ಮಹಾರಾಷ್ಟ್ರದ ಮುಂಬೈನ ದಹಿಸರ್ ಪ್ರದೇಶದಲ್ಲಿ ಫೇಸ್‌ಬುಕ್ ಲೈವ್ ಸೆಷನ್‌ನಲ್ಲಿ ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಮತ್ತು ಮಾಜಿ ಕಾರ್ಪೊರೇಟರ್ ಅಭಿಷೇಕ್ ಘೋಸಲ್ಕರ್ ಅವರ ಮೇಲೆ ನಿನ್ನೆ ರಾತ್ರಿ ಗುಂಡು ಹಾರಿಸಲಾಯಿತು.
ನಂತರ ಈ ನಾಯಕನನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಗುಂಡೇಟಿಗೆ ಬಲಿಯಾದರು. ನಂತರ ದುಷ್ಕರ್ಮಿ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಬಲಿಪಶು ಮತ್ತು ದುಷ್ಕರ್ಮಿ ಮೌರಿಸ್ ನೊರೊನ್ಹಾ ನಡುವೆ ಹಳೆಯ ದ್ವೇಷವಿತ್ತು ಎಂದಿದ್ದಾರೆ.
“ಕ್ರೈಂ ಬ್ರಾಂಚ್‌ನ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ, ಈ ಇಬ್ಬರ ನಡುವೆ ಕೆಲವು ರೀತಿಯ ದ್ವೇಷ ಇತ್ತು ಎಂದು ತೋರುತ್ತದೆ ಮತ್ತು ಹತ್ಯೆಗೆ ಅದೇ ಕಾರಣವಾಗಿರಬಹುದು” ಎಂದು ಡಿಸಿಪಿ (ಕ್ರೈಂ ಬ್ರಾಂಚ್) ರಾಜ್ ತಿಲಕ್ ರೌಶನ್ ಹೇಳಿದ್ದಾರೆ.
ಕಳೆದ ಎರಡು ತಿಂಗಳಿನಲ್ಲಿ ನಡೆದ ಎರಡನೇ ಘಟನೆ ಇದಾಗಿದ್ದು ರಾಜ್ಯದ ಜನರನ್ನು ಆತಂಕಕ್ಕೆ ದೂಡಿದೆ. ಇದಕ್ಕೂ ಮುನ್ನ, ಬಿಜೆಪಿ ಶಾಸಕ ಗಣಪತ್ ಗಾಯಕ್‌ವಾಡ್ ಅವರು ಉಲ್ಲಾಸ್‌ನಗರದ ಹಿಲ್‌ಲೈನ್ ಪೊಲೀಸ್ ಠಾಣೆಯಲ್ಲಿ ಶಿವಸೇನಾ (ಏಕನಾಥ್ ಶಿಂಧೆ) ಬಣದ ನಾಯಕ ಮಹೇಶ್ ಗಾಯಕ್‌ವಾಡ್ ಅವರ ಮೇಲೆ ಗುಂಡು ಹಾರಿಸಿದ ಕುರಿತು ವರದಿಯಾಗಿತ್ತು. ಪ್ರತಿಪಕ್ಷಗಳು ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದವು.
ಈ ವಿಷಯದಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಜಂಗಲ್ ಆರಂಭದ ಸೂಚನೆಯನ್ನು ನೀಡುತ್ತಿದೆ ಎಂದು ಕಟುವಾಗಿ ಟೀಕಿಸಿದೆ. ಉದ್ಧವ್ ಬಣದ ಸಂಜಯ್ ರಾವತ್ ಏಕನಾಥ್ ಶಿಂಧೆ ಮತ್ತು ಫಡ್ನವೀಸ್ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ದಾರೆ.