Saturday, April 27, 2024

ಸತ್ಯ | ನ್ಯಾಯ |ಧರ್ಮ

ಭಕ್ತರ ಪ್ರೀತಿ; ಸ್ವಾಮಿಗಳ ಪಜೀತಿ

ಹಿಂದೂ ದೇವರ ಪೂಜೆ ಬೇಡವೆನ್ನುವ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಭಕ್ತರಿಂದ ಯಾಕೆ ಪಾದ ಪೂಜೆ ಮಾಡಿಸಿ ಕೊಳ್ಳುತ್ತಾರೆ?” ಎಂದು ಸನಾತನಿಗಳು ಪ್ರಶ್ನಿಸಿ ಪಾದಪೂಜೆಯ ಪೊಟೋವನ್ನು ಜಾಲತಾಣದಲ್ಲಿ ಹರಿಯಬಿಟ್ಟಾಗ ಸ್ವಾಮೀಜಿಗಳ ಜತೆ ಸ್ಪಷ್ಟೀಕರಣ ಕೇಳಿ ಶಶಿಕಾಂತ ಯಡಹಳ್ಳಿ ನಡೆಸಿದ ಮಾತುಕತೆ ಇಲ್ಲಿದೆ.

“ಗಣಪತಿ ಪೂಜೆ ಪ್ರಾರ್ಥನೆ ಲಿಂಗಾಯತರ ಸಂಸ್ಕೃತಿ ಅಲ್ಲ” ಎಂದು ಹೇಳಿ ಸನಾತನಿಗಳ ಎದೆಬಡಿತ ಹೆಚ್ಚಿಸಿದ್ದ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಏಕಕಾಲದಲ್ಲಿ ಲಿಂಗಾಯತರ ಆತ್ಮಸಾಕ್ಷಿಯನ್ನು ಎಚ್ಚರಿಸುವ ಜೊತೆಗೆ ಹಿಂದುತ್ವವಾದಿಗಳಲ್ಲಿ ಸಂಕಟವನ್ನು ಹುಟ್ಟು ಹಾಕಿದ್ದರು. ಸ್ವಾಮಿಗಳ ಹೇಳಿಕೆಯ ವಿರುದ್ಧ ವಿಷವಾಣಿಯ ವಿಷಭಟ್ಟನಂತಹ ಮತಾಂಧರು ವಿಷವನ್ನು ಕಕ್ಕತೊಡಗಿದ್ದರೆ, ಅನೇಕ ಪ್ರಗತಿಪರರು ಸ್ವಾಮೀಜಿಗಳ ಮಾತನ್ನು ಸಮರ್ಥಿಸಿಕೊಂಡರು.

ಈ ಸಂದರ್ಭದಲ್ಲೇ ಸ್ವಾಮಿಗಳ ನುಡಿಯ ಜೊತೆ ಅವರ ನಡೆಯ ಬಗ್ಗೆಯೂ ಅಪಸ್ವರ ಕೇಳಿ ಬಂತು. “ಹಿಂದೂ ದೇವರ ಪೂಜೆ ಬೇಡವೆನ್ನುವ ಸ್ವಾಮಿಗಳು ಭಕ್ತರಿಂದ ಯಾಕೆ ಪಾದ ಪೂಜೆ ಮಾಡಿಸಿ ಕೊಳ್ಳುತ್ತಾರೆ?” ಎಂದು ಸನಾತನಿಗಳು ಪ್ರಶ್ನಿಸಿ ಪಾದಪೂಜೆಯ ಪೊಟೋವನ್ನು ಜಾಲತಾಣದಲ್ಲಿ ಹರಿಯಬಿಟ್ಟಾಗ ಸ್ವಾಮೀಜಿಗಳ ಸಮರ್ಥಕರು ಉತ್ತರಿಸುವಲ್ಲಿ ಅಸಮರ್ಥರಾದರು.

