Home ಬೆಂಗಳೂರು ಗೌರವ ಕೊಡಿ ಎಂದು ಹೇಳಿದ್ದನ್ನು ಲಂಚ ಕೊಡಿ ಎಂದಿದ್ದೇನೆ ಎಂದು ವಿಪಕ್ಷಗಳು ತಿರುಚಿವೆ: ಅಬಕಾರಿ ಸಚಿವ...

ಗೌರವ ಕೊಡಿ ಎಂದು ಹೇಳಿದ್ದನ್ನು ಲಂಚ ಕೊಡಿ ಎಂದಿದ್ದೇನೆ ಎಂದು ವಿಪಕ್ಷಗಳು ತಿರುಚಿವೆ: ಅಬಕಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ ಸ್ಪಷ್ಟನೆ

0

ಸಕಲೇಶಪುರ ತಾಲ್ಲೂಕಿನಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಜನರ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸುವ ಸಂದರ್ಭ ನಾನು ಆಡಿದ ಮಾತಿನ ಸಣ್ಣ ತುಣುಕೊಂದನ್ನು ಇಟ್ಟುಕೊಂಡು ವಿಪಕ್ಷಗಳು ನಮ್ಮ ಸರ್ಕಾರದ ತೇಜೋವಧೆಗೆ ಇಳಿದಿರುವುದು ಬೇಸರ ಮೂಡಿಸಿದೆ. ದುರುದ್ದೇಶಪೂರಿತವಾಗಿ ತಿರುಚಿದ ವಿಡಿಯೋ ಹಾಕುವುದು, ವರ್ಚಸ್ಸನ್ನು ಹಾಳುಗೆಡವಲು ಪ್ರಯತ್ನಿಸುವುದು ಬಿಜೆಪಿಗರ ಹೀನಚಾಳಿಯಾಗಿದೆ ಎಂದು ಅಬಕಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ ಹೇಳಿದ್ದಾರೆ.

ನಾನು ಹೇಳಿದ್ದು, “ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವ ಕೊಡಿ” ಎಂದಾಗಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ ಆಡಿರುವ ಮಾತುಗಳಿಗೂ ಮುನ್ನ ಯಾವುದೇ ಕಾರಣಕ್ಕೂ ಅಧಿಕಾರಿಗಳಿಗೆ ಲಂಚ ಕೊಡಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಅದಾದ ಬಳಿಕ ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವ ಕೊಡಿ ಎನ್ನುವ ಬದಲಾಗಿ ಮಾತಿನ ಬರದಲ್ಲಿ ಬಾಯ್ತಪ್ಪಿ ಗೌರವಾನ್ವಿತವಾಗಿ ಕೊಡಿ ಎಂದಿದ್ದೇನೆ. ಈ ಮಾತಿನ ತುಣುಕೊಂದನ್ನೇ ಇಟ್ಟುಕೊಂಡು ವಿಪಕ್ಷಗಳು ಅಧಿಕಾರಿಗಳಿಗೆ ಲಂಚ ಕೊಡಿ ಎಂದು ಸಚಿವರು ಹೇಳಿದ್ದಾಗಿ ವಿಡಿಯೋ ವೈರಲ್ ಮಾಡಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಹಾಗೂ ಕಾರ್ಯಕ್ರಮದ ಪೂರ್ಣ ಭಾಷಣವನ್ನು ಆಲಿಸಿದವರಿಗೆ ನಾನು ಏನು ಹೇಳಿದ್ದೇನೆ ಎಂದು ಸ್ಪಷ್ಟವಿದೆ. ಆರೋಪ ಮಾಡುವ ಯಾರಿಗೇ ಆದರೂ ಮೊದಲು ಪೂರ್ಣವಾಗಿ ಕೇಳಿಸಿಕೊಳ್ಳುವ ಪರಿಪಾಠವಿರಬೇಕು. ಯಾವ ಸಂದರ್ಭದಲ್ಲಿ ಆಡಲಾಗಿದೆ ಎಂಬುದರ ಅರಿವಿರಬೇಕು.

ಮಾನ್ಯ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರವು ಜನರ ಬಳಿಯೇ ಹೋಗಿ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಕಾನೂನು ಜಾರಿ ಮಾಡಿರುವುದರಿಂದ ಹಾಗೂ ಅದಕ್ಕಾಗಿಯೇ ಪ್ರತ್ಯೇಕ ಇಲಾಖೆಯನ್ನೇ ತೆರೆದಿರುವುದರಿಂದ ರಾಜ್ಯದ ಜನತೆಯಿಂದ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಇದನ್ನು ಸಹಿಸದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕೆಲವು ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಸಕಲೇಶಪುರ ತಾಲ್ಲೂಕಿನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಬಿಡುವಿಲ್ಲದೆ ಸ್ಥಳೀಯರ ಅಹವಾಲುಗಳನ್ನು ಕೇಳಿದ್ದೇನೆ. ಬಾಧಿತರಿಗೆ ಮುಖಾಮುಖಿಯಾಗಿ ಅಧಿಕಾರಿಗಳನ್ನು ನಿಲ್ಲಿಸಿ ಪರಿಹಾರ ಹುಡುಕುವ ಪ್ರಯತ್ನ ಮಾಡಿದ್ದೇನೆ. ಆದರೆ ಕೆಲವು ಮಾಧ್ಯಮಗಳು ವಿಪಕ್ಷಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಅಪಾರ್ಥ ಬರುವ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡುತ್ತಿವೆ. ಇಂತಹ ಕೆಲವು ಮಾಧ್ಯಮಗಳು 500ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ, ಅವುಗಳಿಗೆ ಪರಿಹಾರ ಹುಡುಕುವ ಪ್ರಯತ್ನದ ಬಗ್ಗೆ ಒಂದು ಸಣ್ಣ ಪ್ಯಾರಾಗ್ರಾಫ್ ಸುದ್ದಿಯನ್ನಾದರೂ ಹಾಕಿದ್ದಾರೆಯೇ? ಇಂತಹ ಜನಪರ ಕೆಲಸವನ್ನು ಅಪಪ್ರಚಾರದ ಮೂಲಕ ಹಾಳುಗೆಡವುತ್ತಿರುವವರಿಗೆ ಬರೀ ರಾಜಕೀಯವೇ ಮೊದಲಾಗಿದೆ. ಜನರ ಹಿತಾಸಕ್ತಿ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

You cannot copy content of this page

Exit mobile version