Tuesday, August 5, 2025

ಸತ್ಯ | ನ್ಯಾಯ |ಧರ್ಮ

ಜಾರ್ಖಂಡ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ವ್ಯಕ್ತಿ ಶಿಬು ಸೋರೆನ್

ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಶಿಬು ಸೋರೆನ್ ಇಂದು ಬೆಳಿಗ್ಗೆ ನಿಧನರಾದರು. ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಚಿಕಿತ್ಸೆ ಪಡೆಯುತ್ತಿದ್ದರು. ಮೂತ್ರಪಿಂಡಗಳ ಕಾಯಿಲೆಯಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಜುಲೈ ಕೊನೆಯ ವಾರದಲ್ಲಿ ಹದಗೆಟ್ಟಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ಬೆಳಿಗ್ಗೆ ನಿಧನರಾದರು. ಈ ವಿಷಯವನ್ನು ಅವರ ಪುತ್ರ ಮತ್ತು ಹಾಲಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ಸಾಮಾಜಿಕ ಮಾಧ್ಯಮವಾದ ‘X’ ಮೂಲಕ ತಿಳಿಸಿದರು.

ಜೀವನ ಮತ್ತು ಕುಟುಂಬ

ಶಿಬು ಸೋರೆನ್ ಅವರು ಜನವರಿ 11, 1944 ರಂದು ನೆಮ್ರಾ ಗ್ರಾಮದಲ್ಲಿ (ಹಿಂದೆ ಬಿಹಾರದ ಭಾಗವಾಗಿದ್ದ ಈಗಿನ ಜಾರ್ಖಂಡ್) ಜನಿಸಿದರು. ಅವರ ತಂದೆ ಶೋಬರನ್ ಸೋರೆನ್. ಶಿಬು ಸೋರೆನ್ ಅವರಿಗೆ 15 ವರ್ಷ ವಯಸ್ಸಿದ್ದಾಗ ಬಡ್ಡಿ ವ್ಯಾಪಾರಿಗಳ ದಾಳಿಯಲ್ಲಿ ಅವರ ತಂದೆ ಶೋಬರನ್ ಮೃತಪಟ್ಟರು. ಈ ಘಟನೆ ಅವರ ಮೇಲೆ ತೀವ್ರ ಪರಿಣಾಮ ಬೀರಿತ್ತು. ಹಜಾರಿಬಾಗ್‌ನ ಗೋಲಾ ಹೈಸ್ಕೂಲ್‌ನಲ್ಲಿ ಶಿಬು ಸೋರೆನ್ ಮೆಟ್ರಿಕ್ಯುಲೇಶನ್ ಪೂರ್ಣಗೊಳಿಸಿದರು. ಜನವರಿ 1, 1962 ರಂದು ಅವರು ರೂಪಿ ಸೋರೆನ್ ಅವರನ್ನು ವಿವಾಹವಾದರು. ಅವರಿಗೆ ಮೂವರು ಪುತ್ರರು ಮತ್ತು ಒಬ್ಬ ಪುತ್ರಿ ಸೇರಿದಂತೆ ನಾಲ್ವರು ಮಕ್ಕಳಿದ್ದಾರೆ. ಹಿರಿಯ ಪುತ್ರ ದುರ್ಗಾ ಸೋರೆನ್ 2009ರಲ್ಲಿ ನಿಧನರಾದರು. ಪುತ್ರಿ ಅಂಜನಿ ಜೆಎಂಎಂ ಒಡಿಶಾ ವಿಭಾಗದ ನಾಯಕರಾಗಿದ್ದಾರೆ. ಕಿರಿಯ ಪುತ್ರ ಬಸಂತ್ ಸೋರೆನ್ ಶಾಸಕರಾಗಿದ್ದಾರೆ ಮತ್ತು ಮತ್ತೊಬ್ಬ ಪುತ್ರ ಹೇಮಂತ್ ಸೋರೆನ್ ಪ್ರಸ್ತುತ ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿದ್ದಾರೆ.

ಶಿಬು ಸೋರೆನ್ ಅವರ ನಿಧನದಿಂದಾಗಿ ಬುಡಕಟ್ಟು ಜನರ ಧ್ವನಿಯಾಗಿ, ಜಾರ್ಖಂಡ್ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಕಾರಣವಾದ ರಾಜಕೀಯ ಯುಗವೊಂದು ಅಂತ್ಯಗೊಂಡಿದೆ. ಶಿಬು ಸೋರೆನ್ ಅವರನ್ನು ‘ದಿಶೋಮ್ ಗುರು’ (ದೇಶದ ನಾಯಕ) ಎಂದು ವ್ಯಾಪಕವಾಗಿ ಗುರುತಿಸಲಾಗುತ್ತದೆ. ಬುಡಕಟ್ಟು ಜನರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ನಾಯಕ ಎಂದು ಅವರು ಪ್ರಸಿದ್ಧರಾಗಿದ್ದಾರೆ. ಅವರು ಪ್ರಾದೇಶಿಕ ಮತ್ತು ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಜೆಎಂಎಂ ಪಕ್ಷದ ಸ್ಥಾಪಕ ಸದಸ್ಯರಾಗಿ

