ಅಶ್ಲೀಲ ಪದ ಪ್ರಯೋಗ, ಜಾತಿ ನಿಂದನೆ ಹಾಗೂ ಲಂಚಕ್ಕೆ ಬೇಡಿಕೆ ಇಟ್ಟ ಬಗೆಗಿನ ಬಿಜೆಪಿ ಶಾಸಕ ಮುನಿರತ್ನ ಮಾತನಾಡಿದ್ದು ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಿಬಿಎಂಪಿ ಗುತ್ತಿಗೆದಾರ ಒಕ್ಕಲಿಗ ಸಮುದಾಯಕ್ಕೆ ಸೇರಿದ ಚೆಲುವರಾಜು ಜೊತೆಗೆ ಮಾತನಾಡಿದ್ದು ಎನ್ನಲಾದ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಸುದ್ದಿ ಮಾಡಿದೆ.
ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಜೊತೆ ಹಣಕ್ಕಾಗಿ ಒತ್ತಾಯ ಮಾಡುತ್ತಾ ‘ಅಮ್ಮನ್…’ ಇಂದ ಶುರುವಾಗಿ ಸಂಪೂರ್ಣವಾಗಿ ತೀರಾ ಕೆಳಮಟ್ಟದ ಹೊಲಸು ಮಾತನ್ನಾಡಿರುವ ಶಾಸಕ ಮುನಿರತ್ನ ಗುತ್ತಿಗೆದಾರ ಚೆಲುವರಾಜು ಅವರಿಗೆ ಧಮಕಿ ಹಾಕಿದ್ದು ಆಡಿಯೋದಲ್ಲಿ ಕೇಳಿ ಬಂದಿದೆ.
ಮಾತಿನ ನಡುವೆ ದಲಿತರೊಬ್ಬರ ಹೆಸರು ಪ್ರಸ್ತಾಪಿಸದೇ ‘ದಲಿತ ಸೂ* ಮಕ್ಕಳು’ ಎಂಬ ಮಾತೂ ಸಹ ಕೇಳಿ ಬಂದಿದ್ದು, ಶಾಸಕ ಮುನಿರತ್ನಗೆ ದಲಿತರ ಮೇಲಿನ ಅಸಹನೆ ಮತ್ತು ಕೀಳು ಅಭಿಪ್ರಾಯ ಹೊರ ಹಾಕಿದಂತಿದೆ.
ಅಷ್ಟೇ ಅಲ್ಲದೇ ಗುತ್ತಿಗೆದಾರನ ಜಾತಿ ಕೇಳಿ ‘ಗೌಡ್ರಾ ನೀನು…’ ಎನ್ನುತ್ತಾ ಆತನ ಹೆಂಡತಿ ಬಗ್ಗೆಯೂ ಅಶ್ಲೀಲವಾಗಿ ಮಾತಾಡಿದ್ದು, ಈ ವೈರಲ್ ಆಡಿಯೋ ನೆಟ್ಟಿಗರಿಂದ ತೀವ್ರ ಟೀಕೆಗೆ ಒಳಗಾಗಿದೆ. ಒಟ್ಟಾರೆ ಈ ಆಡಿಯೋ ಹಿಂದಿರುವ ವಿಚಾರ ಏನು, ಯಾಕಾಗಿ ಈ ಮಾತನ್ನಾಡಿದ್ದು ಎಂಬುದು ತಿಳಿದು ಬಂದಿಲ್ಲ.