Thursday, June 13, 2024

ಸತ್ಯ | ನ್ಯಾಯ |ಧರ್ಮ

ಭ್ರೂಣ ಹತ್ಯೆಯ ಜಾಲ : ತನಿಖೆಯಲ್ಲಿ ಹೊರ ಬರುತ್ತಿವೆ ಆಘಾತಕಾರಿ ಸಂಗತಿಗಳು

ಬೆಂಗಳೂರಿನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಭ್ರೂಣಹತ್ಯೆ ಜಾಲವನ್ನು ಬೇಧಿಸಿದ ನಂತರ ಅತ್ಯಂತ ಆಘಾತಕಾರಿ ವಿಚಾರಗಳು ಹೊರಬರುತ್ತಿವೆ. ಅದರಂತೆ ಹಗರಣದ ತನಿಖೆಯಲ್ಲಿ ಇದುವರೆಗೆ 3,000 ಹೆಣ್ಣು ಭ್ರೂಣಗಳನ್ನು ಗರ್ಭಪಾತ ಮಾಡಿರುವುದಾಗಿ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಭ್ರೂಣ ಹತ್ಯೆಯ ಆರೋಪಿಗಳ ಜಾಡನ್ನು ಹಿಡಿದು ಹೊರಟಾಗ 900 ಭ್ರೂಣ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಇತ್ತು. ಆದರೆ ಈಗ ಆರೋಪಿಗಳು ಬಿಚ್ಚಿಡುತ್ತಿರುವ ಮಾಹಿತಿ ತೀವ್ರ ಆಘಾತ ಉಂಟುಮಾಡುತ್ತಿದೆ ಎಂದು ತನಿಖಾಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

5 ವರ್ಷಕ್ಕಿಂತ ಹಿಂದಿನಿಂದಲೂ ಈ ಒಂದು ದಂಧೆ ಯಾವುದೇ ಅಡ್ಡಿ ಆತಂಕ ಇಲ್ಲದೇ ನಡೆಯುತ್ತಿದ್ದರೂ ಸುತ್ತಲಿನ ಯಾರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಅಥವಾ ಇದ್ದರೂ ಬಹಿರಂಗಪಡಿಸದ ಬಗ್ಗೆಯೂ ಅಧಿಕಾರಿಗಳು ತನಿಖೆ ಹಂತದಲ್ಲಿ ಮಾಹಿತಿ ಕಲೆಹಾಕುತ್ತಿದ್ದಾರೆ‌.

ಪ್ರಾಥಮಿಕ ಹಂತದಲ್ಲಿ ಸಿಕ್ಕ ಮಾಹಿತಿಯಂತೆ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆರೋಪಿಗಳು ಇದುವರೆಗೆ 3 ಸಾವಿರ ಗರ್ಭಪಾತ ಮಾಡಿಸಿಕೊಂಡಿದ್ದು, ಕಳೆದ ಮೂರು ತಿಂಗಳಲ್ಲಿ 242 ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳು ವರ್ಷಕ್ಕೆ 1,000 ಗರ್ಭಪಾತದ ಗುರಿಯನ್ನು ಹೊಂದಿದ್ದರು. ಪ್ರತಿ ಗರ್ಭಪಾತಕ್ಕೆ ಆಸ್ಪತ್ರೆ ಕಡೆಯಿಂದ 20,000 ದಿಂದ 25,000 ರೂಪಾಯಿ ಶುಲ್ಕ ವಿಧಿಸಿದ್ದರು ಎಂಬ ಮಾಹಿತಿ ಕೂಡಾ ತಿಳಿದು ಬಂದಿದೆ.

ಅಕ್ಟೋಬರ್ 15 ರಂದು ಬೆಂಗಳೂರಿನ ಬೈಯಪ್ಪನಹಳ್ಳಿ ಬಳಿ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ಪೊಲೀಸರಿಗೆ ವಾಹನ ನಿಲ್ಲಿಸದ ಹಿನ್ನೆಲೆಯಲ್ಲಿ ಅನುಮಾನ ಸೃಷ್ಟಿಯಾಗಿದೆ. ನಂತರ ವಾಹನವನ್ನು ಬೆನ್ನಟ್ಟಿದ ಪೊಲೀಸರಿಗೆ ಈ ದಂಧೆಗೆ ಈ ವಾಹನ ಬಳಸುತ್ತಿದ್ದ ಬಗ್ಗೆ ಸಣ್ಣ ಮಾಹಿತಿ ಹೊರಬಿದ್ದಿದೆ.

ವಿಚಾರಣೆ ವೇಳೆ ಆರೋಪಿಗಳು ಗರ್ಭಪಾತದ ದಂಧೆಯ ಬಗ್ಗೆ ಮಾಹಿತಿ ಹೊರ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಇಬ್ಬರು ವೈದ್ಯರು ಮತ್ತು ಮೂವರು ಲ್ಯಾಬ್ ಟೆಕ್ನಿಷಿಯನ್‌ಗಳು ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಇಬ್ಬರು ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ ಎಂದು ಕಮಿಷನರ್ ದಯಾನಂದ ತಿಳಿಸಿದ್ದಾರೆ. ಪ್ರಕರಣದ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ಎಲ್ಲವೂ ಬಯಲಿಗೆ ಬರಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ಆರೋಪಿಗಳು ಲ್ಯಾಬ್ ಮತ್ತು ಅದಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಮಂಡ್ಯ ಜಿಲ್ಲೆಯ ಬೆಲ್ಲ ಉತ್ಪಾದನಾ ಘಟಕದಲ್ಲಿ (ಆಲೆಮನೆ) ಗರ್ಭಪಾತ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಬೆಲ್ಲ ಉತ್ಪಾದನಾ ಘಟಕವನ್ನು ಜಪ್ತಿ ಮಾಡಲಾಗಿದೆ ಎಂದು ಮಂಡ್ಯ ಸಹಾಯಕ ಆಯುಕ್ತ ಶಿವಮೂರ್ತಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು