ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ ದಾಂಪತ್ಯ ಜೀವನದ ಬಗ್ಗೆ ಬರುತ್ತಿದ್ದ ಅಲ್ಲೊಂದು ಇಲ್ಲೊಂದು ಊಹಾಪೋಹಗಳಿಗೆ ಈಗ ಸಂಪೂರ್ಣ ತೆರೆ ಬಿದ್ದಂತಾಗಿದೆ. ಶೋಯೆಬ್ ಮಲಿಕ್ ಈಗ ಪಾಕಿಸ್ತಾನದ ಜನಪ್ರಿಯ ನಟಿ ಸನಾ ಜಾವೇದ್ ಅವರನ್ನು ವಿವಾಹವಾದ ಬಗ್ಗೆ ಈಗ ಖುದ್ದು ಶೋಯೆಬ್ ಮಲಿಕ್ ಖಚಿತಪಡಿಸಿದ್ದಾರೆ.
ಜನವರಿ 20 ರ ಶನಿವಾರ ತಮ್ಮ ವಿವಾಹ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೋಯೆಬ್ ಮಲಿಕ್ ಹಂಚಿಕೊಂಡಿದ್ದಾರೆ. ಮಲಿಕ್ ಅವರ ಕ್ರಿಕೆಟ್ ಮ್ಯಾನೇಜರ್ ಕೂಡ ಸನಾ ಜಾವೇದ್ ಅವರನ್ನು ವಿವಾಹವಾದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಈ ಮೂಲಕ ಮಲಿಕ್ ಮತ್ತು ಸಾನಿಯಾ ಮಿರ್ಜಾ ದಾಂಪತ್ಯದ ಬಗ್ಗೆ ಹರಿದಾಡುತ್ತಿರುವ ಊಹಾಪೋಹ ಈಗ ಇನ್ನೊಂದು ಮಜಲಿನತ್ತ ವಾಲಿದೆ.
ಮಲಿಕ್ ಸನಾ ಅವರೊಂದಿಗಿನ ಮದುವೆಯ ಕೆಲವು ಚಿತ್ರಗಳನ್ನು ಹಂಚಿಕೊಂಡ ಮಲಿಕ್ ತಮ್ಮ ಇನಿಸ್ಟಾಗ್ರಾಂ ಖಾತೆಯಲ್ಲಿ “ಅಲ್ಹಮ್ದುಲ್ಲಿಲಾಹ್. ಮತ್ತು ನಾವು ನಿಮ್ಮನ್ನು ಜೋಡಿಯಾಗಿ ಸ್ವೀಕರಿಸಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಮಲಿಕ್ ಅವರ ಈ ಘೋಷಣೆ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ.
ಏತನ್ಮಧ್ಯೆ, ಕೆಲವೇ ದಿನಗಳ ಹಿಂದೆ, ಸಾನಿಯಾ ಮಿರ್ಜಾ ಇನ್ಸ್ಟಾಗ್ರಾಮ್ನಲ್ಲಿ ರಹಸ್ಯವಾದ ಪೋಸ್ಟ್ ಒಂದನ್ನು ಹಂಚಿಕೊಂಡು, “ವಿಚ್ಛೇದನ ಕಷ್ಟ” ಎಂಬ ಶೀರ್ಷಿಕೆ ಕೊಟ್ಟಿದ್ದರು. ಆಗಿನಿಂದ ಇವರ ದಾಂಪತ್ಯದ ಬಗ್ಗೆ ಹೆಚ್ಚು ಚರ್ಚೆ ಹುಟ್ಟಿಕೊಂಡಿತ್ತು. ಸನಾ ಜೊತೆಗಿನ ವಿವಾಹದ ನಂತರ ಈಗ ಮಲಿಕ್ ಮತ್ತು ಸಾನಿಯಾ ನಡುವಿನ ದಾಂಪತ್ಯ ಏನಾಗಲಿದೆ ಎಂಬುದೇ ಈಗ ಇಬ್ಬರ ಅಭಿಮಾನಿಗಳು ಮತ್ತು ಕ್ರೀಡಾ ಕ್ಷೇತ್ರದ ಹಲವರಲ್ಲಿ ಪ್ರಶ್ನೆ ಹುಟ್ಟು ಹಾಕಿದೆ.