ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಯುದ್ಧ ಪರಿಸ್ಥಿತಿಯಲ್ಲಿ ತಾತ್ಕಾಲಿಕ ಶಮನದ ಲಕ್ಷಣಗಳು ಕಾಣಿಸಿಕೊಂಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ವಿದ್ಯುತ್ ಸ್ಥಾವರಗಳು ಹಾಗೂ ಇಂಧನ ಮೂಲಸೌಕರ್ಯಗಳ ಮೇಲೆ ಯೋಜಿಸಿದ್ದ ಮಿಲಿಟರಿ ದಾಳಿಗಳನ್ನು ಮುಂದಿನ ಐದು ದಿನಗಳವರೆಗೆ ಸ್ಥಗಿತಗೊಳಿಸಲು ಸೂಚನೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ಹಂಚಿಕೊಂಡಿರುವ ಟ್ರಂಪ್, ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳು ಕಳೆದ ಎರಡು ದಿನಗಳಲ್ಲಿ ಉತ್ತಮ ಮತ್ತು ಫಲಪ್ರದವಾಗಿ ನಡೆದಿವೆ ಎಂದು ತಿಳಿಸಿದ್ದಾರೆ. ಮಧ್ಯಪ್ರಾಚ್ಯದ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಈ ಚರ್ಚೆಗಳು ಮುಂದುವರಿದಿವೆ ಎಂದು ಅವರು ಹೇಳಿದ್ದಾರೆ.
ಮಾತುಕತೆಗಳ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ತಾತ್ಕಾಲಿಕ ವಿರಾಮವನ್ನು ಘೋಷಿಸಲಾಗಿದೆ. ಆದರೆ, ಇದು ಸಂಪೂರ್ಣ ಶಾಂತಿಯ ಸೂಚಕವಲ್ಲ ಎಂಬುದನ್ನು ಅಮೆರಿಕ ಸ್ಪಷ್ಟಪಡಿಸಿದೆ. ಇರಾನ್ ಮಾತುಕತೆಯಲ್ಲಿ ಸಹಕರಿಸದಿದ್ದರೆ ಅಥವಾ ನಿರೀಕ್ಷಿತ ಪ್ರಗತಿ ಕಾಣಿಸದಿದ್ದರೆ, ಮಿಲಿಟರಿ ಕಾರ್ಯಾಚರಣೆಗಳನ್ನು ಮರುಪ್ರಾರಂಭಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ಸೂಚಿಸಿವೆ.
ಆದರೆ ಇರಾನ್ ಕದನ ವಿರಾಮದ ಬಗ್ಗೆ ಇಲ್ಲಿಯವರೆಗೆ ಅಧಿಕೃತ ಘೋಷಣೆ ಮಾಡಿಲ್ಲ. ಇಸ್ರೇಲ್ ಮತ್ತು ಇರಾನ್ ಭಾಗದಲ್ಲಿ ಸೋಮವಾರದ ಈ ಕ್ಷಣದ ವರೆಗೂ ಯುದ್ಧ ನಿಲುಗಡೆ ಬಗ್ಗೆ ಮುನ್ಸೂಚನೆ ಕಂಡುಬಂದಿಲ್ಲ. ಇತ್ತೀಚಿನ ದಿನಗಳಲ್ಲಿ ಯುದ್ಧದ ಬಗ್ಗೆ ಅಮೇರಿಕಾ ಮೃದು ನಿಲುವು ತಗೆದುಕೊಂಡರೂ ಇರಾನ್ ತನ್ನ ಎಂದಿನ ಆಕ್ರಮಣಕಾರಿ ಹೋರಾಟದಿಂದ ಹಿಂದೆ ಬಿದ್ದಿಲ್ಲ ಎಂಬುದು ಗಮನಾರ್ಹ.
ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಈ ಸಂಘರ್ಷವು ಜಾಗತಿಕ ತೈಲ ಮತ್ತು ಅನಿಲ ಪೂರೈಕೆಗೆ ಗಂಭೀರ ಪರಿಣಾಮ ಬೀರಿದೆ. ವಿಶೇಷವಾಗಿ ಭಾರತ ಸೇರಿದಂತೆ ಅನೇಕ ದೇಶಗಳು ಇಂಧನ ಬಿಕ್ಕಟ್ಟಿನ ಆತಂಕವನ್ನು ಎದುರಿಸುತ್ತಿವೆ. ಈ ಹಿನ್ನೆಲೆ, ಐದು ದಿನಗಳ ಅಮೇರಿಕಾದ ಕದನ ವಿರಾಮ ಘೋಷಣೆ ಜಾಗತಿಕ ಮಾರುಕಟ್ಟೆಯಲ್ಲಿ ತಾತ್ಕಾಲಿಕ ನೆಮ್ಮದಿ ತರಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ.