ಈ ಅಸಮರ್ಥತೆಯನ್ನು ಅನುಭವಿಸಿದ ನಾನು ಸ್ವಾಮಿಗಳ ಜೊತೆಗೆ ಮಾತಾಡಿ ನೇರವಾಗಿ ಪ್ರಶ್ನಿಸಿದೆ. “ಪಾದ ಪೂಜೆಯಂತಹ ವ್ಯಕ್ತಿಪೂಜಾ ಆಚಾರ ತಪ್ಪಲ್ಲವೇ ಸ್ವಾಮಿಗಳೇ?” ಎಂದಾಗ ಬಹುಷಃ ಪಂಡಿತಾರಾಧ್ಯರಿಗೂ ಮುಜುಗರವಾಗಿರಬೇಕು. “ಲಿಂಗಾಯತ ಧರ್ಮದಲ್ಲಿ ಪಾದೋದಕ ಪೂಜೆ ಸಹ ಗುರುವಂದನೆಯ ಭಾಗವಾಗಿದೆ. ಗುರು ಲಿಂಗ ಜಂಗಮ ತತ್ವದಲ್ಲಿ ಗುರುಗಳ ಪಾದಪೂಜೆಯೂ ಸೇರಿದೆ” ಎಂದು ಪಾದಪೂಜೆಯನ್ನು ಸಮರ್ಥಿಸಿಕೊಂಡರು. “ಆ ರೂಢಿಗತ ವ್ಯಕ್ತಿಪೂಜಾಚಾರದ ಅಗತ್ಯ ಈಗಲೂ ಬೇಕಿದೆಯಾ ಸ್ವಾಮೀಜಿ?” ಎಂದು ಪ್ರಶ್ನಿಸಿದಾಗ. “ಅದೆಲ್ಲಾ ನಮಗೆ ಬೇಕಿಲ್ಲ, ಆದರೆ ಈ ಭಕ್ತರು ಬಿಡಬೇಕಲ್ಲಾ. ಒತ್ತಾಯ ಮಾಡುತ್ತಾರೆ, ಹಠ ಹಿಡಿಯುತ್ತಾರೆ. ಪಾದಪೂಜೆಗೆ ಬಲವಂತಪಡಿಸುತ್ತಾರೆ. ಸಾಧ್ಯವಾದಷ್ಟೂ ಅವೈಡ್ ಮಾಡ್ತೇವೆ, ಆದರೂ ಕೆಲವೊಮ್ಮೆ ಭಕ್ತರ ಒತ್ತಾಸೆಗೆ ಮಣಿದು ಒಪ್ಪಿಕೊಳ್ಳಬೇಕಾಗುತ್ತದೆ” ಎಂದು ಸ್ವಾಮಿಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಶರಣ ಸಂಪ್ರದಾಯದಲ್ಲಿ ಭಕ್ತರಿಗೆ ಅತಿ ದೊಡ್ಡ ಸ್ಥಾನವನ್ನು ಕೊಡಲಾಗಿದೆ. ಹಾಗಂತ ಭಕ್ತರ ಒತ್ತಾಯಕ್ಕೆಲ್ಲಾ ಗುರುಗಳು ಒಪ್ಪಿಗೆ ಕೊಡುವುದು ತಪ್ಪಾಗುತ್ತದೆ. ಸ್ವಾಮಿಗಳಿಗೂ ಗೊತ್ತಿರುವಂತೆ ಲಿಂಗಾಯತರಲ್ಲಿ ಬ್ರಾಹ್ಮಣ್ಯ ನಿರ್ದೇಶಿತ ಆಚರಣೆಗಳು ಹಾಸುಹೊಕ್ಕಾಗಿವೆ. ಬಸವ ಧರ್ಮದ ಏಕದೇವೋಪಾಸನೆಯನ್ನು ಮರೆತು ಬಹುದೇವೋಪಾಸನೆಯನ್ನು ಲಿಂಗಾಯತರೂ ಆಚರಿಸುತ್ತಿದ್ದಾರೆ. ಪಾದಪೂಜೆಯಂತಹ ಪುರೋಹಿತಶಾಹಿ ಸಂಪ್ರದಾಯಗಳತ್ತ ಲಿಂಗಾಯತರೂ ಒಲವುಳ್ಳವರಾಗಿದ್ದಾರೆ. ಈಗ ಲಿಂಗಾಯತರಿಗೆ ಮಾರ್ಗದರ್ಶನ ಮಾಡುವ ಸ್ಥಾನದಲ್ಲಿರುವ ವಿರಕ್ತ ಮಠಗಳ ಗುರುಗಳು ಅದೆಷ್ಟೇ ಒತ್ತಡ ಬಂದರೂ ಈ ರೀತಿಯ ವ್ಯಕ್ತಿವೈಭವದ ಪಾದಪೂಜಾ ಸಂಪ್ರದಾಯಕ್ಕೆ ಇತಿಶ್ರೀ ಹಾಡಬೇಕಿದೆ. ಭಕ್ತರಿಗೆ ಸರಿಯಾದ ತಿಳುವಳಿಕೆ ನೀಡಬೇಕಿದೆ. ವಚನ ಸಂಸ್ಕೃತಿಯ ಆಚರಣೆಗಳನ್ನು ಮಾತ್ರ ಆಚರಿಸಲು ಪ್ರೇರೇಪಿಸಬೇಕಿದೆ. “ಇನ್ನು ಮೇಲೆ ಈ ರೂಢಿಗತ ಪಾದಪೂಜೆ ಸಂಸ್ಕೃತಿಯನ್ನು ನಿಲ್ಲಿಸುತ್ತೇವೆ” ಎಂದು ಪಂಡಿತಾರಾಧ್ಯ ಶ್ರೀಗಳು ಹೇಳುವ ಮೂಲಕ ನನ್ನ ವಾದಕ್ಕೆ ಮಂಗಳ ಹಾಡಿದರು ಎಂಬಲ್ಲಿಗೆ ಪಾದಪೂಜಾ ಪ್ರಸಂಗ ಮುಗಿಯಿತು.

