ಬೆಂಗಳೂರು: ಚಿತ್ರದುರ್ಗದ ಮುರುಘಾ ಮಠದ ಮಠಾಧೀಶರಾದ ಶಿವಮೂರ್ತಿಯವರ ಮೇಲೆ ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಕುರಿತಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ಮುರಿದಿದ್ದಾರೆ.
ಈ ಸಂಬಂಧ ತಮ್ಮ ಟ್ವಿಟರ್ ಮತ್ತು ಫೇಸ್ಬುಕ್ ವೇದಿಕೆಗಳಲ್ಲಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ, “ಚಿತ್ರದುರ್ಗದ ಮುರುಘಾ ಮಠದ ಸ್ವಾಮಿಗಳ ವಿರುದ್ಧದ ಆರೋಪ ಗಂಭೀರ ಸ್ವರೂಪದ್ದಾಗಿದೆ. ಪೊಲೀಸರು ಯಾವುದೇ ಒತ್ತಡಕ್ಕೊಳಗಾಗದೆ ಸಂತ್ರಸ್ತ ವಿದ್ಯಾರ್ಥಿನಿಯರ ದೂರಿನ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಸಂಗತಿಯನ್ನು ಬಹಿರಂಗಗೊಳಿಸಬೇಕು” ಎಂದು ತಿಳಿಸಿದ್ದಾರೆ.
ಚಿತ್ರದುರ್ಗದ
— Siddaramaiah (@siddaramaiah) September 2, 2022
ಮುರುಘಾ ಮಠದ ಸ್ವಾಮಿಗಳ ವಿರುದ್ಧದ ಆರೋಪ ಗಂಭೀರ ಸ್ವರೂಪದ್ದಾಗಿದೆ.
ಪೊಲೀಸರು ಯಾವುದೇ ಒತ್ತಡಕ್ಕೊಳಗಾಗದೆ ಸಂತ್ರಸ್ತ ವಿದ್ಯಾರ್ಥಿನಿಯರ ದೂರಿನ ಬಗ್ಗೆ ನಿಷ್ಪಕ್ಷಪಾತವಾಗಿ
ತನಿಖೆ ನಡೆಸಿ ಸತ್ಯಸಂಗತಿಯನ್ನು ಬಹಿರಂಗಗೊಳಿಸಬೇಕು.
ಪ್ರಕರಣ ಸ್ಫೋಟಗೊಂಡು ವಾರವಾಗುತ್ತಾ ಬಂದಿದ್ದರೂ ಇದುವರೆಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಯಾವುದೇ ಹೇಳಿಕೆ ನೀಡದೇ ಮೌನಕ್ಕೆ ಶರಣಾಗಿದ್ದರು. ರಾಜ್ಯದ ದೊಡ್ಡ ವೋಟ್ ಬ್ಯಾಂಕ್ ಆಗಿರುವ ಲಿಂಗಾಯತ ಸಮುದಾಯದ ಮಠಾಧೀಶರ ಕುರಿತು ಮಾತಾಡಬೇಕಾಗಿದ್ದರಿಂದ ಅಂಜಿಕೊಂಡು ಸಿದ್ದರಾಮಯ್ಯ ಮೌನವಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಮುರುಘಾ ಮಠಾಧೀಶ ಶಿವಮೂರ್ತಿಯವರನ್ನು ಚಿತ್ರದುರ್ಗದ ಪೊಲೀಸರು ಗುರುವಾರ ರಾತ್ರಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇಂದು ತೀವ್ರ ಎದೆ ನೋವಿನ ನೆಪದಲ್ಲಿ ಶಿವಮೂರ್ತಿಯವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಮುರುಘಾ ಶ್ರೀಗಳ ಮೇಲೆ ಪ್ರಕರಣ ದಾಖಲಿಸಲಾಗಿದ್ದು ಅವರ ಬಂಧನವು ವಿಳಂಬವಾಗಿರುವ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ರಾಜಕಾರಣಿಗಳು ತಮ್ಮದೇ ಲೆಕ್ಕಾಚಾರದಿಂದ ತುಟಿಪಿಟಿಕ್ಕೆಂದಿರಲಿಲ್ಲ. ಎಚ್ ವಿಶ್ವನಾಥ್, ಎಚ್ ಸಿ ಮಹದೇವಪ್ಪ ಮತ್ತು ಇದೀಗ ಸಿದ್ದರಾಮಯ್ಯ ಮಾತ್ರ ಮಾತನಾಡಿದ್ದಾರೆ.