ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ತಡರಾತ್ರಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಮಾಸ್ಕೋದ ಮಾಲ್ ಒಂದರಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ (2024 Crocus City Hall Attack) ಐವರು ಬಂದೂಕುಧಾರಿಗಳು ಜನರ ಗುಂಪಿನ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ.
ಈ ದಾಳಿಯಲ್ಲಿ ಸುಮಾರು 60 ಜನರು ಸಾವನ್ನಪ್ಪಿದ್ದು, 140ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ನಡೆದ ಸಾವಿನ ಸಂಖ್ಯೆಯ ಬಗ್ಗೆ ರಷ್ಯಾದ ಉನ್ನತ ಭದ್ರತಾ ಸಂಸ್ಥೆ ಖಚಿತ ಪಡಿಸಿದೆ. ಅಲ್ಲದೇ, ಮಾಸ್ಕೋದಲ್ಲಿ ನಡೆದಿದ್ದು ಭಯೋತ್ಪಾದಕ ದಾಳಿ ಎಂದು ರಷ್ಯಾದ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಘಟನೆಯ ನಂತರ ಸುಮಾರು 50 ಆಂಬುಲೆನ್ಸ್ ಗಳು ಸ್ಥಳಕ್ಕೆ ಆಗಮಿಸಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತೀವ್ರ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಮಾಧ್ಯಮ ವರದಿಯ ಪ್ರಕಾರ ಐವರು ದಾಳಿಕೋರರ ಪೈಕಿ ಒಬ್ಬನನ್ನು ಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.
ಸಂಗೀತ ಕಚೇರಿ ಆಯೋಜನೆ ಮಾಡಲು ಸಿದ್ಧತೆ ನಡೆಸಿದ್ದ ಕ್ರೋಕಸ್ ಸಿಟಿ ಹಾಲ್‌ಗೆ ಕೆಲವು ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಪ್ರವೇಶಿಸಿದರು. ಸಂಗೀತ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಗುಂಡು ಹಾರಿಸಿದರು. ವರದಿಗಳ ಪ್ರಕಾರ, ಸಭಾಂಗಣದಲ್ಲಿ ಗುಂಡು ಹಾರಿಸಿದ ನಂತರ, ಗ್ರೆನೇಡ್ ದಾಳಿ ಕೂಡ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಗುಂಡಿನ ದಾಳಿ, ಸ್ಫೋಟ ಮತ್ತು ಬೆಂಕಿಯ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಪರಿಗಣಿಸಿ ರಷ್ಯಾದ ಉನ್ನತ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ. ದಾಳಿಯ ಹಿಂದೆ ಯಾರಿರಬಹುದು ಎಂದು ಹೇಳಲಾಗದಿದ್ದರೂ, ಆರೋಪಗಳ ಬಗ್ಗೆ ಕ್ರಿಮಿನಲ್ ತನಿಖೆಯನ್ನು ಪ್ರಾರಂಭಿಸಿದೆ ಎಂದು ತನಿಖಾ ಸಮಿತಿ ಹೇಳಿದೆ. ಪ್ರಸ್ತುತ, ಮಾಸ್ಕೋ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಮತ್ತು ರೈಲುಗಳ ಸಂಚಾರವನ್ನು ಸಹ ನಿಲ್ಲಿಸಲಾಗಿದೆ. ಮಾಸ್ಕೋದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸೇರುವುದನ್ನು ಸಹ ನಿಷೇಧಿಸಲಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಇದನ್ನು “ಹೇಯ ಮತ್ತು ಹೇಡಿತನದ ಭಯೋತ್ಪಾದಕ ದಾಳಿ” ಎಂದು ಕರೆದಿದೆ.