1973 ರಲ್ಲಿ, ಟ್ರೇಡ್ ಯೂನಿಯನ್ ನಾಯಕರಾದ ಎ.ಕೆ. ರಾಯ್ ಮತ್ತು ಬಿಹಾರಿ ಮಹತೋ ಅವರೊಂದಿಗೆ ಶಿಬು ಸೋರೆನ್ ಅವರು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷವನ್ನು ಸ್ಥಾಪಿಸಿದರು. ಅವರ ನಾಯಕತ್ವದಲ್ಲಿ, ಜೆಎಂಎಂ ಪಕ್ಷವು ಜಾರ್ಖಂಡ್ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುವ ಪ್ರಮುಖ ಶಕ್ತಿಯಾಗಿ ಬೆಳೆಯಿತು. ಪ್ರತ್ಯೇಕ ರಾಜ್ಯಕ್ಕಾಗಿ ಚೋಟಾನಾಗ್‌ಪುರ್ ಮತ್ತು ಸಂತಾಲ್ ಪರಗಣ ಪ್ರದೇಶಗಳಲ್ಲಿ ಈ ಪಕ್ಷವು ಪ್ರಬಲ ಬೆಂಬಲವನ್ನು ಗಳಿಸಿತು. ದಶಕಗಳ ಕಾಲ ಹೋರಾಟದ ನಂತರ, ನವೆಂಬರ್ 15, 2000 ರಂದು ಜಾರ್ಖಂಡ್ ಪ್ರತ್ಯೇಕ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದಿತು.

ರಾಜಕೀಯ ಜೀವನ

ಶಿಬು ಸೋರೆನ್ ಅವರ ರಾಜಕೀಯ ಜೀವನವು 1980ರಲ್ಲಿ ಪ್ರಾರಂಭವಾಯಿತು. 1980ರ ಏಳನೇ ಲೋಕಸಭಾ ಚುನಾವಣೆಯಲ್ಲಿ ಅವರು ದುಮ್ಕಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಇದೇ ಕ್ಷೇತ್ರದಿಂದ ಅವರು ಹಲವು ಬಾರಿ ಗೆದ್ದಿದ್ದಾರೆ. ಅವರು 2020ರಲ್ಲಿ ರಾಜ್ಯಸಭಾ ಸಂಸದರಾಗಿಯೂ ಕಾರ್ಯನಿರ್ವಹಿಸಿದರು. ಅಕ್ಟೋಬರ್ 2024ರಲ್ಲಿ ಅವರು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದರು.

ಮೂರು ಬಾರಿ ಮುಖ್ಯಮಂತ್ರಿ

ಶಿಬು ಸೋರೆನ್ ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು, ಆದರೆ ಯಾವುದೇ ಅವಧಿಯನ್ನು ಪೂರ್ಣಗೊಳಿಸಿರಲಿಲ್ಲ. ಅವರು ಕೆಲವೇ ದಿನಗಳು ಅಥವಾ ಕೆಲವು ತಿಂಗಳುಗಳ ಕಾಲ ಮಾತ್ರ ಮುಖ್ಯಮಂತ್ರಿಯಾಗಿದ್ದರು. ಅವರು ಮಾರ್ಚ್ 2-11, 2005; ಆಗಸ್ಟ್ 27, 2008 – ಜನವರಿ 12, 2009; ಮತ್ತು ಡಿಸೆಂಬರ್ 30, 2009 – ಮೇ 31, 2010ರ ವರೆಗೆ ಸಿಎಂ ಆಗಿದ್ದರು. ಯುಪಿಎ-1 ಸರ್ಕಾರದ ಅವಧಿಯಲ್ಲಿ (2004-2006) ಅವರು ಕೇಂದ್ರ ಕಲ್ಲಿದ್ದಲು ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. ಕೇಂದ್ರ ಸಚಿವರಾಗಿದ್ದಾಗ ಅವರು ಕೆಲವು ಕಾನೂನು ಸಮಸ್ಯೆಗಳನ್ನು ಎದುರಿಸಿದ್ದರು.

