ಬೆಂಗಳೂರು: ಭ್ರಷ್ಟಚಾರದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಮೀರಿಸುವಂತಿದೆ. ಶೇ 40ರಷ್ಟು ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲೂ ಮುಂದುವರಿದಿದೆ. ಬಿಜೆಪಿ ಸರ್ಕಾರದಲ್ಲಿ ಶಾಸಕರೇ ನೇರವಾಗಿ ಕಮಿಷನ್ ತೆಗೆದುಕೊಳ್ಳುತ್ತಿದ್ದರು. ಈಗಿನ ಕಾಂಗ್ರೆಸ್ ಶಾಸಕರು ಅಧಿಕಾರಿಗಳ ಮೂಲಕ ಕಮಿಷನ್ ಸಂಗ್ರಹಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿದ ಅವರು, ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಬಹುತೇಕ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಚಿವರು, ಶಾಸಕರಿಗೆ ನೀಡಬೇಕು ಎಂದು ಗುತ್ತಿಗೆದಾರರಿಂದ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. “ನಿಮಗೆ ಕೆಲಸ ಆಗಬೇಕಾದರೆ ಕಮಿಷನ್ ಕೊಡಲೇಬೇಕಿದೆ. ನಾವು ಮೇಲಿನವರಿಗೆ ‘ಫೀಡ್’ ಮಾಡಬೇಕು” ಎಂದು ಅಧಿಕಾರಿಗಳು ನೇರವಾಗಿ ಹೇಳುತ್ತಿದ್ದಾರೆ. ಏಕೆ ಕಮಿಷನ್ ನೀಡಬೇಕು ಎಂದು ಮುಖ್ಯ ಎಂಜಿನಿಯರ್‌ಗಳನ್ನು ಪ್ರಶ್ನಿಸಿದರೆ ಸಚಿವರು, ಶಾಸಕರತ್ತ ಬೊಟ್ಟು ಮಾಡಿ ತೋರಿಸುತ್ತಾರೆ ಎಂದು ಆರೋಪಿಸಿದರು.
ಯಾವ ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದಾರೆ ಎಂಬ ಬಗ್ಗೆ ನಮಲ್ಲಿ ಸಂಪೂರ್ಣ ಮಾಹಿತಿ ಇದೆ. ಇನ್ನಷ್ಟು ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ. ಈಗಾಗಲೇ ಐದು ಮಾನನಷ್ಟ ಮೊಕದ್ದಮೆ ನನ್ನ ಮೇಲೆ ದಾಖಲಾಗಿವೆ. ಹೀಗಾಗಿ ಸದ್ಯಕ್ಕೆ ಹೆಸರು ಬಹಿರಂಗಪಡಿಸುವುದಿಲ್ಲ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರಿಗೆ ದೂರು ನೀಡುತ್ತೇನೆ. ಪ್ರತಿಪಕ್ಷದ ನಾಯಕ ಆರ್. ಅಶೋಕ ಅವರನ್ನೂ ಭೇಟಿ ಮಾಡಿ ಕಮಿಷನ್ ಹಾಗೂ ಪ್ಯಾಕೇಜ್ ಟೆಂಡರ್‌ಗಳ ಬಗ್ಗೆ ಮಾಹಿತಿ ನೀಡುತ್ತೇನೆ’ ಎಂದು ಕೆಂಪಣ್ಣ ತಿಳಿಸಿದರು.
ಶೇ 40ರಷ್ಟು ಕಮಿಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗಕ್ಕೆ ಸುಮಾರು ಏಳು ಸಾವಿರ ಪುಟಗಳ ದಾಖಲೆ ನೀಡಲಾಗಿದೆ. ಪೊಲೀಸ್ ವಸತಿ ಗೃಹ ಅಭಿವೃದ್ಧಿ ನಿಗಮ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಕಾಮಗಾರಿಗಳನ್ನು ನಡೆಸಲು ಪ್ಯಾಕೇಜ್ ಪದ್ಧತಿ ಅನುಸರಿಸಲಾಗುತ್ತಿದೆ. ಸ್ಥಳೀಯ ಗುತ್ತಿಗೆದಾರರನ್ನು ದೂರವಿಟ್ಟು ನೆರೆ ರಾಜ್ಯದ ಗುತ್ತಿಗೆದಾರರನ್ನು ಓಲೈಸುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ. ಪ್ಯಾಕೇಜ್ ಪದ್ಧತಿಯಿಂದ ರಾಜ್ಯದ ಸ್ಥಳೀಯ, ಸಣ್ಣ–ಮಧ್ಯಮ ಗುತ್ತಿಗೆದಾರರಿಗೆ ಸಮಸ್ಯೆಯಾಗಿದೆ. ಅವರಿಗೆ ಕಾಮಗಾರಿಗಳು ಸಿಗುತ್ತಿಲ್ಲ. ಅವರು ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಕೆಂಪಣ್ಣ ಮಾಹಿತಿ ನೀಡಿದರು.