Home ಬೆಂಗಳೂರು ವಂದೇ ಮಾತರಂ |ಮಾತಿನ ಮೇಲೆ ಹಿಡಿತವಿರಲಿ, ನಿಮ್ಮಂತಹವರಿಂದ ಕಾಂಗ್ರೆಸ್‌ ಪಾಠ ಕಲಿಯಬೇಕಿಲ್ಲ: ಸೂಲಿಬೆಲೆಗೆ ಸಚಿವ ಶಿವರಾಜ್...

ವಂದೇ ಮಾತರಂ |ಮಾತಿನ ಮೇಲೆ ಹಿಡಿತವಿರಲಿ, ನಿಮ್ಮಂತಹವರಿಂದ ಕಾಂಗ್ರೆಸ್‌ ಪಾಠ ಕಲಿಯಬೇಕಿಲ್ಲ: ಸೂಲಿಬೆಲೆಗೆ ಸಚಿವ ಶಿವರಾಜ್ ತಂಗಡಗಿ ತಿರುಗೇಟು

0

ಬೆಂಗಳೂರು: ‘ವಂದೇ ಮಾತರಂ’ ಗೀತೆಯ ಗಾಯನ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಂದೇ ಮಾತರಂ ಗೀತೆಯನ್ನು ಮೊದಲು ಹಾಡಿದ್ದೇ ಕಾಂಗ್ರೆಸ್ಸಿಗರು ಎಂದಿರುವ ಸಚಿವರು, ಇತಿಹಾಸದ ಅರಿವಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಬೋಧನೆ ಮಾಡುವುದು ಅಜ್ಞಾನ ಮತ್ತು ಅಹಂಕಾರದ ಪ್ರದರ್ಶನ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, 1896ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಗೀತೆಯನ್ನು ಮೊದಲ ಬಾರಿಗೆ ಹಾಡಲಾಗಿತ್ತು ಎಂದು ನೆನಪಿಸಿದ್ದಾರೆ. 1875ರಲ್ಲಿ ಬಂಕಿಮ ಚಂದ್ರ ಚಟರ್ಜಿ ಅವರು ರಚಿಸಿದ್ದ ಎರಡು ಚರಣಗಳನ್ನು ಬಳಿಕ ಸುಭಾಷ್ ಚಂದ್ರ ಬೋಸ್ ಅವರ ಒತ್ತಾಸೆಯಂತೆ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ನಿರ್ದೇಶನದ ಮೇರೆಗೆ ರವೀಂದ್ರನಾಥ ಠಾಗೂರ್ ಅವರು ಪರಿಶೀಲಿಸಿದರು. ದೇಶದ ಏಕತೆಗೆ ಧಕ್ಕೆ ಬಾರದಂತೆ ಕೇವಲ ಆ ಎರಡು ಚರಣಗಳನ್ನು ಮಾತ್ರ ಹಾಡಲು 1937ರಲ್ಲಿ ರವೀಂದ್ರನಾಥ ಠಾಗೂರ್ ಅವರ ಸಲಹೆಯಂತೆ ತೀರ್ಮಾನಿಸಲಾಯಿತು. ಆ ಪದ್ಧತಿ ನೂರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಅವರು ವಿವರಿಸಿದ್ದಾರೆ.

ಸರ್ಕಾರದ ಆದೇಶದಂತೆ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಿಸುವಂತೆ ಸೂಚಿಸುವುದು ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿ ತಮ್ಮ ಕರ್ತವ್ಯ ಎಂದಿರುವ ತಂಗಡಗಿ, ಕಳೆದ ವಾರ ಗಂಗಾವತಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ವೇಳೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಬಲವಂತವಾಗಿ ಪೂರ್ಣ ಗೀತೆ ಹಾಡಿಸಿದ ಹಿನ್ನೆಲೆಯಲ್ಲಿ, ನಿಯಮ ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಸೂಚನೆ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿತ್ತು ಎಂದಿರುವ ಅವರು, ವಂದೇ ಮಾತರಂ ಪೂರ್ಣ ಚರಣಗಳನ್ನು ಹಾಡುವ ಬಗ್ಗೆ ಸದನದಲ್ಲಿ ಚರ್ಚೆಯಾಗಿ ಸರ್ಕಾರ ನಿರ್ಧಾರ ಕೈಗೊಂಡರೆ ಅದಕ್ಕೂ ತಮ್ಮದೇನೂ ಅಭ್ಯಂತರವಿಲ್ಲ ಎಂದು ಈ ಹಿಂದೆಯೇ ಹೇಳಿದ್ದಾಗಿ ಉಲ್ಲೇಖಿಸಿದ್ದಾರೆ.

