ಕೊಲಂಬಿಯಾದ ದಕ್ಷಿಣ ಭಾಗದಲ್ಲಿ ಸೋಮವಾರ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ 110 ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ಸಾರಿಗೆ ವಿಮಾನ ಪತನಗೊಂಡಿರುವ ಘಟನೆ ವರದಿಯಾಗಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, Lockheed Martin C-130 Hercules ಮಾದರಿಯ ಈ ವಿಮಾನವು ಅಮೆಜಾನ್ ಅರಣ್ಯ ಪ್ರದೇಶದ ‘ಪೋರ್ಟೊ ಲೆಗುಯಿಜಾಮೊ’ ಸಮೀಪದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ತಪ್ಪಿ ನೆಲಕ್ಕಪ್ಪಳಿಸಿದೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ವಿಮಾನದಲ್ಲಿ ಸುಮಾರು 110 ಸೈನಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ವಿಮಾನವು ಸೈನಿಕರ ವರ್ಗಾವಣೆ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾಗಲೇ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕೊಲಂಬಿಯಾದ ರಕ್ಷಣಾ ಸಚಿವರಾದ ಪೆಡ್ರೊ ಸ್ಯಾಂಚೆಜ್ ಅವರು ಘಟನೆಯನ್ನು ದೃಢಪಡಿಸಿದ್ದು, ಅಪಘಾತದ ನಿಖರ ಕಾರಣಗಳ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಸಾವು-ನೋವುಗಳ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದ್ದು, ಶೋಧ ಹಾಗೂ ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ.
