ಸಮಾಜವಾದಿ ಸಿದ್ಧಾಂತವನ್ನು ಪಸರಿಸಿ ಹೆಗ್ಗುರುತಾಗಿ ನಿಂತಿದ್ದ ಶಾಂತವೇರಿ ಗೋಪಾಲಗೌಡರ ನೆಲ ಈಗ ಕೋಮು ಸಿದ್ಧಾಂತದಲ್ಲಿ ಮಿಂದೇಳುತ್ತಿದೆ. ರಾಜಕೀಯ ನಾಯಕರಿಂದ ಹೊಡೆಯಬೇಕು, ಕತ್ತರಿಸಬೇಕು, ಕೊಲ್ಲಬೇಕು ಎನ್ನುವ ದ್ವೇಷ ಉಗುಳುವ ಭಾಷಣಗಳೇ ಕೇಳಿ ಬರುತ್ತಿವೆ. ಗೌಡರ ತತ್ವಾದರ್ಶಗಳು ಮತ್ತು ವೈಚಾರಿಕ ಚಿಂತನೆ ರಾಜಕೀಯದಲ್ಲಿ ನೆಲೆಗಾಣದಿದ್ದರೆ ಪ್ರಜಾಪ್ರಭುತ್ವ ಪತನಮುಖಿಯಾಗುವುದು ನಿಶ್ಚಿತ. ಶಾಂತವೇರಿ ಗೋಪಾಲಗೌಡರ ಜನ್ಮದಿನದ ನೆಪದಲ್ಲಿ ಯುವ ಪತ್ರಕರ್ತ ಆಕಾಶ್.ಆರ್.ಎಸ್ ಅವರ ಬಗ್ಗೆ ಬರೆದಿದ್ದಾರೆ.
ಶಾಂತವೇರಿ ಗೋಪಾಲಗೌಡರು ಬದುಕಿದ್ದರೆ ಇಂದಿಗೆ ೧೦೦ ವರ್ಷ ಭರ್ತಿ ತುಂಬುತ್ತಿತ್ತು. ಕೇವಲ ಅವರಿಗಲ್ಲ ಅವರ ಸಮಾಜವಾದಿ ಸಿದ್ಧಾಂತಕ್ಕೂ ಕೂಡ ನೂರರ ಗಡಿ ದಾಟುತ್ತಿತ್ತು ಎಂದರೆ ತಪ್ಪಾಗಲಾರದು.
ಮಾ.14 1923 ರಿಂದ ಜೂ.9 1972 ರ ತನಕದ ಅವರ ಕಾಲಾವಧಿಯಲ್ಲಿ ಈ ನಾಡಿನ ಸಾಮಾಜಿಕ, ರಾಜಕೀಯ ಸಾಕ್ಷಿ ಪ್ರಜ್ಞೆಯಾಗಿ ಅವರು ಬದುಕಿದ್ದರು. ಅವರು ಬದುಕಿದ ಅಷ್ಟು ದಿನಗಳನ್ನು ಕೂಡ ಅವರು ಸವೆಸಿದ್ದು ಒಂದು ಸಿದ್ಧಾಂತಕ್ಕಾಗಿ, ಜನರ ಒಳಿತಿಗಾಗಿ.
ಪ್ರಸ್ತುತದಲ್ಲಿ ರಾಜ್ಯದ ಜನ ವಿರೋಧಿ ನೀತಿಗಳು, ಸೈದ್ಧಾಂತಿಕ ದಿವಾಳಿತನಗಳನ್ನು ಕಂಡಾಗಲೆಲ್ಲಾ ಗೋಪಾಲಗೌಡರು ನಮ್ಮೊಟ್ಟಿಗೆ
ಇರಬೇಕಿತ್ತು ಎಂಬ ಕೊರಗು ಬಾಧಿಸುತ್ತದೆ. ಆದರೆ ಗೋಪಾಲಗೌಡರು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಸಮಾಜವಾದದ ಸೈದ್ಧಾಂತಿಕ ನಡೆ- ನುಡಿಗಳು ಮಾತ್ರ ಈ ನಾಡಿನ ಬದಲಾವಣೆಗೆ ಹಾತೊರೆಯುವ ಜೀವಗಳನ್ನು ಸದಾ ಪೊರೆಯುವಂತೆ ಪ್ರಭಾವಿಸಬಲ್ಲವು.
