ಬಾಗಲಕೋಟೆ,ಮಾರ್ಚ್-23: ಮಾಜಿ ಶಾಸಕ ದಿವಂಗತ ಹೆಚ್. ವೈ. ಮೇಟಿಯವರಿಗೆ ಗೌರವ, ಅವರ ಆತ್ಮಕ್ಕೆ ಶಾಂತಿ ದೊರೆಯಬೇಕಾದರೆ ಬಾಗಲಕೋಟೆ ಗ್ರಾಮೀಣ ಕ್ಷೇತ್ರದ ಜನರು ಉಮೇಶ್ ಮೇಟಿಯವರಿಗೆ ಆಶೀರ್ವದಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಯವರ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದು ನಂತರ ಕಾರ್ಯಕರ್ತರುಗಳನ್ನು ಉದ್ದೇಶಿಸಿ ಮಾತನಾಡಿದರು.
ಮೇಟಿಯವರು ಜಾತ್ಯತೀತ ವ್ಯಕ್ತಿ
ರಾಜ್ಯದಲ್ಲಿ ಎರಡು ಉಪಚುನಾವಣೆಗಳು ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ನಡೆಯುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಶ್ಯಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ಹಾಗೂ ಹೆಚ್ ವೈ ಮೇಟಿಯವರು ಬಾಗಲಕೋಟೆಯಲ್ಲಿ ಗೆದ್ದಿದ್ದರು. ಇವರಿಬ್ಬರೂ ಅಕಾಲಿಕವಾಗಿ ಮರಣ ಹೊಂದಿದ್ದು, ಉಪಚುನಾವಣೆ ನಡೆಯುತ್ತಿದೆ. ಹೆಚ್ ವೈ ಮೇಟಿಯವರು ಆಸ್ಪತ್ರೆಯಲ್ಲಿದ್ದಾಗ ಬದುಕುವ ನಿರೀಕ್ಷೆಯನ್ನು ಹೊಂದಿದ್ದರು. ಆದರೆ ಭೇಟಿಯಾದ ನಾಲ್ಕೈದು ದಿನಗಳಲ್ಲಿಯೇ ಕಾಲವಾದರು. ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಅವರು ಐದು ಬಾರಿ ಶಾಸಕರು ಹಾಗೂ ಒಮ್ಮೆ ಸಂಸದರಾಗಿದ್ದರು. ಎರಡು ಬಾರಿ ಮಂತ್ರಿಯೂ ಆಗಿದ್ದರು. ದಲಿತರು, ಅಲ್ಪಸಂಖ್ಯಾತರು, ಬಡವರು, ರೈತರ, ಕಾರ್ಮಿಕರ ಪರವಾಗಿ ಇದ್ದಂಥ ಜಾತ್ಯತೀತ ವ್ಯಕ್ತಿಯಾಗಿದ್ದರು ಎಂದರು.
ಎಲ್ಲಾ ಜಾತಿ , ಧರ್ಮದವರನ್ನು ಸಮಾನವಾಗಿ ಕಾಣುವುದು ಮೇಟಿಯವರ ಗುಣ
ಎಲ್ಲಾ ಜಾತಿ , ಧರ್ಮದವರನ್ನು ಸಮಾನವಾಗಿ ಕಾಣುವುದು ಮೇಟಿಯವರ ಗುಣವಾಗಿತ್ತು. ಹಿಂದುಳಿದವರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಬಹಳ ನಿಷ್ಠಾವಂತ ವ್ಯಕ್ತಿಯಾಗಿದ್ದರು. ಯಾರನ್ನಾದರೂ ನಂಬಿಕೊಂಡರೆ ಅವರನ್ನು ಎಂದಿಗೂ ಕೈಬಿಡುತ್ತಿರಲಿಲ್ಲ. ಅಂಥ ವ್ಯಕ್ತಿಯನ್ನು ಕಳೆದುಕೊಂಡು ಉಪಚುನಾವಣೆ ನಡೆಯುತ್ತಿದೆ ಎಂದರು.
ಉಪಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ನಾನು, ಉಪಮುಖ್ಯಮಂತ್ರಿಗಳು, ಎ ಐ ಸಿ ಸಿ ಕಾರ್ಯದರ್ಶಿಗಳು ಹೈ ಕಮಾಂಡ್ ಜೊತೆ ಮಾತನಾಡಿ ಮೇಟಿಯವರ ಕುಟುಂಬಕ್ಕೆ ಟಿಕೆಟ್ ಕೊಡಲು ತೀರ್ಮಾನಿಸಲಾಯಿತು. ಮರಣ ಹೊಂದಿದ ಅಭ್ಯರ್ಥಿಯ ಮನೆಯವರಿಗೆ ಟಿಕೆಟ್ ಕೊಡುವುದು ನಮ್ಮ ಕಾಂಗ್ರೆಸ್ ಪಕ್ಷದ ನೀತಿಯಾಗಿದೆ ಎಂದರು.
ಹಾಗಾಗಿ ಮೇಟಿಯವರ ನಾಲ್ಕು ಮಕ್ಕಳ ಪೈಕಿ ಮೇಟಿಯವರ ಪುತ್ರ ಉಮೇಶ್ ಮೇಟಿಯವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಎಲ್ಲರನ್ನು ಒಳಗೊಂಡಿರುವ ಪಕ್ಷ
ಕಾಂಗ್ರೆಸ್ ಪಕ್ಷದ ಸಮಾಜದಲ್ಲಿ ಎಲ್ಲರನ್ನು ಒಳಗೊಂಡಿರುವ ಪಕ್ಷ. ಈ ದೇಶದ ಎಲ್ಲರನ್ನೂ ಪ್ರತಿನಿಧಿಸುವ ಪಕ್ಷ ಕಾಂಗ್ರೆಸ್ ಮಾತ್ರ ಎಂದರು.
ಸಾಮಾಜಿಕ ನ್ಯಾಯದಲ್ಲಿ ಬದ್ಧತೆಯಿರುವ ಪಕ್ಷ ಕಾಂಗ್ರೆಸ್. ಬಸವಣ್ಣ ಈ ಕೇತ್ರದಲ್ಲಿ ಹುಟ್ಟಿದವರು. ನಮ್ಮ ಪಕ್ಷ ಬಸವಣ್ಣನವರ ಅನುಯಾಯಿಗಳು. ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ. ಬಿಜೆಪಿಯವರು ಹಿಂದೂಗಳ ವಾರಸುದಾರರು ಎಂದು ಬಹಳ ಮಾತನಾಡುತ್ತಾರೆ. ನಾವೆಲ್ಲಾ ಹಿಂದೂಗಳಲ್ಲವೇ? ಮೇಟಿಯವರು ಹಿಂದೂ ಅಲ್ಲವೇ ? ಎಂದು ಪ್ರಶ್ನಿಸಿದರು. ಹಿಂದೂ ಎನ್ನುವುದು ಜನರಿಗೆ ತೋರ್ಪಡಿಸಲು ಮಾತ್ರವೇ ಹೊರತು ಬಡವರು, ಹಿಂದುಳಿದವರು ಅಲ್ಪಸಂಖ್ಯಾತರ ವಿರೋಧಿಗಳು. ಮನುವಾದದಲ್ಲಿ ನಂಬಿಕೆಯುಳ್ಳವರು. ಮನುವಾದ ಮಹಿಳೆಯರು, ರೈತರು, ಬಡವರ ವಿರೋಧಿಯಾಗಿದೆ. ಅದಕ್ಕಾಗಿಯೇ ಗ್ಯಾರಂಟಿಗಳನ್ನು ವಿರೋಧಿಸಿದರು. ಗ್ಯಾರಂಟಿ ಯೋಜನೆಗಳು ಜನಪರವಾಗಿದ್ದು, ಮಹಿಳೆಯರಿಗೆ, ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿಯನ್ನು ತುಂಬಲಾಗುತ್ತಿದೆ. ಜಾತ್ಯತೀತವಾಗಿ ನೀಡುತ್ತಿರುವ ಈ ಯೋಜನೆಗಳ ಫಲವನ್ನು ಬಿಜೆಪಿಯವರೂ ಪಡೆದುಕೊಳ್ಳುತ್ತಿದ್ದಾರೆ.