Sunday, April 28, 2024

ಸತ್ಯ | ನ್ಯಾಯ |ಧರ್ಮ

ಮಲೆನಾಡೆಂದರೆ…

ಹೆಂಗಸರಿಗೆ ಕೆಲಸದ ಅವಧಿ ಒಂಭತ್ತು ಗಂಟೆಯಿಂದ 3.30 ಆದರೆ ಗಂಡಸರಿಗೆ ಹೆಚ್ಚು ಕಮ್ಮಿ ಐದರ ಹೊತ್ತಾಗುತ್ತದೆ. 10.30 ರ ಚಹಾ ತಿಂಡಿ, ಮಧ್ಯಾಹ್ನದ ಊಟ ಎಲ್ಲವೂ ಅಲ್ಲೇ ಆಗುತ್ತದೆ. ಸಂಜೆ ಮನೆಗೆ ಬಂದು ಕಾಫಿ ಕುಡಿಯುವಷ್ಟು ಸಮಯ ಮಾತ್ರ ಅವರದ್ದು. ಮತ್ತೆ ಹಂಡೆಗೆ ನೀರು ತುಂಬ ಬೇಕು, ಮನೆಯವರಿಗೆ ಅಡಿಗೆ ಸಿದ್ಧವಾಗಬೇಕು. ಕೆಲವೊಮ್ಮೆ  ಇದಿಷ್ಟನ್ನು ಮಾಡಿ ಮನೆಯ ಹೆಂಗಸರು ಅಡಿಕೆ ಸುಲಿಯುವುದಕ್ಕೋ, ಉದುರು ಹೆಕ್ಕುವುದಕ್ಕೋ ಹೋಗುತ್ತಾರೆ, ಅಲ್ಲಿಂದ ಮತ್ತೆ ಮನೆಗೆ ಹಿಂದಿರುಗುವಾಗ ಗಡಿಯಾರದ ಚಿಕ್ಕ ಮುಳ್ಳು ಹನ್ನೊಂದರ ಮುಂದಿರುತ್ತದೆ- ರಾಹುಲ್‌ ಆರ್‌ ಸುವರ್ಣ, ಪತ್ರಿಕೋದ್ಯಮ ವಿದ್ಯಾರ್ಥಿ

ಮಲೆನಾಡೆಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಕರ್ನಾಟಕ ಮಾತ್ರವಲ್ಲ ಅದರಿಂದಾಚೆಗೂ ಮಲೆನಾಡನ್ನು ಪ್ರೀತಿಸುವವರು, ಮಲೆನಾಡಿನಲ್ಲಿ ಇರಲು ಇಚ್ಚಿಸುವವರು ಇದ್ದಾರೆ. ಮಲೆನಾಡೆಂದರೆ ಮೊದಲು ನೆನಪಾಗುವುದು ಅಲ್ಲಿನ ಹಸಿರು ಶ್ರೀಮಂತಿಕೆ, ಆದರೆ ಅಲ್ಲಿ ಬದುಕು ಸವೆಸುವವರ ಕುರಿತು ನಾವು ಯಾರೂ ಕೂಡ ತಿಳಿದುಕೊಳ್ಳಲು ಬಯಸುವುದೇ ಇಲ್ಲ.

ಮಲೆನಾಡಿನ ಜನರು ಮನೆಯಲ್ಲಿ ಸ್ವಂತ ವಾಹನಗಳನ್ನು ಹೊಂದಿರುತ್ತಾರೊ ಇಲ್ಲವೊ ಗೊತ್ತಿಲ್ಲ. ಆದರೆ, ಕೃಷಿ ಭೂಮಿಯನ್ನು ಮಾತ್ರ ಹೆಚ್ಚಿನ ಎಲ್ಲಾ ಕುಟುಂಬಗಳು ಹೊಂದಿರುತ್ತವೆ. ಮಲೆನಾಡಿನ ಮುಂಜಾನೆಯ ಕುರಿತು ಸ್ವಲ್ಪ ಹೇಳುವುದಾದರೆ ಅಲ್ಲಿ ಎಲ್ಲರಿಗಿಂತ ಮೊದಲು ಬೆಳಕು ಹರಿಯುವುದು ಮನೆಯಲ್ಲಿ ಸಾಕಿದಂತಹ ಕೋಳಿಗಳಿಗೆ. ಅವುಗಳೇ ಮಲೆನಾಡಿನ ಅಲರಾಂ ಎಂದರೆ ನಿಜಕ್ಕೂ ತಪ್ಪಾಗದು. ಅಲ್ಲಿಂದ ಆರಂಭವಾಗುವ ಮಲೆನಾಡಿಗರ ದಿನಚರಿ ಅದ್ಭುತವಾಗಿ ಸಾಗುತ್ತದೆ. ಸಾಮಾನ್ಯವಾಗಿ ಒಂದು ಕುಟುಂಬ ಎಂದರೆ ಅಜ್ಜ ಅಜ್ಜಿಯರಿಂದ ಹಿಡಿದು ಮೊಮ್ಮಕ್ಕಳವರೆಗೆ ಎಲ್ಲರೂ ಇರುತ್ತಾರೆ. ಮಕ್ಕಳಿಗೆ ಬೆಳಗಾದರೆ ಮೊದಲ ಕೆಲಸ ಕಾಫಿ ಲೋಟ ಬಾಯಿಗಿಟ್ಟುಕೊಂಡು ಒಲೆಯ ಎದುರಿಗೆ ಕೂರುವುದು. ಅದು ಮನೆಯಲ್ಲಿ ಅಪ್ಪ ಏಳುವವರೆಗೆ ಮಾತ್ರ. ಎದ್ದ ಕೂಡಲೇ ಮಗ ಬಚ್ಚಲಿನಲ್ಲಿ ಬಾಯಿ ಮುಕ್ಕಳಿಸುತ್ತಿರುತ್ತಾನೆ. ಮಲೆನಾಡಿನಲ್ಲಿ ಹೆಚ್ಚಾಗಿ ಕಂಡು ಬರುವುದು ಪಿತೃ ಪ್ರಧಾನ ಕುಟುಂಬಗಳು. ಮನೆಯ ಯಜಮಾನನಾದವನು ಮನೆಯಿಂದಾಚೆ ಹೋಗಿ ದುಡಿದು ಬರುತ್ತಾನೆ. ಆತನ ಹೆಂಡತಿ ಮನೆ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗುತ್ತಾಳೆ. ಈಗೀಗ ಮಹಿಳೆಯರು  ಕೂಡ ಸ್ವತಃ ತಾವೇ ದುಡಿಯುತ್ತಾರೆ. ಇದು ಒಂದು ರೀತಿಯದ್ದಾದರೆ ಇನ್ನು ಮುಂದಿನದ್ದು ಮತ್ತೊಂದು ರೀತಿಯದ್ದು.