ಗೋಪಾಲಗೌಡರು ಕೇವಲ ಒಬ್ಬ ರಾಜಕೀಯ ನಾಯಕನಷ್ಟೆ ಅಲ್ಲ, ಓರ್ವ ರಾಜಕೀಯ ಮುತ್ಸದ್ದಿಯಾಗಿ ಬದುಕಿದವರು. ರೈತರ, ಗೇಣಿದಾರರ, ದಲಿತರ, ದಮನಿತರ ಬೆನ್ನೆಲುಬಾಗಿ ನಿಂತವರು. ಮೇಷ್ಟ್ರಾಗಿ, ನೂಲುಗಾರನಾಗಿ, ಹಳ್ಳಿಗಳ ಸಮಸ್ಯೆಗಳಿಗೆ ಚಿಕಿತ್ಸಕರಾಗಿದ್ದರು. ಇವೆಲ್ಲದರ ನಡುವೆ ರಾಮಾಯಣ, ಮಹಾಭಾರತ ಹಾಗೂ ಆಧುನಿಕ ಕೃತಿಗಳನ್ನು ಓದಿ ಜನ ಸಾಮಾನ್ಯರಿಗೆ ತಿಳಿಸುವ ಮೂಲಕ ದಾರ್ಶನಿಕನಂತೆ ಕಂಡಿದ್ದರು. ಗಾಂಧಿಯ ಪ್ರಭಾವಕ್ಕೆ ಒಳಗಾಗಿದ್ದ ಗೌಡರು ಸ್ವಾತಂತ್ರ್ಯ ಚಳುವಳಿಯಲ್ಲೂ ಕೂಡ ಭಾಗವಹಿಸುವ ಮೂಲಕ ದೇಶಕ್ಕಾಗಿ ದುಡಿದಿದ್ದರು. ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಧಿಕ್ಕರಿಸಿ ಆಗಿನ ಕ್ವಿಟ್ ಇಂಡಿಯಾ ಚಳುವಳಿಗೆ ಕಾಲಿಡುವ ಮೂಲಕ ತನ್ನ ಹೋರಾಟ ವೃತ್ತಿಯ ಹೊಸ ಅಧ್ಯಾಯ ಆರಂಭಿಸಿದ್ದರು. ನಂತರ ಇಡೀ ರಾಜ್ಯವೇ ಮೆಚ್ಚುವ ಸಮಾಜವಾದಿ ನಾಯಕನಾಗಿ ಬೆಳೆದು ನಿಂತಿದ್ದು, ಸದನದಲ್ಲಿ ಪ್ರಶ್ನೆಗಳ ಪ್ರಹಾರ ಮೂಲಕ ವಿರೋಧ ಪಕ್ಷಗಳಿಗೆ ನಡುಕ ಹುಟ್ಟಿಸಿದ್ದು ಎಲ್ಲವೂ ಕೂಡ ಈಗ ಇತಿಹಾಸ.
1952 ರಲ್ಲಿ ಆಗಿನ ಮೈಸೂರು ರಾಜ್ಯದ ಶಿವಮೊಗ್ಗದ ಸಾಗರ-ಹೊಸನಗರದ ವಿಧಾನಸಭಾ ಅಭ್ಯರ್ಥಿಯಾಗಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಗೋಪಾಲಗೌಡರು ರಾಜ್ಯದ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದರು. ಜನಪ್ರತಿನಿಧಿಗಳು ಹಾಗೂ ಮತದಾರರು ಭ್ರಷ್ಟಾಚಾರಕ್ಕೊಳಗಾಗದ ಚುನಾವಣಾ ನೈತಿಕ ಮಾದರಿಯೊಂದನ್ನು ಆರಂಭಿಸಿ “ ಒಂದು ಓಟು ಒಂದು ನೋಟು” ಎಂಬ ಹೊಸ ಸಿದ್ಧಾಂತವನ್ನು ಪ್ರಯೋಗಿಸಿದರು. ಈ ಮೂಲಕ ಮತದಾರರಲ್ಲಿ ಓಟು ಕೇಳುವ ಜತೆಗೆ ಚುನಾವಣಾ ವೆಚ್ಚವನ್ನು ಮತದಾರರಿಂದಲೇ ಪಡೆದು ಚುನಾವಣಾ ಗೆಲ್ಲುತ್ತಿದ್ದ ಪರಿಯಂತೂ ಇಡೀ ರಾಜಕೀಯ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಇಂತಹ ಸಂವೇದನಾಶೀಲ ರಾಜಕಾರಣಿಯೊಬ್ಬ ಸ್ವಾತಂತ್ರ್ಯೋತ್ತರ ಮೈಸೂರಿನಲ್ಲಿ ಜನದನಿಯಂತೆ ಮೊಳಗಿದ್ದರು.
