Home ವಿಶೇಷ ಖತ್ನಾ ಎನ್ನುವ ಬಾಲಕಿಯರ ಪಾಲಿನ ನರಕ!: ಮೋದಿಯವರ ತವರು ರಾಜ್ಯವೇ ಭಾರತದಲ್ಲಿ ಇದರ ತವರು!

ಖತ್ನಾ ಎನ್ನುವ ಬಾಲಕಿಯರ ಪಾಲಿನ ನರಕ!: ಮೋದಿಯವರ ತವರು ರಾಜ್ಯವೇ ಭಾರತದಲ್ಲಿ ಇದರ ತವರು!

0
ಹೆಣ್ಣಿಗೆ ಲೈಂಗಿಕತೆ ಆನಂದ ನೀಡುವಂತಿರಬಾರದು ಎಂದು ಈಗಲೂ ಚಾಲ್ತಿಯಲ್ಲಿರುವ ಸ್ತ್ರೀ ಜನನಾಂಗ ವಿರೂಪಗೊಳಿಸುವಿಕೆಯಂತ ಘಾತುಕ ಆಚರಣೆಗಳನ್ನು, ಸಂಪ್ರದಾಯಗಳನ್ನು ಕೈಬಿಟ್ಟು ಅವಳನ್ನು ಕೂಡಾ ತಮ್ಮಂತೆಯೇ ಒಂದು ಜೀವಿ ಎಂದು ಪರಿಗಣಿಸುವಂತೆ ಆಗಬೇಕೆನ್ನುವುದು ಪೀಪಲ್‌ ಮೀಡಿಯಾ ಕಾಳಜಿ. ಈ ನಿಟ್ಟಿನಲ್ಲಿ ವಿದ್ಯಾವಂತ ಯುವ ಮನಸ್ಸುಗಳು ಬದಲಾವಣೆಗೆ ತೆರೆದುಕೊಳ್ಳಬೇಕೆಂಬುದು ಈ ಲೇಖನದ ಆಶಯ

ಇದೊಂದು ನರಕದಂತಹ ಆಚರಣೆ. ಹೀಗೆ ಸುಮ್ಮನೆ ಕಲ್ಪಿಸಿಕೊಳ್ಳಿ… ಏನೂ ಅರಿಯದ ಆರೇಳು ವರ್ಷದ ಬಾಲಕಿಯೊಬ್ಬಳನ್ನು ಅವಳ ಅಮ್ಮನೋ, ಅಜ್ಜಿಯೋ ಬಾ ತಿಂಡಿ ಕೊಡಿಸುತ್ತೇನೆ ಎಂದು ಕರೆದೊಯ್ಯುತ್ತಾಳೆ. ಹಾಗೆ ಕರೆದೊಯ್ದವರು ಅವಳನ್ನು ಒಂದು ಕತ್ತಲೆಯ ಕೂಪದಂತಹ ಕಟ್ಟಡಕ್ಕೆ ಕರೆದೊಯ್ಯುತ್ತಾರೆ. ಅಲ್ಲೊಬ್ಬಳು ಯಾವುದೇ ತರಬೇತಿಯಿಲ್ಲ ಸೂಲಗಿತ್ತಿ ಹೆಂಗಸು ಆ ಪುಟ್ಟ ಬಾಲಕಿಯ ಕೆಳ ಭಾಗದ ಬಟ್ಟೆ ಕಳಚಿ ಆಕೆಯ ಜನನಾಂಗದ ಮೇಲ್ಭಾಗದ ತುದಿಯನ್ನು (ಕ್ಲಿಟೊರಿಯಸ್) ಕಾದ ಚಾಕುವನ್ನು ಬಳಸಿ ಕತ್ತರಿಸಿ ತೆಗೆಯುತ್ತಾಳೆ! ಹುಡುಗಿ ನೋವಿನಿಂದ ಕಿರುಚುತ್ತಾಳೆ… ಆ ಸೂಲಗಿತ್ತಿ ಗಾಯಕ್ಕೆ ಒಂದಿಷ್ಟು ಕಪ್ಪು ಪುಡಿ ಹಾಕಿ ಕಳಿಸುತ್ತಾಳೆ. ಹೌದು, ಆಫ್ರಿಕಾ ಖಂಡದ ಸುಮಾರು ಮೂವತ್ತು ದೇಶಗಳಲ್ಲಿ ಇದನ್ನು ಆಚರಿಸಲಾಗುತ್ತದೆ. ಈ ಕುರಿತು 2012ರ ಆಸುಪಾಸಿನಲ್ಲಿ ನೀವೂ ಟಿವಿ, ಪತ್ರಿಕೆಗಳಲ್ಲಿ ಚರ್ಚೆಯಾಗಿರುವುದನ್ನು ಗಮನಿಸಿರಬಹುದು. ಇದೊಂದು ಅಮಾನವಿಯ ಆಚರಣೆಯಾಗಿದ್ದು ಇದನ್ನು 2030ರ ವೇಳೆಗೆ ಸಂಪೂರ್ಣವಾಗಿ ಇಲ್ಲವಾಗಿಸಲು ವಿಶ್ವಸಂಸ್ಥೆ ಪಣ ತೊಟ್ಟಿದೆ. ಈ ಪದ್ಧತಿಯ ಸಂಪೂರ್ಣ ಅಸಹಿಸ್ಣುತತೆಯನ್ನು ತೋರಿಸಬೇಕೆಂದು ಅದು ಆಗ್ರಹಿದೆ.