ಆದರೆ ನವೆಂಬರ್ 24 ರಂದು ಪತ್ರಿಕೆಗಳಲ್ಲಿ ಬಂದ ಸುದ್ದಿ ಮತ್ತೆ ದಿಗಿಲನ್ನು ಹೆಚ್ಚಿಸಿತು. “ಮಾನ್ಯ ಪಂಡಿತಾರಾಧ್ಯ ಸ್ವಾಮಿಗಳು ರಾಮೇಶ್ವರ ಗ್ರಾಮದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರವಚನ ಕೊಟ್ಟರು” ಎಂಬ ವರದಿ ಸ್ವಾಮಿಗಳ ಸಮರ್ಥಕರಿಗೆ ಮುಜುಗರವನ್ನುಂಟು ಮಾಡಿತು. “ನೋಡಿದ್ರಾ ನಿಮ್ಮ ಸ್ವಾಮಿಗಳು ಹೇಳುವುದೊಂದು ಮಾಡುವುದಿನ್ನೊಂದು, ಗಣೇಶನ ಪೂಜೆ ಕೂಡದು ಎಂದವರು ಈಗ ಸತ್ಯನಾರಾಯಣ ವ್ರತ ಪೂಜಾ ಕಾರ್ಯಕ್ರಮದಲ್ಲಿ ಹೋಗಿ ಕೂತರು” ಎಂದು ಹಿಂದುತ್ವವಾದಿ ಗೆಳೆಯರು ವಾಟ್ಸಾಪಲ್ಲಿ ಛೇಡಿಸ ತೊಡಗಿದರು. ಅಂತವರಿಗೆ ಏನು ಉತ್ತರ ಕೊಡಬೇಕು ಅಂತಾನೇ ತಕ್ಷಣಕ್ಕೆ ಗೊತ್ತಾಗಲಿಲ್ಲ.

ತಲ್ಲಣಗೊಂಡ ನಾನು ತಕ್ಷಣ ಸ್ವಾಮಿಗಳಿಗೆ ವಾಟ್ಸಾಪ್ ಮೂಲಕ ಸ್ಪಷ್ಟೀಕರಣ ಕೇಳಿದೆ.

