Home ರಾಜ್ಯ ಹಾಸನ ಹಾಸನ ಅಶ್ಲೀಲ ವಿಡಿಯೋ ಶೇರ್‌ ಮಾಡುವುದು ಅಪರಾಧ: SIT ಪ್ರಕಟಣೆ

ಹಾಸನ ಅಶ್ಲೀಲ ವಿಡಿಯೋ ಶೇರ್‌ ಮಾಡುವುದು ಅಪರಾಧ: SIT ಪ್ರಕಟಣೆ

0
FIRs were filed against MLA H.D. Revanna and his son and Hassan MP Prajwal Revanna | X/PTI

ಬೆಂಗಳೂರು : ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆ ಅದು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಸ್ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಾಸನದ ಅಶ್ಲೀಲ ವಿಡಿಯೋ ಹಂಚಿಕೊಂಡರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗುತ್ತದೆ. ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಾವುದೇ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸುವ ಕೆಲಸವನ್ನು ಮಾಧ್ಯಮ ಸಂಸ್ಥೆಗಳು, ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ಅಥವಾ ಇನ್ಯಾರೇ ಆದರೂ ಮಾಡದಂತೆ ಸೂಚಿಸಲಾಗಿದೆ.

ಹಾಸನದ ಲೈಂಗಿಕ ಹಿಂಸೆ ಮತ್ತು ಶೋಷಣೆಯ ಪ್ರಕರಣದ ಹಿನ್ನೆಲೆಯಲ್ಲಿ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ.

1. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಡಿಯೋಗಳನ್ನು ಯಾರೇ ಆಗಲಿ ಸಾಮಾಜಿಕ ಜಾಲತಾಣಗಳಲ್ಲಿ (ವಾಟ್ಸಾಪಿನಂತಹ ಮೆಸೆಂಜರ್ ಆಪ್ ಮೂಲಕವೂ ಸೇರಿ) ಹಂಚುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಕಲಂ 67(ಎ) ಐಟಿ ಆಕ್ಟ್ ಹಾಗೂ ಕಲಂ 228ಎ(1), 292 ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಖಾಸಗಿ ಮೆಸೇಜಿಂಗ್ ಆಪ್‌ಗಳ ಮುಖಾಂತರ ಹಂಚುವುದನ್ನೂ ಪತ್ತೆ ಹಚ್ಚುವುದು ಸಾಧ್ಯವಿದ್ದು, ಅಂಥದ್ದರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಇದು ಸಂಬಂಧಿಸಿದ ಬಲಿಪಶು ಮಹಿಳೆಯರ ಘನತೆ ಹಾಗೂ ಗೌಪ್ಯತೆಗೆ ಕುಂದುಂಟು ಮಾಡುವುದಾಗಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು.

2. ಸದರಿ ಪ್ರಕರಣದ ಯಾವುದೇ ಸಂತ್ರಸ್ತ ವ್ಯಕ್ತಿಯು ಈಗಾಗಲೇ ಆರಂಭಿಸಲಾಗಿರುವ ನಮ್ಮ ಹೆಲ್ಫ್ ಲೈನ್ 6360938947 ಈ ನಂಬರ್ ಅನ್ನು ಬೆಳಿಗ್ಗೆ 8ರಿಂದ ರಾತ್ರಿ 8ರ ನಡುವೆ ಯಾವಾಗ ಬೇಕಾದರೂ ಸಂಪರ್ಕಿಸಬಹುದಾಗಿದೆ. ಈ ನಂಬರಿಗೆ ಕರೆ ಮಾಡುವ ಯಾವುದೇ ವ್ಯಕ್ತಿಯ ಗುರುತನ್ನು ಗೌಪ್ಯವಾಗಿಡಲಾಗುವುದು. ಅವರು ಎಸ್ ಐ ಟಿ ಕಚೇರಿಗೆ ಬರುವ ಅಗತ್ಯವೂ ಇಲ್ಲ. ಸಂತ್ರಸ್ತರಿಗೆ ಅಗತ್ಯವಿರುವ ನೆರವನ್ನು ಒದಗಿಸಲಾಗುವುದು.

3. ಯಾವುದೇ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸುವ ಕೆಲಸವನ್ನು ಮಾಧ್ಯಮ ಸಂಸ್ಥೆಗಳು, ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ಅಥವಾ ಇನ್ಯಾರೇ ಆದರೂ ಮಾಡಬಾರದೆಂದು ಈ ಮೂಲಕ ಸೂಚಿಸಲಾಗುತ್ತಿದೆ. ಈ ವಿಚಾರದಲ್ಲಿ ಅಗತ್ಯ ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುವುದು.

4. ಯಾವುದೇ ಲೈಂಗಿಕ ಹಿಂಸೆ ಅಥವಾ ಅತ್ಯಾಚಾರ ಪ್ರಕರಣಗಳಲ್ಲಿ ನಾಚಿಕೆ ಪಟ್ಟುಕೊಳ್ಳಬೇಕಾದ್ದು, ಹಿಂಜರಿಯಬೇಕಾದ್ದು, ಅವಮಾನ ಎಂದು ಭಾವಿಸಬೇಕಾದ್ದು ಅಂತಹ ಪ್ರಕರಣಗಳಲ್ಲಿ ಅಪರಾಧವೆಸಗಿದ ವ್ಯಕ್ತಿಯೇ ಹೊರತು, ಶೋಷಣೆಗೆ ಒಳಗಾದ ವ್ಯಕ್ತಿ ಅಲ್ಲ ಎಂಬುದನ್ನು ಅರಿಯಬೇಕು ಮತ್ತು ಸೂಕ್ತ ಸಂವೇದನೆಯಿಂದ ಪ್ರವರ್ತಿಸುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ಈ ವಿಚಾರದಲ್ಲಿ ಎಸ್ ಐ ಟಿಯು ಅತ್ಯಂತ ಹೆಚ್ಚಿನ ಸಂವೇದನೆಯಿಂದ ನಡೆದುಕೊಳ್ಳಲಿದೆ. ಈಗಾಗಲೇ ಇದಕ್ಕೆ ಅಗತ್ಯವಿರುವ ವೃತ್ತಿಪರ ಕೌನ್ಸೆಲರುಗಳು, ವೈದ್ಯರುಗಳು, ಇಂತಹ ಕಾರ್ಯದಲ್ಲಿ ಅನುಭವವಿರುವ ಸಂಸ್ಥೆಗಳ ನೆರವನ್ನು ಎಸ್ ಐ ಟಿ ಪಡೆದುಕೊಂಡಿದೆ. ಸಾರ್ವಜನಿಕರೂ ಈ ವಿಚಾರದಲ್ಲಿ ಸ್ಪಂದಿಸುವುದು ಅಗತ್ಯ ಎಂದು ತಿಳಿಸಿದೆ.

You cannot copy content of this page

Exit mobile version