ಭಾರತದಲ್ಲೂ ಇದೆ ಈ ಕ್ರೂರ ಪದ್ಧತಿ…!

ಹೌದು, ನೀವು ಸರಿಯಾಗಿಯೇ ಓದುತ್ತಿದ್ದೀರಿ! ಈ ಅಮಾನವೀಯ ಪದ್ಧತಿ ಭಾರತದಲ್ಲಿ ಇಂದಿಗೂ ಜೀವಂತವಿದೆ. ಅದೂ ಕೂಡಾ ಮುಂಬಯಿಯಂತಹ ಮಹಾನಗರಿಯ ಒಳಗೇ! ಹೌದು ಭಾರತ ವಿಶ್ವಸಂಸ್ಥೆಯ ಸಭೆಗಳಲ್ಲಿ ಇಂತಹ ಅಮಾನವೀಯ ಪದ್ಧತಿಯ ಕೊನೆಗೆ ಕರೆ ನೀಡಿದೆ. ಇದನ್ನು ಕೊನೆಗಾಣಿಸಲು ಸಲಹೆಗಳನ್ನೂ ನೀಡಿದೆ. ಆದರೆ ನಾವು ನಮ್ಮ ದೇಶದ ವಿಷಯ ಬಂದಾಗ ಅಂತಹದ್ದೊಂದು ಆಚರಣೆ ನಮ್ಮಲ್ಲಿದೆಯೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಖತ್ನಾ ಎನ್ನುವ ಆಚರಣೆ ಭಾರತದಲ್ಲಿ ನಡೆಯುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ಸರ್ಕಾರ ಇದುವರೆಗೆ ನಿರಾಕರಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸಂಸತ್ತಿನಲ್ಲಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಎಫ್‌ಜಿಎಂ (female genital mutilation / ಯೋನಿ ಛೇದನ) ಅಸ್ತಿತ್ವವನ್ನು ನಿರಾಕರಿಸಿದೆ.