ಚಿತ್ರ : ಗೂಗಲ್

ಬೆಳಿಗ್ಗೆ ಕೆಲಸಕ್ಕೆ ಹೋಗುವ ಗಂಡನಿಗೆ ಬುತ್ತಿ, ಶಾಲೆಗೆ ತೆರಳುವ ಮಕ್ಕಳಿಗೆ ತಿಂಡಿ, ಇವಿಷ್ಟು ಬೆಳಗ್ಗೆ 8 ರ ಒಳಗೆ ಸಿದ್ಧವಾಗಬೇಕು. ಅಂದರೆ ಆಕೆ ಎಷ್ಟು ಹೊತ್ತಿಗೆ ಹಾಸಿಗೆ ಬಿಡಬೇಕೆಂದು ನೀವೇ ಯೋಚನೆ ಮಾಡಿ ನೋಡಿ. ಅದಲ್ಲದೆ ಎಲ್ಲರೂ ಕೆಲಸಕ್ಕೆ ಹೊರಡುವ ಸಮಯಕ್ಕೇ ತಾನೂ ಹೊರಡಬೇಕು. ಜೀವನದಲ್ಲಿ ಸಣ್ಣ ಪುಟ್ಟ ಕಷ್ಟಗಳಿಗೆ ನಲುಗಿ ಹೋಗುವ ನಾವೆಲ್ಲಿ? ದಿನದ ಹಗಲಿನ ಅವಧಿ ಪೂರ್ತಿ ದುಡಿಯುವ ಅವರೆಲ್ಲಿ?

ಮನೆಯ ಯಜಮಾನನಾದವನು ಬಾವಿ ತೋಡುವುದಕ್ಕೋ ಅಥವಾ ಗಾರೆ ಕೆಲಸಕ್ಕೋ ಹೋದರೆ ಆತನ ಹೆಂಡತಿ ಊರಿನ ಎಸ್ಟೇಟ್ ಅಥವಾ ಸಣ್ಣ ಪುಟ್ಟ ತೋಟಗಳಿಗೆ ಬೇರೆ ಹೆಂಗಸರೊಂದಿಗೆ ಅತ್ತ ಹೆಜ್ಜೆ ಹಾಕಿಬಿಡುತ್ತಾಳೆ. 9 ಗಂಟೆಯ ಹೊತ್ತಿಗೆ ಕೆಲಸದ ಜಾಗಕ್ಕೆ ತಲುಪಿದರೆ, ಅಲ್ಲಿಂದ ಹೆಂಗಸರಿಗೆ ಅಡಿಕೆ ಮರಗಳಿಗೆ ಗೊಬ್ಬರ ಹಾಕುವುದು, ಕಾಫಿ ಹಣ್ಣು ಕೊಯ್ಯುವುದು, ಚಿಗುರು ತೆಗೆಯುವುದು ಮುಂತಾದವು ಆಕೆಯ ಕೈಗೆ ಸಿಗುವ ಕೆಲಸಗಳು. ಹಾ…! ಆಗ ಹೇಳಿದುದರ ಕುರಿತು ಒಂದು ಸಾಲು ನೆನಪಿಗೆ ಬರುತ್ತಿದೆ. ನಾನಾಗ ಹೇಳಿದೆ ಈಗೀಗ ಮನೆಯ ಹೆಂಗಸರು ಕೆಲಸಕ್ಕೆ ಹೋಗುತ್ತಾರೆಂದು. ತಾನು ಸಮರ್ಥಳು ಹಾಗೂ ತನ್ನಿಂದ ಆಗದೆ ಇರುವುದು ಯಾವುದು ಇಲ್ಲ ಎನ್ನುವುದನ್ನು ಸಾಬೀತು  ಪಡಿಸಿಕೊಳ್ಳುವ ಉದ್ದೇಶ ಒಂದು ಕಡೆಯಾದರೆ, ಮತ್ತೊಂದು  ಕುಡಿತ ಎನ್ನುವುದು ಯಾರನ್ನು ಬಿಟ್ಟಿದೆ ಹೇಳಿ? ಎಳೆಯರಿಂದ ಹಿಡಿದು ಹಳೆಬರನ್ನೂ ತನ್ನತ್ತ ಲೀಲಾಜಾಲವಾಗಿ ಸೆಳೆದುಕೊಂಡು ಸಾವಿನ ಬಾಯಿಗೆ ಅದು ತಳ್ಳುತ್ತದೆ. ಇದಿಷ್ಟು ಹೇಳಿದ ಮೇಲೆ ಕುಡಿತದ ಚಟ ಯಾರಿಗೆ ಎಂಬ ಪ್ರಶ್ನೆ ಬೇಡ.