2012 ರಲ್ಲಿ ಬೆಂಗಳೂರಿನ “ ಟಾಕ್” ಎಂಬ ಇಂಗ್ಲಿಷ್ ವಾರಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಗೋಪಾಲಗೌಡರು ಕರ್ನಾಟಕ ಕಂಡ ಶ್ರೇಷ್ಠ ಸಂಸದೀಯ ಪಟುವೆಂದು ಕರ್ನಾಟಕ ಎಲ್ಲ ರಾಜಕೀಯ ಪಕ್ಷಗಳ ಶಾಸಕರು ಕೂಡ ಒಕ್ಕೊರಲಿನಿಂದ ಒಪ್ಪಿಕೊಂಡಿದ್ದನ್ನು ದಾಖಲಿಸಿತು.

ಮಾರ್ಕ್ಸ್, ಗಾಂಧಿ, ಅಂಬೇಡ್ಕರ್, ಸಾಕ್ರೆಟಿಸ್, ಹೆನ್ಸಿ, ಲೋಹಿಯಾ ಹಾಗೂ ಜಿ.ಪಿ ಅವರ ಪ್ರಭಾವಕ್ಕೆ ಒಳಗಾಗಿದ್ದ ಗೋಪಾಲಗೌಡರು ಸಮಾಜವಾದಿ ಪಕ್ಷದಲ್ಲಿ ತಮ್ಮದೇ ಸ್ಥಾನವನ್ನು ಕೂಡ ಗಳಿಸಿದ್ದರು. ಆದರೆ ಅವರನ್ನು ರಾಜಕೀಯದಲ್ಲಿ ಗಟ್ಟಿಯಾಗಿ ಪಾದ ಉರುವಂತೆ ಮಾಡಿದ್ದು ಮಾತ್ರ ಚಳವಳಿಯ ಹಾದಿಗಳು. ರೈತರು, ದಲಿತ, ಹಿಂದುಳಿದ, ಗೇಣಿದಾರರ ಪರವಾಗಿ ಗೋಪಾಲಗೌಡರು ಎಂಬ ದೊಡ್ಡ ಧ್ವನಿ ಮೊಳಗುತ್ತಿತ್ತು. ಆ ಮೂಲಕ 1951 ರಲ್ಲಿ ಭೂ ಮಾಲೀಕರ ವಿರುದ್ಧ ಸೆಟೆದು ನಿಂತು ಪೊಲೀಸರ, ಪ್ರಭುತ್ವದ ಸೊಕ್ಕಡಗಿಸಿ ಕಾಗೋಡು ಚಳುವಳಿಯನ್ನು ನಡೆಸಿದರು. ಈ ಹೋರಾಟ ಯಶಸ್ವಿಯಾಗಿ ಗೇಣಿದಾರರು ಭೂಮಿ ಉಳುವಷ್ಟರಲ್ಲಿ ಗೌಡರು ನೊಂದವರ ನಾಯಕರಾಗಿ ಬೆಳೆದು ನಿಂತಿದ್ದರು.
ರಾಜಕಾರಣವನ್ನು ಬರೀ ರಾಜಕಾರಣವಾಗಿ ಕಾಣದೆ ಅದನ್ನು ತಾತ್ವಿಕ ನೆಲೆಗಟ್ಟಿನಲ್ಲಿ ಕೊಂಡೊಯ್ಯುತ್ತಿದ್ದ ಗೌಡರನ್ನು ವಿರೋಧ ಪಕ್ಷಗಳಿಗಾಗಲಿ, ಅವರ ವಿರುದ್ಧ ಮಾತನಾಡುವ ಶಾಸಕರಾಗಲಿ ಅವರ ಬಗ್ಗೆ ಲಘುವಾಗಿ ಮಾತನಾಡದೆ ಅವರನ್ನು ತಾತ್ವಿಕವಾಗಿ ಟೀಕಿಸುತ್ತಿದ್ದರು.