ಪ್ರಣಾಮಗಳು ಸ್ವಾಮೀಜಿ. ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ತಾವು ಭಾಗವಹಿಸಿದ್ದರ ಕುರಿತು ಇವತ್ತಿನ ಪ್ರಜಾವಾಣಿಯಲ್ಲಿ ಓದಿದೆ. ಕೇವಲ ವರದಿ ಆಧರಿಸಿ ಪ್ರತಿಕ್ರಿಯಿಸುವುದು ಸರಿಯಲ್ಲವಾದ್ದರಿಂದ ನೀವೇ ಸ್ಪಷ್ಟೀಕರಿಸಿ ಎಂದು ಕೋರುವೆ. ಗಣಪತಿ ಪೂಜೆಯನ್ನೇ ಬೇಡವೆಂದ ನೀವು ಸತ್ಯನಾರಾಯಣ ಪೂಜಾ ಕಾರ್ಯಕ್ರಮಕ್ಕೆ ಹೋಗಿದ್ದಾದರೂ ಯಾಕೆ? ಏಕದೇವೋಪಾಸಕರಾದ ಲಿಂಗಾಯತರು ಬೇರೆ ದೇವರುಗಳ ಪೂಜೆ ಪ್ರಾರ್ಥನೆ ಮಾಡಬಾರದು ಎಂಬ ನಿಲುವಿಗೂ ಈ ಸತ್ಯನಾರಾಯಣ ಪೂಜೆ ಎನ್ನುವ ಪುರೋಹಿತಶಾಹಿ ಆಚರಣೆಗೂ ವೈರುಧ್ಯ ಇದೆ ಅಲ್ಲವೇ? “ನಮ್ಮ ಗುರುಗಳೇ ಸತ್ಯನಾರಾಯಣ ಪೂಜಾ ಕಾರ್ಯಕ್ರಮಕ್ಕೆ ಹೋದ ಮೇಲೆ ನಾವು ಸತ್ಯನಾರಾಯಣ ಪೂಜೆ ವ್ರತ ಮಾಡುವುದರಲ್ಲಿ ತಪ್ಪೇನಿಲ್ಲ” ಎಂದು ನಿಮ್ಮ ಮಠದ ಭಕ್ತರು, ಲಿಂಗಾಯತ ಸಮುದಾಯದವರು ಅಂದುಕೊಳ್ಳುವ ಅಪಾಯವೂ ಇದೆ ಅಲ್ಲವೇ? ನಿಮ್ಮ ಈ ಭಾಗವಹಿಸುವಿಕೆಯನ್ನೇ ವೈಭವೀಕರಿಸುವ ಹಿಂದುತ್ವವಾದಿಗಳು ಸ್ವಾಮಿಗಳೇ ನಮ್ಮ ದೈವದ ಪೂಜೆಯ ಪರವಾಗಿದ್ದಾರೆ ನೋಡಿ ಎಂದು ಅಪಪ್ರಚಾರ ಮಾಡಿ ಲಿಂಗಾಯತ ಸಮುದಾಯದವರ ದಿಕ್ಕು ತಪ್ಪಿಸುವ ಸಾಧ್ಯತೆಗಳಿಗೆ ನೀವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಅಲ್ಲವೇ? ಈ ರೀತಿ ಹಲವು ಪ್ರಶ್ನೆಗಳು ನಿಜವಾದ ಬಸವಪ್ರಜ್ಞೆ ಇರುವವರನ್ನು ಕಾಡುತ್ತಿವೆ. ನಿಮ್ಮಿಂದ ಸ್ಪಷ್ಟೀಕರಣ ಅಪೇಕ್ಷಣೀಯವಾಗಿದೆ.

ಹೀಗೆ ಆತಂಕದಿಂದ ಕೇಳಲಾದ ಪ್ರಶ್ನೆಗಳಿಗೆ ಸ್ವಾಮಿಗಳು ಹೀಗೆ ಉತ್ತರಿಸಿದರು – ಈ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಆಪಾದನೆಯನ್ನೂ ಮಾಡಿದ್ದಾರೆ. ನಾವು ಅಲ್ಲಿಗೆ ಯಾಕೆ ಹೋಗಿದ್ದೆವು, ಯಾವ ಶರತ್ತಿನ ಮೇಲೆ ಹೋಗಿದ್ವಿ ಎಂದು ವಿವರಿಸಿದರೂ ಅದೊಂದು ತಿಪ್ಪೆ ಸಾರಿಸುವ ಕೆಲಸ ಎನ್ನುವವರೂ ಇದ್ದಾರೆ. ನಾವು ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿಲ್ಲ. ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಹೇಳಬಹುದಾದ ಮಾತುಗಳನ್ನೇ ಹೇಳಿದ್ದೇವೆ. ಅದೇ ವೇದಿಕೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಘಟಕವನ್ನು ಉದ್ಘಾಟಿಸಿದ್ದೇವೆ. ಎಲ್ಲದಕ್ಕೂ ವಿವರಣೆ ಕೊಡುವುದು ಅನಾವಶ್ಯಕ ಎಂದು ಭಾವಿಸಿದ್ದೇವೆ