ವಿವಾದಗಳು ಮತ್ತು ನ್ಯಾಯಾಲಯ ಪ್ರಕರಣಗಳು

1975ರ ಚಿರುದಿಹ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 2004ರಲ್ಲಿ ಸೋರೆನ್ ವಿರುದ್ಧ ಬಂಧನ ವಾರಂಟ್ ಜಾರಿಯಾಗಿತ್ತು. ಈ ಕಾರಣದಿಂದ ಅವರು ಸ್ವಲ್ಪ ಸಮಯದವರೆಗೆ ತಲೆಮರೆಸಿಕೊಂಡಿದ್ದರು. ಬಂಧನಕ್ಕೊಳಗಾದ ನಂತರ ಕೆಲವು ಕಾಲ ಪೊಲೀಸ್ ವಶದಲ್ಲಿದ್ದು, ನಂತರ ಜಾಮೀನು ಪಡೆದರು. ಮಾರ್ಚ್ 2008ರಲ್ಲಿ ಅವರು ಈ ಪ್ರಕರಣದಿಂದ ನಿರ್ದೋಷಿ ಎಂದು ಬಿಡುಗಡೆಯಾದರು.

1994ರಲ್ಲಿ ತಮ್ಮ ಮಾಜಿ ಕಾರ್ಯದರ್ಶಿ ಶಶಿನಾಥ್ ಝಾ ಅವರ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ, ನವೆಂಬರ್ 2006ರಲ್ಲಿ ಸೋರೆನ್ ಅವರನ್ನು ದೋಷಿ ಎಂದು ಘೋಷಿಸಲಾಗಿತ್ತು. 1993ರಲ್ಲಿ ಪಿ.ವಿ. ನರಸಿಂಹ ರಾವ್ ಸರ್ಕಾರದ ವಿರುದ್ಧ ನಡೆದ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ರಾಜಕೀಯ ಪ್ರಭಾವ ಹೊಂದಿದ್ದ ಝಾ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಸಿಬಿಐ ಆರೋಪಿಸಿತ್ತು. ಆದರೆ, ಈ ಪ್ರಕರಣದಲ್ಲಿ ಸೋರೆನ್ ನಿರ್ದೋಷಿ ಎಂದು ಬಿಡುಗಡೆಯಾದರು. ಏಪ್ರಿಲ್ 2018ರಲ್ಲಿ ಸುಪ್ರೀಂ ಕೋರ್ಟ್ ಶಿಬು ಸೋರೆನ್ ಅವರನ್ನು ನಿರ್ದೋಷಿ ಎಂದು ತೀರ್ಪು ನೀಡಿತು.

ಜೂನ್ 2007ರಲ್ಲಿ, ಸೋರೆನ್ ಅವರನ್ನು ಜೈಲಿಗೆ ಕರೆದೊಯ್ಯುತ್ತಿದ್ದಾಗ ದೇವಘರ್ ಬಳಿ ಅವರ ಬೆಂಗಾವಲು ವಾಹನದ ಮೇಲೆ ಸ್ಫೋಟಕಗಳನ್ನು ಎಸೆಯುವ ಮೂಲಕ ಹತ್ಯೆ ಮಾಡಲು ಪ್ರಯತ್ನಿಸಲಾಗಿತ್ತು. ಆ ದಾಳಿಯಿಂದ ಅವರು ಪಾರಾಗಿದ್ದರು. ಅವರ ರಾಜಕೀಯ ಜೀವನದಲ್ಲಿ ಏರಿಳಿತಗಳು ಇದ್ದರೂ, ಜಾರ್ಖಂಡ್‌ನಲ್ಲಿ ಅವರ ಪ್ರಭಾವ ಅಚಲವಾಗಿತ್ತು. ಅವರು ಏಪ್ರಿಲ್ 2025ರ ವರೆಗೆ 38 ವರ್ಷಗಳ ಕಾಲ ಜೆಎಂಎಂ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದರು. ಅವರ ಪುತ್ರ ಹೇಮಂತ್ ಸೋರೆನ್ ಅವರು ಏಪ್ರಿಲ್‌ನಲ್ಲಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಶಿಬು ಸೋರೆನ್ ಅವರ ದಶಕಗಳ ರಾಜಕೀಯ ಜೀವನ ಮತ್ತು ಜಾರ್ಖಂಡ್ ರಾಜ್ಯದ ಇತಿಹಾಸದಲ್ಲಿ ಅವರ ಹೋರಾಟ ಚಿರಸ್ಥಾಯಿಯಾಗಿ ಉಳಿಯಲಿದೆ. ಬುಡಕಟ್ಟು ಜನರ ಗುರುತು, ಗೌರವ ಮತ್ತು ಸ್ವಯಂ-ಆಡಳಿತಕ್ಕಾಗಿ ಅವರು ಮಾಡಿದ ಹೋರಾಟ ಮುಂದಿನ ತಲೆಮಾರುಗಳಿಗೆ ಶಾಶ್ವತ ಪರಂಪರೆಯಾಗಿ ಉಳಿಯಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page