1952, 57, 62 ಹಾಗೂ 67 ರ ಚುನಾವಣೆಯಲ್ಲಿ ಗೋಪಾಲಗೌಡರನ್ನು ಸೋಲಿಸಲು ಹಣದ ಹೊಳೆ ಹರಿಸಿದರೂ ಕೂಡ ಗೌಡರು ಮಾತ್ರ ಮತದಾರರಿಂದಲೇ ಚುನಾವಣಾ ವೆಚ್ಚ ಭರಿಸಿ ಗೆಲ್ಲುತ್ತಿದ್ದುದಂತೂ ಪವಾಡವೇ. ಆದರೆ ಕೊನೆಗೆ ಎಲ್ಲಾ ರಾಜಕೀಯ ಪಕ್ಷಗಳು ಗೋಪಾಲಗೌಡರ ವಿರುದ್ಧ ನಿಂತು ಗೆಲುವು ಅಸಾಧ್ಯವೆಂಬ ತೀರ್ಮಾನಕ್ಕೆ ಬಂದಿದ್ದು ರಾಜಕೀಯ ಮೌಲ್ಯದ ಗೆಲುವೇ ಆಗಿತ್ತು.
ಗೋಪಾಲಗೌಡರು ಸದಾ ಜನರ ಏಳಿಗೆಗಾಗಿ ದುಡಿದು ದಣಿದವರು. ಅದರಂತೆಯೇ ಬದುಕಿಗೆ ಏನು ಕೂಡ ಆಧಾರವಾಗಿಟ್ಟುಕೊಳ್ಳದೆ ಬಡತನದಲ್ಲೇ ಉರಿದು ನೊಂದವರ ಬಾಳಿಗೆ ಬೆಳಕಾಗಿ ಪ್ರಜ್ವಲಿಸಿದವರು. ಈ ಕುರಿತಂತೆ ಲೇಖಕ ಬಿ.ಚಂದ್ರೇಗೌಡರು “ಲಂಕೇಶ್ ಜೊತೆ ಚಂದ್ರೇಗೌಡ” ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಗೋಪಾಲಗೌಡರು ಸದನದಲ್ಲಿ, ಸಭಾಧ್ಯಕ್ಷರಾದವರು ವಿರೋಧ ಪಕ್ಷದ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆ ಕೊಡಬೇಕು ಎಂದು ತಾಕೀತು ಮಾಡುತ್ತಿದ್ದರು. ಅಂದಿನ ಸರ್ಕಾರ ಮುಖ್ಯಮಂತ್ರಿಯಾದ ಕೆಂಗಲ್ ಹನುಮಂತಯ್ಯ ಅವರನ್ನು ರೈತರ ಪರವಾಗಿ ಕುಟುಕಿದ್ದರು. ಅಷ್ಟಲ್ಲದೆ ಗೃಹ ಸಚಿವ ಸಿದ್ದ ವೀರಪ್ಪ ಅವರಿಗೆ ಕಾಗೋಡು ಚಳುವಳಿಯಲ್ಲಿ ಪೊಲೀಸರ ನಡೆಯ ಕುರಿತು ಪಶ್ನೆ ಹಾಕುತ್ತ ಇಡೀ ಸದನವನ್ನೇ ತಬ್ಬಿಬ್ಬಾಗುವಂತೆ ಮಾಡಿದ್ದರು. ಹೀಗೆ ಗೌಡರು ಒಮ್ಮೊಮ್ಮೆ ಬಂಡಾಯದ ಹಾದಿ ಹಿಡಿಯುತ್ತಿದ್ದರು. ಅವರ ಬದುಕು ಮಾತ್ರ ಸದಾ ತಣ್ಣಗೆ ಹರಿಯುವ ನದಿಯಂತಾಗಿತ್ತು.