ತಮ್ಮ ತಾಕತ್ತನ್ನು ಪ್ರಶ್ನಿಸಿದ ಸೂಲಿಬೆಲೆಗೆ ತಿರುಗೇಟು ನೀಡಿದ ಸಚಿವರು, “ಕೊಪ್ಪಳದ ಗಂಡು ಮೆಟ್ಟಿದ ಮಣ್ಣಿನ ಮಗನಾದ ನನ್ನ ಬಳಿ ನಿಮ್ಮ ತಾಕತ್ತು ನಡೆಯುವುದಿಲ್ಲ; ತಾಕತ್ತು ತೋರಿಸುವ ಚಟವಿದ್ದರೆ ಆರ್‌ಎಸ್‌ಎಸ್‌ನಲ್ಲಿ ತೋರಿಸಿ,” ಎಂದು ಆಕ್ರೋಶ ಹೊರಹಾಕಿದ್ದಾರೆ.

ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ- 2026’ ಅನ್ನು ಅಂಗೀಕರಿಸಿ ವಂದೇ ಮಾತರಂಗೆ ರಾಷ್ಟ್ರಗೀತೆಯಷ್ಟೇ ಸಮಾನ ಗೌರವ ನೀಡಿದೆ ಎಂದು ಹೇಳುವ ನೀವು, ಆರ್‌ಎಸ್‌ಎಸ್‌ನ ಶಾಖೆಗಳು ಹಾಗೂ ಶಿಬಿರಗಳಲ್ಲಿ ‘ನಮಸ್ತೆ ಸದಾ ವತ್ಸಲೆ’ ಜತೆಗೆ ರಾಷ್ಟ್ರಗೀತೆಯನ್ನು ಯಾವಾಗ ಹಾಡುತ್ತೀರಿ ಎಂದು ಸಚಿವರು ಪ್ರಶ್ನಿಸಿದ್ದಾರೆ. ಆರ್‌ಎಸ್‌ಎಸ್‌ನ ಐಟಿಸಿ ಹಾಗೂ ಒಟಿಸಿ ತರಬೇತಿ ಶಿಬಿರಗಳಲ್ಲಿ ರಾಷ್ಟ್ರಗೀತೆ ಹಾಡುವ, ದಲಿತರಿಗೆ ಅವಕಾಶ ಕಲ್ಪಿಸುವ ಹಾಗೂ ಮಹಿಳೆಯರಿಗೆ ಆದ್ಯತೆ ನೀಡುವ ಮೂಲಕ ತಾಕತ್ತು ಪ್ರದರ್ಶಿಸಲಿ ಎಂದು ಸವಾಲು ಹಾಕಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ರಾಷ್ಟ್ರೀಯ ನಾಯಕರು ಭಾಷಣ ಮಾಡಿದ ಜಾಗವನ್ನು ‘ಶುದ್ಧೀಕರಣ’ ಮಾಡಿದ ಇತಿಹಾಸ ಹೊಂದಿರುವವರಿಂದ ತಮಗೆ ಯಾವುದೇ ಪಾಠ ಬೇಕಾಗಿಲ್ಲ ಎಂದಿರುವ ಸಚಿವರು, ಆಡುವ ಮಾತಿನ ಮೇಲೆ ಹಿಡಿತವಿರಲಿ ಎಂದು ಸೂಲಿಬೆಲೆಗೆ ಎಚ್ಚರಿಕೆ ನೀಡಿದ್ದಾರೆ.

You cannot copy content of this page

Exit mobile version