ಅದು ಬೊಹ್ರಾ ಸಮುದಾಯ…

ಭಾರತದಲ್ಲಿ ಈ ಪದ್ದತಿಯನ್ನು ಬೊಹ್ರಾ ಎನ್ನುವ ಮುಸ್ಲಿಮ್‌ ಪಂಗಡವೊಂದು ಆಚರಿಸುತ್ತದೆ. ದಾವೂದಿ ಬೋಹ್ರಾ ಎಂದು ಕರೆಯಲಾಗುವ ಇದು ಶಿಯಾ ಇಸ್ಲಾಂನ ಇಸ್ಮಾಯಿಲಿ ಶಾಖೆಯೊಳಗಿನ ಧಾರ್ಮಿಕ ಪಂಗಡವಾಗಿದೆ. ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಾರತ, ಪಾಕಿಸ್ತಾನ, ಯೆಮೆನ್, ಪೂರ್ವ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ವಾಸಿಸುತ್ತಿದ್ದಾರೆ. ಯುರೋಪ್, ಉತ್ತರ ಅಮೇರಿಕಾ, ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾದಾದ್ಯಂತ ಅವರ ಸಮುದಾಯ ಬೆಳವಣಿಗೆ ಹೊಂದುತ್ತಿದೆ. ಇವರ ಸಂಖ್ಯೆ ಭಾರತದಲ್ಲಿ ಸುಮಾರು ಜಗತ್ತಿನ ಇತರೆಡೆಗಳಲ್ಲಿ ಹರಿಡುವವರನ್ನು ಸೇರಿ ಸುಮಾರು 5 ಲಕ್ಷ ಬೊಹ್ರಾಗಳಿದ್ದಾರೆ ಎಂದು ವೆಬ್‌ ಸೈಟ್‌ ಒಂದು ಹೇಳುತ್ತದೆ. ಆದರೆ ದಿ ಪ್ರಿಂಟ್‌ ಮಾಡಿರುವ ವರದಿಯಲ್ಲಿ ಇವರ ಸಂಖ್ಯೆ ಸುಮಾರು 20 ಲಕ್ಷ ಎನ್ನಲಾಗಿದೆ.

ಸರಕಾರ ಆ ಕುರಿತು ತನ್ನ ಬಳಿ ದಾಖಲೆಗಳಿಲ್ಲವೆಂದು ಹೇಳುತ್ತದೆಯಾದರೂ ಹಿಂದೂಸ್ಥಾನ್‌ ಟೈಮ್ಸ್ ಡಾಟ್‌ ಕಾಮ್‌ ಈ ಪದ್ಧತಿ ಜೀವಂತವಿರುವ ಕುರಿತು ದೀರ್ಘವಾದ ಲೇಖನ ಮತ್ತು ಆ ಸಮುದಾಯದ ಹೆಣ್ಣುಮಕ್ಕಳ ಅಭಿಪ್ರಾಯಗಳನ್ನು ಹೊಂದಿರುವ ಡಾರ್ಕ್‌ ಸೀಕ್ರೆಟ್‌ ಎನ್ನುವ ಡಾಕ್ಯುಮೆಂಟರಿಯೊಂದನ್ನು ಸಹ ತನ್ನ ವೆಬ್‌ ಸೈಟಿನಲ್ಲಿ ಪ್ರಕಟಿಸಿದೆ.  ಡಾಕ್ಯುಮೆಂಟರಿಯಲ್ಲಿ ಆ ಹೆಣ್ಣುಮಕ್ಕಳು ಹಂಚಿಕೊಂಡಿರುವ ಅನುಭವಗಳು ಹೃದಯವಿದ್ರಾಯಕವಾಗಿವೆ. ಇದೊಂದು ವ್ಯಾಪಾರಿ ಸಮುದಾಯವಾಗಿದ್ದು ಆರ್ಥಿಕವಾಗಿ ಉತ್ತಮವಾಗಿದ್ದರೂ ಇಂತಹದ್ದೊಂದು ಹೀನಾಯ ಆಚರಣೆಯನ್ನು ಇಂತಹ ಕಾಲದಲ್ಲೂ ಜೀವಂತವಿರಿಸಿಕೊಂಡಿರುವುದು ನಿಜಕ್ಕೂ ದುರಂತ. ಈ ಆಚರಣೆಯಿಂದ ತಪ್ಪಿಸಿಕೊಂಡ ಕೆಲವು ಹೆಣ್ಣುಮಕ್ಕಳೂ ಈ ಕುರಿತು ಮಾತನಾಡಿದ್ದಾರೆ. ಇದೊಂದು ಈ ಕುರಿತು ಆಸಕ್ತಿಯಿರುವವರು ಇದೊಂದು ನೋಡಲೇಬೇಕಾದ ಸಾಕ್ಷ್ಯಚಿತ್ರವಾಗಿದೆ. ಈ ಕುರಿತು ಆಸಕ್ತಿಯಿರುವವರು ಡೆಸರ್ಟ್‌ ಫ್ಲವರ್‌ ಎನ್ನುವ ಇಂಗ್ಲಿಷ್‌ ಪುಸ್ತಕ ಅಥವಾ ಅದರ ಕನ್ನಡ ಅನುವಾದವಾದ ʼಮರುಭೂಮಿಯ ಹೂʼ (ಅನುವಾದ: ಜಗದೀಶ್‌ ಎನ್‌ ಕೊಪ್ಪ) ಪುಸ್ತಕಗಳನ್ನು ಓದಬಹುದು. ಈ ಪುಸ್ತಕಗಳು ಈ ಕ್ರೂರ ಆಚರಣೆಯ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಓಡಿ ಹೋಗಿ ತನ್ನ ಬದುಕು ಕಟ್ಟಿಕೊಂಡ ನಟಿ ವಾರಿಸ್‌ ಅವರ ಕತೆಯನ್ನು ಹೇಳುತ್ತವೆ. ಈ ಕುರಿತು ಬಿಸಿಸಿ “Nomad in Newyork” ಎನ್ನುವ ಸಾಕ್ಷ್ಯಚಿತ್ರವನ್ನೂ ತಯಾರಿಸಿದೆ.