ಆದರೆ ಇದೆಲ್ಲ ಈಗ ಮಾಸಿ ಹೋದಂತಾಗಿದೆ. ಗೌಡರು ಹುಟ್ಟಿದ ಮಣ್ಣಿನಲ್ಲೇ ಅವರ ತತ್ವ ಆದರ್ಶ, ಸಿದ್ಧಾಂತವೂ ನೆನೆಗುದಿಗೆ ಬೀಳುವಂತೆ ಆಗಿದೆ. ಇಡೀ ರಾಜ್ಯಕ್ಕೆ ಸಮಾಜವಾದಿ ಸಿದ್ಧಾಂತವನ್ನು ಪಸರಿಸಿ ಹೆಗ್ಗುರುತಾಗಿ ನಿಂತಿದ್ದ ಗೌಡರ ನೆಲ ಈಗ ಕೋಮು ಸಿದ್ಧಾಂತದಲ್ಲಿ ಮಿಂದೇಳುತ್ತಿದೆ. ರೈತರು, ಅಮಾಯಕರು, ದಲಿತರು ಮಹಿಳೆಯರು ದಿನವೂ ನಲುಗುವಂತ ವಾತಾವರಣ ನಿರ್ಮಾಣವಾಗಿದೆ. ರಾಜಕೀಯವೂ ಕೂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪ್ರತಿದಿನವೂ ಹಗರಣದ ಸುದ್ದಿಗಳು, ರಾಜಕೀಯ ನಾಯಕರ ಟೀಕಾ ಪ್ರಹಾರಗಳು, ಹೊಡೆಯಬೇಕು, ಕತ್ತರಿಸಬೇಕು ಎನ್ನುವ ದ್ವೇಷಕಾರಿ ಭಾಷಣಗಳೇ ಕೇಳಿ ಬರುತ್ತಲಿವೆಯೇ ಹೊರತು ತಾತ್ವಿಕ ವಿಚಾರವಂತಿಕೆ ಎಲ್ಲೂ ಎದ್ದು ಕಾಣುತ್ತಿಲ್ಲ. ಅದೆಲ್ಲೋ ಒಂದು ಕಡೆ ರಾಜಕೀಯ ನಾಯಕರೆನಿಸಿಕೊಂಡವರು ಅಥವಾ ಜನಪರವಾಗಿ ಇದ್ದೇವೆ ಎನ್ನುವವರೂ ಕೂಡ ಡಾಂಭಿಕವಾಗಿ ನಡೆದುಕೊಳ್ಳುವ ಪ್ರಸಂಗ ಶುರುವಾಗಿದೆ. ಇಂದಿನ ರಾಜ್ಯ ರಾಜಕೀಯ ವಿದ್ಯಮಾನಕ್ಕೆ ಹಾಗೂ ಈ ಸಮಾಜಕ್ಕೆ ಬೇಕಾಗಿರುವುದು ಗೋಪಾಲಗೌಡರ ತತ್ವ ಆದರ್ಶಗಳು ಮತ್ತು ವೈಚಾರಿಕ ಚಿಂತನೆಯುಳ್ಳ ರಾಜಕೀಯ ನೆಲೆಗಟ್ಟು. ಇದು ನೆಲೆಗಾಣದಿದ್ದರೆ ಪ್ರಜಾಪ್ರಭುತ್ವ ಪತನಮುಖಿಯಾಗುವುದು ನಿಶ್ಚಿತ.
ಗೋಪಾಲಗೌಡರ ಜನ್ಮದಿನ ಆಚರಣೆ ಎಂದರೆ ನಾಡಿನಲ್ಲಿ ಮತ್ತೆ ಅವರ ತತ್ವ ಆದರ್ಶಗಳನ್ನು ಮುನ್ನೆಲೆಯಲ್ಲಿ ನೆಲೆಗೊಳಿಸುವುದು. ಅವರು ಪ್ರತಿಪಾದಿಸಿದ ರಾಜಕೀಯ ನೈತಿಕ ಪ್ರಜ್ಞೆಯನ್ನು ಮೌಲ್ಯವಾಗಿಸುವುದು. ಇದಕ್ಕಾಗಿ ಎಲ್ಲರೂ ದುಡಿಯಬೇಕು. ಇಲ್ಲದಿದ್ದರೆ ಗೌಡರ ಜನ್ಮದಿನ ಕೇವಲ ಒಂದು ಆತ್ಮವಂಚನೆಯ ಆಚರಣೆಯಾಗುತ್ತದೆ.
ಯುವ ಪತ್ರಕರ್ತ, ಶಿವಮೊಗ್ಗ.