ಈ ವರ್ಷದ ಅಂತ್ಯದವರೆಗೆ ಒಂದು ಲಕ್ಷದ ಇಪ್ಪತ್ತೊಂದು ಸಾವಿರಕ್ಕೂ ಹೆಚ್ಚು ಕೋಟಿ ಗಳನ್ನು ವೆಚ್ಚ ಮಾಡಲಾಗಿದೆ. ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದು ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿ, ವೈದ್ಯಕೀಯ ಕಾಲೇಜು ಕೊಟ್ಟರೆ? ಅಭಿವೃದ್ಧಿ ಕಾರ್ಯ ಮಾಡಿದ್ದಾರೆಯೇ? ಕೃಷ್ಣ ಮೇಲ್ದಂಡೆ ಯೋಜನೆಯಡಿ ಜಮೀನು ಕಳೆದುಕೊಂಡ ಮಾಲೀಕರಿಗೆ ಪರಿಹಾರ ನೀಡಿದರೆ? ಎಂದು ಪ್ರಶ್ನಿಸಿ ಬಿಜೆಪಿ ಅಪಪ್ರಚಾರ, ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳುವುದನ್ನು ಬಿಟ್ಟರೆ ಜೀವನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದರು. ಬಿ. ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರು, ಸದಾನಂದ ಗೌಡರು, ನುಡಿದಂತೆ ನಡೆದರೆ? 2018 ರ ಪ್ರಣಾಳಿಕೆಯಲ್ಲಿ 600 ಭರವಸೆ ನೀಡಿ ಅವುಗಳಲ್ಲಿ ಶೇಕಡ 10 ರಷ್ಟನ್ನೂ ಜಾರಿ ಮಾಡಿಲ್ಲ ಎಂದರು. ಇಂಥವರಿಗೆ ಮತ ಹಾಕಬೇಕೆ? ಎಂದರು.
ಬಾಗಲಕೋಟೆಗೆ ವೈದ್ಯಕೀಯ ಕಾಲೇಜು ಘೋಷಣೆ ಮಾಡಲು ಹೆಚ್ ವೈ ಮೇಟಿಯವರು ಕಾರಣ
ಬಾಗಲಕೋಟೆಗೆ ವೈದ್ಯಕೀಯ ಕಾಲೇಜು ಘೋಷಣೆ ಮಾಡಲು ಹೆಚ್ ವೈ ಮೇಟಿಯವರು ಕಾರಣ ಎಂದರು. ವೈದ್ಯಕೀಯ ಕಾಲೇಜು ಶಂಕುಸ್ಥಾಪನೆಯ ಸಂದರ್ಭದಲ್ಲಿ ಮೇಟಿಯವರು ಇಲ್ಲದ್ದು ದುರ್ದೈವ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಇಂದಿನವರೆಗೂ ಪರಿಹಾರ ಕೊಟ್ಟಿಲ್ಲ. ನಮ್ಮ ಸರ್ಕಾರ ರೈತ ಮುಖಂಡರು, ಶಾಸಕರೊಂದಿಗೆ ಸಭೆ ಮಾಡಿ ಒಂದೇ ಹಂತದಲ್ಲಿ ಒಪ್ಪಂದದ ಮೂಲಕ ಪರಿಹಾರ ನೀಡಲು ತೀರ್ಮಾನಿಸಿ ಒಂದು ಎಕರೆ ನೀರಾವರಿ ಜಮೀನಿಗೆ 40 ಲಕ್ಷ, ಖುಷ್ಕಿ ಜಮೀನಿಗೆ 30 ಲಕ್ಷ ರೂಪಾಯಿ ಒದಗಿಸಲಾಯಿತು ಎಂದರು.