ಕನ್ನಡದಲ್ಲಿ ಈ ಕುರಿತು ಲಭ್ಯವಿರುವ ಪುಸ್ತಕಗಳು

ಈ ಹೀನ ಆಚರಣೆಯ ಹಿಂದಿರುವುದು ಪುರುಷ ಪ್ರಾಧಾನ್ಯತೆಯ ಕರಿನೆರಳು…

ಹೌದು, ಈ ಆಚರಣೆಗೆ ಯಾವುದೇ ವೈದ್ಯಕೀಯ ಸಮರ್ಥನೆಗಳಾಗಲಿ, ಈ ಆಚರಣೆಯಿಂದ ಹೆಣ್ಣಿಗೆ ಪ್ರಯೋಜನಗಳಾಗಲಿ ಇಲ್ಲ ಎಂದು ವಿಶ್ವಸಂಸ್ಥೆ ಸ್ಪಷ್ಟವಾಗಿ ಹೇಳುತ್ತದೆ. ಇದು ಸಾಮಾನ್ಯವಾಗಿ ಸೋಂಕುಗಳು, ನೋವು ಮತ್ತು ರಕ್ತಸ್ರಾವದಂತಹ ತಕ್ಷಣದ ಆರೋಗ್ಯದ ಅಪಾಯಗಳಿಗೆ ಕಾರಣವಾಗುತ್ತದೆ. ದೀರ್ಘಾವಧಿಯಲ್ಲಿ, ಈ ಆಚರಣೆಗೆ ಒಳಗಾಗುವ ಮಹಿಳೆಯರ ಪಾಲಿಗೆ ಲೈಂಗಿಕತೆ ಎನ್ನುವುದು ಎಂದಿಗೂ ಸಂತೋಷದಾಯಕ ಚಟುವಟಿಕೆಯಾಗಿರುವುದಿಲ್ಲ ಎಂದು ಸಮುದಾಯದ ಮಹಿಳೆಯರು ಹೇಳುತ್ತಾರೆ. ಹಾಗೆ ನೋಡಿದರೆ ಖತ್ನಾ ಮಾಡಿಸಿಕೊಂಡ ಮಹಿಳೆಯರು ಮಿಲನದ ಸಮಯದಲ್ಲಿ ತೀವ್ರವಾದ ನೋವನ್ನು ಎದುರಿಸುತ್ತಾರೆ ಮತ್ತು ಲೈಂಗಿಕತೆಯ ಕುರಿತು ಭಯವನ್ನು ಹೊಂದಿರುತ್ತಾರೆ. ಹೆಣ್ಣು ಲೈಂಗಿಕತೆಯ ಉತ್ತುಂಗವನ್ನು ತಲುಪಬಾರದು ಮತ್ತು ಆಕೆ ಹೆಚ್ಚು ಸೆಕ್ಸ್‌ ಕುರಿತು ಯೋಚಿಸಬಾರದು ಎನ್ನುವುದು ಈ ಆಚರಣೆಯ ಹಿಂದಿನ ಉದ್ದೇಶ.