ಆದರೂ ನನಗೆ ಅವರ ಉತ್ತರದಿಂದ ಸಮಾಧಾನವಾಗಲಿಲ್ಲ. ಮತ್ತೆ ಕೇಳಿದೆ. ಆದರೂ ಅಪಾರ್ಥ ಬರುವಂತಹ ಕಾರ್ಯಕ್ರಮಗಳನ್ನು ಅವಾಯ್ಡ್ ಮಾಡೋದು ಒಳ್ಳೆಯದು ಸ್ವಾಮೀಜಿ. ನಿಮ್ಮ ನಡೆಯನ್ನು ಸಮರ್ಥಿಸಿಕೊಳ್ಳುವ ನಮ್ಮಂತವರನ್ನೂ ಈ ಮತಾಂಧರು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಾರೆ. ಈಚಲ ಮರದಡಿಯಲಿ ಕೂತು ಮಜ್ಜಿಗೆ ಕುಡಿದರೂ ಸೇಂದಿ ಕುಡೀತಾರೆ ನೋಡು ಅನ್ನೋರು ಹೆಚ್ಚಿದ್ದಾರೆ ಸ್ವಾಮೀಜಿ. ಈ ಸನಾತನಿಗಳ ಸಹವಾಸವೂ ಈಚಲಮರದವ್ವನ ನಶಾಲೋಕದ್ದೇ ಆಗಿದೆ. ಹತ್ತಿರ ಹೋದವರಿಗೂ ಸುಖಾಸುಮ್ಮನೇ ಆರೋಪ ತಪ್ಪಿದ್ದಲ್ಲ

ಹೌದು. ಇವೆಲ್ಲಾ ನಮಗೆ ಪಾಠ ಎಂದು ಒಂದೇ ಸಾಲಿನ ಉತ್ತರವನ್ನು ಕೊಟ್ಟು ಸ್ವಾಮಿಗಳು ಸುಮ್ಮನಾದರು. ಕನಿಷ್ಟ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಸೌಜನ್ಯ ಹಾಗೂ ‘ಇಂತಹ ಅವಘಡಗಳು ಪಾಠ ಕಲಿಸಿವೆ’ ಎಂಬ ಆತ್ಮಾವಲೋಕನಗಳೇ ಪಂಡಿತಾರಾಧ್ಯ ಸ್ವಾಮಿಗಳನ್ನು ಮೆಚ್ಚಿಕೊಳ್ಳಲು ಸಾಧ್ಯವಾಗಿದ್ದು. ಈ ನಾಟಕದ ಸ್ವಾಮಿಗಳು ಪ್ರಗತಿಪರ ಚಿಂತಕರಿಗೂ ಹತ್ತಿರವಾಗಿದ್ದು.

