ್ತಿಕ ರಾಜಕೀಯ ಕಾರ್ಯಸೂಚಿಯ ಭಾಗವಾಗಿದೆ ಎಂದು ಪ್ರತಿಪಾದಿಸಿದ ಭಾರತ ಸರ್ಕಾರವು ತನ್ನ ಮೇಲಿನ ಈ ಆರೋಪಗಳನ್ನು “ಅಪರಾಧ” ಎಂದು ಪ್ರತಿಪಾದಿಸಿದೆ.

ತನ್ನ ಲಿಖಿತ ಉತ್ತರದಲ್ಲಿ,  ಡ್ರೂಯಿನ್ ಸಹವರ್ತಿಗಳು, ತಾನು ಮತ್ತು ಅಜಿತ್‌ ದೋವಲ್‌ ನಡುವೆ ಆಗಸ್ಟ್ 2023 ರಿಂದ ನಡೆದ ಮೀಟಿಂಗ್‌ಗಳ ಪಟ್ಟಿಯನ್ನು ನೀಡಿದ್ದಾರೆ.

“ ನಾವು ಕೆನಡಾದ NSIA, ನನ್ನ ಪೂರ್ವವರ್ತಿ, ನಾನು ಅಥವಾ GAC [ಗ್ಲೋಬಲ್ ಅಫೇರ್ಸ್ ಕೆನಡಾ], CSIS [ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್] ಅಥವಾ PCO [ಪ್ರೈವಿ ಕೌನ್ಸಿಲ್ ಆಫೀಸ್] ನ ಆರು ಕೆನಡಾದ ಹಿರಿಯ ಅಧಿಕಾರಿಗಳು ಹಾಗೂ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ಆರು ಕಡೆಗಳಲ್ಲಿ ಒಪ್ಪಂದದ ಮಾತುಕತೆಗಳು ನಡೆದಿವೆ. ಅಂದರೆ ಆಗಸ್ಟ್ ಮತ್ತು ಸೆಪ್ಟೆಂಬರ್ 2023 ನವದೆಹಲಿಯಲ್ಲಿ, ನವೆಂಬರ್ 2023 ರಲ್ಲಿ ದುಬೈನಲ್ಲಿ, ಡಿಸೆಂಬರ್ 2023 ಸೌದಿ ಅರೇಬಿಯಾದಲ್ಲಿ, ಜನವರಿ 2024 ರಲ್ಲಿ ಲಂಡನ್ ಮತ್ತು ಮಾರ್ಚ್ 2024 ರಲ್ಲಿ ದುಬೈನಲ್ಲಿ ಮತ್ತು ಮೇ 2024 ರಲ್ಲಿ RCMP ಈ ಪ್ರಕರಣದ ಸಂಬಂಧ ಒಂದು ಬಂಧನವನ್ನು ಮಾಡುವಾಗ ಮಾತುಕತೆ ನಡೆಸಿದ್ದೆವು, ” ಎಂದು ಅವರು ಹೇಳಿದ್ದರು.

2024 ರ ಆಗಸ್ಟ್ ಕೊನೆಯಲ್ಲಿ RCMP ಭಾರತದ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದೆ ಎಂದು ಅವರು ಹೇಳಿದ್ದಾರೆ. ಕೆನಡಾದ ಪ್ರಜೆಗಳ ಮೇಲೆ ಭಾರತೀಯ ರಾಜತಾಂತ್ರಿಕರು ಮತ್ತು ದೂತಾವಾಸ ಅಧಿಕಾರಿಗಳಿಂದ ನಡೆದ “ದಬ್ಬಾಳಿಕೆ ಮತ್ತು ಬೆದರಿಕೆಗಳ” ಮಾಹಿತಿಯನ್ನು ತೋರಿಸಿದೆ ಎಂದು ಅವರು ಹೇಳಿದರು.

“ಈ ಮಾಹಿತಿಯನ್ನು ನಂತರ ಬಿಷ್ಣೋಯ್ ಗ್ಯಾಂಗ್‌ ಬಳಸಿ ಕೆನಡಾದಲ್ಲಿ ಅಪರಾಧ ನಡೆಸಲು ನಿರ್ದೇಶನ ನೀಡಿದ್ದ ಭಾರತ ಸರ್ಕಾರದ ಉನ್ನತ ಮಟ್ಟದ ಜೊತೆಗೆ ಹಂಚಿಕೊಳ್ಳಲಾಗುತ್ತದೆ,” ಎಂದು ಅವರು ಹೇಳಿದರು.

“ಕೆನಡಾದಲ್ಲಿ ಇವರು ಮಾಡಿದ ಗಂಭೀರ ಅಪರಾಧಗಳಲ್ಲಿ ಕೊಲೆಗಳು, ಹತ್ಯೆಯ ಸಂಚುಗಳು, ಸುಲಿಗೆಗಳು ಮತ್ತು ಇತರ ತೀವ್ರ ಹಿಂಸಾಚಾರಗಳು ಸೇರಿವೆ,” ಕೆನಡಾದ NSA ಆರೋಪಿಸಿದೆ.