ಒಂದು ಹೆಣ್ಣು ಮಗುವಿನ ವಿರುದ್ಧ ಹೆಣ್ಣನ್ನೇ ಬಳಸುವ ವ್ಯವಸ್ಥೆ…

ಇಲ್ಲಿ ಇಡೀ ಪ್ರಕ್ರಿಯೆ ಕೇವಲ ಹೆಂಗಸರನ್ನು ಒಳಗೊಂಡಿದೆ. ಆದರೆ ಧಾರ್ಮಿಕವಾಗಿ ಪಳಗಿಸಲ್ಪಟ್ಟ ಹೆಂಗಸರಿಗೆ ಧರ್ಮ ಎನ್ನುವ ಸಾಂಸ್ಥಿಕ ಚೌಕಟ್ಟಿನ ಒಳಗೆ ತಮ್ಮದೇ ಆದ ನಿರ್ಧಾರವನ್ನು ಕೈಗೊಳ್ಳಲು ಇಲ್ಲಿನ ಪುರುಷಪ್ರಧಾನ ವ್ಯವಸ್ಥೆ ಬಿಡುವುದಿಲ್ಲ. ಸಮುದಾಯದ ಒಂದಿಷ್ಟು ಮಹಿಳೆಯರು ಇದರ ವಿರುದ್ಧ ತಿರುಗಿಬಿದ್ದಿದ್ದು ಈ ಕುರಿತು ಪಿಟಿಷನ್‌ ಒಂದನ್ನು ಆರಂಭಿಸಿದ್ದು ಸುಮಾರು ನಲವತ್ತು ಸಾವಿರ ಸಹಿ ಸಂಗ್ರಹ ಮಾಡಿದ್ದಾರೆ. ಜೊತೆಗೆ ಕೆಲವು ಪುರುಷರೂ ತಮ್ಮ ಹೆಣ್ಣು ಮಕ್ಕಳು ಇಂತಹದ್ದೊಂದು ಕ್ರೂರ ಪದ್ಧತಿಗೆ ಒಳಗಾಗುವುದರ ವಿರುದ್ಧ ಮಾತನಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದೇನೇ ಇದ್ದರೂ 2016 ಮತ್ತು 2017ರಲ್ಲಿ ಸಮುದಾಯದ 80 ಶೇಕಡಾದಷ್ಟು ಮಹಿಳೆಯರು ಈ ಪದ್ಧತಿಯಡಿ ಖತ್ನಾ ಮಾಡಿಸಿಕೊಂಡಿದ್ದಾರೆ ಎಂದು ಅದೇ ಪ್ರಿಂಟ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ. (ಹೆಚ್ಚಿನ ವಿವರಗಳಿಗೆ ಮೇಲಿನ ಪ್ರಿಂಟ್ ವರದಿಯ ಕೊಂಡಿಯನ್ನು ಗಮನಿಸಿ.) ಇದನ್ನು ತೊಡೆದು ಹಾಕುವ ಪ್ರಯತ್ನವಾಗಿ ಈ ಸಮುದಾಯದ ಹಿರಿಯ ಧಾರ್ಮಿಕ ಮುಖಂಡನನ್ನು ತೊಡಗಿಸಿಕೊಳ್ಳಲು ದಿ ಡಾರ್ಕ್‌ ಸೀಕ್ರೆಟ್‌ ಡಾಕ್ಯುಮೆಂಟರಿ ತಯಾರಿಸಿದ ತಂಡ ಪ್ರಯತ್ನಿಸಿತಾದರೂ ಅವರಿಗೆ ಕನಿಷ್ಟ ಆ ವ್ಯಕ್ತಿಯನ್ನು ತಲುಪಲೂ ಸಾಧ್ಯವಾಗಲಿಲ್ಲ.

