Friday, April 26, 2024

ಸತ್ಯ | ನ್ಯಾಯ |ಧರ್ಮ

ಪಾಕಿಸ್ತಾನದ ಪ್ರಧಾನಿಯಾಗಿ ಶೆಹಬಾಜ್ ಶರೀಫ್ 2ನೇ ಬಾರಿ ಪ್ರಮಾಣ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಶೆಹಬಾಜ್ ಶರೀಫ್ ಅವರು 2022ರ ನಂತರ 2ನೇ ಬಾರಿ ಪಾಕಿಸ್ತಾನದ ಪ್ರಧಾನಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.


ಪಾಕಿಸ್ತಾನದ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 72 ವರ್ಷದ ಶೆಹಬಾಜ್ ಅವರಿಗೆ ರಾಷ್ಟ್ರಪತಿ ಆರೀಫ್ ಅಲ್ವಿ ಅವರು ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಪಿಎಂಎಲ್‌–ಎನ್ ಪಕ್ಷದ ಅಧ್ಯಕ್ಷ ನವಾಜ್ ಶರೀಫ್‌, ಪಂಜಾಬ್ ಮುಖ್ಯಮಂತ್ರಿ ಮರಿಯಮ್ ನವಾಜ್, ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.ಮೂರು ಸೇನಾ ಘಟಕಗಳ ಮುಖ್ಯಸ್ಥರು, ರಾಜತಾಂತ್ರಿಕರು, ಮುಂಚೂಣಿಯ ಕೈಗಾರಿಕೋದ್ಯಮಿಗಳು, ನಾಗರಿಕ ಸಮಾಜದ ಪ್ರಮುಖರು ಮತ್ತು ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.


2022ರಲ್ಲಿ ಪಾಕಿಸ್ತಾನದಲ್ಲಿದ್ದ ಸಮ್ಮಿಶ್ರ ಸರ್ಕಾರದಲ್ಲೂ ಶೆಹಬಾಜ್ ಅವರು ಪ್ರಧಾನಿಯಾಗಿದ್ದರು. ಆಗ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ವಿರುದ್ಧ ವಿಶ್ವಾಸಮತ ಯಾಚನೆಯಲ್ಲಿ ವಿಜಯ ಸಾಧಿಸಿ ಶೆಹಬಾಜ್ ಪ್ರಧಾನಿ ಹುದ್ದೆಗೆ ಏರಿದ್ದರು. ಆದರೆ ಆ ಸಂದರ್ಭದಲ್ಲಿ ಅನಾರೋಗ್ಯದಿಂದಾಗಿ ಅಲ್ವಿ ಅವರು ಪ್ರಮಾಣವಚನ ಬೋಧಿಸಿರಲಿಲ್ಲ. ಹೀಗಾಗಿ ಸೆನೆಟ್ ಅಧ್ಯಕ್ಷ ಸಾದಿಕ್ ಸಂಜರಾನಿ ಅವರು ಪ್ರತಿಜ್ಞಾವಿಧಿ ಬೋಧಿಸಿದ್ದರು.


ಈ ಬಾರಿ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ, ಪಾಕಿಸ್ತಾನ ಮುಸ್ಲಿಂ ಲೀಗ್–ನವಾಜ್ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸೇರಿ ಸರ್ಕಾರ ರಚಿಸಿವೆ. ಸಂಸತ್‌ನಲ್ಲಿ ಭಾನುವಾರ ನಡೆದ ಕಲಾಪದಲ್ಲಿ ವಿರೋಧ ಪಕ್ಷಗಳ ಘೋಷಣೆಯ ನಡುವೆಯೂ ಶೆಹಬಾಜ್ ಅವರು ಸುಲಭವಾಗಿ ಜಯ ಸಾಧಿಸಿ ಪ್ರಧಾನಿ ಹುದ್ದೆಯ ಹಾದಿಯನ್ನು ಸರಿಮಾಡಿಕೊಂಡರು.
ಸಂಸತ್ತಿನ ಒಟ್ಟು 336 ಸಂಖ್ಯೆಯಲ್ಲಿ ಪಿಎಂಎಲ್‌–ಎನ್ ಹಾಗೂ ಪಿಪಿಪಿ ಜತೆಗೂಡಿ 201 ಮತಗಳನ್ನು ಶೆಹಬಾಜ್ ಪರವಾಗಿ ನೀಡಿದರು. ಇಮ್ರಾನ್ ಖಾನ್ ಅವರ ತೆಹರೀಕ್–ಎ–ಇನ್ಸಾಫ್‌ (ಪಿಟಿಐ) ಪಕ್ಷದ ಪರ ಅಭ್ಯರ್ಥಿ ಒಮರ್ ಅಯೂಬ್ ಖಾನ್ ಅವರು 92 ಮತಗಳನ್ನಷ್ಟೇ ಪಡೆದು ಸೋಲು ಕಂಡರು.


ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿದ ಶೆಹಬಾಜ್ ಶರೀಫ್, ‘ಸಂಕಷ್ಟ ಸ್ಥಿತಿಯಲ್ಲಿರುವ ದೇಶದ ಆರ್ಥಿಕತೆಯನ್ನು ಸಹಜ ಸ್ಥಿತಿಗೆ ತರಲು ಕೆಲವೊಂದು ಪರಿಣಾಮಕಾರಿ ಬದಲಾವಣೆ ತರುವುದು ಅಗತ್ಯ. ಜತೆಗೆ ನೆರೆಯ ರಾಷ್ಟ್ರಗಳೊಂದಿಗೆ ಶಾಂತಿಯ ಮಾತುಕತೆ ಮತ್ತು ಉತ್ತಮ ಬಾಂಧವ್ಯ ಹೊಂದುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು’ ಎಂದರು.

Related Articles

ಇತ್ತೀಚಿನ ಸುದ್ದಿಗಳು