ಭಕ್ತರು ದಾರಿತಪ್ಪಿದರೆ ಸರಿಯಾದ ಮಾರ್ಗದರ್ಶನ ಮಾಡಲೆಂದೇ ಗುರುಮಠ ಪೀಠಗಳಿರುವುದು. ಆದರೆ ಈಗಿನ ಕಾಲದ ಭಕ್ತಮಹಾಶಯರು ಸ್ವಾಮಿಗಳನ್ನೇ ದಾರಿತಪ್ಪಿಸುತ್ತಿರುವುದು ವಾಸ್ತವ. ಜಾಗತಿಕ ಲಿಂಗಾಯತ ಮಹಾಸಭಾ ಘಟಕದ ಉದ್ಘಾಟನೆಗೆ ಪಂಡಿತಾರಾಧ್ಯ ಸ್ವಾಮಿಗಳನ್ನು ಆಹ್ವಾನಿಸಿ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿಸಿ ಮಾತಾಡಲು ವಿನಂತಿಸಿ ಕೊಂಡಿದ್ದಾರೆ. ಆದರೆ ನೇಪಥ್ಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನೂ ಆಯೋಜಿಸಿದ್ದಾರೆ. ಇದು ಸ್ವಾಮಿಗಳಿಗೆ ಗೊತ್ತಿತ್ತೋ ಗೊತ್ತಿಲ್ಲವೋ ಗೊತ್ತಿಲ್ಲ. ಆದರೆ ಪಂಡಿತಾರಾಧ್ಯರು ಈ ಪೂಜೆಯ ಬಗ್ಗೆ ಏನೂ ಮಾತಾಡದೇ ಕಾಯಕ ಸಿದ್ದಾಂತದ ಬಗ್ಗೆ ಪ್ರವಚನ ಕೊಟ್ಟಿದ್ದಾರೆ. “ಜನರಿಗೆ ಉಚಿತ ಭಾಗ್ಯಗಳನ್ನು ಸರಕಾರಗಳು ಕೊಡುವುದಕ್ಕಿಂತಾ ಜನತೆಗೆ ದುಡಿಯುವ ಮಾರ್ಗವನ್ನು ತೋರಿಸಲಿ” ಎಂದೇ ಹೇಳಿದ್ದಾರೆ. ಅನ್ನ ಕೊಡುವ ಬದಲು ಅನ್ನ ದುಡಿಯುವ ದಾರಿಯನ್ನು ತೋರಿಸುವುದು ಸರಕಾರದ ಕರ್ತವ್ಯ ಎಂದೂ ಸರಕಾರಕ್ಕೆ ಸಲಹೆ ಕೊಟ್ಟಿದ್ದಾರೆ. ನೈತಿಕತೆಯ ಬಗ್ಗೆ ಉಪದೇಶಿಸಿದ್ದಾರೆ. ಮದ್ಯಪಾನದ ಅಪಾಯಗಳ ಬಗ್ಗೆ ಎಚ್ಚರಿಸಿದ್ದಾರೆ. ಸಮಾಜದ ಬಗ್ಗೆ ಕಾಳಜಿ ಇರುವ ಸ್ವಾಮಿಗಳು ಏನು ಹೇಳಬೇಕಿತ್ತೋ ಅದನ್ನೇ ಸಾಣೇಹಳ್ಳಿ ಸ್ವಾಮಿಗಳು ಹೇಳಿದ್ದಾರೆ. ಆದರೆ ಇದೆಲ್ಲಾ ಹಿನ್ನೆಲೆಗೆ ಹೋಗಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸತ್ಯನಾರಾಯಣಸ್ವಾಮಿ ಪೂಜೆಯೇ ಮುನ್ನಲೆಗೆ ಬಂದಿದೆ.