ಈಗ ಈ ಹೆಣ್ಣು ಮಕ್ಕಳಿಗೆ ರಾಜ್ಯಗಳೇ ದಿಕ್ಕು…

ಕೇಂದ್ರ ಸರಕಾರ ಇಂತಹದ್ದೊಂದು ಆಚರಣೆ ನಮ್ಮಲ್ಲಿದೆಯೆಂದು ಒಪ್ಪಿಕೊಳ್ಳಲೂ ಸಿದ್ಧವಿಲ್ಲದ ಈ ಹೊತ್ತಿನಲ್ಲಿ ರಾಜ್ಯಗಳಷ್ಟೇ ಈ ನತದೃಷ್ಟ ಹೆಣ್ಣುಮಕ್ಕಳನ್ನು ಇಂತಹ ನರಕದಿಂದ ಪಾರುಮಾಡಬೇಕಿದೆ ಎನ್ನುತ್ತದೆ ದಿ ಪ್ರಿಂಟ್‌ ವರದಿ. ರಾಜ್ಯಗಳು ಈ ಕುರಿತು ಕಟ್ಟುನಿಟ್ಟಿನ ಕಾನೂನುಗಳನ್ನು ವಿಶ್ವಸಂಸ್ಥೆಯ ವರದಿಯಡಿ ತರಬೇಕೆಂದು ವರದಿಗಾರ್ತಿ ಹೇಳುತ್ತಾರೆ. ಇತ್ತೀಚೆಗೆ ಮೋದಿಯವರು ಆ ಸಮುದಾಯದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರನ್ನು ಹೊಗಳಿದ್ದಕ್ಕೂ ಸರಕಾರ ಇದನ್ನು ಒಪ್ಪಿಕೊಳ್ಳದಿರುವುದಕ್ಕೂ ಸಂಬಂಧವಿರಬಹುದೇ ಎನ್ನುವ ಅನುಮಾನವೂ ಇಲ್ಲಿ ಕಾಡುತ್ತದೆ.

ಬೊಹ್ರಾ ಸಮುದಾಯವೂ ಮೋದಿಯವರನ್ನು ಉತ್ತಮ ನಾಯಕನೆಂದು ಪರಿಗಣಿಸುತ್ತದೆ ಮತ್ತು ಅವರನ್ನು ತನ್ನ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಕರೆದಿತ್ತು. ಆಗ ಮೋದಿಯವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, “ಬೋಹ್ರಾ ಸಮುದಾಯದೊಂದಿಗಿನ ನನ್ನ ಸಂಬಂಧ ಹಳೆಯದು. ಬೋಹ್ರಾ ಸಮುದಾಯದ ಪ್ರೀತಿಯನ್ನು ಪಡೆದಿರುವುದು ನನ್ನ ಸೌಭಾಗ್ಯ. ಗುಜರಾತಿನಲ್ಲಿ ಬೋಹ್ರಾ ವ್ಯಾಪಾರಿಯನ್ನು ಕಾಣದಿರುವ ಹಳ್ಳಿಯೇ ಇಲ್ಲ. ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಮುದಾಯ ನನಗೆ ಸಹಾಯ ಮಾಡಿದೆ. ನಿಮ್ಮ ಮೇಲಿನ ಪ್ರೀತಿಯೇ ಇಂದು ನನ್ನನ್ನು ಇಲ್ಲಿಗೆ ಕರೆತಂದಿದೆ” ಎಂದಿದ್ದರು. ಬಿಜೆಪಿಯಲ್ಲಿ ಇಂತಹ ಗೌರವ ಪಡೆದ ಏಕೈಕ ನಾಯಕನೆಂದರೆ ಅದು ಪ್ರಧಾನಿ ಮೋದಿ ಮಾತ್ರ.