ಬಿಜೆಪಿಯವರಿಗೆ ನಮ್ಮನ್ನು ಪ್ರಶ್ನಿಸಲು ಯಾವುದೇ ನೈತಿಕತೆ ಇಲ್ಲ
ಬಜೆಟ್ ನಲ್ಲಿ ಹಣವನ್ನು ಇಟ್ಟಿಲ್ಲ ಎಂದು ಬಿಜೆಪಿ ಆರೋಪಿಸುತ್ತದೆ. ಆದರೆ ಅದು ಸತ್ಯಕ್ಕೆ ದೂರವಾದ ವಿಚಾರ. ಮೊನ್ನೆ ವೈದ್ಯಕೀಯ ಕಾಲೇಜು ಶಂಕುಸ್ಥಾಪನೆಯ ದಿನ ಪರಿಹಾರ ನೀಡಲಾಗಿದೆ. ಜಮೀನು ಕೊಡಲು ಒಪ್ಪಿ ಬರುವ ಎಲ್ಲರಿಗೂ ಪರಿಹಾರ ನೀಡಲಾಗುವುದು ಎಂದರು. ಕೇಂದ್ರದಲ್ಲಿ ಇಂದಿನವರೆಗೆ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ನಾನು ಹಾಗೂ ಉಪಮುಖ್ಯಮಂತ್ರಿಗಳು ಅನೇಕ ಸಾರಿ ಸಂಬಂಧಪಟ್ಟವರನ್ನು ಭೇಟಿ ಮಾಡಿದರೂ ಇಂದಿನವರೆಗೂ ಅಧಿಸೂಚನೆ ಹೊರಡಿಸಿಲ್ಲ. ಬಿಜೆಪಿಯವರಿಗೆ ನಮ್ಮನ್ನು ಪ್ರಶ್ನಿಸಲು ಯಾವುದೇ ನೈತಿಕತೆ ಇಲ್ಲ. ಬಿಜೆಪಿಯವರು ಬುರುಡೆದಾಸರು, ಸುಳ್ಳು ಅವರ ಮನೆ ದೇವರು ಎಂದರು.
ಉಮೇಶ್ ಮೇಟಿಯವರನ್ನು ವಿಧಾನಸಭೆಗೆ ಕಳುಹಿಸಿ
ಉಮೇಶ್ ಮೇಟಿಯವರು ಇಂದು ನಾಮಪತ್ರವನ್ನು ಸಲ್ಲಿಸಿದ್ದು, ಅವರನ್ನು ನಿಮ್ಮ ಜೋಳಿಗೆಗೆ ಹಾಕುತ್ತಿದ್ದೇವೆ. ಅವರನ್ನು ಆಶೀರ್ವಾದಿಸುವುದು ನಿಮ್ಮ ಜವಾಬ್ದಾರಿ. ಬಿಜೆಪಿ ಒಡ್ಡುವ ಆಸೆ, ಆಮಿಷಗಳಿಗೆ ಒಳಗಾಗಬೇಡಿ ಎಂದರು.
ಉಮೇಶ್ ಮೇಟಿಯವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಡಿ ಎಂದರು. ಕ್ಷೇತ್ರದಲ್ಲಿ ನಾಲ್ಕೈದು ದಿನ ಇದ್ದು ಹಳ್ಳಿ ಹಳ್ಳಿಗೂ ಭೇಟಿ ನೀಡಿ ಪ್ರಚಾರ ಮಾಡುವ ಭರವಸೆ ನೀಡಿದರು.