ಆರೋಪಗಳಿಗೆ “ಸಾಕ್ಷ್ಯಗಳನ್ನು” ಪ್ರಸ್ತುತಪಡಿಸಲು RCMP ಅಧಿಕಾರಿಗಳು ತಮ್ಮ ಭಾರತೀಯ ಸಹವರ್ತಿಗಳನ್ನು ಭೇಟಿಯಾಗಲು ಹೋಗುವುದನ್ನು ತಡೆಯಲು ಭಾರತವು ಮೊದಲು “ಆಡಳಿತಾತ್ಮಕ ತಾಂತ್ರಿಕತೆಯನ್ನು ಬಳಸಿದೆ” ಎಂದು ಡ್ರೂಯಿನ್ ಹೇಳಿದ್ದಾರೆ. ಇದಕ್ಕೆ ಭಾರತವು ಕೆನಡಾ ಅಧಿಕಾರಿಗಳು ವೀಸಾಕ್ಕಾಗಿ ಶಾರ್ಟ್‌ ನೊಟೀಸ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದೆ.

“ಎರಡನೆಯದಾಗಿ, ಅಕ್ಟೋಬರ್ 10 ರಂದು ಆರ್‌ಸಿಎಂಪಿ ವಾಷಿಂಗ್ಟನ್‌ಗೆ ಹೋಗಿ, ಭಾರತೀಯ ಅಧಿಕಾರಿಗಳ ಜೊತೆಗೆ ಸಭೆಯನ್ನು ನಡೆಸಿದರೂ ವಿಚಾರದ ಗಂಭೀರತೆಯನ್ನು ಪರಿಗಣಿಸಿಲ್ಲ ಎಂದು,” ಎಂದು ಡ್ರೂಯಿನ್ ಆರೋಪ ಮಾಡಿದ್ದಾರೆ.

ಅಕ್ಟೋಬರ್ 12 ರಂದು ಸಿಂಗಾಪುರದಲ್ಲಿ ದೋವಲ್ ಅವರೊಂದಿಗೆ ನಡೆದ ಸಭೆಯಲ್ಲಿ, ಆರ್‌ಸಿಎಂಪಿ ಡೆಪ್ಯೂಟಿ ಕಮಿಷನರ್ “ಭಾರತ ಸರ್ಕಾರದ ಏಜೆಂಟರು ಕೆನಡಾದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಅಪರಾಧ ಚಟುವಟಿಕೆಗಳ ಜೊತೆಗೆ ಸಂಬಂಧ ಇರುವ ಪುರಾವೆಗ ಬಗ್ಗೆ ಮಾತನಾಡಿ, ಅವುಗಳನ್ನು ತೋರಿಸಿದ್ದರು,” ಎಂದು ಅವರು ಹೇಳಿದರು.

ಭಾರತದ ಈಎಲ್ಲಾ ಆರೋಪಗಳನ್ನು ನಿರಾಕರಿಸಿದೆ, ಆದರೆ, ಅಕ್ಟೋಬರ್ 12 ರ ಸಭೆಯನ್ನು ದೋವಲ್ ಅವರ ಕೋರಿಕೆಯ ಮೇರೆಗೆ ಗೌಪ್ಯವಾಗಿಡಲಾಗುವುದು ಎಂದು ಒಪ್ಪಿಕೊಂಡ ನಂತರ ಅಕ್ಟೋಬರ್ 14 ರಂದು ಮತ್ತೊಂದು ಸಭೆ ನಡೆಸಲು ತೀರ್ಮಾನಿಸಲಾಗಿತ್ತು ಎಂದು ಡ್ರೂಯಿನ್ ಹೇಳಿದ್ದಾರೆ.

“ಇದರ ಬದಲಿಗೆ, ಭಾರತ ಸರ್ಕಾರವು ನಮ್ಮ ಒಪ್ಪಂದವನ್ನು ಗೌರವಿಸದೆ ಮರುದಿನ, ಅಂದರೆ ಅಕ್ಟೋಬರ್ 13,  ಭಾನುವಾರದಂದು ಸಾರ್ವಜನಿಕವಾಗಿ ಈ ಬಗ್ಗೆ ಹೇಳಿಕೆ ನೀಡಲು ಹೋಗಿತ್ತು ಮತ್ತು ಕೆನಡಾ ಬಳಿ ಯಾವುದೇ ಪುರಾವೆಗಳಿಲ್ಲ ಎಂಬ ತಮ್ಮ ಸುಳ್ಳು ನಿರೂಪಣೆಯನ್ನು ಮತ್ತೊಮ್ಮೆ ಬಳಸಿತು. ಭಾರತ ಸರ್ಕಾರವು ಇದಕ್ಕೆಲ್ಲ ತಾವು ಜವಾಬ್ದಾರರಾಗಿರುವುದಿಲ್ಲ ಅಥವಾ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದ್ದಾರೆ. ಇದು ಭಾರತದ ರಾಜತಾಂತ್ರಿಕರನ್ನು ನಮ್ಮ ದೇಶದಿಂದ ಹೊರಹಾಕಲು ಇದ್ದ ಪ್ರಚೋದನೆಯಾಗಿತ್ತು,” ಎಂದು ಅವರು ಆರೋಪಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page