ಇವರ ಮೂಲ ಗುಜರಾತ್‌…

ಮೋದಿಯವರಿಗೂ ಈ ಸಮುದಾಯಕ್ಕೂ ಇನ್ನೊಂದು ಸಂಬಂಧವಿದೆ. ಅದು ಈ ಸಮುದಾಯ ಕೂಡಾ ಮೋದಿಯವರ ತವರು ರಾಜ್ಯವಾದ ಗುಜರಾತಿಗೆ ಸೇರಿದ್ದು. ಈ ಸಮುದಾಯದ ಬಹುತೇಕರು ಗುಜರಾತಿ ಮಾತನಾಡುತ್ತಾರೆ. ಇತರ ಹಲವು ಗುಜರಾತಿಗಳಂತೆ ಇವರೂ ವ್ಯಾಪಾರೋಧ್ಯಮಗಳಲ್ಲಿ ಬಹಳ ಮುಂದಿದ್ದಾರೆ. ಮತ್ತು ಇವರ ವ್ಯವಹಾರದ ಕ್ಯಾಲೆಂಡರ್‌ ಕೂಡಾ ಅಲ್ಲಿನ ಇತರ ವ್ಯಾಪಾರಿಗಳಂತೆ ದೀಪಾವಳಿ ಆಚರಣೆಯೊಂದಿಗೆ ಆರಂಭಗೊಳ್ಳುತ್ತದೆ.

ಇನ್ನಾದರೂ ಬದಲಾಗಲಿ ಹೆಣ್ಣುಮಕ್ಕಳನ್ನು ಬಲಿಪಶುಗಳನ್ನಾಗಿಸುವ ಸಮುದಾಯಗಳ ಆಚರಣೆಗಳು

ಹೌದು ಇನ್ನಾದರೂ ನಮ್ಮ ಸಮಾಜದಲ್ಲಿನ ಹಲವು ಸಮುದಾಯಗಳು ಸಂಪ್ರದಾಯದ ಹೆಸರಿನಲ್ಲಿ ಆಚರಿಸಿಕೊಂಡು ಬಂದಿರುವ ಘಾತುಕ ಆಚರಣೆಗಳನ್ನು ಕೈಬಿಟ್ಟು ಅವಳನ್ನು ಕೂಡಾ ತಮ್ಮಂತೆಯೇ ಒಂದು ಜೀವಿ ಎಂದು ಪರಿಗಣಿಸುವಂತೆ ಆಗಬೇಕೆನ್ನುವುದು ಪೀಪಲ್‌ ಮೀಡಿಯಾ ಕಾಳಜಿ. ಈ ನಿಟ್ಟಿನಲ್ಲಿ ವಿದ್ಯಾವಂತ ಯುವ ಮನಸ್ಸುಗಳು ತಮ್ಮ ಸಮುದಾಯಗಳ ಹಿರಿತನವನ್ನು ವಹಿಸಿಕೊಂಡು ಬದಲಾವಣೆಗಳಿಗೆ ಮುಂದಾಗಬೇಕೆನ್ನುವುದು ಈ ಲೇಖನದ ಆಶಯ. ಬದಲಾವಣೆ ಎನ್ನುವುದು ಆ ಕ್ಷಣಕ್ಕೆ ಯಾತನಾದಾಯಕವಾದರೂ ಅದರ ಮುಂದಿನ ಫಲಿತಾಂಶಗಳು ಉತ್ತಮವಾಗಿರುತ್ತವೆ.

(ಮಾಹಿತಿ ಮೂಲ: ವಿವಿಧ ಜಾಲತಾಣಗಳು)

– ಶಂಕರ ಎನ್‌ ಕೆಂಚನೂರು

You cannot copy content of this page

Exit mobile version