ಚಿತ್ರ : ಗೂಗಲ್

ಮತ್ತೆ ವಿಷಯಕ್ಕೆ ಬರೋಣ. ಹೆಂಗಸರಿಗೆ ಕೆಲಸದ ಅವಧಿ 9 ರಿಂದ 3:30 ಆದರೆ ಗಂಡಸರಿಗೆ ಹೆಚ್ಚು ಕಮ್ಮಿ 5 ರ ಹೊತ್ತಾಗುತ್ತದೆ. 10.30 ರ ಚಹಾ ತಿಂಡಿ, ಮಧ್ಯಾಹ್ನದ ಊಟ ಎಲ್ಲವೂ ಅಲ್ಲೇ ಆಗುತ್ತದೆ. ಸಂಜೆ ಮನೆಗೆ ಬಂದು ಕಾಫಿ ಕುಡಿಯುವಷ್ಟು ಸಮಯ ಮಾತ್ರ ಅವರದ್ದು. ಮತ್ತೆ ಹಂಡೆಗೆ ನೀರು, ಮನೆಯವರಿಗೆ ಅಡಿಗೆ ಸಿದ್ಧವಾಗಬೇಕು. ಕೆಲವೊಮ್ಮೆ  ಇದಿಷ್ಟನ್ನು ಮಾಡಿ ಮನೆಯ ಹೆಂಗಸರು ಅಡಿಕೆ ಸುಲಿಯುವುದಕ್ಕೋ, ಉದುರು ಹೆಕ್ಕುವುದಕ್ಕೋ ಹೋಗುತ್ತಾರೆ, ಅಲ್ಲಿಂದ ಮತ್ತೆ ಮನೆಗೆ ಹಿಂದಿರುಗುವಾಗ ಗಡಿಯಾರದ ಚಿಕ್ಕ ಮುಳ್ಳು ಹನ್ನೊಂದರ ಮುಂದಿರುತ್ತದೆ.

ಇದು ಮಲೆನಾಡು ಮತ್ತದರ ಮಕ್ಕಳ ಕಥೆ. ಹೀಗೆ ಹುಡುಕುತ್ತ ಹೋದರೆ ನಮಗೆ ಅರಿವಿಗೆ ಬಾರದ ಅದೆಷ್ಟೋ ಕುತೂಹಲಕಾರಿ ವಿಷಯಗಳಿವೆ. ಅಲ್ಲಿರುವ ಜನರ ಜೀವನ ಶೈಲಿ ನಿಜಕ್ಕೂ ಒಂದು ರೀತಿ ಸಾಹಸಮಯ. ಅವರಿಗೆ ಅವರೇ ಸರಿ ಸಾಟಿ, ಜಗತ್ತು ಇಂದು ಎಷ್ಟೇ ಮುಂದೆ ಬಂದಿರಬಹುದು ಆದರೆ, ನೆಮ್ಮದಿಯ ಜೀವನ ನಡೆಸುವುದರಲ್ಲಿ ನಾವಿನ್ನು ಅಲ್ಲೇ ಇದ್ದೇವೆ.

ರಾಹುಲ್‌ ಆರ್‌ ಸುವರ್ಣ

ಪತ್ರಿಕೋದ್ಯಮ ವಿದ್ಯಾರ್ಥಿ, ಎಂಜಿಎಂ ಕಾಲೇಜು, ಉಡುಪಿ.‌

ಇದನ್ನೂ ಓದಿ ಭಕ್ತರ ಪ್ರೀತಿ; ಸ್ವಾಮಿಗಳ ಪಜೀತಿ

Related Articles

ಇತ್ತೀಚಿನ ಸುದ್ದಿಗಳು