ಸನಾತನಿಗಳಿಗೆ ಆಡಿಕೊಳ್ಳಲು ಮೊಸರಲ್ಲಿ ಕಲ್ಲು ಸಿಕ್ಕಂತಾಗಿದ್ದರೆ ಪ್ರಗತಿಪರರಿಗೂ ಮುಜುಗರವಾಗಿದೆ. ಇದೆಲ್ಲಕ್ಕೂ ಸ್ಪಷ್ಟೀಕರಣವನ್ನು ಕೊಡಬೇಕಾಗಿರುವುದು ಸ್ವಾಮಿಗಳ ಹೊಣೆಗಾರಿಕೆಯಾಗಿದೆ. ಯಾವುದೋ ವಿಚಾರಕ್ಕೆ ಕರೆದು ಇನ್ಯಾವುದೋ ಆಚಾರಕ್ಕಿಳಿವ ಭಕ್ತರ ಬಗ್ಗೆ ಸ್ವಾಮಿಗಳು ಎಚ್ಚರ ವಹಿಸಬೇಕಿದೆ. ಯಾಕೆಂದರೆ ಲಿಂಗಾಯತ ಸಮುದಾಯದಲ್ಲಿ ಬಸವನಿಷ್ಟೆಯುಳ್ಳವರಿಗಿಂತಲೂ ವೈದಿಕಾಚರಣೆಯ ಪಾಲಕರೇ ಹೆಚ್ಚಿದ್ದಾರೆ ಹಾಗೂ ಅಂತವರು ಮಠದ ಗುರುಗಳನ್ನೂ ದಾರಿತಪ್ಪಿಸಿ ತಪ್ಪು ಕೆಲಸಕ್ಕೆ ಪ್ರೇರೇಪಿಸುತ್ತಾರೆ ಎಂಬ ಸತ್ಯದ ಅರಿವು ಸ್ವಾಮಿಗಳಿಗೂ ಇರಲೇಬೇಕಿದೆ. ಸಾಣೇಹಳ್ಳಿ ಸ್ವಾಮಿಗಳಿಗೆ ಎಲ್ಲರನ್ನೂ ನಂಬುವ ಸ್ವಭಾವವಿದೆ. ಅವರಿವರ ಮಾತೇಕೆ, ಸ್ವಾಮೀಜಿಗಳಿಂದ ಅವಕಾಶ ಸಂಬಳ ಗೌರವಧನ ಪಡೆದ ಹಲವಾರು ರಂಗಕರ್ಮಿ ಕಲಾವಿದರುಗಳೇ ಸ್ವಾಮೀಜಿಯವರನ್ನು ನಂಬಿಸಿ ಮೋಸಮಾಡಿದ್ದಾರೆ. ಇಂತಹ ಅನೇಕ ವಂಚಕರನ್ನೂ ಕ್ಷಮಿಸಿ ಮತ್ತೆ ರಂಗಕ್ರಿಯೆಯಲ್ಲಿ ಅವಕಾಶ ಕೊಟ್ಟಿರುವ ಪಂಡಿತಾರಾಧ್ಯ ಶ್ರೀಗಳ ಕ್ಷಮಾಗುಣವನ್ನು ಮೆಚ್ಚಬೇಕೋ ಹುಚ್ಚುತನ ಎನ್ನಬೇಕೋ ಗೊತ್ತಿಲ್ಲ. ಆದರೂ ಸ್ವಾಮೀಜಿಗಳೇ ಹೇಳಿದಂತೆ ಪ್ರತಿಯೊಂದು ನಕಾರಾತ್ಮಕ ಘಟನೆಗಳಿಂದ ಪಾಠ ಕಲಿತು ಅಂತಹವು ಮತ್ತೆ ಮರುಕಳಿಸದಂತೆ ಕಟ್ಟೆಚ್ಚರ ವಹಿಸಿದರೆ ಸಾಣೇಹಳ್ಳಿ ಶ್ರೀಮಠ ಎಲ್ಲಾ ಲಿಂಗಾಯತ ಮಠಗಳಿಗೂ ಮಾದರಿಯಾಗುತ್ತದೆ. ಲಿಂಗಾಯತ ಧರ್ಮ ಬಿಟ್ಟು ಗುಡಿ ಗುಂಡಾರ ಸುತ್ತುವ ಲಿಂಗಾಯತರನ್ನು ಬಸವಮಾರ್ಗದಲ್ಲಿ ಮುನ್ನಡೆಸಲು ಅನುಕೂಲವಾಗುತ್ತದೆ.

ಲಿಂಗಾಯತರು ಎಂದು ಹೇಳಿಕೊಂಡು ಬಸವಧರ್ಮ ವಿಚಾರ ವಿರೋಧಿ ಕೆಲಸದಲ್ಲಿ ನಿರತರಾಗಿ ಅಲ್ಲದಾಟವನಾಡುವವರಿಗೆ ಈ ಕೆಳಗಿನ ಅಲ್ಲಮರ ವಚನ ಅನ್ವಯಿಕ ಸಾಧ್ಯತೆಯಾಗಬಹುದಾಗಿದೆ.

ಇಷ್ಟ ಲಿಂಗವ ತೋರಿ ಮೃಷ್ಟಾನ್ನವ ಹೊಡೆವವರಿಗೆ, ಇಷ್ಟಾರ್ಥ ಸಿದ್ಧಿಯದೆಲ್ಲಿಯದೊ? ಅದೆಲ್ಲಿಯದೊ ಲಿಂಗ , ಅದೆಲ್ಲಿಯದೊ ಜಂಗಮ? ಅದೆಲ್ಲಿಯದೊ ಪಾದೋದಕ ಪ್ರಸಾದ? ಅಲ್ಲದಾಟವನಾಡಿ ಎಲ್ಲರೂ ಮುಂದುಗೆಟ್ಟರು, ಗುಹೇಶ್ವರಾ ನಿಮ್ಮಾಣೆ

ಶಶಿಕಾಂತ ಯಡಹಳ್ಳಿ, ರಂಗಕರ್ಮಿ

ಇದನ್ನೂ ಓದಿ- ನೆಹರೂ ಕನಸುಗಳು ಮತ್ತು ಇಂದಿನ ಮನಸುಗಳು… https://peepalmedia.com/nehrus-dreams-and-todays-minds/

Related Articles

ಇತ್ತೀಚಿನ ಸುದ್ದಿಗಳು